ದುರುಪಯೋಗವಾಗದಿರಲಿ ರೈ ತರ ಸಂಕಷ್ಟಕ್ಕೆ ಸರ್ಕಾರ ಕಿವುಡಾಗಿದೆಯೇ? ರೈತರ ಬಗ್ಗೆ ಸರ್ಕಾರಕ್ಕೆ ಕಿಂಚಿತ್ತೂ ಮಮಕಾರವಿಲ್ಲ ಎನ್ನುವುದಕ್ಕೆ ಮೇಲಿಂದ ಮೇಲೆ ಉದಾಹರಣೆಗಳು ಸಿಗುತ್ತವೆ. ಅಧಿಕ ಸಂಖ್ಯೆಯಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ವರದಿಯಾಗುತ್ತಿರುವ, ಆ ರೀತಿಯ ಪ್ರವೃತ್ತಿ ಇರುವ ಆರು ಜಿಲ್ಲೆಗಳ ರೈತಕುಟುಂಬಗಳಿಗೆ ಪರಿಹಾರ ಮೊತ್ತವನ್ನು ತಲುಪಿಸಲು ಸರ್ಕಾರ ವಿಫಲವಾಗಿದೆ. ರೈತರ ಪರ ಕಾಳಜಿ ಇದೆ ಎಂದು ಹೇಳಿಕೊಳ್ಳುವ ಯಾವುದೇ ಸರ್ಕಾರಕ್ಕೆ ಇದು ಶೋಭೆ ತರುವ ವಿಚಾರವಲ್ಲ. ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಅಂಡ್ ಎಕನಾಮಿಕ್ ಚೇಂಜ್ ಸಂಸ್ಥೆ ಆರು ಜಿಲ್ಲೆಗಳಲ್ಲಿ ನಡೆಸಿದ ಸಂಶೋಧನಾ ವರದಿ ಗುರುತಿಸಲಾದ ಫಲಾನುಭವಿಗಳನ್ನು ಬಿಟ್ಟು, ಉಳ್ಳವರಿಗೆ ಸಹಾಯಧನ ವಿತರಿಸಿರುವ ಆಘಾತಕಾರಿ ಸಂಗತಿಯನ್ನು ಬಯಲುಮಾಡಿದೆ. ರೈತರ ಆತ್ಮಹತ್ಯೆ ತಡೆಯಲು ಮಹಾರಾಷ್ಟ್ರದ ವಿದರ್ಭ ಪ್ರಾಂತದ ರೈತರಿಗೆ ಪ್ರಧಾನಮಂತ್ರಿಯವರು ಘೋಷಿಸಿದ ವಿಶೇಷ ಪ್ಯಾಕೇಜ್ ಮಾದರಿಯಲ್ಲಿ, ಕರ್ನಾಟಕದ ಆರು ಜಿಲ್ಲೆಗಳಿಗೆ ನೀಡಲಾದ ವಿಶೇಷ ಹಣಕಾಸಿನ ನೆರವನ್ನು ಬಳಸಿಕೊಳ್ಳುವ ವಿಷಯದ್ಲ್ಲಲಿ ಸರ್ಕಾರ ನಾಲ್ಕು ವರ್ಷಗಳಿಂದಲೂ ಕನಿಷ್ಠ ಆಸಕ್ತಿಯನ್ನೇ ಪ್ರದರ್ಶಿಸುತ್ತಾ ಬಂದಿದೆ. ರಾಜ್ಯದ ಬೆಳಗಾವಿ, ಚಿಕ್ಕಮಗಳೂರು, ಚಿತ್ರದುರ್ಗ, ಹಾಸನ, ಕೊಡಗು ಮತ್ತು ಶಿವಮೊಗ್ಗ ಈ ಆರು ಜಿಲ್ಲೆಗಳಿಗೆ ನಿಗದಿಯಾಗಿದ್ದ ವಿಶೇಷ ಹಣಕಾಸಿನ ನೆರವಿನ ಮೊತ್ತ 2860 ಕೋಟಿ ರೂಪಾಯಿಗಳು. ಇದರಲ್ಲಿ 1560 ಕೋಟಿ ರೂಪಾಯಿ ಸಹಾಯಧನ.ಉಳಿದದ್ದು ಸಾಲ. ಆರು ಜಿಲ್ಲೆಗಳಲ್ಲಿ ಒಟ್ಟು 4.570 ಕುಟುಂಬಗಳನ್ನು ಗುರುತಿಸಲಾಗಿತ್ತು. ಈ ಕುಟುಂಬಗಳಿಗೆ ಪರಿಹಾರ ನಿಧಿಯಿಂದ ತಲಾ ಎರಡು ಸಾವಿರ ರೂಪಾಯಿ ನೀಡಲಾಗಿದೆ. ಹಾಸನ ಜಿಲ್ಲೆಯಲ್ಲಿ ತಲಾ ಹತ್ತುಸಾವಿರ ರೂಪಾಯಿ ನೀಡಲಾಗಿದೆ. ಇಲ್ಲಿ ಸ್ಥಳೀಯ ಪುಢಾರಿಗಳು ಹಾಗೂ ಸರ್ಕಾರಿ ಅಧಿಕಾರಿಗಳು ಕೈಗೂಡಿಸಿ, ಹಣವನ್ನು ಶ್ರೀಮಂತ ರೈತರ ಪಾಲಾಗಿಸಿದ್ದಾರೆ ಎಂದು ವರದಿ ಕಂಡುಕೊಂಡಿದೆ. ಸಂಕಷ್ಟದಲ್ಲಿ ಸಿಕ್ಕಿಹಾಕಿಕೊಂಡ ಕುಟುಂಬಗಳಿಗೆ ಪರಿಹಾರಧನ, ಉತ್ತಮ ಬೀಜ, ಜಾನುವಾರುಗಳಿಗೆ ಮೇವು ಒದಗಿಸಿಕೊಡುವ ದೃಷ್ಟಿಯಿಂದ ನೀಡಲಾದ ಹಣ ಯಾವುದೇ ಫಲಾನುಭವಿಗಳನ್ನು ತಲುಪಿಲ್ಲದಿರುವುದು ದುರಂತ. ಸಕಾಲದಲ್ಲಿ ಕೃಷಿ ಸಾಲ ನೀಡುವಂಥ ಯೋಜನೆಗಳನ್ನು ರೂಪಿಸದಿದ್ದರೆ ಬರದಿಂದ ಕಂಗೆಟ್ಟಿರುವ ರೈತರಿಗೆ ಅನ್ಯದಾರಿ ಏನಿದೆ? ರೈತರ ಆತ್ಮಹತ್ಯೆ ಪ್ರವೃತ್ತಿಯನ್ನು ತಡೆಗಟ್ಟುವ ಮೂಲ ಉದ್ದೇಶವನ್ನೇ ಆಡಳಿತ ನಡೆಸುವವರು ಮರೆತರೆ ಅದನ್ನು ಮಾನವೀಯತೆ ಎನ್ನಲಾದೀತೇ? ಆಂಧ್ರಪ್ರದೇಶ, ಕೇರಳ ಮತ್ತು ಮಹಾರಾಷ್ಟ್ರಗಳಲ್ಲೂ ಇದೇ ರೀತಿ ರೈತರನ್ನು ವಂಚಿಸಲಾಗಿದೆ ಎಂದು ಅಧ್ಯಯನದ ವರದಿ ತಿಳಿಸಿದೆ. ಪ್ರಧಾನಿಯವರ ಪರಿಹಾರ ನಿಧಿಯನ್ನು ಹಂಚಿಕೊಂಡವರು ಹಾಲು ಸಹಕಾರ ಮಂಡಳಿಯ ಸದಸ್ಯರು, ಪದಾಧಿಕಾರಿಗಳು, ಕರ್ನಾಟಕ ಹಾಲು ಒಕ್ಕೂಟದ ಅಧಿಕಾರಿಗಳು, ಪಶುಸಂಗೋಪನಾ ಇಲಾಖೆಯ ಅಧಿಕಾರಿಗಳು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಭ್ರಷ್ಟಾಚಾರಕ್ಕೆ ಅವಕಾಶವಿಲ್ಲದಂತೆ, ರೈತರಿಗಾಗಿ ಮೀಸಲಾದ ಹಣದಲ್ಲಿ ಒಂದು ರೂಪಾಯಿಯೂ ದುರುಪ ಯೋಗವಾಗದಂತೆ ನೋಡಿಕೊಳ್ಳಬೇಕಾದದ್ದು ಸರ್ಕಾರದ ಕರ್ತವ್ಯ. ಕೇಂದ್ರದಿಂದ ಈ ರೀತಿ ವಿಶೇಷ ಪರಿಹಾರನಿಧಿ ದೊರೆತಾಗ ನೀರಾವರಿ ಯೋಜನೆಗಳಿಗೆ ಈ ಹಣವನ್ನು ಬಳಸಿಕೊಳ್ಳುವತ್ತಲೂ ಸರ್ಕಾರ ಕಾರ್ಯಪ್ರವೃತ್ತವಾಗಬೇಕಿತ್ತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.