ಕೊನೆಗೂ ಸೂಕ್ತ ನಿರ್ಧಾರ ರಾಜ್ಯದ ಅಂಗನವಾಡಿಗಳಿಗೆ ಪೂರಕ ಪೌಷ್ಟಿಕ ಆಹಾರ ಪೂರೈಕೆಗಾಗಿ ಕ್ರಿಸ್ಟಿ ಫ್ರೈಡ್‌ಗ್ರಾಮ್ ಇಂಡಸ್ಟ್ರಿ ಜೊತೆ ಮಾಡಿಕೊಂಡಿದ್ದ ವಿವಾದಾತ್ಮಕ ಒಪ್ಪಂದವನ್ನು ರದ್ದುಪಡಿಸುವ ನಿರ್ಧಾರವನ್ನು ಕರ್ನಾಟಕ ಸರ್ಕಾರ ಕಡೆಗೂ ಕೈಗೊಂಡಿದೆ. ಈ ಕಂಪೆನಿಯಿಂದ ರಾಜ್ಯದ ಅಂಗನವಾಡಿಗಳಿಗೆ ಪೂರೈಕೆಯಾಗುತ್ತಿದ್ದ ಪೂರಕ ಪೌಷ್ಟಿಕ ಆಹಾರದ ಕಳಪೆ ಗುಣಮಟ್ಟದ ಬಗ್ಗೆ ಅನೇಕ ವರ್ಷಗಳಿಂದ ಆಹಾರತಜ್ಞರು ಹಾಗೂ ಹೋರಾಟಗಾರರು ಗಮನ ಸೆಳೆದಿದ್ದರು. ಕ್ರಿಸ್ಟಿ ಫ್ರೈಡ್‌ಗ್ರಾಮ್ ಇಂಡಸ್ಟ್ರಿಯ ಆಹಾರ ತಿಂದ ನಂತರ ಅನೇಕ ಮಕ್ಕಳು ಕಾಯಿಲೆ ಬಿದ್ದ ಪ್ರಕರಣಗಳೂ ಬೆಳಕಿಗೆ ಬಂದಿದ್ದವು. ಒಪ್ಪಂದದ ಜಾರಿಯಲ್ಲಿ ಗಂಭೀರ ದೋಷಗಳಿವೆ ಎಂಬುದನ್ನು ಅಂತೂ ಸರ್ಕಾರ ಈಗ ಒಪ್ಪಿಕೊಂಡಿದೆ. 2009ರ ಒಪ್ಪಂದದ ಪ್ರಕಾರ, ಈ ಕಂಪೆನಿ, ಮಹಿಳಾ ತರಬೇತಿ ಕೇಂದ್ರಗಳನ್ನು ಸ್ಥಾಪಿಸಿ ಸಿಬ್ಬಂದಿಗೆ ತರಬೇತಿ ನೀಡಬೇಕಿತ್ತು. ಈ ಕೇಂದ್ರಗಳು ಪೌಷ್ಟಿಕ ಆಹಾರ ತಯಾರಿಸಿ, ಸಿದ್ಧಪಡಿಸಿದ ಪೊಟ್ಟಣಗಳನ್ನು ಅಂಗನವಾಡಿಗಳಿಗೆ ಪೂರೈಕೆ ಮಾಡಬೇಕಿತ್ತು. ಆದರೆ ಮೂರು ವರ್ಷಗಳಾದರೂ ಮಹಿಳಾ ತರಬೇತಿ ಕೇಂದ್ರಗಳು ಸ್ವತಂತ್ರವಾಗಿ ಕಾರ್ಯ ನಿರ್ವಹಿಸುವಷ್ಟು ಸಾಮರ್ಥ್ಯ ಹೊಂದಿಲ್ಲ ಎಂಬುದನ್ನು ಸರ್ಕಾರ ಈಗ ಕಂಡುಕೊಂಡಿದೆ. ಜೊತೆಗೆ ಒಪ್ಪಂದದ ಪ್ರಕಾರ, ಇದು ಸರಬರಾಜು ಮಾಡುತ್ತಿದ್ದ ಆಹಾರದಲ್ಲಿ ಇರಬೇಕಿದ್ದ ಪ್ರೊಟೀನ್ ಹಾಗೂ ಕ್ಯಾಲೊರಿಗಳೂ ಇಲ್ಲ ಎಂಬುದು ಬಯಲಾಗಿದೆ, ಜೊತೆಗೆ ಆಹಾರದಲ್ಲಿ ನಿಷೇಧಿತ ಬಣ್ಣಗಳ ಬಳಕೆಯೂ ಇತ್ತು ಎಂಬುದನ್ನೂ ಸರ್ಕಾರ ಈಗ ಕಂಡುಕೊಂಡಿದೆ. ಹಾಲೂಡುವ ತಾಯಂದಿರು ಹಾಗೂ ಆರು ವರ್ಷಗಳ ಒಳಗಿನ ಮಕ್ಕಳಿಗೆ ಪೌಷ್ಟಿಕ ಆಹಾರ ನೀಡುವ ಮೂಲಕ ಮಕ್ಕಳ ಪೌಷ್ಟಿಕತೆಯ ಸ್ಥಿತಿಯನ್ನು ಸುಧಾರಿಸುವಂತಹ ಮಹೋನ್ನತ ಉದ್ದೇಶವನ್ನು ಸಮಗ್ರ ಶಿಶು ಅಭಿವೃದ್ಧಿ ಯೋಜನೆ (ಐಸಿಡಿಎಸ್) ಹೊಂದಿದೆ. ಇದಕ್ಕಾಗಿ ಶುಚಿರುಚಿಯ ಪೌಷ್ಟಿಕವಾದ ಸ್ಥಳೀಯ ಆಹಾರ ನೀಡುವ ಬದಲಿಗೆ ಪೊಟ್ಟಣದ ಆಹಾರ ವಿತರಿಸುವ ಕ್ರಮವನ್ನು ಸರ್ಕಾರ 2009ರಲ್ಲಿ ಆರಂಭಿಸಿತು. ಇದಕ್ಕಾಗಿ ಕ್ರಿಸ್ಟಿ ಫ್ರೈಡ್‌ಗ್ರಾಮ್ ಜೊತೆ ಒಪ್ಪಂದವನ್ನೂ ಮಾಡಿಕೊಂಡಿತು. ಅಂಗನವಾಡಿಗಳಿಗೆ ಆಹಾರ ಪೂರೈಕೆಗೆ ಖಾಸಗಿ ಗುತ್ತಿಗೆದಾರರನ್ನು ನೇಮಕ ಮಾಡಿಕೊಳ್ಳಬಾರದು ಎಂದು ಸುಪ್ರೀಂಕೋರ್ಟ್ 2004ರಲ್ಲಿ ನೀಡಿದ್ದ ತೀರ್ಪಿಗೆ ಇದು ವ್ಯತಿರಿಕ್ತವಾದುದಾಗಿತ್ತು ಎಂಬುದನ್ನು ಸ್ಮರಿಸಬಹುದು. ಈ ಹಗರಣಕ್ಕೆ ಸಂಬಂಧಿಸಿದಂತೆ ಮೂವರು ಅಧಿಕಾರಿಗಳು ಈಗ ಲೋಕಾಯುಕ್ತ ತನಿಖೆಗೆ ಒಳಪಟ್ಟಿದ್ದಾರೆ. ಆದರೆ, ಈ ಹಗರಣ ರಾಜ್ಯದ ಮಕ್ಕಳ ಪೌಷ್ಟಿಕತೆ ಮೇಲೆ ಬೀರಿದ ದುಷ್ಪರಿಣಾಮ ಮಾತ್ರ ತೀವ್ರವಾದದ್ದು. ರಾಜ್ಯದಲ್ಲಿ 0-6 ವಯೋಮಾನದ ಗುಂಪಿನಲ್ಲಿ 71,000 ಮಕ್ಕಳು ತೀವ್ರತರದ ಅಪೌಷ್ಟಿಕತೆಯಿಂದ ನರಳುತ್ತಿದ್ದಾರೆ ಎಂದು ಇತ್ತೀಚಿನ ಸರ್ಕಾರದ ವರದಿ ಹೇಳಿದೆ. ಜೊತೆಗೆ ಸುಮಾರು 30ಲಕ್ಷ ಮಕ್ಕಳು ಅಲ್ಪಪ್ರಮಾಣದ ಅಪೌಷ್ಟಿಕತೆಗೆ ಗುರಿಯಾಗಿದ್ದಾರೆ. ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿಗೆ ಶ್ರಮಿಸಬೇಕಾದ ಇಲಾಖೆಯೇ ಮಕ್ಕಳ ಈ ಶೋಚನೀಯ ಸ್ಥಿತಿಗೆ ಕಾರಣವಾಗಿರುವುದು ಖಂಡನೀಯ. ತಮ್ಮ ದುರುದ್ದೇಶಗಳಿಗಾಗಿ ಮಕ್ಕಳ ಆರೋಗ್ಯವನ್ನೇ ಪಣಕ್ಕಿಟ್ಟ ತಪ್ಪಿತಸ್ಥರ ವಿರುದ್ಧ ಸೂಕ್ತ ತನಿಖೆ ನಡೆದು ಶಿಕ್ಷೆಯಾಗಬೇಕಾದುದು ಮುಖ್ಯ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.