ತಂತ್ರಕ್ಕಿಂತ ಬದ್ಧತೆ ಮುಖ್ಯ ಕಾಂಗ್ರೆಸ್ ಉಪಾಧ್ಯಕ್ಷರಾಗಿ ನೇಮಕಗೊಂಡ ದಿನದಿಂದ ರಾಹುಲ್‌ಗಾಂಧಿ ತಮ್ಮ ಪಕ್ಷವೂ ಸೇರಿದಂತೆ ದೇಶದ ಒಟ್ಟು ರಾಜಕೀಯ ಕ್ಷೇತ್ರದ ಸುಧಾರಣೆ ಬಗ್ಗೆ ಅಲ್ಲಲ್ಲಿ ಬಿಡಿಬಿಡಿಯಾಗಿ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಅವರು ಇತ್ತೀಚೆಗೆ ನೀಡಿರುವ ಮಾರ್ಗಸೂಚಿಗಳನ್ನು ಗಮನಿಸಿದರೆ ತಮ್ಮ ಆಲೋಚನೆಗಳ ಮೊದಲ ಪ್ರಯೋಗಭೂಮಿಯಾಗಿ ಕರ್ನಾಟಕವನ್ನೇ ಆರಿಸಿದಂತೆ ಕಾಣುತ್ತಿದೆ. ಭ್ರಷ್ಟಾಚಾರ, ಅಪರಾಧೀಕರಣ, ಪಕ್ಷಾಂತರ ಮತ್ತು ಜಾತೀಯತೆಯಿಂದಾಗಿ ಒಟ್ಟು ರಾಜಕೀಯ ವ್ಯವಸ್ಥೆಯೇ ಜನತೆಯ ವಿಶ್ವಾಸವನ್ನು ಕಳೆದುಕೊಳ್ಳುತ್ತಿರುವ ಕಾಲದಲ್ಲಿ ದೇಶದ ಪ್ರಮುಖ ರಾಷ್ಟ್ರೀಯ ಪಕ್ಷವೊಂದರಲ್ಲಿ ಈ ರೀತಿಯ ಚಿಂತನೆ ಪ್ರಾರಂಭವಾಗಿರುವುದು ಸ್ವಾಗತಾರ್ಹ ಬೆಳವಣಿಗೆ. ತಾನು ಆಡಿದ್ದನ್ನು ಮಾಡಿತೋರಿಸುವ ಅವಕಾಶ ರಾಹುಲ್ ಗಾಂಧಿಯವರಿಗೆ ಒದಗಿಬಂದಿದೆ. ರೋಗದ ಮೂಲವನ್ನು ಹುಡುಕಿ ಚಿಕಿತ್ಸೆ ನೀಡಿದರೆ ಮಾತ್ರ ಅದರ ನಿವಾರಣೆ ಸಾಧ್ಯ. ರಾಜಕೀಯ ವ್ಯವಸ್ಥೆಯ ಸುಧಾರಣೆ ಚುನಾವಣಾ ಅಭ್ಯರ್ಥಿಗಳ ಆಯ್ಕೆಯ ಮಟ್ಟದಿಂದಲೇ ಪ್ರಾರಂಭವಾಗಬೇಕು. ಸಾಮಾಜಿಕ ನ್ಯಾಯವನ್ನು ಗಮನದಲ್ಲಿಟ್ಟುಕೊಂಡು ಎಲ್ಲ ಜಾತಿಗಳಿಗೆ ಜನಸಂಖ್ಯೆಗೆ ಅನುಗುಣವಾದ ಪ್ರಾತಿನಿಧ್ಯವನ್ನು ನೀಡಬೇಕಾಗಿರುವುದು ರಾಜಕೀಯ ಪಕ್ಷಗಳ ಕರ್ತವ್ಯವಾದರೂ ಜಾತಿಯೊಂದೇ ಅಭ್ಯರ್ಥಿಗಳ ಆಯ್ಕೆಗೆ ಮಾನದಂಡವಾಗಬಾರದು. ಅದೇ ರೀತಿ ದುಡ್ಡು, ವಂಶಾವಳಿ, ತೋಳ್ಬಲ, ಪ್ರಭಾವಗಳ ಆಧಾರದಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಪ್ರಜಾಪ್ರಭುತ್ವ ವಿರೋಧಿ ಪದ್ಧತಿ ಕೊನೆಗೊಳ್ಳಬೇಕು. ಹೈಕಮಾಂಡ್ ಸಂಸ್ಕೃತಿಯಿಂದಾಗಿ ರಾಜಕೀಯ ಪಕ್ಷಗಳಲ್ಲಿ ಆಂತರಿಕ ಪ್ರಜಾಪ್ರಭುತ್ವವೇ ಇಲ್ಲದಂತಾಗಿರುವುದು ಇಂದಿನ ವಾಸ್ತವ. ಈ ವಿಷಯದಲ್ಲಿ ಕಾಂಗ್ರೆಸ್ ಪಕ್ಷ ಹಳೆಯ ಅಪರಾಧಿಯಾದರೂ ಪ್ರಾದೇಶಿಕ ಪಕ್ಷಗಳೂ ಸೇರಿದಂತೆ ಯಾವ ಪಕ್ಷವೂ ಇದಕ್ಕೆ ಹೊರತಾಗಿಲ್ಲ. ಇತ್ತೀಚೆಗೆ ರಾಜ್ಯದಲ್ಲಿ ನಡೆದ ಬಿಜೆಪಿ ಅಧ್ಯಕ್ಷರ ಆಯ್ಕೆಯ ಪ್ರಹಸನವೇ ಇದಕ್ಕೆ ಸಾಕ್ಷಿ. ಈ ವ್ಯವಸ್ಥೆಯನ್ನು ಬದಲಾಯಿಸುವ ಆಶಯವನ್ನು ರಾಹುಲ್ ಹಿಂದೆ ವ್ಯಕ್ತಪಡಿಸಿದ್ದರು. ಅಭ್ಯರ್ಥಿಗಳ ಆಯ್ಕೆಯನ್ನು ಬ್ಲಾಕ್ ಮಟ್ಟದಲ್ಲಿಯೇ ಪ್ರಾರಂಭಿಸುವುದರ ಜತೆಯಲ್ಲಿ ಪ್ರದೇಶ ಕಾಂಗ್ರೆಸ್ ಸಮಿತಿಗೆ ಆಯ್ಕೆಯ ಸಂಪೂರ್ಣ ಅಧಿಕಾರವನ್ನು ನೀಡುವ ಅವರ ನಿಲುವು ಪ್ರಜಾಪ್ರಭುತ್ವದ ಆಶಯಕ್ಕೆ ಅನುಗುಣವಾಗಿದೆ. ತಾನು ಅನುಭವಿಸುತ್ತಿರುವ ದೀರ್ಘಕಾಲದ ರಾಜಕೀಯ ಅಜ್ಞಾತವಾಸ ಮತ್ತು ಆಡಳಿತ ವಿರೋಧಿ ಅಲೆಯಿಂದಾಗಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಉಳಿದೆಲ್ಲ ಪಕ್ಷಗಳಿಗಿಂತ ಕಾಂಗ್ರೆಸ್ ಪಕ್ಷ ಒಂದು ಹೆಜ್ಜೆ ಮುಂದಿದೆ. ರಾಜಕೀಯವಾಗಿ ಈ ರೀತಿಯ ಅನುಕೂಲಕರ ಪರಿಸ್ಥಿತಿಯಲ್ಲಿ ಗೆಲ್ಲುವ ಸಾಮರ್ಥ್ಯವೊಂದನ್ನೇ ಆಧಾರವಾಗಿಟ್ಟುಕೊಳ್ಳದೆ ಒಂದಷ್ಟು ಪ್ರಾಮಾಣಿಕ ಮತ್ತು ಸೇವಾನಿಷ್ಠ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಸಾಧ್ಯ ಇದೆ. ಯುವಕಾಂಗ್ರೆಸ್ ಪದಾಧಿಕಾರಿಗಳ ಆಯ್ಕೆಯನ್ನು ಚುನಾವಣೆಯ ಮೂಲಕವೇ ಆಯ್ಕೆಮಾಡುವ ಪಾರದರ್ಶಕ ವ್ಯವಸ್ಥೆಯನ್ನು ರಾಹುಲ್‌ಗಾಂಧಿ ಅನುಸರಿಸಿದ್ದರು. ಹಲವಾರು ವರ್ಷಗಳಿಂದ ಬೇರು ಬಿಟ್ಟಿರುವ ಪಟ್ಟಭದ್ರ ವ್ಯವಸ್ಥೆಯನ್ನು ಒಂದೇ ಪ್ರಯತ್ನದಲ್ಲಿ ಬದಲಾವಣೆ ಮಾಡಲು ಸಾಧ್ಯ ಇಲ್ಲ. ಇದರಲ್ಲಿ ಯಶಸ್ಸು ಕಾಣಬೇಕಾದರೆ ರಾಜಕೀಯ ಲಾಭ-ನಷ್ಟದ ಲೆಕ್ಕಾಚಾರವನ್ನು ಪಕ್ಕಕ್ಕಿಟ್ಟು ಮುಂದುವರಿಯಬೇಕಾಗುತ್ತದೆ. ಪ್ರಾರಂಭದಲ್ಲಿ ಎದುರಾಗಬಹುದಾದ ಸೋಲಿಗೂ ಸಿದ್ದವಾಗಿರಬೇಕಾಗುತ್ತದೆ. ರಾಜಕಾರಣಿಗಳ ವಿಚಾರ ಮತ್ತು ಆಚಾರಗಳ ನಡುವಿನ ಅಂತರ ಹೆಚ್ಚುತ್ತಲೇ ಹೋಗಿರುವ ಇಂದಿನ ದಿನಗಳಲ್ಲಿ ರಾಹುಲ್‌ಗಾಂಧಿಯವರ ನಡೆನುಡಿಯನ್ನು ಕೂಡಾ ದೇಶದ ಜನತೆ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂಬುದು ಅವರಿಗೆ ತಿಳಿದಿರಲಿ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.