ಕಳಂಕದಲ್ಲೂ ಮೆರೆದ ಐಪಿಎಲ್ ಒಂದು ತಿಂಗಳಿಗೂ ಹೆಚ್ಚು ಕಾಲ ಇಡೀ ದೇಶದ ಕ್ರಿಕೆಟ್‌ಪ್ರೇಮಿಗಳು ಹಾಗೂ ಬಾಜೀದಾರರ ಹುಚ್ಚು ಕೆರಳಿಸಿದ ಐಪಿಎಲ್ ಟಿ-20 ಕ್ರಿಕೆಟ್ ಟೂರ್ನಿ, ಕೋಲ್ಕತ್ತ ನೈಟ್ ರೈಡರ್ಸ್ ತಂಡ ಜಯಭೇರಿ ಬಾರಿಸುವುದರೊಂದಿಗೆ ಮುಕ್ತಾಯವಾಗಿದೆ. ಮಹೇಂದ್ರ ಸಿಂಗ್ ದೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಹ್ಯಾಟ್ರಿಕ್ ಕನಸನ್ನು ನುಚ್ಚುನೂರುಗೊಳಿಸಿದ ಗೌತಮ್ ಗಂಭೀರ್ ನಾಯಕತ್ವದ ರೈಡರ್ಸ್ ತಂಡ ಟ್ರೋಫಿ ಎತ್ತಿಹಿಡಿಯುವುದರೊಂದಿಗೆ ತನ್ನ ಮಾಲೀಕ ಶಾರೂಖ್ ಖಾನ್ ಅವರ ಮನಸ್ಸನ್ನೂ ಶಾಂತಗೊಳಿಸಿದೆ. ಮುಂಬೈನಲ್ಲಿ ನಡೆದ ಪಂದ್ಯವೊಂದರಲ್ಲಿ ಗಲಾಟೆ ಮಾಡಿ, ಅಸಭ್ಯವಾಗಿ ವರ್ತಿಸಿದ್ದ ಶಾರೂಖ್ ತಮ್ಮ ತಂಡ ಪ್ರಶಸ್ತಿ ಗೆದ್ದ ಸಂಭ್ರಮದಲ್ಲಿ ಕ್ಷಮೆ ಕೋರಿದ್ದಾರೆ. ಕ್ರಿಕೆಟ್ ಅವರಿಗೆ ಸಭ್ಯತೆಯ ಪಾಠ ಹೇಳಿಕೊಟ್ಟಿದ್ದರೂ, ಈ ಬಾರಿಯ ಐಪಿಎಲ್‌ನಲ್ಲಿ ನಡೆದ ಹಲವು ವಿವಾದಾತ್ಮಕ ಘಟನೆಗಳು ಹಾಗೂ ಕ್ರಿಕೆಟ್‌ನಲ್ಲಿ ತುಂಬಿರುವ ಅನುಮಾನಾಸ್ಪದ ಆರ್ಥಿಕ ಅವ್ಯವಹಾರಗಳು ಕಪ್ಪು ಚುಕ್ಕೆಗಳಾಗಿಯೇ ಉಳಿಯುತ್ತವೆ. ಸ್ಪಾಟ್ ಫಿಕ್ಸಿಂಗ್‌ನಲ್ಲಿ ಸಿಕ್ಕಿಬಿದ್ದ ಐವರು ಆಟಗಾರರ ಅಮಾನತು, ಬೆಂಗಳೂರಿನ ರಾಯಲ್ ಚಾಲೆಂಜರ್ಸ್ ತಂಡದ ಆಟಗಾರನೊಬ್ಬ ಅತ್ಯಾಚಾರ ಯತ್ನದ ಆರೋಪಕ್ಕೆ ಗುರಿಯಾದ ಪ್ರಕರಣ ಐಪಿಎಲ್‌ಗೆ ಕೆಟ್ಟ ಹೆಸರನ್ನೇ ತಂದಿವೆ. ಇವುಗಳ ವಿರುದ್ಧ ಕ್ರಿಕೆಟ್ ವಲಯದಲ್ಲಿ ಹಾಗೂ ಸಂಸತ್ತಿನಲ್ಲಿ ಆಕ್ರೋಶ ವ್ಯಕ್ತವಾದರೂ ಅದನ್ನು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಗಂಭೀರವಾಗಿ ಪರಿಗಣಿಸಲಿಲ್ಲ. ಅದರ ಬೊಕ್ಕಸಕ್ಕೆ ಪೆಟ್ಟು ಬೀಳದಿರುವುದೇ ಧಿಮಾಕಿಗೆ ಮುಖ್ಯ ಕಾರಣ. ಯಾಕೆಂದರೆ ಹಣ ಕೊಟ್ಟು ಆಟ ನೋಡುವ ಪ್ರೇಕ್ಷಕ ವಿವಾದಗಳ ಬಗ್ಗೆ ತಲೆಕೆಡಿಸಿಕೊಳ್ಳದೇ ಕ್ರೀಡಾಂಗಣಗಳನ್ನು ತುಂಬಿದ್ದೇ ಮಂಡಳಿಯ ನಿರಂಕುಶ ಆಡಳಿತ ಹೆಚ್ಚುವಂತೆ ಮಾಡಿದೆ. ಐದು ವರ್ಷಗಳಲ್ಲಿ ಐಪಿಎಲ್, ಕ್ರಿಕೆಟ್ ಘನತೆಯನ್ನು ಎತ್ತಿಹಿಡಿಯುವ ಬದಲು ಆಟದ ಕೌಶಲವನ್ನು ಹದಗೆಡಿಸುತ್ತ ಬೆಳೆದಿದೆ. ಇಲ್ಲಿ ಮನರಂಜನೆಯೇ ಮುಖ್ಯ ಉದ್ದೇಶವಾಗಿದೆ. ಇದು ಇಂಡಿಯನ್ ಪ್ರೀಮಿಯರ್ ಲೀಗ್ ಆದರೂ ಇದರಲ್ಲಿ ದೇಶದ ಸಮಗ್ರತೆ ಇಲ್ಲ. ಉತ್ತರಪ್ರದೇಶವೂ ಸೇರಿ ಕೆಲವು ಪ್ರಮುಖ ರಾಜ್ಯಗಳಿಗೆ ಪ್ರಾತಿನಿಧ್ಯ ಇಲ್ಲ. ಕ್ರಿಕೆಟ್ ಮಂಡಳಿ ಹಾಗೂ ರಾಜ್ಯ ಸಂಸ್ಥೆಗಳ ಪದಾಧಿಕಾರಿಗಳು ತಂಡಗಳನ್ನು ನಿಯಂತ್ರಿಸುತ್ತ, ಆಟದ ಅಭಿವೃದ್ಧಿಗೆ ಗಮನಕೊಡುವ ಬದಲು ಹಣದ ಹೊಳೆಯಲ್ಲಿ ಈಜಲು ಧುಮುಕಿದ್ದಾರೆ. ಆಟಗಾರರ ಆಯ್ಕೆಯಲ್ಲೂ ಪಾರದರ್ಶಕತೆ ಕಾಣುವುದಿಲ್ಲ. ದೊಡ್ಡ ಉದ್ದಿಮೆದಾರರು, ಸಿನಿಮಾ ತಾರೆಯರು ಕ್ರಿಕೆಟ್‌ನಲ್ಲಿ ಹಣ ತೊಡಗಿಸುವುದೇ ಹೆಚ್ಚು ಲಾಭದಾಯಕ ಎಂದು ನಂಬಿದಂತಿದೆ. ಐಪಿಎಲ್‌ನಲ್ಲಿ ಇವರೆಲ್ಲರ ವಿಪರೀತ ಆಸಕ್ತಿ, ಅವರು ಬಹಿರಂಗವಾಗಿ ನಡೆಸುವ ಐಷಾರಾಮಿ ಚಟುವಟಿಕೆಗಳು ಅನುಮಾನ ಮೂಡಿಸುತ್ತಿವೆ. ಪ್ರತಿಯೊಂದು ಬೌಂಡರಿ, ಸಿಕ್ಸರ್ ಮತ್ತು ವಿಕೆಟ್ ಮೇಲೆ ರೂಪಾಯಿಯ ಲೇಪನ ಇರುವುದರಿಂದ ಆಟಗಾರರ ಮನೋಭಾವವೂ ರೋಷಪೂರ್ಣವಾಗಿದೆ. ಕ್ರಿಕೆಟ್ ಸಭ್ಯರ ಆಟ ಎಂಬುದು ಕ್ಲೀಷೆಯಾಗಿಬಿಟ್ಟಿದೆ. ಆಟಕ್ಕಿಂತ ಹೆಚ್ಚಾಗಿ ಕುರುಡು ಕಾಂಚಾಣವೇ ಹೆಚ್ಚು ಕುಣಿಯುತ್ತಿದ್ದು, ದುಡ್ಡಿನ ಮದದಲ್ಲಿ ಕ್ರಿಕೆಟ್ ರಂಗ ಮೆರೆಯುತ್ತಿದೆ. ಕ್ರಿಕೆಟ್‌ಪ್ರೇಮಿಯೂ ಇದಕ್ಕೆ ಮರುಳಾಗಿಬಿಟ್ಟಿದ್ದಾನೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.