ರಾಜಕೀಯ ಉದ್ದೇಶದ ಮೀಸಲಾತಿ ಸಂವಿಧಾನದ ಪ್ರಾಥಮಿಕ ಜ್ಞಾನ ಇಲ್ಲದವರು ಮಾತ್ರ ಇಂತಹ ಅಡ್ಡಕಸುಬಿ ಕೆಲಸ ಮಾಡಲು ಸಾಧ್ಯ. ಅಲ್ಪಸಂಖ್ಯಾತರ ಒಳಮೀಸಲಾತಿ ವಿಷಯದಲ್ಲಿ ಕೇಂದ್ರದ ಯುಪಿಎ ಸರ್ಕಾರ ಈ ಕೆಲಸ ಮಾಡಿದೆ. ಧರ್ಮ ಆಧಾರಿತ ಮೀಸಲಾತಿಗೆ ಸಂವಿಧಾನದಲ್ಲಿ ಅವಕಾಶ ಇಲ್ಲ ಎನ್ನುವುದು ಕೇಂದ್ರ ಸರ್ಕಾರಕ್ಕೆ ಗೊತ್ತಿರಲೇ ಬೇಕು. ಹೀಗಿದ್ದರೂ ಹಿಂದುಳಿದ ಜಾತಿಗಳ ಶೇಕಡಾ 27ರ ಮೀಸಲಾತಿಯಲ್ಲಿ ಅಲ್ಪಸಂಖ್ಯಾತರಿಗೆ ಶೇಕಡಾ 4.5ರಷ್ಟು ಒಳಮೀಸಲಾತಿಯನ್ನು ಕೇಂದ್ರ ಸರ್ಕಾರ ಘೋಷಿಸಿದ್ದು ಮೂರ್ಖತನ. ಉತ್ತರಪ್ರದೇಶದ ವಿಧಾನಸಭಾ ಚುನಾವಣೆಯ ಕಾಲದಲ್ಲಿಯೇ ಮಾಡಿದ್ದ ಈ ಘೋಷಣೆಯ ಹಿಂದೆ ಅಲ್ಲಿನ ಮುಸ್ಲಿಂ ಮತದಾರರನ್ನು ಓಲೈಸುವ ಉದ್ದೇಶ ಇತ್ತು ಎಂದು ತಿಳಿಯದಷ್ಟು ಮುಸ್ಲಿಮರೂ ಮುಗ್ಧರಲ್ಲ. ಇದರಿಂದಾಗಿಯೇ ಅವಸರದ ಈ ಘೋಷಣೆ ಉತ್ತರಪ್ರದೇಶದಲ್ಲಿ ರಾಜಕೀಯವಾಗಿ ಕಾಂಗ್ರೆಸ್ ಪಕ್ಷಕ್ಕೆ ಲಾಭ ತಂದು ಕೊಡಲಿಲ್ಲ. ಕೇಂದ್ರ ಸರ್ಕಾರದ ಈ ವಿವಾದಾತ್ಮಕ ಮೀಸಲಾತಿಯನ್ನು ರದ್ದುಗೊಳಿಸಿದ್ದ ಆಂಧ್ರಪ್ರದೇಶ ಹೈಕೋರ್ಟ್ ಆದೇಶಕ್ಕೆ ತಡೆಯಾಜ್ಞೆ ನೀಡಲು ಈಗ ಸುಪ್ರೀಂಕೋರ್ಟ್ ನಿರಾಕರಿಸಿದೆ. `ಧರ್ಮದ ಆಧಾರದಲ್ಲಿ ಮೀಸಲಾತಿ ನೀಡಲು ಸಂವಿಧಾನದಲ್ಲಿ ಅವಕಾಶ ಇದೆಯೇ? ಶಾಸನದ ಬೆಂಬಲ ಇದೆಯೇ? ಈ ಬಗ್ಗೆ ವೈಜ್ಞಾನಿಕವಾದ ಸಮೀಕ್ಷೆಯನ್ನು ನಡೆಸಲಾಗಿದೆಯೇ? ಯಾವ ಆಧಾರದಲ್ಲಿ ಶೇಕಡಾ 4.5ರ ಪ್ರಮಾಣದ ಮೀಸಲಾತಿಯನ್ನು ರೂಪಿಸಿದ್ದೀರಿ?~ ಎಂಬ ಮುಖ್ಯ ಪ್ರಶ್ನೆಗಳನ್ನು ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳು ಕೇಂದ್ರ ಸರ್ಕಾರವನ್ನು ಕೇಳಿದ್ದಾರೆ. ಉತ್ತರಿಸಲಾಗದೆ ಕೇಂದ್ರ ಸರ್ಕಾರದ ಹೆಚ್ಚುವರಿ ಸಾಲಿಸಿಟರ್ ಜನರಲ್ ತಬ್ಬಿಬ್ಬಾಗಿದ್ದಾರೆ. ಇದು ಅಲ್ಪಸಂಖ್ಯಾತರಿಗೆ ನೀಡಲಾದ ಮೀಸಲಾತಿಯಾಗಿದ್ದರೂ ಈ ವರ್ಗದಲ್ಲಿ ಬಹುಸಂಖ್ಯೆಯಲ್ಲಿರುವ ಮುಸ್ಲಿಮರೇ ವಿವಾದದ ಕೇಂದ್ರವಾಗಿದ್ದಾರೆ. ದುರ್ಬಲವರ್ಗಗಳಿಗೆ ಸಾಮಾಜಿಕ ನ್ಯಾಯ ಒದಗಿಸಲು ಮೀಸಲಾತಿ ಅನಿವಾರ್ಯ ಎನ್ನುವುದನ್ನು ನ್ಯಾಯಾಲಯಗಳೂ ಒಪ್ಪಿಕೊಂಡಿವೆ. ಆದರೆ ಮೀಸಲಾತಿ ನೀತಿಯನ್ನು ವೈಜ್ಞಾನಿಕ ತಳಹದಿಯ ಮೇಲೆ ರೂಪಿಸಬೇಕಾಗುತ್ತದೆ. ದೇಶದ ಮುಸ್ಲಿಮರು ಹಿಂದುಳಿದಿರುವುದನ್ನು ನ್ಯಾಯಮೂರ್ತಿ ಸಾಚಾರ್ ನೇತೃತ್ವದ ಸಮಿತಿ ಅಧ್ಯಯನ ಮಾಡಿ ವರದಿ ಮಾಡಿದೆ. ನ್ಯಾಯಮೂರ್ತಿ ರಂಗನಾಥ್ ಮಿಶ್ರಾ ಸಮಿತಿ ಕೂಡಾ ತನ್ನ ವರದಿಯಲ್ಲಿ ಮುಸ್ಲಿಮರಿಗೆ ಶೇಕಡಾ ಹತ್ತರಷ್ಟು ಮೀಸಲಾತಿ ನೀಡಬೇಕೆಂದು ಶಿಫಾರಸು ಮಾಡಿದೆ. ಮಂಡಲ್ ಆಯೋಗದ ವರದಿಯ ಆಧಾರದಲ್ಲಿ ಹಿಂದುಳಿದ ಜಾತಿಗಳಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ನೀಡಲಾಗಿರುವ ಮೀಸಲಾತಿಯಲ್ಲಿ ಮುಸ್ಲಿಮರಲ್ಲಿರುವ 400 ಜಾತಿಗಳನ್ನು ಸೇರಿಸಲಾಗಿದೆ. ಇದು ಅವರು ಮಾಡುತ್ತಿರುವ ಉದ್ಯೋಗಗಳ ಆಧಾರದಲ್ಲಿ ಮತ್ತು ಆರ್ಥಿಕ ಹಾಗೂ ಸಾಮಾಜಿಕ ಹಿನ್ನೆಲೆಯನ್ನು ಪರಿಗಣಿಸಿ ನೀಡಿರುವಂತಹದ್ದು. ಇದನ್ನು ಸುಪ್ರೀಂಕೋರ್ಟ್ ಕೂಡಾ ಒಪ್ಪಿಕೊಂಡಿದೆ. ಆದರೆ ಈಗಿನ ಒಳ ಮೀಸಲಾತಿ ಸಂವಿಧಾನಬಾಹಿರ ಮಾತ್ರವಲ್ಲ, ಸಾಮಾಜಿಕ ನ್ಯಾಯದ ಆಶಯಕ್ಕೆ ಕೂಡಾ ವಿರುದ್ಧವಾಗಿದೆ. ಮುಸ್ಲಿಂ, ಕ್ರಿಶ್ಚಿಯನ್, ಬೌದ್ಧರನ್ನೊಳಗೊಂಡ ಅಲ್ಪಸಂಖ್ಯಾತ ವರ್ಗದ ಎಲ್ಲರೂ ಹೊಸ ಮೀಸಲಾತಿ ವ್ಯಾಪ್ತಿಯಲ್ಲಿ ಬರುವುದರಿಂದ ಆ ವರ್ಗದಲ್ಲಿರುವ ಬಡವರಿಗೆ ಅನ್ಯಾಯವಾಗಲಿದೆ. ಇದನ್ನು ತಪ್ಪಿಸಬೇಕಾದರೆ ಹಿಂದುಳಿದ ಜಾತಿಗಳಂತೆ ಅಲ್ಪಸಂಖ್ಯಾತರನ್ನೂ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಹಿನ್ನೆಲೆಯಲ್ಲಿ ಪರಿಗಣಿಸಿ ಮೀಸಲಾತಿ ನೀಡಬೇಕು. ಅಗತ್ಯ ಬಿದ್ದರೆ ಸಂವಿಧಾನಕ್ಕೆ ತಿದ್ದುಪಡಿ ಮಾಡಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.