ತೆಂಗು ಬೆಳೆಗಾರರನ್ನು ರಕ್ಷಿಸಿ ರಾಜ್ಯದ ಬಹುತೇಕ ತೆಂಗು ಬೆಳೆಗಾರರಿಗೆ ಈಗ ಕಷ್ಟದ ಸಮಯ. ಒಂದೂವರೆ ದಶಕದ ಹಿಂದೆ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ತೆಂಗಿನ ಮರಗಳಿಗೆ ದೊಡ್ಡ ಪ್ರಮಾಣದಲ್ಲಿ ನುಸಿ ಪೀಡೆ ಕಾಣಿಸಿಕೊಂಡಿತ್ತು. ಅದನ್ನು ನಿಯಂತ್ರಿಸಲಾಗದ ರೈತರು ಮರಗಳನ್ನೇ ಕಡಿದು ಹಾಕಿದ್ದರು. ನುಸಿ ಪೀಡೆ ಸಂಪೂರ್ಣ ನಿಯಂತ್ರಣಕ್ಕೆ ಬರಲೇ ಇಲ್ಲ. `ಗಾಯದ ಮೇಲೆ ಬರೆ ಎಳೆದರು~ ಎಂಬಂತೆ ನುಸಿಯ ಜೊತೆಗೆ ಈಗ ಕಾಂಡಕೊರಕ ಮತ್ತು ಕಪ್ಪು ತಲೆ ಹುಳುಗಳ ಹಾವಳಿ ದೊಡ್ಡ ಪ್ರಮಾಣದಲ್ಲಿ ಕಂಡು ಬಂದಿದೆ. ಕೆಲವೆಡೆ ಬೆಂಕಿ ಮತ್ತು ಅಣಬೆ ರೋಗ ಕಾಣಿಸಿಕೊಂಡಿದೆ. ಕಲ್ಪತರು ನಾಡು ಎಂದೇ ಹೆಸರಾದ ತುಮಕೂರು ಜಿಲ್ಲೆಯಲ್ಲಿ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿನ ತೆಂಗಿನ ಮರಗಳು ಅಕ್ಷರಶಃ ಸೊರಗಿ, ಒಣಗುತ್ತಿವೆ. ಈ ಬೆಳವಣಿಗೆ ದೊಡ್ಡ ಪ್ರಮಾಣದಲ್ಲಿ ಇಳುವರಿ ಕುಸಿತಕ್ಕೆ ಕಾರಣವಾಗಿದೆ. ಹೊರ ರಾಜ್ಯಗಳಿಂದ ತೆಂಗಿನಕಾಯಿ, ಕೊಬ್ಬರಿ, ಎಳನೀರು ಬರುತ್ತಿರುವುದರಿಂದ ರಾಜ್ಯದಲ್ಲಿ ಬೆಲೆ ಕುಸಿದಿದೆ. ವಿಚಿತ್ರ ರೋಗಗಳನ್ನು ನಿಯಂತ್ರಿಸುವ ಪ್ರಯತ್ನ ಮಾಡಿ ವಿಫಲವಾಗಿರುವ ರೈತರು ಅಕ್ಷರಶಃ ಕಂಗೆಟ್ಟಿದ್ದಾರೆ. ಚಿಕ್ಕನಾಯಕನಹಳ್ಳಿ, ತಿಪಟೂರು, ಗುಬ್ಬಿ, ತುರುವೇಕೆರೆ, ಸಿರಾ, ಪಾವಗಡ ಸೇರಿದಂತೆ ಜಿಲ್ಲೆಯಲ್ಲಿ ಸಾವಿರಾರು ಹೆಕ್ಟೇರ್ ಪ್ರದೇಶದ್ಲ್ಲಲಿನ ತೆಂಗಿನ ಮರಗಳು ಒಣಗುತ್ತಿವೆ. ಜಿಲ್ಲೆಯಲ್ಲಿ ಮಳೆ ಆಶ್ರಯದ ತೆಂಗಿನ ತೋಟಗಳಿಗೆ ಹೆಚ್ಚಿನ ಹಾನಿಯಾಗಿದೆ. ತೆಂಗು ಬೆಳೆಯುವ ರೈತರ ಆದಾಯ ಕುಸಿದಿದೆ. ತೆಂಗು ಉತ್ಪನ್ನಗಳ ಮಾರಾಟ, ಸಾಗಣೆ ಮತ್ತಿತರ ವೃತ್ತಿಗಳಲ್ಲಿ ತೊಡಗಿದ್ದ ಸಾವಿರಾರು ಜನರು ನಿರುದ್ಯೋಗಿಗಳಾಗುವ ಅಪಾಯ ಎದುರಿಸುತ್ತಿದ್ದಾರೆ. ಈ ಬೆಳವಣಿಗೆ ನಿಜಕ್ಕೂ ದುರದೃಷ್ಟಕರ.ರಾಜ್ಯದಲ್ಲಿ ತೆಂಗು, ಅಡಿಕೆ, ಬಾಳೆ ಮತ್ತಿತರ ಸಾಂಪ್ರದಾಯಿಕ ತೋಟ ಬೆಳೆಗಳಿಗೆ ವಿಚಿತ್ರ ರೋಗಗಳು ಕಾಣಿಸಿಕೊಳ್ಳುತ್ತಿರುವುದನ್ನು ಅಲಕ್ಷಿಸಲಾಗದು. ರೋಗ ನಿಯಂತ್ರಿಸಲು ಸರ್ಕಾರ ಕೀಟನಾಶಕ ಹಾಗೂ ಇತರೆ ಔಷಧಗಳನ್ನು ರಿಯಾಯಿತಿ ದರದಲ್ಲಿ ಪೂರೈಸುತ್ತಿದೆಯಾದರೂ ಅದರಿಂದ ಹೆಚ್ಚಿನ ಪ್ರಯೋಜನವಾಗಿಲ್ಲ. ಕೆಲವಡೆ ರೈತರು ತಮಗೆ ತೋಚಿದ ನಾಟಿ ಪದ್ಧತಿಯ ಚಿಕಿತ್ಸಾ ಕ್ರಮಗಳನ್ನು ಅನುಸರಿಸಿ ರೋಗವನ್ನು ಸ್ವಲ್ಪಮಟ್ಟಿಗೆ ನಿಯಂತ್ರಿಸಿದ್ದಾರೆ. ಆದರೆ ರೋಗಗಳ ಸಂಪೂರ್ಣ ನಿಯಂತ್ರಣಕ್ಕೆ ಏನು ಮಾಡಬೇಕು ಎಂಬುದು ತಿಳಿಯದೆ ಗೊಂದಲದಲ್ಲಿದ್ದಾರೆ. ರೈತರಿಗೆ ಕೃಷಿ ವಿಜ್ಞಾನಿಗಳ ನೆರವು ಬೇಕಾಗಿದೆ. ತೆಂಗಿನ ರೋಗ ನಿಯಂತ್ರಣದ ವಿಷಯದಲ್ಲಿ ಕೇರಳದಲ್ಲಿ ಅನೇಕ ಸಂಶೋಧನೆಗಳು ನಡೆದಿದ್ದು ಅವುಗಳ ಫಲಿತಾಂಶ ಉತ್ತೇಜನಕಾರಿಯಾಗಿದೆ ಎನ್ನಲಾಗಿದೆ. ಈ ಮಾದರಿಯಲ್ಲಿ ರಾಜ್ಯದಲ್ಲಿ ತೆಂಗಿನ ರೋಗಗಳ ಅಧ್ಯಯನಕ್ಕೆ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು. ತೆಂಗು ತಜ್ಞರು ರೈತರ ತೋಟಗಳಿಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳನ್ನು ಪರಿಶೀಲಿಸಿ ರೈತರಿಗೆ ಸೂಕ್ತ ಮಾರ್ಗದರ್ಶನ ನೀಡುವ ಅಗತ್ಯವಿದೆ. ಬರಗಾಲ, ಬೆಳೆ ನಾಶ ಹಾಗೂ ರೋಗಗಳ ಹಾವಳಿಯಿಂದ ಕಂಗೆಟ್ಟಿರುವ ತೆಂಗು ಬೆಳೆಗಾರರಿಗೆ ಸಕಾಲದಲ್ಲಿ ತಾಂತ್ರಿಕ ಮಾರ್ಗದರ್ಶನ ಹಾಗೂ ನೆರವು ಸಿಗಬೇಕು. ಬೆಳೆ ನಷ್ಟದಿಂದ ಹತಾಶರಾದ ರೈತರು ಆತ್ಮಹತ್ಯೆಗೆ ಮುಂದಾಗುವ ಸಾಧ್ಯತೆಗಳಿವೆ. ಅದಕ್ಕೆ ಅವಕಾಶ ಕೊಡಬಾರದು. ತೆಂಗು ಉತ್ಪನ್ನಗಳ ಬೆಲೆ ಕುಸಿತದಿಂದ ನಷ್ಟಕ್ಕೆ ಒಳಗಾಗಿರುವ ರೈತರಿಗೆ ಸರ್ಕಾರ ವಿಶೇಷ ನೆರವು ನೀಡಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.