ಹೀನಾಯ ಶಿಕ್ಷೆ ನಿಲ್ಲಲಿ ಹಾಸಿಗೆಯಲ್ಲಿ ಮೂತ್ರ ಮಾಡಿದ 10 ವರ್ಷದ ಐದನೇ ತರಗತಿ ವಿದ್ಯಾರ್ಥಿನಿಗೆ ಅದೇ ಮೂತ್ರ ಕುಡಿಯುವ ಶಿಕ್ಷೆ ವಿಧಿಸಿದ ಪ್ರಕರಣ ಹೇಸಿಗೆ ಹುಟ್ಟಿಸುವಂತಹದ್ದು. ಈ ಪ್ರಕರಣ ನಡೆದಿರುವುದು ಗುರುದೇವ ರವೀಂದ್ರನಾಥ ಟ್ಯಾಗೋರ್ ಅವರು ಸ್ಥಾಪಿಸಿದ ಶಾಂತಿನಿಕೇತನದ `ವಿಶ್ವಭಾರತಿ~ ವಿಶ್ವವಿದ್ಯಾಲಯದಲ್ಲಿ ಎಂಬುದಂತೂ ಇನ್ನಷ್ಟು ಕಸಿವಿಸಿ ಉಂಟುಮಾಡುತ್ತದೆ. ನಮ್ಮ ಮೌಲ್ಯವ್ಯವಸ್ಥೆ ಎತ್ತ ಸಾಗುತ್ತಿದೆ ಎಂಬಂತಹ ಆತಂಕ ಕಾಡುತ್ತದೆ. ಗುರುದೇವ ರವೀಂದ್ರನಾಥ ಟ್ಯಾಗೋರ್ ಅವರ ಮಾತುಗಳಲ್ಲೇ ಹೇಳುವುದಾದರೆ, `ತನ್ನ ಅತ್ಯುತ್ತಮ ಸಂಸ್ಕೃತಿಯ ಆತಿಥ್ಯವನ್ನು ಇತರರಿಗೆ ನೀಡುವ ಹೊಣೆ ಭಾರತದ್ದಾಗಿದೆ. ಹಾಗೆಯೇ ಇತರರಿಂದ ಅತ್ಯುತ್ತಮವಾದದ್ದನ್ನು ಪಡೆದುಕೊಳ್ಳುವ ಹಕ್ಕು ಸಹ ಭಾರತಕ್ಕಿದೆ ಎಂಬುದನ್ನು ಈ ಸಂಸ್ಥೆ ಮಾನ್ಯಮಾಡುತ್ತದೆ.~ ಆದರೆ ಇಂತಹ ಉದಾತ್ತ ಉದ್ದೇಶದ ಸಂಸ್ಥೆಯಲ್ಲಿ ಈಗ ನಡೆದಿರುವ ಈ ಪ್ರಕರಣ ನಾಚಿಕೆಗೇಡಿನದು. ಅದೂ ಒದ್ದೆ ಹಾಸಿಗೆಗೆ ಒಂದಿಷ್ಟು ಉಪ್ಪನ್ನು ಉದುರಿಸಿ ಹಾಸಿಗೆ ಹೊದಿಕೆಯನ್ನು ಹಿಂಡಿ ಅದನ್ನು ಕುಡಿಯುವಂತೆ ಹಾಸ್ಟೆಲ್ ವಾರ್ಡನ್ ಹೇಳಿರುವುದು ತಣ್ಣನೆಯ ಕ್ರೌರ್ಯ. ಆದರೆ `ಮೂತ್ರ ಕುಡಿಯಲು ಬಲವಂತ ಮಾಡಿಲ್ಲ. ಆಕೆಗೆ ಹೆದರಿಸಲು ಹಾಗೆ ಹೇಳಲಾಗಿದೆ. ಅಲ್ಲದೆ ಹಾಸಿಗೆಯಲ್ಲಿ ಮೂತ್ರವಿಸರ್ಜನೆ ತಪ್ಪಿಸಲು ಈ ಬಗೆಯ ಮೂಢಆಚರಣೆ ಸಮಾಜದಲ್ಲಿದೆ. ಆದರೆ ನಾವು ಅದನ್ನು ಅನುಮೋದಿಸುವುದಿಲ್ಲ~ ಎಂದು ಈ ಘಟನೆಯ ಸತ್ಯ ಶೋಧನೆಗಾಗಿ ರಚಿತವಾದ ಸಮಿತಿ ಈ ಮಧ್ಯೆ ವರದಿ ನೀಡಿದೆ. ವಾಸ್ತವವಾಗಿ ಹಾಸಿಗೆಯಲ್ಲಿ ಮೂತ್ರ ವಿಸರ್ಜನೆಯ ಸಮಸ್ಯೆ ಅನೇಕ ಮಕ್ಕಳಿಗೆ ಇರುವಂತಹದ್ದು. ಅದರಲ್ಲೇನೂ ವಿಶೇಷವಿಲ್ಲ. ಇದನ್ನು ನಿರ್ವಹಿಸಲು ಅನೇಕ ವೈಜ್ಞಾನಿಕ ಮಾರ್ಗಗಳೂ ಇವೆ. ಅವನ್ನು ಬಿಟ್ಟು ಮಗುವನ್ನು ಹೆದರಿಸುವ ನೆಪದಲ್ಲಿ ಎಸಗಿರುವ ಈ ಹೀನಾಯವಾದ ಕೃತ್ಯ ಖಂಡನಾರ್ಹ. ಇಂತಹ ಹೀನಾಯ ಕೃತ್ಯದ ಬಗ್ಗೆ ವರದಿ ನೀಡಲು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯಕ್ಕೆ ಪ್ರಧಾನಮಂತ್ರಿಗಳ ಕಚೇರಿ ಕೇಳಿರುವುದು ಸರಿಯಾಗಿಯೇ ಇದೆ. ಸುಪ್ರೀಂಕೋರ್ಟ್ ನಿರ್ದೇಶನದ ಪ್ರಕಾರ, ಶಿಸ್ತಿನ ಹೆಸರಲ್ಲಿ ಮಕ್ಕಳಿಗೆ ಯಾವುದೇ ಬಗೆಯ ದೈಹಿಕ ಶಿಕ್ಷೆ ನೀಡುವುದೂ ನಿಷಿದ್ಧ. ಈ ಹಿನ್ನೆಲೆಯಲ್ಲಿ ತಪ್ಪಿತಸ್ಥರಿಗೆ ಸೂಕ್ತ ಶಿಕ್ಷೆ ಆಗಲೇಬೇಕು. ಈಗಾಗಲೇ ತಪ್ಪಿತಸ್ಥ ವಾರ್ಡನ್ ಜಾಮೀನಿನ ಮೇಲೆ ಬಿಡುಗಡೆ ಆಗಿದ್ದಾರೆ. ಈ ದುಷ್ಕೃತ್ಯಕ್ಕೆ ಸಂಬಂಧಿಸಿದಂತೆ, ಜಾಮೀನು ನೀಡಬಹುದಾದ ಸೆಕ್ಷನ್‌ಗಳಡಿ ಮೊಕದ್ದಮೆ ದಾಖಲಿಸಿದ ಪೊಲೀಸರನ್ನು ಜಾಮೀನು ಕೊಡುವ ಸಂದರ್ಭದಲ್ಲಿ ಬೋಲ್‌ಪುರ್ ಉಪವಿಭಾಗೀಯ ನ್ಯಾಯಾಲಯ ತರಾಟೆಗೆ ತೆಗೆದುಕೊಂಡಿದ್ದು ಪ್ರಕರಣದ ಗಂಭೀರತೆಗೆ ದ್ಯೋತಕ. ಜೊತೆಗೆ, ವಿಶ್ವವಿದ್ಯಾಲಯದೊಳಗೆ ಅಕ್ರಮ ಪ್ರವೇಶ ದೂರಿನ ಮೇಲೆ ಬಾಲಕಿಯ ತಂದೆತಾಯಿಯರನ್ನು ಬಂಧಿಸಿದ ಪೊಲೀಸರ ಕ್ರಮವೂ ಕೋರ್ಟ್ ಕೆಂಗಣ್ಣಿಗೆ ಗುರಿಯಾಗಿದೆ. ಮಕ್ಕಳ ಮೇಲೆ ಕ್ರೌರ್ಯ ಎಸಗುವವರ ಶೈಕ್ಷಣಿಕ ಸಾಮರ್ಥ್ಯವೇ ಪ್ರಶ್ನಾರ್ಹ. ಮಕ್ಕಳಲ್ಲಿ ಸುರಕ್ಷತಾ ಭಾವವನ್ನು ಇಂತಹ ವ್ಯಕ್ತಿಗಳು ಮೂಡಿಸುವುದಾದರೂ ಹೇಗೆ? ಬೆಳೆಯುವ ವಯಸ್ಸಿನ ಮಕ್ಕಳಿಗೆ ವಿದ್ಯಾಸಂಸ್ಥೆಗಳಲ್ಲಿ ಮಾರ್ಗದರ್ಶನ ಮಾಡಲು ಬೇಕಿರುವುದು ಸ್ನೇಹಿತ, ಗುರು ಹಾಗೂ ಮಾರ್ಗದರ್ಶಕರೇ ಹೊರತು ಹೀನಾಯ ಶಿಕ್ಷೆ ನೀಡುವ `ಮೃಗ~ಗಳಲ್ಲ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.