ಅದಕ್ಷತೆಯ ಫಲ ರಾಯಚೂರು ಶಾಖೋತ್ಪನ್ನ ವಿದ್ಯುತ್ ಸ್ಥಾವರ(ಆರ್‌ಟಿಪಿಎಸ್)ದಲ್ಲಿ ನಡೆದಿರುವ ಅಪಘಾತ ಮತ್ತು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (ಕೆಇಆರ್‌ಸಿ) ವಿದ್ಯುತ್ ದರ ಹೆಚ್ಚಳಕ್ಕೆ ನಡೆಸುತ್ತಿರುವ ಸಿದ್ಧತೆ -ಎರಡೂ ವಿದ್ಯುತ್ ಕಡಿತದಿಂದ ಕಂಗಾಲಾಗಿರುವ ರಾಜ್ಯದ ಜನತೆಯನ್ನು ಇನ್ನಷ್ಟು ಆತಂಕಕ್ಕೀಡುಮಾಡುವ ಬೆಳವಣಿಗೆಗಳು. ಬೇಸಿಗೆ ಕಾಲಿಡುತ್ತಿದ್ದಂತೆ ಸಹಜವಾಗಿ ವಿದ್ಯುತ್ ಬೇಡಿಕೆ ಪ್ರಮಾಣ ಹೆಚ್ಚುತ್ತಿದೆ. ರಾಜ್ಯದ ವಿದ್ಯುತ್ ಬೇಡಿಕೆ 7489 ಮೆಗಾವಾಟ್‌ಗಳಾದರೆ ಉತ್ಪಾದನೆಯಾಗುತ್ತಿರುವುದು 5800 ಮೆಗಾವಾಟ್ ಮಾತ್ರ. ಸುಮಾರು 1667 ಮೆಗಾವಾಟ್‌ಗಳಷ್ಟು ಕೊರತೆಯನ್ನು ತುಂಬಲಾಗದೆ ಸರ್ಕಾರ ಒದ್ದಾಡುತ್ತಿದೆ. ವಿದ್ಯುತ್ ವಿಚಾರದಲ್ಲಿ ಕರ್ನಾಟಕ ಎಂದೂ ಸ್ವಾವಲಂಬಿಯಾಗಿರಲಿಲ್ಲ. ಮುಂಗಾರು ಮಳೆ ಕೈಕೊಟ್ಟಿರುವ ಕಾರಣದಿಂದ ಜಲವಿದ್ಯುತ್ ಉತ್ಪಾದನೆ ಕುಸಿದು ಪರಿಸ್ಥಿತಿ ಇನ್ನಷ್ಟು ಗಂಭೀರವಾಗಿದೆ. ಈ ಹಿನ್ನೆಲೆಯಲ್ಲಿ ಲಭ್ಯ ಇರುವ ವಿದ್ಯುತ್ ಮೂಲಗಳನ್ನಾದರೂ ಎಚ್ಚರಿಕೆಯಿಂದ ನಿರ್ವಹಿಸುವ ವಿವೇಕವನ್ನು ರಾಜ್ಯ ಸರ್ಕಾರ ತೋರಿಸಬೇಕಾಗಿತ್ತು. ರಾಯಚೂರು ಆರ್‌ಟಿಪಿಎಸ್‌ನ ದುರ್ಘಟನೆ, ಸರ್ಕಾರ ಬೇಜವಾಬ್ದಾರಿ ಧೋರಣೆಯನ್ನು ಮುಂದುವರಿಸಿಕೊಂಡು ಹೋಗುತ್ತಿರುವುದಕ್ಕೆ ನಿದರ್ಶನ.ಆರ್‌ಟಿಪಿಎಸ್‌ನ ಎಂಟನೆ ಘಟಕದ ಎಲೆಕ್ಟ್ರೋ ಸ್ಟ್ಯಾಟಿಕ್ ಪ್ರೆಸಿಪಿಟೇಟರ್ (ಇಎಸ್‌ಪಿ) ಹಾನಿಗೀಡಾಗಿರುವುದನ್ನು ಅಧಿಕಾರಿಗಳು ಗಮನಕ್ಕೆ ತಂದರೂ ನಿರ್ಲಕ್ಷಿಸಿರುವ ಮೇಲಧಿಕಾರಿಗಳ ಕರ್ತವ್ಯಲೋಪ ಅಕ್ಷಮ್ಯ. 250 ಮೆಗಾವಾಟ್ ಸಾಮರ್ಥ್ಯದ ಈ ಘಟಕದ ದುರಸ್ತಿಗೆ ಕನಿಷ್ಠ ಒಂದುವರ್ಷವಾದರೂ ಬೇಕಾಗಿರುವುದರಿಂದ ಅಷ್ಟು ಪ್ರಮಾಣದ ವಿದ್ಯುತ್ ಖೋತಾವನ್ನು ರಾಜ್ಯ ಹೆಚ್ಚುವರಿಯಾಗಿ ಎದುರಿಸಬೇಕಾಗಿದೆ. ಇದೇ ವೇಳೆ ವಿದ್ಯುತ್ ದರ ಹೆಚ್ಚಿಸಬೇಕೆಂದು ಎಸ್ಕಾಂ ಸಲ್ಲಿಸಿರುವ ಪ್ರಸ್ತಾವವನ್ನು ಕೆಇಆರ್‌ಸಿ ಪರಿಶೀಲನೆಗೆ ಸ್ವೀಕರಿಸಿದೆ. ಇದರಿಂದ ದಿನಬಳಕೆಯ ವಸ್ತುಗಳ ಬೆಲೆ ಏರಿಕೆಯಿಂದ ಹೈರಾಣಾಗಿ ಹೋಗಿರುವ ಜನತೆ ಇನ್ನಷ್ಟು ಕಷ್ಟಕ್ಕೆ ಸಿಲುಕಲಿದ್ದಾರೆ. ಬೇಡಿಕೆಗೆ ಅನುಗುಣವಾಗಿ ವಿದ್ಯುತ್ ಉತ್ಪಾದನೆಯನ್ನು ಹೆಚ್ಚಿಸುವ ಕಾರ್ಯದಲ್ಲಿ ವಿಫಲಗೊಂಡಿರುವ ರಾಜ್ಯಸರ್ಕಾರ ಸಮಸ್ಯೆಯ ಪರಿಹಾರಕ್ಕೆ ಎರಡು ಸುಲಭದ ದಾರಿಗಳನ್ನು ಕಂಡುಕೊಂಡಿದೆ. ಮೊದಲನೆಯದಾಗಿ ದುಬಾರಿ ಬೆಲೆ ತೆತ್ತು ಖಾಸಗಿ ಸಂಸ್ಥೆಗಳಿಂದ ವಿದ್ಯುತ್ ಖರೀದಿ. ಎರಡನೆಯದು ವಿದ್ಯುತ್ ದರ ಹೆಚ್ಚಳ. ಕಳೆದ ಒಂಬತ್ತು ತಿಂಗಳಲ್ಲಿ ಸುಮಾರು 3,691 ಕೋಟಿ ರೂಪಾಯಿ ಹಣವನ್ನು ಇದಕ್ಕಾಗಿ ಸರ್ಕಾರ ವ್ಯಯ ಮಾಡಿರುವುದು ತೆರಿಗೆ ಹಣದ ಲೂಟಿಯಲ್ಲದೆ ಮತ್ತೇನಲ್ಲ. ಇದರ ಜತೆಗೆ ಈಗ ವಿದ್ಯುತ್ ದರ ಏರಿಕೆಗೆ ತಯಾರಿ ನಡೆಯುತ್ತಿದೆ. ಬಿಡದಿ ಸಮೀಪದ ಅನಿಲ ಆಧಾರಿತ ವಿದ್ಯುತ್ ಘಟಕ, ಹಾಸನದ ಗಾಂಧಿ ಜಲವಿದ್ಯುತ್ ಘಟಕ, ಗುಂಡ್ಯ, ಯರಮರಸ್,ಯದ್ಲಾಪುರ ಶಾಖೋತ್ಪನ್ನ ವಿದ್ಯುತ್ ಸ್ಥಾವರ ಸೇರಿದಂತೆ ಒಂಬತ್ತು ಯೋಜನೆಗಳು ಕಡತದಲ್ಲಿಯೇ ಉಳಿದಿವೆ. ಭಾರಿ ಪ್ರಚಾರದೊಂದಿಗೆ ಛತ್ತೀಸ್‌ಗಢದಲ್ಲಿ ಶಂಕುಸ್ಥಾಪನೆ ಮಾಡಲಾದ ವಿದ್ಯುತ್ ಘಟಕದ ಗತಿ ಏನಾಯಿತೆಂದು ಯಾರಿಗೂ ಗೊತ್ತಿಲ್ಲ. ವಿದ್ಯುತ್ ಸರಬರಾಜು ಮತ್ತು ವಿತರಣಾ ವ್ಯವಸ್ಥೆಯಲ್ಲಿನ ಲೋಪ ಹಾಗೂ ತಾಂತ್ರಿಕ ದೋಷಗಳಿಂದಾಗಿ ಅಪಾರ ಪ್ರಮಾಣದ ವಿದ್ಯುತ್ ನಷ್ಟವಾಗುತ್ತಿದೆ. ಶೇಕಡಾ ಎರಡರಿಂದ ಮೂರರಷ್ಟು ವಿದ್ಯುತ್ ಕಳ್ಳತನವಾಗುತ್ತಿದೆ. ಜನಪರವಾಗಿರುವ ಯಾವುದೇ ಸರ್ಕಾರ ಸುಧಾರಣಾ ಕ್ರಮಗಳ ಮೂಲಕ ತನ್ನ ಅದಕ್ಷತೆಯನ್ನು ತೊಡೆದುಹಾಕುವ ಕಾರ್ಯವನ್ನು ಮೊದಲು ಮಾಡಬೇಕು. ತನ್ನ ವೈಫಲ್ಯಕ್ಕಾಗಿ ಜನರನ್ನು ದಂಡನೆಗೆ ಗುರಿಮಾಡುವುದು ಸರಿ ಅಲ್ಲ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.