ರಾಷ್ಟ್ರಪತಿ ಸ್ಥಾನಕ್ಕೆ ಸೂಕ್ತ ಆಯ್ಕೆ ಅನೇಕ ನಾಟಕೀಯ ತಿರುವುಗಳ ನಂತರ ಹಿರಿಯ ಕಾಂಗ್ರೆಸ್ ನಾಯಕ ಪ್ರಣವ್ ಮುಖರ್ಜಿ ರಾಷ್ಟ್ರಪತಿ ಭವನದಲ್ಲಿ ಸ್ಥಾಪಿತರಾಗುವುದು ಖಚಿತವಾಗಿದೆ. ರಾಷ್ಟ್ರಪತಿ ಚುನಾವಣೆ ಇನ್ನು ಒಂದು ಔಪಚಾರಿಕ ವಿಧಿಯಾಗಿ ಪೂರ್ಣಗೊಳ್ಳಬೇಕಿದೆ ಅಷ್ಟೆ. ಪ್ರಣವ್ ಅವರದು ಪಕ್ಷಾತೀತವಾಗಿ ಗೌರವಕ್ಕೆ ಪಾತ್ರರಾಗುವ ವ್ಯಕ್ತಿತ್ವ ಎಂಬುದರಲ್ಲಿ ಎರಡು ಮಾತಿಲ್ಲ. ಹೀಗಾಗಿಯೇ ಪ್ರಣವ್ ಅವರ ಜನಪ್ರಿಯತೆಗೆ ಸರಿಸಾಟಿಯಾಗುವಂತಹ ಅಭ್ಯರ್ಥಿಯನ್ನು ಕಣಕ್ಕಿಳಿಸುವುದು ಯುಪಿಎ ಪ್ರತಿಸ್ಪರ್ಧಿಗಳಿಗೆ ಸುಲಭವಾದುದೇನೂ ಅಲ್ಲ. ಪ್ರಣವ್ ಅವರಿಗಿರುವ ರಾಜಕೀಯ ಅನುಭವ, ಆಡಳಿತ ಕೌಶಲ, ವಿವಿಧ ವಿಷಯಗಳ ಕುರಿತು ಅವರಿಗಿರುವ ಜ್ಞಾನ, ಚಿಂತನೆಯ ಪ್ರೌಢಿಮೆ - ರಾಷ್ಟ್ರಪತಿ ಭವನದತ್ತ ಅವರ ಪಯಣಕ್ಕೆ ವಿಶಿಷ್ಟ ಅರ್ಹತೆಗಳ ಮೆರುಗು ಒದಗಿಸಿವೆ. ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರನ್ನು ರಾಷ್ಟ್ರಪತಿ ಅಭ್ಯರ್ಥಿಗಳಾಗಿ ಸೂಚಿಸಿ ಮಮತಾ - ಮುಲಾಯಂ ಜೋಡಿ ತೋರಿದ್ದ ಹೊಸದೊಂದೇ ರಾಜಕೀಯ ಪಟ್ಟನ್ನು ಸೋನಿಯಾ ಗಾಂಧಿ ನೇತೃತ್ವದ ಯುಪಿಎ ಸಮರ್ಥವಾಗಿ ಎದುರಿಸಿದ್ದು ವಿಶೇಷ. ಪ್ರಣವ್ ಹೆಸರು ರಾಷ್ಟ್ರಪತಿ ಅಭ್ಯರ್ಥಿ ಸ್ಥಾನಕ್ಕೆ ಪ್ರಕಟವಾಗುತ್ತಿದ್ದಂತೆಯೇ `ಬದಲಾದ ಸನ್ನಿವೇಶಕ್ಕೆ ತಕ್ಕಂತೆ ರಾಜಕೀಯ ನಿರ್ಧಾರಗಳೂ ಬದಲಾಗುತ್ತವೆ~ ಎಂದು ವ್ಯಾಖ್ಯಾನಿಸಿ ಪ್ರಣವ್ ಅವರಿಗೆ ಸಮಾಜವಾದಿ ಪಕ್ಷದ ಪೂರ್ಣ ಬೆಂಬಲವನ್ನು ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಘೋಷಿಸಿ ಮಮತಾರನ್ನು ಏಕಾಂಗಿಯಾಗಿಸಿದರು. ಬಹುಜನ ಸಮಾಜ ಪಕ್ಷವೂ ಪ್ರಣವ್‌ರನ್ನು ಬೆಂಬಲಿಸಿದೆ. ಎಡಪಕ್ಷಗಳ ಅನುಮೋದನೆ ದೊರೆಯುವುದು ಕಷ್ಟವಿಲ್ಲ ಎಂದು ಭಾವಿಸಲಾಗಿದೆ. ಇನ್ನು ಪಿ. ಸಂಗ್ಮಾ ಅವರಿಗೆ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಹಾಗೂ ತಮಿಳುನಾಡು ಮುಖ್ಯಮಂತ್ರಿ ಜೆ ಜಯಲಲಿತಾ ಅವರ ಬೆಂಬಲವಿದೆ ಸರಿ. ಆದರೆ ಸಂಗ್ಮಾ ಅವರಿಗೆ ಅವರದೇ ಪಕ್ಷ ಎನ್‌ಸಿಪಿ ಯದೇ ಬೆಂಬಲವಿಲ್ಲ. ಎನ್‌ಡಿಎ ಒಳಗೂ ಅನೇಕ ಪಕ್ಷಗಳು ಪ್ರಣವ್ ಪರವಾಗಿರುವುದು ಪ್ರಣವ್ ಅವರ ಹಾದಿಯನ್ನು ಸುಗಮವಾಗಿಸಿದೆ. 2007ರಲ್ಲೇ ರಾಷ್ಟ್ರಪತಿ ಆಗುವ ಅವಕಾಶ ಪ್ರಣವ್ ಅವರಿಗೆ ತಪ್ಪಿಹೋಗಿದ್ದುದನ್ನು ಇಲ್ಲಿ ಸ್ಮರಿಸಬಹುದು. ಆಗ ಪ್ರತಿಭಾ ಪಾಟೀಲ್ ಅವರಿಗೆ ಈ ಅದೃಷ್ಟ ಒಲಿದಿತ್ತು. ತಮ್ಮ ಹರಿತವಾದ ಬುದ್ಧಿಮತ್ತೆಗೆ ಹೆಸರಾದ ಪ್ರಣವ್ ಅವರನ್ನು ಸಮಕಾಲೀನ ರಾಜಕೀಯ ಸನ್ನಿವೇಶದಲ್ಲಿ `ನಡೆದಾಡುವ ವಿಶ್ವಕೋಶ~ ಎಂದೇ ಕರೆಯಲಾಗುತ್ತದೆ. ಸಂವಿಧಾನ ಹಾಗೂ ಸಂಸತ್ ನಿಯಮಾವಳಿಗಳನ್ನು ಯಾವಾಗಲೂ ಎತ್ತಿಹಿಡಿಯುವಂತಹ ನಿಷ್ಠ ಹಾಗೂ ದಕ್ಷ ಆಡಳಿತಗಾರ ಅವರು. ರಾಜಕೀಯ ಅಥವಾ ಆಡಳಿತದ ಅನೇಕ ಬಿಕ್ಕಟ್ಟುಗಳನ್ನು ಪರಿಹರಿಸಬಲ್ಲ ನಿಷ್ಣಾತರು. ಹೀಗಾಗಿಯೇ ರಾಷ್ಟ್ರದ ಅತ್ಯುನ್ನತ ಸಾಂವಿಧಾನಿಕ ಹುದ್ದೆಗೆ ಅವರ ಆಯ್ಕೆ ಆ ಹುದ್ದೆಯ ವಿಶ್ವಾಸಾರ್ಹತೆಯನ್ನು ಹೆಚ್ಚಿಸುವಂತಹದ್ದು. ರಾಜಕೀಯ, ನೀತಿನಿರೂಪಣೆ ಹಾಗೂ ಸಾಂವಿಧಾನಿಕ ವಿಚಾರಗಳಲ್ಲಿ ಅವರಿಗಿರುವ ಅಪಾರ ಅನುಭವ ಹಾಗೂ ಪಕ್ಷಾತೀತವಾಗಿ ಅವರ ಕುರಿತು ಇರುವಂತಹ ಗೌರವ ಅವರನ್ನು ಈ ಅತ್ಯುನ್ನತ ಹುದ್ದೆಗೆ ಅರ್ಹ ವ್ಯಕ್ತಿಯಾಗಿಸಿದೆ. ರಾಷ್ಟ್ರದ ಸಾಕ್ಷಿಪ್ರಜ್ಞೆಯಾಗಿ ಕಾರ್ಯನಿರ್ವಹಿಸಲು ಸಮರ್ಥರಾದ ಅವರ ಆಯ್ಕೆಯ ಪ್ರಕ್ರಿಯೆಯಲ್ಲಿ ಸ್ಪರ್ಧೆ ನಿವಾರಿಸಿ ರಾಜಕೀಯ ಒಮ್ಮತ ಮೂಡಿಸುವುದು ಅಪೇಕ್ಷಣೀಯ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.