ಸಕಾಲಿಕ ಎಚ್ಚರಿಕೆ ಗಂಟೆ ಮಂದಗತಿಯಲ್ಲಿ ಸಾಗಿರುವ ಜಿಡಿಪಿ ವೃದ್ಧಿ ದರವು (ಒಟ್ಟು ಆಂತರಿಕ ಉತ್ಪನ್ನ) ದೇಶದ ಬಂಡವಾಳ ಹೂಡಿಕೆ ಶ್ರೇಣಿಯ ಕುಸಿತಕ್ಕೆ ಕಾರಣವಾಗಲಿದೆ ಎಂದು ಜಾಗತಿಕ ಮೌಲ್ಯಮಾಪನಾ ಸಂಸ್ಥೆ `ಸ್ಟಾಂಡರ್ಡ್ ಅಂಡ್ ಪೂರ್~ ಅಭಿಪ್ರಾಯಪಟ್ಟಿರುವುದು ಸಕಾಲಿಕ ಎಚ್ಚರಿಕೆ ಗಂಟೆಯಾಗಿದೆ. ಬಾಹ್ಯ ಹಣ ಹೂಡಿಕೆ ಶ್ರೇಣಿಯು ಸದ್ಯದ ಮಟ್ಟಕ್ಕಿಂತ ಊಹಾತ್ಮಕ ದರ್ಜೆಗೆ ಕುಸಿಯುವ ಸಾಧ್ಯತೆಗಳು, ವಿದೇಶಿ ಬಂಡವಾಳ ಹೂಡಿಕೆ ಮೇಲೆ ಖಂಡಿತವಾಗಿಯೂ ದೂರಗಾಮಿ ಪರಿಣಾಮ ಬೀರಲಿವೆ. ವಿದೇಶಗಳಿಂದ ಸಾಲ ಸಂಗ್ರಹಿಸುವುದು ಕೈಗಾರಿಕೋದ್ಯಮಿಗಳ ಪಾಲಿಗೆ ಇನ್ನಷ್ಟು ದುಬಾರಿಯಾಗಿ ಪರಿಣಮಿಸಲಿದೆ. ಇದು ನೇರವಾಗಿ ವರಮಾನ ವೃದ್ಧಿ ಮತ್ತು ಹೊಸ ಉದ್ಯೋಗ ಅವಕಾಶಗಳಿಗೆ ಅಡ್ಡಿಯಾಗಲಿದೆ. ಅರ್ಥ ವ್ಯವಸ್ಥೆ ಕುಸಿತದ ಹಾದಿಯಲ್ಲಿ ಇರುವುದಕ್ಕೆ ಕಾರಣವಾದ ಸಂಗತಿಗಳತ್ತ ಈ ಸಂಸ್ಥೆ ಬೊಟ್ಟು ಮಾಡಿರುವುದು ಸಕಾಲಿಕವಾಗಿದ್ದರೂ ವರದಿಯಲ್ಲಿ ಉಲ್ಲೇಖಿಸಿರುವ ರಾಜಕೀಯ ಸಂಗತಿಗಳು ವಿವಾದಕ್ಕೆ ಎಡೆ ಮಾಡಿಕೊಟ್ಟಿವೆ. ಅರ್ಥ ವ್ಯವಸ್ಥೆಗೆ ಸಂಬಂಧಿಸಿದ ನೀತಿ ನಿರ್ಧಾರಗಳ ಮೇಲೆ ದೇಶದ ರಾಜಕೀಯ ವ್ಯವಸ್ಥೆ ಯಾವ ಬಗೆಯಲ್ಲಿ ಪ್ರಭಾವ ಬೀರಲಿದೆ ಎನ್ನುವುದರ ಮೇಲೆ ವರದಿ ಬೆಳಕು ಚೆಲ್ಲಿರುವುದರ ಬಗ್ಗೆ ವಿವಾದ ಕೆದಕದೇ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. ರಾಜಕೀಯ ಅಧಿಕಾರವು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಪ್ರಧಾನಿ ಮನಮೋಹನ್ ಸಿಂಗ್ ಮಧ್ಯೆ ವಿಭಜನೆಯಾಗಿರುವುದು ಸುಧಾರಣಾ ಕ್ರಮಗಳ ಜಾರಿಗೆ ಅಡ್ಡಿಯಾಗಿದೆ ಎಂದು ಹೇಳಿರುವುದು ಸರಿಯಾಗಿಯೇ ಇದೆ. ಕೆಲವೇ ಮಾನದಂಡಗಳ ಆಧಾರದ ಮೇಲೆ ದೇಶದ ಅರ್ಥ ವ್ಯವಸ್ಥೆಯ ಆಳ - ಅಗಲ ಅಳೆಯಲು ಸಾಧ್ಯವಿಲ್ಲ. ಇದೊಂದು ವಸ್ತುನಿಷ್ಠತೆಗೆ ಹೊರತಾದ ವರದಿ ಎಂದರೂ, ಇದೊಂದು ಎಚ್ಚರಿಕೆ ಗಂಟೆಯಾಗಿ ಪರಿಗಣಿಸಿ ಆರ್ಥಿಕ ನೀತಿ ನಿರೂಪಣೆಯಲ್ಲಿ ಸೂಕ್ತ ಬದಲಾವಣೆ ಅಳವಡಿಸಿಕೊಳ್ಳಬೇಕಾಗಿದೆ. ಈ ಮೌಲ್ಯಮಾಪನವು ಪಾರದರ್ಶಕವಾಗಿಲ್ಲ. ತನ್ನ ಮಿತಿಯನ್ನು ಮೀರಿದೆ ಎನ್ನುವ ಟೀಕೆಗಳಿಗೆ ಏಪ್ರಿಲ್ ತಿಂಗಳಲ್ಲಿ ಶೇ 0.1ರಷ್ಟು ಮಾತ್ರ ವೃದ್ಧಿಯಾಗಿರುವ ಕೈಗಾರಿಕಾ ಬೆಳವಣಿಗೆ ದರವೇ ಸೂಕ್ತ ಉತ್ತರ ನೀಡಿದೆ. ದೇಶವು ಇನ್ನಷ್ಟು ಆರ್ಥಿಕ ಸುಧಾರಣೆಗಳನ್ನು ಜಾರಿಗೆ ತರುವಲ್ಲಿ ವಿಫಲವಾದರೆ, ದೀರ್ಘಕಾಲೀನ ಬೆಳವಣಿಗೆಯ ಆಶಯಗಳಿಗೆ ಧಕ್ಕೆಯಾಗಲಿದೆ. ಸರ್ಕಾರ, ಹಲವಾರು ರಂಗಗಳಲ್ಲಿ ಸುಧಾರಣೆಗಳನ್ನು ಜಾರಿಗೆ ತರುವ ಅನಿವಾರ್ಯತೆಯನ್ನೂ ಈ ವರದಿ ಮನದಟ್ಟು ಮಾಡಿಕೊಟ್ಟಿದೆ. ಚಿಲ್ಲರೆ ರಂಗದಲ್ಲಿ ಬಹು ಬ್ರಾಂಡ್ ವಹಿವಾಟಿಗೆ ಅವಕಾಶ, ಪಿಂಚಣಿ, ವಿಮೆ, ಭೂ ಸ್ವಾಧೀನ, ಯೋಜನೆಗಳ ಮಂಜೂರಾತಿ, ರೈಲ್ವೆ ದರ ಹೆಚ್ಚಳ, ತೈಲ ಬೆಲೆ ಏರಿಕೆ, ರಸಗೊಬ್ಬರ ಸಬ್ಸಿಡಿ ಮತ್ತು ಸರಕು ಹಾಗೂ ಸೇವಾ ತೆರಿಗೆ (ಜಿಎಸ್‌ಟಿ) ಜಾರಿಯ ಅನಿವಾರ್ಯತೆಯತ್ತ ಗಮನ ಸೆಳೆದಿರುವುದು ಅಧಿಕಾರಸ್ಥರ, ಆರ್ಥಿಕ ತಜ್ಞರ ಕಣ್ಣು ತೆರೆಸಬೇಕಾಗಿದೆ. ದೇಶದ ಅರ್ಥ ವ್ಯವಸ್ಥೆಯ ಅಡಿಪಾಯ ಸುಭದ್ರವಾಗಿರುವಾಗ ಸರ್ಕಾರ ಸುಧಾರಣಾ ಕ್ರಮಗಳ ಜಾರಿಗೆ ಎಲ್ಲ ಪಕ್ಷಗಳನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ರಾಜಕೀ ಇಚ್ಛಾಶಕ್ತಿ ಪ್ರದರ್ಶಿಸಿದರೆ ದೇಶದ ಅರ್ಥ ವ್ಯವಸ್ಥೆಯ ಚಿತ್ರಣ ಖಂಡಿತವಾಗಿಯೂ ಬದಲಾದೀತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.