ಹೊಸತನ ಇಲ್ಲದ ಬದಲಾವಣೆ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿರುವ ಜಗದೀಶ್ ಶೆಟ್ಟರ್ ಅವರ ಮುಂದೆ ಇರುವುದು ಶಾಂತಿಕಾಲ ಅಲ್ಲ, ಯುದ್ಧ ಕಾಲ. ಒಂದೆಡೆ ಇನ್ನೂ ಶಮನಗೊಳ್ಳದೆ ಹರಡುತ್ತಲೇ ಇರುವ ಭಿನ್ನಮತದ ಬೆಂಕಿ, ಇನ್ನೊಂದೆಡೆ ರಾಜ್ಯದ ಜನತೆಯನ್ನು ಸುಡುತ್ತಿರುವ ಬರದ ಬೇಗೆ, ಮತ್ತೊಂದೆಡೆ ಹೊಸ್ತಿಲಲ್ಲಿ ಬಂದು ನಿಂತಿರುವ ವಿಧಾನಸಭಾ ಚುನಾವಣೆ. ಭಿನ್ನಮತೀಯ ನಾಯಕನಾಗಿಯೇ ಕಾಣಿಸಿಕೊಂಡು ಅದರ ಮೂಲಕವೇ ಮುಖ್ಯಮಂತ್ರಿ ಸ್ಥಾನವನ್ನು ಗಳಿಸಿಕೊಂಡ ಶೆಟ್ಟರ್ ಈಗ ತಾವೇ ಭಿನ್ನಮತದ ಹಾವಳಿಗೆ ಬಲಿಯಾಗಬೇಕಾಗಿ ಬಂದಿರುವುದು ವಿಪರ್ಯಾಸ. ನೂತನ ಸಚಿವರ ಪ್ರಮಾಣವಚನಕ್ಕೆ ಮೊದಲೇ ನಡೆದ ಭಿನ್ನಮತೀಯರ ಧರಣಿ, ಪ್ರತಿಭಟನೆ, ರಾಜೀನಾಮೆ ಪ್ರಸಂಗಗಳು ಮುಂದುವರಿಯಲಿರುವ ಭಿನ್ನಮತೀಯ ಚಟುವಟಿಕೆಗಳ ಸೂಚನೆಯನ್ನು ನೀಡಿವೆ. ರಾಜ್ಯದ ಹದಿನೇಳು ತಾಲ್ಲೂಕುಗಳು ಬರದ ದವಡೆಗೆ ಸಿಲುಕಿದ್ದು ಪರಿಸ್ಥಿತಿ ಉಲ್ಭಣಗೊಳ್ಳುತ್ತಿದೆ. ಭಿನ್ನಮತೀಯ ಚಟುವಟಿಕೆಗಳಿಂದ ಕಳೆದ ಕೆಲವು ತಿಂಗಳಲ್ಲಿ ವಿಧಾನಸೌಧದಲ್ಲಿ ಮಾತ್ರವಲ್ಲ ಜಿಲ್ಲಾಮಟ್ಟದಲ್ಲಿ ಕೂಡಾ ಆಡಳಿತವೇ ಇಲ್ಲದಂತಹ ಅರಾಜಕ ಪರಿಸ್ಥಿತಿ ನಿರ್ಮಾಣವಾಗಿ ಬರಪೀಡಿತ ಜನತೆಯ ಗೋಳನ್ನು ಕೇಳುವವರೇ ಇಲ್ಲದಂತಾಗಿದೆ. ಸ್ಥಗಿತಗೊಂಡಿರುವ ಆಡಳಿತ ಯಂತ್ರಕ್ಕೆ ಚಾಲನೆ ನೀಡುವ ಮೂಲಕ ಬರಪರಿಹಾರವನ್ನು ಸಮರೋಪಾದಿಯಲ್ಲಿ ಕೈಗೊಳ್ಳುವ ಸವಾಲು ಶೆಟ್ಟರ್ ಮುಂದಿದೆ. ಹಿಂದಿನ ಮುಖ್ಯಮಂತ್ರಿಗಳ ಸಾಧನೆ-ವೈಫಲ್ಯಗಳೇನೇ ಇರಲಿ ಅಂತಿಮವಾಗಿ ಚುನಾವಣಾ ಕಾಲದ ಮುಖ್ಯಮಂತ್ರಿಯೇ ಪಕ್ಷದ ಸೋಲು-ಗೆಲುವುಗಳ ಹೊಣೆ ಹೊರಬೇಕಾಗುತ್ತದೆ. ಇವೆಲ್ಲವೂ ಶೆಟ್ಟರ್ ಅವರ ಭವಿಷ್ಯದ ಹಾದಿಯನ್ನು ಕಠಿಣವಾಗಿಸಿದೆ. ಬಿಜೆಪಿ ಆಡಳಿತ ಕಾಲದ ಭಿನ್ನಮತ, ಭ್ರಷ್ಟಾಚಾರ, ಜಾತೀಯತೆಗಳಿಂದಾಗಿ ರೋಸಿಹೋಗಿರುವ ರಾಜ್ಯದ ಜನತೆ ಈ ಸರ್ಕಾರದಿಂದ ಏನನ್ನೂ ನಿರೀಕ್ಷಿಸದಷ್ಟು ನಿರಾಶರಾಗಿ ಹೋಗಿದ್ದಾರೆ. ದಿಟ್ಟತನದ ರಾಜಕೀಯ ನಿರ್ಧಾರಗಳ ಮೂಲಕ ಮಾತ್ರ ಕಳೆದುಕೊಂಡಿರುವ ಜನತೆಯ ವಿಶ್ವಾಸವನ್ನು ಮರಳಿ ಗಳಿಸಲು ಸಾಧ್ಯ. ಒಬ್ಬ ಮುಖ್ಯಮಂತ್ರಿ ಈ ರೀತಿಯ ದಿಟ್ಟತನವನ್ನು ತೋರಿಸಬೇಕಾದರೆ ಪಕ್ಷ ಮತ್ತು ಸಹೋದ್ಯೋಗಿಗಳ ಸಂಪೂರ್ಣ ಬೆಂಬಲ ಬೇಕಾಗುತ್ತದೆ. ಇತ್ತೀಚಿನ ರಾಜಕೀಯ ಬೆಳವಣಿಗೆಗಳನ್ನು ನೋಡಿದರೆ ಅಂತಹ ಬೆಂಬಲವನ್ನು ಶೆಟ್ಟರ್ ನಿರೀಕ್ಷಿಸುವುದು ಕಷ್ಟ. ಈ ಅಸಹಾಯಕತೆಯ ನೆರಳು ನೂತನವಾಗಿ ರಚನೆಗೊಂಡ ಸಂಪುಟದ ಮೇಲೆ ಬಿದ್ದಿರುವುದನ್ನೂ ಕಾಣಬಹುದು. ಮುಖ್ಯಮಂತ್ರಿಯ ಬದಲಾವಣೆಯ ಅವಕಾಶವನ್ನು ಬಳಸಿಕೊಂಡು ಹಿಂದಿನ ಸರ್ಕಾರಗಳು ಮಾಡಿರುವ ತಪ್ಪುಗಳನ್ನು ತಿದ್ದಿಕೊಳ್ಳಲು ಒಂದು ಅವಕಾಶ ಇತ್ತು. ಹೊಸ ಸಂಪುಟವನ್ನು ನೋಡಿದರೆ ಶೆಟ್ಟರ್ ಆ ಅವಕಾಶವನ್ನು ಬಳಸಿಕೊಂಡ ಹಾಗೆ ಕಾಣುವುದಿಲ್ಲ. ಈ ಸಂಪುಟದಲ್ಲಿಯೂ ಅತ್ಯಂತ ಹಿಂದುಳಿದ ಜಿಲ್ಲೆಗಳಾದ ಕೊಪ್ಪಳ,ರಾಯಚೂರು, ಚಾಮರಾಜನಗರ ಸೇರಿದಂತೆ ಒಂಬತ್ತು ಜಿಲ್ಲೆಗಳಿಗೆ ಪ್ರಾತಿನಿಧ್ಯ ನೀಡಲಾಗಿಲ್ಲ. 34 ಸದಸ್ಯಬಲದ ಸಂಪುಟದಲ್ಲಿ ಹನ್ನೊಂದು ಲಿಂಗಾಯತರಿಗೆ ಮತ್ತೆ ಅವಕಾಶ ನೀಡಲಾಗಿದೆ. ಮುಖ್ಯಮಂತ್ರಿಗಳೇ ಲಿಂಗಾಯತರಾಗಿರುವುದರಿಂದ ಸಂಪುಟದಲ್ಲಿ ಅವರ ಪ್ರಾತಿನಿಧ್ಯವನ್ನು ಕಡಿಮೆಮಾಡಿ ಸಂಖ್ಯೆಯಲ್ಲಿ ಹೆಚ್ಚಿರುವ ಹಿಂದುಳಿದ ಜಾತಿ, ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಹೆಚ್ಚಿನ ಅವಕಾಶ ನೀಡಬಹುದಿತ್ತು. ಕಳಂಕಿತರನ್ನು ಸಂಪುಟದಿಂದ ಹೊರಗಿಡುವ ಮೂಲಕ ನೂತನ ಸರ್ಕಾರ ಭ್ರಷ್ಟಾಚಾರದ ವಿರುದ್ದ ಇದೆ ಎಂಬ ಸಂದೇಶವನ್ನು ನೀಡಬಹುದಿತ್ತು. ದಿಟ್ಟತನದ ನಿರ್ಧಾರ ಕೈಗೊಳ್ಳಬೇಕಾಗಿದ್ದ ಜಗದೀಶ್ ಶೆಟ್ಟರ್ ಪರಿಸ್ಥಿತಿಯ ಕೈಗೊಂಬೆಯಂತೆ ವರ್ತಿಸಿದ್ದಾರೆ. ಈ ದೌರ್ಬಲ್ಯವನ್ನು ಮೀರಿದರೆ ಮಾತ್ರ ತಾನು ಬಹುಕಾಲದಿಂದ ಬಯಸಿ ಪಡೆದ ಮುಖ್ಯಮಂತ್ರಿ ಸ್ಥಾನವನ್ನು ಜನತೆ ನೆನಪಲ್ಲಿಟ್ಟುಕೊಳ್ಳುವಂತೆ ಕಾರ್ಯನಿರ್ವಹಿಸಲು ಸಾಧ್ಯ. ಆ ಶಕ್ತಿಯನ್ನು ಅವರು ಗಳಿಸಿಕೊಳ್ಳಲಿ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.