ಮಹಾನ್ ಸಾಧನೆ ಟೆನಿಸ್ ಲೋಕದ ಅತ್ಯಂತ ಹಳೆಯ ಹಾಗೂ ದೊಡ್ಡ ಟೂರ್ನಿ ಎಂದರೆ ವಿಂಬಲ್ಡನ್. ವಿಂಬಲ್ಡನ್‌ನ ಹುಲ್ಲುಹಾಸಿನ ಅಂಕಣದ ಮೇಲಿನ ಗೆಲುವಿಗೆ ಬೇರೆಲ್ಲ ಗ್ರ್ಯಾಂಡ್ ಸ್ಲ್ಯಾಮ್ ಟೂರ್ನಿಗಳಿಗಿಂತ ಹೆಚ್ಚಿನ ಬೆಲೆ. ಸ್ವಿಜರ್ಲೆಂಡ್‌ನ ರೋಜರ್ ಫೆಡರರ್ ಪುರುಷರ ಮತ್ತು ಅಮೆರಿಕದ ಸೆರೆನಾ ವಿಲಿಯಮ್ಸ ಮಹಿಳೆಯ ಸಿಂಗಲ್ಸ್ ಕಿರೀಟ ಧರಿಸುವುದರೊಂದಿಗೆ `ಹಳೆಯದು ಬಂಗಾರ~ ಎಂದು ಮತ್ತೊಮ್ಮೆ ತೋರಿಸಿಕೊಟ್ಟರು. ಇಬ್ಬರಿಗೂ ಈಗ 30 ವರ್ಷ ವಯಸ್ಸು. ಆದರೆ ಕ್ರೀಡೆಯಲ್ಲಿ ಪರಿಶ್ರಮ ಮತ್ತು ಏಕಾಗ್ರಚಿತ್ತದಿಂದ ಅಭ್ಯಾಸ ಮಾಡಿದರೆ ಯಶಸ್ಸು ಖಂಡಿತ ಎಂಬುದಕ್ಕೆ ಇವರಿಬ್ಬರೂ ನಿದರ್ಶನ. ಯುವ ಆಟಗಾರರಿಗೆ ಇಬ್ಬರೂ ಮಾದರಿ. ರಫೆಲ್ ನಡಾಲ್ ಮತ್ತು ನೊವಾಕ್ ಡೊಕೊವಿಚ್ ಆಗಮನದ ನಂತರ, ಕಳೆದ ಎರಡೂವರೆ ವರ್ಷಗಳಲ್ಲಿ ಒಂದೂ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿ ಗೆದ್ದಿರದಿದ್ದ ಫೆಡರರ್, ವಿಂಬಲ್ಡನ್‌ನಲ್ಲಿ ಆಡಿದ ರೀತಿ ನೋಡಿದರೆ ಅವರು ತಮ್ಮ ಹಿಂದಿನ ಸೋಲಿನ ನಿರಾಶೆಯನ್ನು ಊರಲ್ಲೇ ಬಿಟ್ಟು ಬಂದಂತಿತ್ತು. ಏಳನೇ ವಿಂಬಲ್ಡನ್ ಮತ್ತು 17ನೇ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿ ಅವರ ಶಾಂತ ಮತ್ತು ನಗುಮುಖಕ್ಕೆ ವಿಶ್ವಾಸದ ಕಳೆಕಟ್ಟಿತ್ತು. ಇದರೊಂದಿಗೆ ಅವರು, ವಿಂಬಲ್ಡನ್‌ನಲ್ಲಿ ಏಳು ಸಲ ಚಾಂಪಿಯನ್ ಆಗಿದ್ದ ಪೀಟ್ ಸ್ಯಾಂಪ್ರಾಸ್ ಮತ್ತು ವಿಲ್ಲಿ ರೆನ್‌ಷಾ ಅವರ ದಾಖಲೆಯನ್ನು ಸರಿಗಟ್ಟಿದರು. ಫೆಡರರ್‌ಗೆ ಇದೊಂದು ಮಹಾನ್ ಸಾಧನೆಯಾದರೆ ಸೆರೆನಾ ಕಳೆದ ವರ್ಷದ ಅನಾರೋಗ್ಯದಿಂದ ಚೇತರಿಸಿಕೊಂಡು ದೈಹಿಕ ಮತ್ತು ಮಾನಸಿಕ ಶಕ್ತಿ ಇನ್ನೂ ಕುಗ್ಗಿಲ್ಲ ಎಂಬುದನ್ನು ಸಾಬೀತುಪಡಿಸಿದರು. ಸರೆನಾಗೆ ಇದು ಐದನೇ ವಿಂಬಲ್ಡನ್ ಪ್ರಶಸ್ತಿ. ಇವರಿಬ್ಬರ ಎದುರು ಸೋತವರು ಇವರಿಗಿಂತ ಹಲವು ವರ್ಷ ಕಿರಿಯರು. ಅದು ಅವರಿಗೆ ಪಾಠವಾಗಿರಬೇಕು. ಫೆಡರರ್ ವಿರುದ್ಧ ಫೈನಲ್‌ನಲ್ಲಿ ಸೋತ ಆ್ಯಂಡಿ ಮರ‌್ರೆ ಬ್ರಿಟನ್ನಿನ ಕನಸಿನ ಆಟಗಾರನಾಗಿದ್ದರು. ಹಲವು ದಶಕಗಳಿಂದ ಬ್ರಿಟನ್ನಿನ ಯಾರೂ ವಿಂಬಲ್ಡನ್ ಗೆದ್ದಿಲ್ಲ. ಮೈದಾನದೊಳಗೆ ಮತ್ತು ಹೊರಗೆ ಇದ್ದ ಸಹಸ್ರಾರು ಪ್ರೇಕ್ಷಕರ ಬೆಂಬಲದೊಂದಿಗೆ ಉತ್ತಮವಾಗಿ ಆಟ ಆರಂಭಿಸಿದ ಮರ‌್ರೆ ಅಂತಿಮವಾಗಿ ಫೆಡರರ್ ಅವರ ತಾಳ್ಮೆ ಮತ್ತು ಕೌಶಲದೆದುರು ತಲೆಬಾಗಬೇಕಾಯಿತು. ಒಬ್ಬ ಮಹಾನ್ ಆಟಗಾರನ ಎದುರು ಸೋತ ಸಮಾಧಾನ ಇದ್ದರೂ ಅವರಿಗೆ ಬಹಳ ನಿರಾಶೆಯಾಗಿತ್ತು. ಭಾವುಕರಾದ ಅವರು ಕಣ್ಣೀರು ಹಾಕಿದರು. ಆದರೆ ಮುಂದೊಂದು ದಿನ ಅವರು ವಿಂಬಲ್ಡನ್ ಗೆಲ್ಲುವ ಸಾಧ್ಯತೆ ಇದೆ ಎಂಬುದು ಅವರ ಆಟದಲ್ಲಿ ಕಂಡುಬಂದಿತ್ತು. ಫೆಡರರ್ 2010 ರಲ್ಲಿ ಆಸ್ಟ್ರೇಲಿಯ ಓಪನ್ ಗೆದ್ದ ನಂತರ ಸತತವಾಗಿ ಸೋಲತೊಡಗಿದಾಗ, ಅವರ ಅತ್ಯುತ್ತಮ ಆಟದ ದಿನಗಳು ಮುಗಿದವು ಎಂದೇ ಪಂಡಿತರು ಭಾವಿಸಿದ್ದರು. ಆದರೆ ಫೆಡರರ್ ಗೆಲ್ಲುವುದರೊಂದಿಗೆ ಮರಳಿ ವಿಶ್ವದ ನಂಬರ್-1 ಆಟಗಾರನ ಸ್ಥಾನಕ್ಕೇರಿರುವುದು ಅವರ ಛಲಕ್ಕೆ ಸಾಕ್ಷಿ. ಇನ್ನಷ್ಟು ಪ್ರಶಸ್ತಿಗಳನ್ನು ಗೆಲ್ಲುವುದೇ ತಮ್ಮ ಗುರಿ ಎಂದು ಫೆಡರರ್ ಮತ್ತು ಸೆರೆನಾ ಅವರಿಬ್ಬರೂ ಹೇಳಿದ್ದಾರೆ. ಇದು ಯುವ ಆಟಗಾರರಿಗೆ ದೊಡ್ಡ ಸವಾಲೇ ಆಗುತ್ತದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.