ಲೋಕಾಯುಕ್ತ ನಿರಾಳವೆ? ರಾಜ್ಯಸರ್ಕಾರ ವಿಳಂಬವಾಗಿಯಾದರೂ ಲೋಕಾಯುಕ್ತರನ್ನು ನೇಮಕ ಮಾಡಿರುವುದು ಸ್ವಾಗತಾರ್ಹ ಕ್ರಮ. ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆಯವರ ನಿವೃತ್ತಿಯ ನಂತರ ಹೆಚ್ಚುಕಡಿಮೆ ಈ ಹುದ್ದೆ ಖಾಲಿಯಾಗಿಯೇ ಇತ್ತು, ನಡುವೆ ನ್ಯಾ.ಶಿವರಾಜ್‌ಪಾಟೀಲ್ ಅವರನ್ನು ನೇಮಿಸಿದರೂ ಆರೋಪಗಳ ಹಿನ್ನೆಲೆಯಲ್ಲಿ ಅವರು ರಾಜೀನಾಮೆ ನೀಡಬೇಕಾಯಿತು. ಇತ್ತೀಚಿನ ಭ್ರಷ್ಟಾಚಾರ ವಿರೋಧಿ ಚಳವಳಿಯ ನಂತರದ ದಿನಗಳಲ್ಲಿ ಲೋಕಾಯುಕ್ತರಾಗಿ ನೇಮಕಗೊಳ್ಳುವವರ ಅರ್ಹತೆಯನ್ನು ಜನ ಭೂತಗನ್ನಡಿ ಹಿಡಿದು ನೋಡುತ್ತಿರುವುದು ಕೂಡಾ ವಿಳಂಬಕ್ಕೆ ಕಾರಣ ನಿಜ. ನ್ಯಾಯಮೂರ್ತಿಗಳಾದ ಶಿವರಾಜ ಪಾಟೀಲ್ ಮತ್ತು ಬನ್ನೂರ್‌ಮಠ ಅವರು ಕಾನೂನುಬಾಹಿರವಾಗಿ ನಿವೇಶನ ಪಡೆದುಕೊಂಡಿದ್ದಾರೆ ಎನ್ನುವ ಕಾರಣಕ್ಕೆ ಅವರು ಲೋಕಾಯುಕ್ತರಾಗಲು ಅನರ್ಹರೆಂಬ ಜನಾಭಿಪ್ರಾಯ ವ್ಯಕ್ತವಾಗಿತ್ತು. ಇದನ್ನೇ ನೆಪವಾಗಿಟ್ಟುಕೊಂಡ ರಾಜ್ಯ ಸರ್ಕಾರ ಲೋಕಾಯುಕ್ತರ ನೇಮಕವನ್ನೇ ಮುಂದೂಡುತ್ತಾ ಬಂದಿದೆ. ಕಾರ್ಯಾಂಗ ಮತ್ತು ಶಾಸಕಾಂಗದ ರೀತಿಯಲ್ಲಿಯೇ ಸಂವಿಧಾನದ ಪ್ರಮುಖ ಅಂಗವಾದ ನ್ಯಾಯಾಂಗದ ವಿರುದ್ಧವೂ ಇತ್ತೀಚಿನ ದಿನಗಳಲ್ಲಿ ಭ್ರಷ್ಟಾಚಾರ ಮತ್ತಿತರ ಆರೋಪಗಳು ಕೇಳಿಬರುತ್ತಿದ್ದರೂ ಪ್ರಾಮಾಣಿಕರಿಗೇನು ಕೊರತೆ ಇಲ್ಲ. ಆದರೆ ಲೋಕಾಯುಕ್ತ ನಡೆಸಿದ ತನಿಖೆಯಿಂದಾಗಿ ರಾಜ್ಯದಲ್ಲಿ ಮುಖ್ಯಮಂತ್ರಿಗಳೇ ಅಧಿಕಾರ ಕಳೆದುಕೊಂಡ ನಂತರ ಬಿಜೆಪಿ ಸರ್ಕಾರ ಈ ತನಿಖಾ ಸಂಸ್ಥೆಯನ್ನು ನಿಷ್ಕ್ರಿಯಗೊಳಿಸಲು ಪ್ರಯತ್ನ ಮಾಡುತ್ತಾ ಬಂದಿರುವುದನ್ನು ರಾಜ್ಯದ ಜನತೆ ಗಮನಿಸಿದ್ದಾರೆ. ನೇಮಕಾತಿಯಲ್ಲಿನ ವಿಳಂಬಕ್ಕಾಗಿ ರಾಜ್ಯ ಹೈಕೋರ್ಟ್ ತರಾಟೆಗೆ ತೆಗೆದುಕೊಂಡ ನಂತರವೂ ಬುದ್ದಿ ಕಲಿತುಕೊಳ್ಳದೆ ಇದ್ದ ರಾಜ್ಯಸರ್ಕಾರ ಅಧಿಕಾರದ ಕೊನೆಯ ದಿನಗಳಲ್ಲಿ ತನ್ನ ಮೇಲಿನ ಆರೋಪವನ್ನು ತೊಡೆದುಹಾಕುವ ಪ್ರಯತ್ನ ಮಾಡಿದೆ. ನೂತನ ಲೋಕಾಯುಕ್ತರಾಗಿ ನೇಮಕಗೊಂಡಿರುವ ನ್ಯಾ.ವೈ.ಭಾಸ್ಕರರಾವ್ ವಿರುದ್ಧವೂ ಅಪಸ್ವರ ಕೇಳಿಬಂದಿದೆ. ಮುಖ್ಯಮಂತ್ರಿಗಳು ನೇಮಕಾತಿಗೆ ಮೊದಲು ಹೈಕೋರ್ಟ್ ಮುಖ್ಯನ್ಯಾಯಮೂರ್ತಿಗಳ ಜತೆ ಸಮಾಲೋಚನೆ ನಡೆಸಿಲ್ಲ ಎಂಬ ಬೆಂಗಳೂರು ವಕೀಲರ ಸಂಘದ ಆಕ್ಷೇಪ ಹುರಳಿಲ್ಲದ್ದು. ರಾಜ್ಯ ಹೈಕೋರ್ಟ್‌ಗೆ ಈಗ ಮುಖ್ಯನ್ಯಾಯಮೂರ್ತಿಗಳೇ ಇಲ್ಲದೆ ಇರುವುದರಿಂದ ಸಮಾಲೋಚನೆ ಸಾಧ್ಯ ಇರಲಿಲ್ಲ ಎನ್ನುವುದು ವಾಸ್ತವ. ಹಂಗಾಮಿ ಮುಖ್ಯನ್ಯಾಯಮೂರ್ತಿಗಳ ಅಧಿಕಾರದ ವಿವಾದ ನಿರಾಧಾರವಾದುದು. ಇದಕ್ಕಿಂತಲೂ ಮುಖ್ಯವಾಗಿ ಲೋಕಾಯುಕ್ತರ ನೇಮಕಾತಿಯಲ್ಲಿ ಮುಖ್ಯಮಂತ್ರಿಯವರದ್ದೇ ಪರಮಾಧಿಕಾರ ಎಂದು ಇತ್ತೀಚೆಗೆ ಸುಪ್ರೀಂಕೋರ್ಟ್ ಹೇಳಿರುವುದರಿಂದ ವಕೀಲರ ಆಕ್ಷೇಪವನ್ನು ಸುಲಭದಲ್ಲಿ ತಳ್ಳಿಹಾಕಬಹುದು. ನ್ಯಾ.ಭಾಸ್ಕರರಾವ್ ಅವರಿಗೆ `ವಯಸ್ಸಾಗಿದೆ, ಕನ್ನಡ ಬರುವುದಿಲ್ಲ' ಎಂಬಿತ್ಯಾದಿ ಆರೋಪಗಳಿಗೂ ಆಧಾರ ಇಲ್ಲ.ಲೋಕಾಯುಕ್ತರ ನೇಮಕಾತಿಗೆ ಸಂಬಂಧಿಸಿದಂತೆ ರಾಜ್ಯಸರ್ಕಾರ ವಯಸ್ಸು,ಭಾಷೆ ಇತ್ಯಾದಿ ಅರ್ಹತೆಗಳನ್ನು ಪಾಲಿಸಿದೆ ಎನ್ನುವುದರಲ್ಲಿ ಅನುಮಾನ ಇಲ್ಲ. ಆದರೆ ನ್ಯಾಯಮೂರ್ತಿಗಳಾದ ಶಿವರಾಜ ಪಾಟೀಲ್ ಮತ್ತು ಬನ್ನೂರಮಠ ಲೋಕಾಯುಕ್ತರಾಗುವ ಅವಕಾಶದಿಂದ ವಂಚಿತರಾಗಲು ಕಾರಣವಾದ ಆರೋಪಗಳು ನ್ಯಾ.ಭಾಸ್ಕರರಾವ್ ವಿರುದ್ಧವೂ ಇದೆ ಎನ್ನುವುದನ್ನು ಗಮನಿಸಬೇಕಾಗುತ್ತದೆ. ಇಂತಹ ವಿವಾದಕ್ಕೆ ಆಸ್ಪದ ಕೊಡದ ರೀತಿಯಲ್ಲಿ ರಾಜ್ಯಸರ್ಕಾರ ಎಚ್ಚರಿಕೆ ವಹಿಸಬಹುದಿತ್ತು. ಇದೇ ರೀತಿಯ ಆರೋಪದ ಕಾರಣಕ್ಕೆ ನ್ಯಾ.ಬನ್ನೂರಮಠ ಅವರನ್ನು ಲೋಕಾಯುಕ್ತರನ್ನಾಗಿ ಮಾಡಲು ಒಪ್ಪದೆ ಇದ್ದ ರಾಜ್ಯಪಾಲರು ನ್ಯಾ.ಭಾಸ್ಕರರಾವ್ ನೇಮಕಕ್ಕೆ ಒಪ್ಪಿಗೆ ಸೂಚಿಸಿರುವುದು ಕೂಡಾ ಆಶ್ಚರ್ಯವನ್ನುಂಟು ಮಾಡಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.