ತನಿಖಾಸಂಸ್ಥೆಗಳನ್ನು ಸ್ವತಂತ್ರಗೊಳಿಸಿ ಭಾರತದ ಅತಿಗಣ್ಯರಿಗೆ ಮೀಸಲಾಗಿರುವ ವಿಶೇಷ ಹೆಲಿಕಾಪ್ಟರ್‌ಗಳ ಮಾರಾಟಕ್ಕಾಗಿ ಇಟಲಿಯ ರಕ್ಷಣಾ ಸಾಮಗ್ರಿ ತಯಾರಿಕಾ ಕಂಪೆನಿ ಫಿನ್‌ಮೆಕಾನಿಕಾ ಕಮಿಷನ್ ನೀಡಿದೆ ಎಂಬ ಆರೋಪ ಯುಪಿಎ ಸರ್ಕಾರವನ್ನು ತಳಮಳಕ್ಕೀಡುಮಾಡಿದೆ. `ಫಿನ್‌ಮೆಕಾನಿಕಾ' ಮತ್ತು ಹೆಲಿಕಾಪ್ಟರ್ ನಿರ್ಮಿಸುವ ಅದರ ಅಂಗಸಂಸ್ಥೆ ಆಗಸ್ಟಾವೆಸ್ಟ್‌ಲೆಂಡ್‌ನ ಮುಖ್ಯಸ್ಥ ಜೆಯುಸೆಫ್ ಒರ್ಸಿಯ ಬಂಧನದ ನಂತರ ಜಾಗೃತಗೊಂಡ ರಕ್ಷಣಾ ಸಚಿವ ಎ.ಕೆ.ಆಂಟನಿ ಅವರು ಹಗರಣದ ತನಿಖೆಯನ್ನು ಕೇಂದ್ರ ತನಿಖಾ ದಳಕ್ಕೆ(ಸಿಬಿಐ)ಒಪ್ಪಿಸಿದ್ದಾರೆ. ಇಂತಹ ಹಗರಣಗಳ ಬಗ್ಗೆ ಸಿಬಿಐ ನಡೆಸಿರುವ ತನಿಖೆಯ ಇತಿಹಾಸವನ್ನು ಗಮನಿಸಿದರೆ ಈ ಹಗರಣದ ಹಿಂದಿನ ಸತ್ಯ ಬಯಲಾಗಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬಹುದು ಎಂಬ ವಿಶ್ವಾಸ ಯಾರಲ್ಲಿಯೂ ಹುಟ್ಟಲಾರದು. ಬೊಫೋರ್ಸ್ ಹಗರಣದಲ್ಲಿ ನ್ಯಾಯಾಲಯ ಮಾಜಿ ಪ್ರಧಾನಿ ರಾಜೀವ್‌ಗಾಂಧಿಯವರನ್ನು ದೋಷಮುಕ್ತಗೊಳಿಸಿದ್ದರೂ ಆ ವ್ಯವಹಾರದಲ್ಲಿ ಕಮಿಷನ್ ಪಡೆದಿರುವವರು ಯಾರು ಎಂದು ಗೊತ್ತಾಗಿಲ್ಲ. ಹಗರಣದ ಪ್ರಮುಖ ಆರೋಪಿ ಒಟ್ಟಾವಿ ಕ್ವಟ್ರೋಚಿಯ ರಕ್ಷಣೆಗಾಗಿ ಸಿಬಿಐ ಹೇಗೆ ನೆರವಾಗಿತ್ತು ಎನ್ನುವುದು ರಹಸ್ಯವಾಗಿ ಉಳಿದಿಲ್ಲ. ಅದೇ ರೀತಿ `ತೆಹೆಲ್ಕಾ' ಬಯಲುಗೊಳಿಸಿದ ರಕ್ಷಣಾ ಸಾಮಗ್ರಿ ಖರೀದಿ ಹಗರಣದ ತನಿಖೆ ನಡೆಸಿದ್ದ ನ್ಯಾಯಮೂರ್ತಿ ಪೂಕಾನ್ ನೇತೃತ್ವದ ಆಯೋಗ ಆಗಿನ ರಕ್ಷಣಾಸಚಿವ ಜಾರ್ಜ್ ಫರ್ನಾಂಡಿಸ್ ಅವರನ್ನು ದೋಷಮುಕ್ತಗೊಳಿಸಲು ತೋರಿದ್ದ ಆಸಕ್ತಿಯನ್ನು ಕೂಡಾ ಜನ ಕಂಡಿದ್ದಾರೆ. ಆದುದರಿಂದ ಜಂಟಿ ಸಂಸದೀಯ ಸಮಿತಿ, ಸಿಬಿಐ ಇಲ್ಲವೆ ಸ್ವತಂತ್ರ ಆಯೋಗಗಳಿಂದ ಸತ್ಯಶೋಧನೆ ಸಾಧ್ಯ ಎಂಬ ವಿಶ್ವಾಸ ಯಾರಲ್ಲಿಯೂ ಉಳಿದಿಲ್ಲ. ಈ ಹಗರಣಗಳು ಕೇವಲ ಎದುರಾಳಿಗಳನ್ನು ಹಣಿಯುವ ದಾಳಗಳಾಗಿ ರಾಜಕೀಯ ಪಕ್ಷಗಳಿಂದ ಬಳಕೆಯಾಗುತ್ತಿವೆ. ಇದರಿಂದ ಸೇನೆಯ ನೈತಿಕಸ್ಥೈರ್ಯ ಕುಸಿಯುವ ಅಪಾಯದ ಬಗ್ಗೆ ಯಾರಿಗೂ ಅರಿವಿಲ್ಲ. ರಕ್ಷಣಾ ಸಾಮಗ್ರಿಗಳ ಖರೀದಿ ವ್ಯವಹಾರಗಳನ್ನೆಲ್ಲ ಕೇಂದ್ರ ಜಾಗೃತ ಆಯೋಗದ (ಸಿವಿಸಿ) ಪರಿಶೀಲನೆಗೆ ಒಪ್ಪಿಸಬೇಕೆಂಬ ಅಭಿಪ್ರಾಯ ಮೊದಲಿನಿಂದಲೂ ಇದೆ. ಆದರೆ ಸಿವಿಸಿ ಕೂಡಾ ಒಂದು ಹಲ್ಲಿಲ್ಲದ ಸಂಸ್ಥೆ. ದೂರುಗಳ ವಿಚಾರಣೆಯನ್ನಷ್ಟೇ ನಡೆಸಲು ಸಾಧ್ಯ ಇರುವ ಸಿವಿಸಿಗೆ ತನಿಖೆ ನಡೆಸುವ ಅಧಿಕಾರ ಇಲ್ಲ. `ತೆಹೆಲ್ಕಾ' ಬಯಲುಗೊಳಿಸಿದ್ದ 15 ರಕ್ಷಣಾ ಸಾಮಗ್ರಿ ಖರೀದಿ ಹಗರಣಗಳ ಪೈಕಿ ಹದಿಮೂರರಲ್ಲಿ ಅಕ್ರಮ ನಡೆದಿದೆ ಎಂದು ಸಿವಿಸಿ ವರದಿ ನೀಡಿತ್ತು. ಯಥಾಪ್ರಕಾರ ತನಿಖೆಯನ್ನು ಸಿಬಿಐಗೆ ಒಪ್ಪಿಸಲಾಯಿತು.ರಾಜಕೀಯ ತೂಕ ಇಲ್ಲದ ಬಂಗಾರು ಲಕ್ಷ್ಮಣ್ ಜೈಲಿಗೆ ಹೋಗಿರುವುದನ್ನು ಹೊರತುಪಡಿಸಿದರೆ ಬೇರೆ ಯಾವ ಸತ್ಯವೂ ಹೊರಬರಲಿಲ್ಲ. ಸಿವಿಸಿಗೆ ಸ್ವಾಯತ್ತ ಸ್ಥಾನಮಾನ ನೀಡಿ ಸಿಬಿಐ ಕಾರ್ಯನಿರ್ವಹಣೆಯ ಮೇಲ್ವಿಚಾರಣೆಯನ್ನು ಅದಕ್ಕೆ ಒಪ್ಪಿಸಬೇಕೆಂದು ಹವಾಲ ಹಗರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಹದಿನಾರುವರ್ಷಗಳ ಹಿಂದೆ ಆದೇಶ ನೀಡಿತ್ತು. ಅದರ ನಂತರ ಅಧಿಕಾರಕ್ಕೆ ಬಂದ ಎರಡು ಪ್ರಮುಖ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಈ ಆದೇಶವನ್ನು ನಿರ್ಲಕ್ಷಿಸುತ್ತಲೇ ಬಂದಿವೆ. ತನಿಖಾಸಂಸ್ಥೆಗಳಿಗೆ ಸ್ವಾಯತ್ತಸ್ಥಾನಮಾನ ನೀಡಿ ರಾಜಕೀಯ ನಿಯಂತ್ರಣದಿಂದ ಮುಕ್ತಗೊಳಿಸದಿದ್ದರೆ ಯಾವ ಹಗರಣದ ತನಿಖೆ ಕೂಡಾ ನಿಷ್ಪಕ್ಷಪಾತವಾಗಿ ನಡೆಯಲು ಸಾಧ್ಯ ಇಲ್ಲ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.