ಕೊನೆಯಿಲ್ಲವೇ ಈ ಅತ್ಯಾಚಾರಕ್ಕೆ? ಅತ್ಯಾಚಾರವೂ ಸೇರಿದಂತೆ ಮಹಿಳೆ ವಿರುದ್ಧ ನಡೆಸುವ ಲೈಂಗಿಕ ದೌರ್ಜನ್ಯಗಳಿಗೆ ಉಗ್ರ ಶಿಕ್ಷೆ ವಿಧಿಸಲು ಅವಕಾಶ ನೀಡುವಂತಹ ಅಪರಾಧ ಕಾನೂನು ತಿದ್ದುಪಡಿ ಮಸೂದೆ 2013ಕ್ಕೆ ಕಳೆದ ಗುರುವಾರವಷ್ಟೇ ಕೇಂದ್ರ ಸಂಪುಟ ಅಂಗೀಕಾರ ನೀಡಿದೆ. ಈ ಮೂಲಕ, ಭಾರತದ ಮಹಿಳೆಯರ ಹಕ್ಕುಗಳ ಹೋರಾಟದಲ್ಲಿ ಹೊಸ ಮುನ್ನಡೆ ಸಾಧಿಸಲಾಗಿದೆ. ಆದರೆ ಈ `ಅಪರಾಧ ಕಾನೂನು ತಿದ್ದುಪಡಿ ಮಸೂದೆ 2013' ಸಂಸತ್ತಿನ ಅನುಮೋದನೆ ಪಡೆಯುವುದು ಅಷ್ಟು ಸುಲಭವಲ್ಲ ಎಂಬಂತಹ ಅನುಮಾನಗಳು ಈಗಾಗಲೇ ವ್ಯಕ್ತವಾಗುತ್ತಿವೆ. ಏಕೆಂದರೆ ಈ ಮಸೂದೆಯಲ್ಲಿರುವ ಅನೇಕ ಅಂಶಗಳ ಕುರಿತಂತೆ ಅನೇಕ ರಾಜಕೀಯ ಪಕ್ಷಗಳು ಗಟ್ಟಿಯಾಗಿಯೇ ವಿರೋಧದ ದನಿಗಳನ್ನು ಎತ್ತಿವೆ. ಮಹಿಳೆ ಮೇಲಿನ ಲೈಂಗಿಕ ದೌರ್ಜನ್ಯಗಳ ವಿರುದ್ಧದ ಕಾನೂನನ್ನು ಬಲ ಪಡಿಸುವ ಪ್ರಯತ್ನಗಳು ಹೀಗೆ ವಿವಾದಗಳಲ್ಲಿ ಸಿಲುಕಿಕೊಳ್ಳುತ್ತಿರುವುದು ದುರದೃಷ್ಟಕರ. ಇಂತಹ ಸನ್ನಿವೇಶದಲ್ಲಿ ಮಹಿಳೆ ವಿರುದ್ಧದ ಅತ್ಯಾಚಾರ ಪ್ರಕರಣಗಳಿಗೆ ಕೊನೆಯೇ ಇಲ್ಲ ಎಂಬಂತಾಗಿರುವುದು, ಭಾರತದಲ್ಲಿ ಮಹಿಳೆಯರ ಸುರಕ್ಷಿತತೆಯ ಪ್ರಶ್ನೆಯನ್ನು ತೀವ್ರವಾಗಿಸಿದೆ. ಅತಿ ಹೆಚ್ಚಿನ ಸಂಖ್ಯೆಯಲ್ಲಿ ರಾಷ್ಟ್ರದಾದ್ಯಂತ ಅತ್ಯಾಚಾರ ಪ್ರಕರಣಗಳು ದಿನ ನಿತ್ಯ ಎಂಬಂತೆ ವರದಿಯಾಗುತ್ತಲೇ ಇವೆ. ಇದಕ್ಕೆ ಹೊಸ ಸೇರ್ಪಡೆ ಮಧ್ಯ ಪ್ರದೇಶದ ದಾಟಿಯಾ ಜಿಲ್ಲೆಯ ಝಾರಿಯಾ ಗ್ರಾಮದ ಬಳಿ ಸ್ವಿಟ್ಜರ್ಲೆಂಡ್‌ನ ಪ್ರವಾಸಿ ಮಹಿಳೆಯ ಮೇಲೆ ಆಕೆಯ ಪತಿಯ ಎದುರೇ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ. ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತದ ಪ್ರತಿಷ್ಠೆಗೆ ಕುಂದು ತರುವಂತಹ, ತಲೆ ತಗ್ಗಿಸುವ ಹೇಯ ಪ್ರಕರಣ ಇದು. ಹತ್ತು ವರ್ಷಗಳ ಹಿಂದೆ ನವದೆಹಲಿಯಲ್ಲಿ ವಾಹನ ಪಾರ್ಕಿಂಗ್ ಜಾಗವೊಂದರಿಂದ ಸ್ವಿಟ್ಜರ್ಲೆಂಡ್ ಮಹಿಳಾ ರಾಯಭಾರಿಯೊಬ್ಬರನ್ನು ಅಪಹರಿಸಿ ಅತ್ಯಾಚಾರ ಎಸಗಿದ್ದ ಪ್ರಕರಣವನ್ನು ಇದೇ ಸಂದರ್ಭದಲ್ಲಿ ನೆನಪಿಸಿಕೊಳ್ಳಬಹುದು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರೊಬ್ಬರಿಗೂ ಶಿಕ್ಷೆಯಾಗಲಿಲ್ಲ ಎಂಬುದನ್ನೂ ನಾವು ಮರೆಯುವಂತಿಲ್ಲ. ರಾಷ್ಟ್ರದಾದ್ಯಂತ ಶೇಕಡ 80ಕ್ಕೂ ಹೆಚ್ಚು ಅತ್ಯಾಚಾರ ಪ್ರಕರಣಗಳು ರಾಷ್ಟ್ರದ ವಿವಿಧ ನ್ಯಾಯಾಲಯಗಳಲ್ಲಿ ವಿಚಾರಣೆಗೆ ಕಾದಿವೆ ಎಂಬುದನ್ನು ಸುಪ್ರೀಂ ಕೋರ್ಟ್ ನ್ಯಾಯಾಧೀಶ ನ್ಯಾಯಮೂರ್ತಿ ಪಿ. ಸದಾಶಿವಂ ಪ್ರಸ್ತಾಪಿಸಿದ್ದಾರೆ. ಅತ್ಯಾಚಾರ ಅಪರಾಧವನ್ನು ರಾಷ್ಟ್ರದಲ್ಲಿ ಎಷ್ಟು ಗಂಭೀರವಾಗಿ ಪರಿಗಣಿಸಲಾಗುತ್ತಿದೆ ಎಂಬುದಕ್ಕೆ ಇದು ದ್ಯೋತಕ. ಜರ್ಮನ್ ಮಹಿಳೆಯ ಮೇಲೆ ಅತ್ಯಾಚಾರ ಎಸಗಿ ಶಿಕ್ಷೆಗೆ ಒಳಗಾದರೂ ಕಾನೂನಿನ ಕಣ್ಣಿಗೆ ಮಣ್ಣೆರಚಿ ಆರಾಮವಾಗಿ ಸಹಜ ಜೀವನ ನಡೆಸುತ್ತಿದ್ದ ಬಿಟ್ಟಿ ಮೊಹಂತಿಯ ಪ್ರಕರಣ ಮತ್ತೊಂದು ಅತಿರೇಕದ ಉದಾಹರಣೆ. ಪ್ರಭಾವಿ ಕುಟುಂಬಗಳ ವ್ಯಕ್ತಿಗಳು ಅಪರಾಧ ನ್ಯಾಯ ವ್ಯವಸ್ಥೆಯನ್ನೇ ಬುಡಮೇಲು ಮಾಡುವುದಕ್ಕೆ ಹೇಗೆ ಅವಕಾಶವಿದೆ ಎಂಬುದರ ಜ್ವಲಂತ ನಿದರ್ಶನ ಇದು. ಭಾರತದ ಸಾಮಾಜಿಕ ಹಾಗೂ ಕಾನೂನು ವ್ಯವಸ್ಥೆ ಮಹಿಳೆಯನ್ನು ಎರಡನೇ ದರ್ಜೆ ಪ್ರಜೆಯಾಗಿಯೇ ಕಾಣುವಂತಹ್ದ್ದದು ಈ ಬಗೆಯ ಬೇಕಾಬಿಟ್ಟಿ ನಿರ್ವಹಣೆಗಳಿಗೆ ಕಾರಣ. ಈ ಮನೋಭಾವ ಬದಲಾಗದೆ ಮಹಿಳೆ ವಿರುದ್ಧದ ಅಪರಾಧ ಪ್ರಕರಣಗಳೂ ಕಡಿಮೆಯಾಗುವುದು ಸಾಧ್ಯವಿಲ್ಲ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.