ಮುಷ್ಕರ ಒಂದೇ ಪರಿಹಾರ ಅಲ್ಲ ಮುಷ್ಕರಗಳಿಗೆ ಮಣಿದು ಸರ್ಕಾರಗಳು ಬೇಡಿಕೆಗಳನ್ನು ಒಪ್ಪಿಕೊಂಡಿರುವ ಅಥವಾ ನೀತಿಯಲ್ಲಿ ಬದಲಾವಣೆ ಮಾಡಿಕೊಂಡಿರುವ ನಿದರ್ಶನಗಳು ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ. ಸಾಮಾನ್ಯ ಜನತೆ ಇಂದು ಅನುಭವಿಸುತ್ತಿರುವ ಬವಣೆಗೆ ಹೆಚ್ಚು ಕಡಿಮೆ ಎಲ್ಲ ರಾಜಕೀಯ ಪಕ್ಷಗಳೂ ಹೊಣೆಯಾಗಿರುವುದರಿಂದ ಇಂತಹ ಮುಷ್ಕರಗಳ ಆಚರಣೆ ಆಡಳಿತಾರೂಢ ಪಕ್ಷದ ವಿರುದ್ಧ ಅಭಿಪ್ರಾಯ ರೂಪಿಸಲು ನೆರವಾಗುತ್ತದೆ ಎಂದು ಹೇಳುವ ಸ್ಥಿತಿಯಲ್ಲಿಯೂ ಯಾರೂ ಇಲ್ಲ. ಹೀಗಿದ್ದರೂ ಕಾಲ-ಕಾಲಕ್ಕೆ ಮುಷ್ಕರಗಳು ನಡೆಯುತ್ತವೆ. ಇದರಿಂದ ಯಥಾಪ್ರಕಾರ ಸಾರ್ವಜನಿಕ ಜನಜೀವನ ಅಸ್ತವ್ಯಸ್ತಗೊಳ್ಳುತ್ತದೆ, ಪ್ರತಿದಿನವೂ ದುಡಿದು ತಿನ್ನಬೇಕಾಗಿರುವ ಬಡಕುಟುಂಬಗಳು ಉಪವಾಸ ಬೀಳುತ್ತವೆ. ಆರ್ಥಿಕ ಚಟುವಟಿಕೆ ಸ್ತಬ್ಧಗೊಳ್ಳುವುದರಿಂದ ದೇಶದ ಬೊಕ್ಕಸಕ್ಕೆ ಸಾವಿರಾರು ಕೋಟಿ ರೂಪಾಯಿ ನಷ್ಟವೂ ಆಗುತ್ತದೆ. ಇವೆಲ್ಲವುಗಳ ಹೊರೆಯನ್ನು ಅಂತಿಮವಾಗಿ ತೆರಿಗೆದಾರರೇ ಹೊತ್ತುಕೊಳ್ಳಬೇಕಾಗುತ್ತದೆ. ಇಂತಹದೇ ಒಂದು ಮುಷ್ಕರ ಬುಧವಾರ ಮತ್ತು ಗುರುವಾರ ದೇಶದಾದ್ಯಂತ ನಡೆಯಲಿದೆ. ಸಾರ್ವಜನಿಕ ಸಾರಿಗೆ ಸಂಸ್ಥೆಗಳು ಮತ್ತು ಬ್ಯಾಂಕ್‌ಗಳು ಮುಷ್ಕರದಲ್ಲಿ ಭಾಗವಹಿಸಲಿರುವುದರಿಂದ ಈ ಮುಷ್ಕರ ಜನಜೀವನವನ್ನು ಸ್ಥಗಿತಗೊಳಿಸಲಿದೆ. ಹೆಚ್ಚಿನ ಶಿಕ್ಷಣ ಸಂಸ್ಥೆಗಳು ಮುಂಜಾಗ್ರತಾ ಕ್ರಮವಾಗಿ ರಜೆ ಘೋಷಿಸಿವೆ. ಬಸ್‌ಗಳ ಜತೆ ಆಟೊ ಚಾಲಕರೂ ಪಾಲ್ಗೊಳ್ಳುತ್ತಿರುವುದರಿಂದ ಮುಷ್ಕರ ಆಚರಿಸದ ಖಾಸಗಿ ಸಂಸ್ಥೆಗಳ ನೌಕರರು ಕೂಡಾ ಸಂಚಾರ ವ್ಯವಸ್ಥೆ ಇಲ್ಲದೆ ಮನೆಯಲ್ಲಿಯೇ ಕೂರಬೇಕಾದ ಪರಿಸ್ಥಿತಿ ನಿರ್ಮಾಣವಾಗಬಹುದು. ಅಕ್ಕಿ, ಬೇಳೆ, ಹಣ್ಣು, ತರಕಾರಿ, ಹಾಲು, ಅಡುಗೆ ಅನಿಲ, ವಿದ್ಯುತ್, ಸಾರ್ವಜನಿಕ ಸಾರಿಗೆ...ಹೀಗೆ ಜೀವನಾವಶ್ಯಕ ವಸ್ತು ಮತ್ತು ಸೇವೆಗಳೆಲ್ಲದರ ಬೆಲೆ ಹೆಚ್ಚಾಗುತ್ತಿರುವುದರಿಂದ ಸಮಾಜದಲ್ಲಿ ಸಾರ್ವಜನಿಕ ಆಕ್ರೋಶ ಮಡುಗಟ್ಟಿದೆ. ಪ್ರಜಾಪ್ರಭುತ್ವದ ಆಧಾರಸ್ತಂಭಗಳಾದ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳ ಮೇಲಿನ ಭರವಸೆಯನ್ನು ಜನ ಕಳೆದುಕೊಳ್ಳತೊಡಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಅಸಹಾಯಕ ಜನರಿಗೆ ತಮ್ಮ ಅಸಮಾಧಾನವನ್ನು ಹೊರಹಾಕಲು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಲಭ್ಯ ಇರುವ ಒಂದು ಮಾರ್ಗ ಮುಷ್ಕರ ಎನ್ನುವುದು ನಿಜ. ಆದರೆ ಆಳುವವರು ಇಂತಹ ಪ್ರತಿಭಟನೆಗೆ ಸ್ಪಂದಿಸುವಂತಹ ಸೂಕ್ಷ್ಮತೆಯನ್ನು ಕಳೆದುಕೊಂಡಿರುವ ಇಂದಿನ ದಿನಗಳಲ್ಲಿ ಮುಷ್ಕರದಿಂದ ಉದ್ದೇಶ ಸಾಧನೆಯಾಗುತ್ತದೆ ಎಂದು ತಿಳಿದುಕೊಳ್ಳುವುದು ಮೂರ್ಖತನವಾಗುತ್ತದೆ. ಎಚ್ಚರಿಕೆಯಿಂದ ಬಳಸಬೇಕಾಗಿದ್ದ ಈ ಪ್ರತಿಭಟನೆಯ ಅಸ್ತ್ರ ಬಹಳಷ್ಟು ಬಾರಿ ದುರ್ಬಳಕೆಗೀಡಾಗಿರುವುದರಿಂದ ಮುಷ್ಕರದಂಥ ಪ್ರಜಾಸತ್ತಾತ್ಮಕ ಪ್ರತಿಭಟನಾ ಮಾರ್ಗ ಕೂಡಾ ಪಾವಿತ್ರ್ಯ ಕಳೆದುಕೊಂಡಿದೆ. ಆಳುವ ಪಕ್ಷ ಜನಾಭಿಪ್ರಾಯವನ್ನು ಧಿಕ್ಕರಿಸಿ ಸರ್ವಾಧಿಕಾರಿಯಂತೆ ಜನವಿರೋಧಿ ನೀತಿಗಳನ್ನು ಮುಂದುವರಿಸಿಕೊಂಡು ಹೋಗಲು ಪ್ರತಿಪಕ್ಷಗಳ ಕರ್ತವ್ಯಲೋಪವೂ ಕಾರಣ. ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರವನ್ನು ಮಣಿಸಲು ಸಂಸತ್ ಅತ್ಯುತ್ತಮ ವೇದಿಕೆ. ಆದರೆ ಗದ್ದಲ ಮತ್ತು ಗಲಾಟೆಗಳಲ್ಲಿಯೇ ಮೈಮರೆಯುವ ವಿರೋಧಪಕ್ಷಗಳು ಈ ಅವಕಾಶವನ್ನು ಬಳಸಿಕೊಳ್ಳಲು ವಿಫಲವಾಗಿರುವುದು ಕೂಡಾ ಆಳುವ ಪಕ್ಷದ ಜನವಿರೋಧಿ ವರ್ತನೆಗೆ ಕಾರಣ. ಮುಷ್ಕರ ಯಶಸ್ವಿಗೊಳಿಸುವುದಷ್ಟೇ ಅದಕ್ಕೆ ಕರೆ ನೀಡಿರುವ ಸಂಘಟನೆಗಳ ಕೆಲಸ ಅಲ್ಲ, ಅದರಿಂದ ಸಾರ್ವಜನಿಕರ ದೈನಂದಿನ ಜೀವನಕ್ಕೆ ತೊಂದರೆಯಾಗದಂತೆ ನಿಗಾ ವಹಿಸಬೇಕಾದ ಜವಾಬ್ದಾರಿ ಕೂಡಾ ಅವುಗಳ ಮೇಲಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಣ್ಣುಮುಚ್ಚಿಕೊಂಡು ಕೂರದೆ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.