ಸಿಬಿಐ ತನ್ನ ಕೆಲಸ ಮಾಡಲಿ ಅಧಿಕಾರ ಹಿಡಿಯಲು ಅವಸರದಿಂದ ಹೊರಟಿದ್ದ ಕಡಪಾ ಲೋಕಸಭಾ ಸದಸ್ಯ ವೈ.ಎಸ್.ಜಗನ್‌ಮೋಹನ್ ರೆಡ್ಡಿ ಜೈಲು ಸೇರಿದ್ದಾರೆ. ಅಕ್ರಮ ಆಸ್ತಿಗಳಿಕೆಯ ಪ್ರಕರಣದಲ್ಲಿ ಕೇಂದ್ರ ತನಿಖಾ ದಳ (ಸಿಬಿಐ) ಅವರನ್ನು ಭಾನುವಾರ ಬಂಧಿಸಿರುವುದು ಅನಿರೀಕ್ಷಿತವೇನಲ್ಲ. ಆಂಧ್ರಪ್ರದೇಶದ ಪ್ರಭಾವಶಾಲಿ ರಾಜಕೀಯ ಕುಟುಂಬದ ಸದಸ್ಯರಾಗದೆ ಇದ್ದಿದ್ದರೆ ಜಗನ್ ಎಂದೋ ಜೈಲು ಸೇರಬೇಕಿತ್ತು, ಅವರ ವಿರುದ್ದದ ಆರೋಪಗಳು ಅಷ್ಟೊಂದು ಗಂಭೀರ ಸ್ವರೂಪದ್ದಾಗಿದೆ. ಮುಖ್ಯಮಂತ್ರಿಯಾಗಿದ್ದ ತನ್ನ ತಂದೆ ವೈ.ಎಸ್.ರಾಜಶೇಖರ ರೆಡ್ಡಿ ಅವರ ರಾಜಕೀಯ ಪ್ರಭಾವವನ್ನು ಬಳಸಿಕೊಂಡು ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಯನ್ನು ಅಕ್ರಮವಾಗಿ ಗಳಿಸಿದ್ದಾರೆ ಎನ್ನುವುದು ಜಗನ್ ವಿರುದ್ಧದ ಆರೋಪ. ಅತ್ಯಲ್ಪ ಅವಧಿಯಲ್ಲಿ ಅವರ ಸಂಪತ್ತಿನಲ್ಲಿ ಆಗಿರುವ ಹೆಚ್ಚಳ ಅವರ ವಿರುದ್ಧದ ಆರೋಪವನ್ನು ಸಮರ್ಥಿಸುವಂತಿದೆ. ಬೇರೆ ಎಲ್ಲ ಭ್ರಷ್ಟರಾಜಕಾರಣಿಗಳಂತೆ ಜಗನ್ ಅವರೂ ತಮ್ಮ ವಿರುದ್ಧದ ಆರೋಪಗಳಿಗೆ ರಾಜಕೀಯದ ಬಣ್ಣ ಬಳಿಯಲು ಹೊರಟಿದ್ದಾರೆ. ರಾಜಕೀಯವಾಗಿ ತಮ್ಮನ್ನು ಎದುರಿಸಲಾಗದ ಕಾಂಗ್ರೆಸ್ ಈ ರೀತಿ ಸೇಡು ತೀರಿಸಿಕೊಳ್ಳುತ್ತಿದೆ ಎನ್ನುವ ಅವರ ಆರೋಪದಲ್ಲಿ ಸತ್ಯಾಂಶ ಇದ್ದರೂ ಇರಬಹುದು. ಬಹಳಷ್ಟು ಸಂದರ್ಭಗಳಲ್ಲಿ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷ ಸಿಬಿಐಯನ್ನು ತಮ್ಮ ರಾಜಕೀಯ ವಿರೋಧಿಗಳ ಮರ್ದನಕ್ಕೆ ದುರ್ಬಳಕೆ ಮಾಡಿರುವುದು ಕೂಡಾ ನಿಜ ಇರಬಹುದು. ಆದರೆ ಇಂತಹ ಪ್ರತಿ ಆರೋಪಗಳಿಂದ ಜಗನ್ ತಮ್ಮ ಮುಖದ ಮೇಲಿನ ಕಳಂಕವನ್ನು ಬಚ್ಚಿಟ್ಟುಕೊಳ್ಳಲು ಸಾಧ್ಯ ಇಲ್ಲ. ಅಕ್ರಮ ಆಸ್ತಿ ಸಂಪಾದನೆಯೊಂದೇ ಅಲ್ಲ, ಅಧಿಕಾರದ ಕುರುಡು ವ್ಯಾಮೋಹ ಕೂಡಾ ಅವರನ್ನು ಈಗ ಜೈಲು ಕಂಬಿ ಎಣಿಸುವಂತೆ ಮಾಡಿದೆ. ಹೆಲಿಕಾಪ್ಟರ್ ಅಪಘಾತದಲ್ಲಿ ಮೃತಪಟ್ಟ ತಂದೆಯ ಅಂತ್ಯಕ್ರಿಯೆ ಮುಗಿಯುವ ಮೊದಲೇ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗುವ ಪ್ರಯತ್ನಕ್ಕೆ ಜಗನ್ ಚಾಲನೆ ನೀಡಿದ್ದರು. ಟಿವಿ ಚಾನೆಲ್‌ಗಳಲ್ಲಿ `ವೈಎಸ್‌ಆರ್ ಅಭಿಮಾನಿಗಳ ಆತ್ಮಹತ್ಯೆ~ಯ ಕಟ್ಟುಕತೆಗಳ ಪ್ರಸಾರ, ಅದರ ನಂತರ `ಆತ್ಮಹತ್ಯೆ~ಮಾಡಿಕೊಂಡವರ ಕುಟುಂಬಗಳಿಗೆ ಸಾಂತ್ವನ ಹೇಳಲು ಹೊರಟ `ಓದಾರ್ಪು ಯಾತ್ರೆ~ ಎಲ್ಲವೂ ಈ ಪ್ರಯತ್ನದ ಭಾಗ. ವಂಶಪರಂಪರೆ ಮತ್ತು ಅನುಕಂಪಾಧಾರಿತ ರಾಜಕೀಯದ ಪಾಠವನ್ನು ಜಗನ್ ಅವರು ಕಾಂಗ್ರೆಸ್ ಪಕ್ಷದಿಂದಲೇ ಕಲಿತಿರಬಹುದು. ಆದರೆ ಇದಕ್ಕೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅವಕಾಶ ಇಲ್ಲ. ತಾನು ನಿರಪರಾಧಿ ಎಂಬ ವಿಶ್ವಾಸ ಜಗನ್ ಅವರಿಗಿದ್ದರೆ ಕಾನೂನಿನ ಹೋರಾಟದ ಮೂಲಕ ಅದನ್ನು ಸಾಬೀತುಪಡಿಸಬೇಕೇ ಹೊರತು ಹಣದ ಬಲದಿಂದ ಅಮಾಯಕ ಜನತೆಯನ್ನು ಎತ್ತಿಕಟ್ಟುವ ರಾಜಕೀಯ ಬ್ಲಾಕ್‌ಮೇಲ್ ನಡೆಸುವುದಲ್ಲ. ಕಾಂಗ್ರೆಸ್ ಪಕ್ಷ ಮೊದಲಿನಿಂದಲೂ ರಾಜಕೀಯ ಲಾಭ-ನಷ್ಟದ ದೃಷ್ಟಿಯಿಂದ ಈ ಪ್ರಕರಣವನ್ನು ನಿರ್ವಹಿಸುತ್ತಾ ಬಂದಿರುವುದು ಕೂಡಾ ಈಗಿನ ಸ್ಥಿತಿಗೆ ಕಾರಣ. ಕಾನೂನಿನ ಕಣ್ಣಿನಲ್ಲಿ ಎಲ್ಲರೂ ಸಮಾನರು. ತನಿಖಾ ಸಂಸ್ಥೆಗಳನ್ನು ರಾಜಕೀಯ ಉದ್ದೇಶಗಳ ಈಡೇರಿಕೆಗೆ ಬಳಸಿಕೊಳ್ಳುವುದು ಸರಿಯಲ್ಲ. ಜಗನ್ ತಪ್ಪು ಮಾಡಿದ್ದರೆ ಶಿಕ್ಷೆಯಾಗಲೇಬೇಕು. ಜನರ ಬೆಂಬಲದ ಪ್ರದರ್ಶನ ಇಲ್ಲವೇ ಪ್ರತಿಭಟನೆಯ ಬೆದರಿಕೆಗೆ ಜಗ್ಗಬೇಕಾಗಿಲ್ಲ. ಇಂತಹ ರಾಜಕೀಯ ಗಿಮಿಕ್‌ಗಳಿಂದ ವಿಚಲಿತಗೊಳ್ಳದೆ ಸಿಬಿಐ ಕಾರ್ಯನಿರ್ವಹಿಸಬೇಕು. ಕೇಂದ್ರ ಸರ್ಕಾರ ಅದಕ್ಕೆ ಅವಕಾಶ ನೀಡಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.