ಲೈಂಗಿಕ ದೌರ್ಜನ್ಯ: ಕೊನೆ ಎಂದು? ಮೂರೂವರೆ ವರ್ಷದ ತನ್ನದೇ ಕರುಳಕುಡಿಯ ಮೇಲೆ ಅತ್ಯಾಚಾರ ಎಸಗಿದ ಆರೋಪವನ್ನು ಬೆಂಗಳೂರಿನಲ್ಲಿರುವ ಫ್ರಾನ್ಸ್ ಕಾನ್ಸುಲ್ ಜನರಲ್ ಕಚೇರಿಯ ಹಿರಿಯ ಅಧಿಕಾರಿ ಎದುರಿಸುತ್ತಿದ್ದಾರೆ. ಇದರ ಹಿಂದೆಯೇ ಏಳು ವರ್ಷದ ಬಾಲೆಯ ಮೇಲೆ ಪರಿಚಿತ ವ್ಯಕ್ತಿಯೇ ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಮತ್ತೊಂದು ಪ್ರಕರಣ ಬೆಂಗಳೂರಿಗರನ್ನು ತಲ್ಲಣಗೊಳಿಸಿದೆ. ಮನೆಯೊಳಗೇ ಕುಟುಂಬ ಸದಸ್ಯರಿಂದ ಅಥವಾ ಪರಿಚಿತರಿಂದಲೇ ಮಕ್ಕಳ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಬೆಳಕು ಕಾಣುತ್ತಿವೆ. ಮಕ್ಕಳ ಮೇಲೆ ಕುಟುಂಬ ಸದಸ್ಯರು ಅಥವಾ ಪರಿಚಿತರು ಲೈಂಗಿಕದೌರ್ಜನ್ಯ ಎಸಗುವಂತಹ ಸಾಮಾಜಿಕ ಪಿಡುಗು ಭಾರತದಲ್ಲೂ ಇದೆ ಎಂಬುದನ್ನು ಒಪ್ಪಿಕೊಳ್ಳುವುದೇ ನಮ್ಮಲ್ಲಿ ಈವರೆಗೆ ಕಷ್ಟವಿತ್ತು. ಇಂತಹದೇನಿದ್ದರೂ ಪಾಶ್ಚಾತ್ಯ ರಾಷ್ಟ್ರಗಳಿಗಷ್ಟೇ ಸೀಮಿತ ಎಂಬ ಭಾವನೆ ಅದು. ಆದರೆ ಭಾರತದಲ್ಲಿ ಶೇಕಡ 53.22ರಷ್ಟು ಮಕ್ಕಳು ಲೈಂಗಿಕ ದೌರ್ಜನ್ಯಕ್ಕೊಳಗಾಗುತ್ತಿದ್ದಾರೆ ಎಂಬ ಅಂಶವನ್ನು 2007ರಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಡೆಸಿದ ಅಧ್ಯಯನ ಬಯಲುಮಾಡಿತು. ಹೀಗಿದ್ದೂ, ವಯಸ್ಕರು ಹಾಗೂ ಮಕ್ಕಳ ಮೇಲಿನ ಅತ್ಯಾಚಾರ ಪ್ರಕರಣಗಳನ್ನು ವಿಭಿನ್ನವಾಗಿ ನಿರ್ವಹಿಸಲು ಭಾರತೀಯ ದಂಡ ಸಂಹಿತೆ (ಐಪಿಸಿ)ಯಲ್ಲಿ ಅವಕಾಶಗಳೇ ಇರಲಿಲ್ಲ. ಕೊನೆಗೂ, ಕಳೆದ ತಿಂಗಳು 2012ರ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಮಸೂದೆಗೆ ಸಂಸತ್ ಅನುಮೋದನೆ ದೊರೆತಿದೆ. ಹೆಣ್ಣುಮಕ್ಕಳಷ್ಟೇ ಅಲ್ಲ ಲೈಂಗಿಕ ದೌರ್ಜನ್ಯಗಳಿಗೆ ಗುರಿಯಾಗುವ ಗಂಡು ಮಕ್ಕಳಿಗೂ ಈ ವಿಧೇಯಕ ಅನ್ವಯಿಸುತ್ತದೆ. ವಿಶೇಷ ನ್ಯಾಯಾಲಯಗಳಿಂದ ತ್ವರಿತ ವಿಚಾರಣೆಯಲ್ಲದೆ ಜೀವಾವಧಿವರೆಗೆ ಶಿಕ್ಷೆ ಒದಗಿಸಲು ಇದು ಅವಕಾಶ ಕಲ್ಪಿಸುತ್ತದೆ. ಲೈಂಗಿಕ ದೌರ್ಜನ್ಯಕ್ಕೆ ಗುರಿಯಾಗುವ ಮಕ್ಕಳು ಕಾನೂನಿನ ಅಡಿ ಒಳಗಾಗಬೇಕಾದ ಪ್ರಕ್ರಿಯೆ ಬಹಳಷ್ಟು ಸಂದರ್ಭಗಳಲ್ಲಿ ಅಮಾನವೀಯವಾಗಿರುತ್ತದೆ. ಫ್ರೆಂಚ್ ರಾಜತಾಂತ್ರಿಕನ ವಿರುದ್ಧದ ಅತ್ಯಾಚಾರ ಆರೋಪ ಪ್ರಕರಣದ್ಲ್ಲಲಿ ಮೂರೂವರೆ ವರ್ಷದ ಹಸುಳೆಯನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಎರಡನೇ ಬಾರಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲು ನಿರ್ಧರಿಸಿದ ಕರ್ನಾಟಕ ಪೊಲೀಸರ ಕ್ರಮವನ್ನು ಉದಾಹರಿಸಬಹುದು. ಅತ್ಯಾಚಾರದಂತಹ ಪ್ರಕರಣಗಳಲ್ಲಿ, ಎರಡನೇ ಬಾರಿಗೆ ಪರೀಕ್ಷೆ ಎಂದಾದಾಗ ಸಾಕಷ್ಟು ಸಮಯ ಕಳೆದುಹೋಗುವುದರಿಂದ ಬಹಳಷ್ಟು ಸಾಕ್ಷ್ಯಗಳು ನಾಶವಾಗುವ ಸಂಭವವಿರುತ್ತವೆ, ಜೊತೆಗೆ ಮಗುವಿಗೂ ಹಿಂಸೆ ಎಂಬುದು ಸಹಜ. ಮಗುವನ್ನು ಮೊದಲ ಬಾರಿಗೆ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ ಬಾಪ್ಟಿಸ್ಟ್ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ಇಂತಹ ಸೂಕ್ಷ್ಮ ಪ್ರಕರಣಗಳನ್ನು ನಿರ್ವಹಿಸಲು ಯೂನಿಸೆಫ್ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ತರಬೇತಿ ಪಡೆದವರು ಎಂಬುದನ್ನು ಗಮನಿಸಬೇಕು. ಈ ಮಧ್ಯೆ ಅತ್ಯಾಚಾರ ಆರೋಪಕ್ಕೆ ಗುರಿಯಾಗಿರುವ ಫ್ರೆಂಚ್ ರಾಜತಾಂತ್ರಿಕ ಕಚೇರಿಯ ಅಧಿಕಾರಿಗೆ ರಾಜತಾಂತ್ರಿಕ ವಿನಾಯಿತಿ ಅನ್ವಯಿಸುವುದಿಲ್ಲ ಎಂಬುದನ್ನು ಫ್ರೆಂಚ್ ಸರ್ಕಾರದ ಮೂಲಗಳು ಸ್ಪಷ್ಟಪಡಿಸಿವೆ. ಈ ನೆಲದ ಕಾನೂನುಗಳ ಪ್ರಕಾರ, ವಿಚಾರಣೆಗೆ ಹಾದಿಯಂತೂ ತೆರೆದುಕೊಂಡಂತಾಗಿದೆ. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಗಳ ಕುರಿತಂತೆ ಕುಟುಂಬ, ಶಾಲೆ ಹಾಗೂ ಒಟ್ಟು ಸಮಾಜದಲ್ಲಿ ಸಂವೇದನಾಶೀಲ ಅರಿವು ಮೂಡುವುದು ಬಹಳ ಮುಖ್ಯ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.