ಉಳಿದವರಿಗೂ ಪ್ರೇರಣೆಯಾಗಲಿ ಕ್ರೈಸ್ತರ ಧರ್ಮ ಗುರು ಪೋಪ್ ಹದಿನಾರನೆ ಬೆನ್‌ಡಿಕ್ಟ್ ಪದತ್ಯಾಗ ಮಾಡಲು ನಿರ್ಧರಿಸುವ ಮೂಲಕ ತನ್ನ ಅನುಯಾಯಿಗಳನ್ನು ಮಾತ್ರವಲ್ಲ ಇತರ ಧರ್ಮಾವಲಂಬಿಗಳನ್ನೂ ಆಶ್ಚರ್ಯಚಕಿತಗೊಳಿಸಿದ್ದಾರೆ. ಚರ್ಚ್‌ನ 600 ವರ್ಷಗಳ ಇತಿಹಾಸದಲ್ಲಿ ಹಿಂದೆಯೂ ಪೋಪ್‌ಗಳು ಪದತ್ಯಾಗ ಮಾಡಿದ್ದರೂ ಅವುಗಳು ಅಚ್ಚರಿಯ ನಿರ್ಧಾರಗಳಾಗಿರಲಿಲ್ಲ. ಆದರೆ ಹದಿನಾರನೆ ಬೆನಡಿಕ್ಟ್ ತನ್ನ ದಿಟ್ಟ, ನೇರ ನಡೆ-ನುಡಿಗಳಿಂದ ಅಧಿಕಾರದಲ್ಲಿ ಆನಂದ ಪಡೆಯುವವರಂತೆ ವರ್ತಿಸುತ್ತಾ ಬಂದವರು. ಈ ಕಾರಣದಿಂದಾಗಿಯೇ ಅವರ ಪದತ್ಯಾಗ ಲ್ಯಾಟಿನ್‌ನಲ್ಲಿ ಸಮಾವೇಶಗೊಂಡಿದ್ದ ಕಾರ್ಡಿನಲ್‌ಗಳಿಗೂ ಅನಿರೀಕ್ಷಿತವಾಗಿತ್ತು. 2005ರಲ್ಲಿ ನೂತನ ಪೋಪ್ ಆಗಿ ಅಧಿಕಾರ ಸ್ವೀಕರಿಸಿದ್ದ ಹದಿನಾರನೆ ಬೆನಡಿಕ್ಟ್ ಸಾಗಿ ಬಂದ ದಾರಿ ವಿವಾದಗ್ರಸ್ತವಾಗಿತ್ತು. ಇದರಿಂದಾಗಿಯೇ ಎಂಬತ್ತೈದರ ಇಳಿವಯಸ್ಸಿನ ಪೋಪ್, ಇತ್ತೀಚಿನ ವರ್ಷಗಳಲ್ಲಿ ಹಣ್ಣಾಗಿ ಹೋಗಿದ್ದರು. `ಜವಾಬ್ದಾರಿಯನ್ನು ನಿರ್ವಹಿಸಲು ಬೇಕಾದ ಮಾನಸಿಕ ಮತ್ತು ದೈಹಿಕ ಚೈತನ್ಯ ನನ್ನಲ್ಲಿ ಇಲ್ಲ' ಎಂದು ನಿವೃತ್ತಿಗೆ ನೀಡಿದ ಕಾರಣವನ್ನು ನಂಬದೆ ಇರಲಿಕ್ಕಾಗುವುದಿಲ್ಲ. ಚರ್ಚ್‌ಗಳಲ್ಲಿ ಮಕ್ಕಳನ್ನು ಲೈಂಗಿಕವಾಗಿ ಹಿಂಸಿಸುತ್ತಿರುವ ಕ್ಯಾಥೊಲಿಕ್ ಧರ್ಮಗುರುಗಳ ವಿರುದ್ಧ ಪೋಪ್ ಕ್ರಮ ಕೈಗೊಳ್ಳದೆ ರಕ್ಷಿಸುತ್ತಾ ಬಂದಿರುವುದು ಅಮೆರಿಕದ ನ್ಯಾಯಾಲಯದಲ್ಲಿ ಇತ್ತೀಚೆಗೆ ಸಲ್ಲಿಸಲಾಗಿದ್ದ ದಾಖಲೆಗಳಿಂದ ಬಯಲಾಗಿತ್ತು. ಅತ್ಯಂತ ಮಡಿವಂತಿಕೆಯ ಭಾಷಣದ ಮೂಲಕ ಎಂಟು ವರ್ಷಗಳ ಹಿಂದೆ ಅಧಿಕಾರ ಸ್ವೀಕರಿಸಿದ್ದ ಹದಿನಾರನೆ ಬೆನಡಿಕ್ಟ್ ಅಧಿಕಾರದುದ್ದಕ್ಕೂ ತನ್ನ ಸಂಪ್ರದಾಯವಾದಿ ನಿಲುವುಗಳ ಮೂಲಕ ವಿವಾದದ ಸುಳಿಗೆ ಸಿಕ್ಕಿದವರು. ಕಾಂಡೋಮ್ ಸೇರಿದಂತೆ ಜನನ ನಿಯಂತ್ರಣದ ಎಲ್ಲ ಸಾಧನಗಳನ್ನು ವಿರೋಧಿಸುತ್ತಾ ಬಂದಿದ್ದ ಪೋಪ್ ಯಾವುದೇ ಸಂದರ್ಭದಲ್ಲಿಯೂ ಗರ್ಭಪಾತ ಮಾಡಕೂಡದೆಂದು ಅನುಯಾಯಿಗಳಿಗೆ ಕರೆ ನೀಡಿದ್ದರು. ಸಲಿಂಗಕಾಮಿಗಳ ಮದುವೆ, ವಿಚ್ಛೇದನಕ್ಕೆ ವಿರೋಧದ ಮೂಲಕ, ಅವುಗಳ ಬೆಂಬಲಿಗರ ವಿರೋಧವನ್ನು ಅವರು ಕಟ್ಟಿಕೊಂಡಿದ್ದರು. ಈ ಮೂಲಕ ನೂತನ ಪೋಪ್‌ಗೆ ವಿವಾದಗಳ ಪರಂಪರೆಯನ್ನು ಅವರು ಬಿಟ್ಟುಹೋಗಿದ್ದಾರೆ. ಇದರ ಜತೆಗೆ ಇದೇ ಮೊದಲ ಬಾರಿಗೆ ಯುರೋಪ್ ಬಿಟ್ಟು ಬೇರೆ ದೇಶಗಳಿಗೆ ಸೇರಿದವರು ಪೋಪ್ ಆಗಿ ನೇಮಕಗೊಳ್ಳಬೇಕೆಂಬ ಕೂಗು ಕೇಳಿಬರುತ್ತಿರುವುದು ಸ್ವಾಗತಾರ್ಹ ಬೆಳವಣಿಗೆ. ಪೋಪ್ ನಿವೃತ್ತಿ ಧಾರ್ಮಿಕ ಕ್ಷೇತ್ರದಲ್ಲಿ ಅಪರೂಪದ ಬೆಳವಣಿಗೆ. ರಾಜಕಾರಣಿಗಳಂತೆ ನಮ್ಮ ಧರ್ಮಗುರುಗಳಿಗೂ ನಿವೃತ್ತಿಯೇ ಇಲ್ಲ ಎನ್ನುವಂತಾಗಿದೆ. ನೂರಾರು ಕೋಟಿ ರೂಪಾಯಿ ಮೌಲ್ಯದ ಆಸ್ತಿ ಮತ್ತು ಲಕ್ಷಾಂತರ ಅನುಯಾಯಿಗಳನ್ನು ಹೊಂದಿರುವ ನಮ್ಮ ಅನೇಕ ಧರ್ಮಗುರುಗಳು ವಯಸ್ಸಿನ ಕಾರಣದಿಂದಾಗಿ ತಮ್ಮ ಜವಾಬ್ದಾರಿಯನ್ನು ನಿರ್ವಹಿಸಲಾಗದ ಸ್ಥಿತಿಯಲ್ಲಿದ್ದಾರೆ. ಈ ಧರ್ಮಗುರುಗಳ ಅಸಹಾಯಕತೆಯನ್ನು ಬಳಸಿಕೊಂಡು ಅವರನ್ನು ಸುತ್ತಿಕೊಂಡಿರುವ ಬೆರಳೆಣಿಕೆಯ ಮಂದಿ ಧಾರ್ಮಿಕ ಸಂಸ್ಥೆಗಳ ದುರುಪಯೋಗ ನಡೆಸುತ್ತಿರುವ ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ. ಇದರಿಂದಾಗಿ ಅನೇಕ ಧಾರ್ಮಿಕ ಸಂಸ್ಥೆಗಳು ಅಕ್ರಮ-ಅವ್ಯವಹಾರಗಳ ಗೂಡಾಗಿ ಹೋಗಿವೆ. ಪ್ರಶ್ನಿಸುವುದೇ ಅಧರ್ಮ ಎನ್ನುವ ಧೋರಣೆಯನ್ನು ಹೊಂದಿರುವ ನಮ್ಮ ಅನೇಕ ಧಾರ್ಮಿಕ ಸಂಸ್ಥೆಗಳು ಸರ್ವಾಧಿಕಾರದ ವ್ಯಸನದಿಂದ ಬಳಲುತ್ತಿವೆ. ಪೋಪ್ ಹದಿನಾರನೆ ಬೆನಡಿಕ್ಟ್ ರಾಜೀನಾಮೆ ಒಂದು ಮಾದರಿ ಪ್ರಜಾಸತ್ತಾತ್ಮಕ ಕ್ರಮ. ಇದು ಉಳಿದ ಎಲ್ಲ ಧರ್ಮಗುರುಗಳಿಗೆ ಪ್ರೇರಣೆಯಾಗಲಿ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.