ಮಾನವ ಘನತೆ ಕಾಪಾಡಿ ಪಿಂಕಿ ಪ್ರಾಮಾಣಿಕ್ ಹೆಣ್ಣಲ್ಲ ಗಂಡು ಎಂಬ ವಿಚಾರ ಸಾರ್ವಜನಿಕ ವಲಯಗಳಲ್ಲಿ ನಿರ್ವಹಣೆಯಾಗುತ್ತಿರುವ ರೀತಿ ಅವಮಾನಕರವಾದುದು. ಕಾಮನ್‌ವೆಲ್ತ್ ಹಾಗೂ ಏಷ್ಯನ್ ಕ್ರೀಡಾಕೂಟದ ಪದಕ ವಿಜೇತೆ ಅಥ್ಲೀಟ್ ಪಿಂಕಿ ವಿರುದ್ಧ ಆಕೆಯ ಜೊತೆ ವಾಸಿಸುತ್ತಿದ್ದ ಸಂಗಾತಿ ಅತ್ಯಾಚಾರದ ಆರೋಪ ಹೊರಿಸಿದ್ದಾರೆ. ಜೊತೆಗೆ ಪಿಂಕಿಗೆ ಪುರುಷ ಲೈಂಗಿಕ ಅಂಗಾಂಗಗಳಿವೆ ಎಂದೂ ಪ್ರತಿಪಾದಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಆಕೆಯನ್ನು ಒಂದು ಪ್ರದರ್ಶಕ ವಸ್ತುವಾಗಿಸಿ ಪೊಲೀಸರು, ವೈದ್ಯಕೀಯ ಸಿಬ್ಬಂದಿ, ಮಾಧ್ಯಮ ಹಾಗೂ ಸಾರ್ವಜನಿಕರು ಪಿಂಕಿಯನ್ನು ನಡೆಸಿಕೊಳ್ಳುತ್ತಿರುವ ರೀತಿ ಆತಂಕಕಾರಿ. ಅತ್ಯಾಚಾರ ಗಂಭೀರ ಆರೋಪ ಸರಿ. ಆ ಬಗ್ಗೆ ಪೊಲೀಸರು ಗಂಭೀರವಾಗಿ ಸಂವೇದನಾಶೀಲ ತನಿಖೆ ನಡೆಸಬೇಕು ಎಂಬುದು ಎಲ್ಲ ರೀತಿಯ್ಲ್ಲಲೂ ಒಪ್ಪಬೇಕಾದ ವಿಚಾರ. ಆದರೆ ಆಗುತ್ತಿರುವುದೇನು? ವಿಚಾರಣೆಯ ನೆಪದಲ್ಲಿ ಆರೋಪಿಯ ಹಕ್ಕುಗಳನ್ನು ಉಲ್ಲಂಘಿಸುತ್ತಿರುವುದು ಕಾನೂನಿಗೆ ಎಸಗಿದ ಅಪಚಾರ. ಈವರೆಗೆ ಪಿಂಕಿ ಗುರುತಿಸಿಕೊಂಡಿರುವುದು ಹೆಣ್ಣಾಗಿ. ಹೀಗಿದ್ದೂ ಆಕೆಯನ್ನು ವಶಕ್ಕೆ ತೆಗೆದುಕೊಂಡು ಪ್ರಶ್ನಿಸಿರುವವರು ಹಾಗೂ ದೈಹಿಕ ತಪಾಸಣೆಗಳನ್ನು ನಡೆಸಿರುವವರು ಪುರುಷ ಪೊಲೀಸರು. ಈಗ ಲೈಂಗಿಕ ಕಿರಕುಳಗಳನ್ನು ನೀಡಿದ ಆರೋಪಗಳೂ ಪುರುಷ ಪೊಲೀಸರ ಮೇಲಿವೆ. ಜೊತೆಗೆ ಕಾರಾಗೃಹದಲ್ಲಿ ಆಕೆಯನ್ನು ಇರಿಸಿದ್ದು ಪುರುಷರ ವಿಭಾಗದಲ್ಲಿ. ಇಷ್ಟು ಸಾಲದು ಎಂಬಂತೆ, ಆಸ್ಪತ್ರೆಯೊಂದರಲ್ಲಿ ಪಿಂಕಿಯನ್ನು ಲಿಂಗತ್ವ (ಜೆಂಡರ್)ಪರೀಕ್ಷೆಗೆ ಒಳಪಡಿಸಿದಂತಹ ವಿಡಿಯೊ ಚಿತ್ರಣವನ್ನು ಅಂತರ್ಜಾಲದಲ್ಲಿ ಹರಿಯಬಿಟ್ಟಿದ್ದಂತೂ ಕೀಳು ಅಭಿರುಚಿಗಳ ದ್ಯೋತಕ. ಪರರ ಲೈಂಗಿಕ ಬದುಕಿನ ದರ್ಶನದಿಂದ ಸುಖ ಪಡೆಯುವ (ವಾಯರಿಸ್ಟಿಕ್) ವಿಕೃತ ಪ್ರವೃತ್ತಿ ಸಮಾಜದಲ್ಲಿ ಆವರಿಸಿಕೊಳ್ಳುತ್ತಿರುವುದು ಒಳ್ಳೆಯ ಲಕ್ಷಣವಲ್ಲ. ಲಿಂಗತ್ವದ ಪರೀಕ್ಷೆ ಖಾಸಗಿಯಾದ ಸಂಗತಿ. ಆದರೆ ಅದನ್ನೊಂದು ಕೆಟ್ಟ ತಮಾಷೆಯಾಗಿಸಿ ಈ ಪರಿ ಸಾರ್ವಜನಿಕ ವಿಚಾರಣೆಗೆ ಒಳಪಡಿಸುತ್ತಿರುವುದು ಪಿಂಕಿಯ ಘನತೆಗೆ ಎಸಗಿದ ಅಪಚಾರ. ಆಕೆಯ ಲಿಂಗತ್ವ ಪರೀಕ್ಷೆಯ ವಿಡಿಯೊ ಚಿತ್ರೀಕರಣ ಮಾಡಿದವರು, ಇದಕ್ಕೆ ಅವಕಾಶ ನೀಡಿದ ವೈದ್ಯಕೀಯ ಹಾಗೂ ಪೊಲೀಸ್ ಸಿಬ್ಬಂದಿಗಳನ್ನು ಶಿಕ್ಷೆಗೊಳಪಡಿಸಬೇಕು. ಪಿಂಕಿಯ ವಿರುದ್ಧ ಇರುವ ಅತ್ಯಾಚಾರ ಆರೋಪಕ್ಕಿಂತ ಮಿಗಿಲಾಗಿ ಆಕೆಯ ಲಿಂಗತ್ವವನ್ನೇ ಅಪರಾಧವಾಗಿ ಬಿಂಬಿಸಲಾಗುತ್ತಿದೆ. ಈಗ ಈ ಹಕ್ಕುಗಳ ಉಲ್ಲಂಘನೆ ಕುರಿತಾಗಿ ಪಶ್ಚಿಮ ಬಂಗಾಳ ಮಾನವ ಹಕ್ಕುಗಳ ಆಯೋಗ, ಸೈಬರ್ ಅಪರಾಧ ಬ್ಯೂರೊ ಹಾಗೂ ಕೋಲ್ಕತ್ತ ಹೈಕೋರ್ಟ್ ವಿಚಾರಣೆಗಳನ್ನು ಆರಂಭಿಸಿರುವುದು ಸ್ವಾಗತಾರ್ಹ . ಲೈಂಗಿಕತೆ ವಿಚಾರಗಳನ್ನು ಕುರಿತಂತೆ ನಮ್ಮ ಸಮಾಜದಲ್ಲಿರುವ ಧೋರಣೆಗಳನ್ನೂ ಪಿಂಕಿಯ ಪ್ರಕರಣ ಮತ್ತೊಮ್ಮೆ ಬಯಲುಗೊಳಿಸಿದೆ. ಮಹಿಳೆಯರ ವಿರುದ್ಧ ತಾರತಮ್ಯ ಭಾವನೆ ಸಮಾಜದಲ್ಲಿ ಹಾಸುಹೊಕ್ಕಾಗಿದೆ ನಿಜ. ಆದರೆ ದ್ವಿಲಿಂಗಿಗಳು ಅಥವಾ ಲೈಂಗಿಕಅಲ್ಪಸಂಖ್ಯಾತರನ್ನು ಸಮಾಜ ಇನ್ನೂ ನಿಕೃಷ್ಟವಾಗಿ ಕಾಣುತ್ತದೆ. ಇದಕ್ಕೆ ಈ ಪ್ರಕರಣ ದೊಡ್ಡ ಉದಾಹರಣೆ. ಆದರೆ ಖಾಸಗಿತನ ಹಾಗೂ ಘನತೆಯ ಹಕ್ಕು ಎಲ್ಲರಿಗೂ ಸೇರಿದ್ದು. ಪಿಂಕಿಯ ವಿರುದ್ಧ ಇರುವ ಅತ್ಯಾಚಾರದ ಆರೋಪ ಸಮರ್ಪಕ ರೀತಿಯಲ್ಲಿಯೇ ವಿಚಾರಣೆಗೊಳಪಡಬೇಕು. ಈ ವಿಚಾರಣೆ ಪೂರ್ಣಗೊಳ್ಳುವವರೆಗೂ ಆಕೆ ಪ್ರತಿಪಾದಿಸಿಕೊಳ್ಳುವ ಲಿಂಗತ್ವದ ಅಸ್ಮಿತೆಯ ಹಕ್ಕಿಗೆ ಚ್ಯುತಿಯಾಗದಂತೆ ನೋಡಿಕೊಳ್ಳುವುದು ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.