ಇಂಗ್ಲಿಷ್ ಶಾಲೆಯ ದಿಗಿಲು ಪ್ರಸಕ್ತ ಸಾಲಿನಲ್ಲಿ 400 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ವಿಭಾಗ ಆರಂಭಿಸಲು ಶಿಕ್ಷಣ ಇಲಾಖೆ ಮುಂದಾಗಿದೆ. ಇದು ಮತ್ತೆ ಕನ್ನಡಿಗರನ್ನು ಕೆರಳಿಸಿದೆ. ಮಾತೃಭಾಷೆಯಲ್ಲೆ ಶಿಕ್ಷಣ ನೀಡಬೇಕೆಂಬುದನ್ನು ಪ್ರತಿಪಾದಿಸುತ್ತಿರುವ ಸಮಯದಲ್ಲಿ ಸರ್ಕಾರದ ಈ ನಿಲುವು ಆಘಾತಕಾರಿಯಾದುದು. ಸಾಹಿತಿಗಳು ಮತ್ತು ಕನ್ನಡ ಪರ ಸಂಘಟನೆಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಗೋಕಾಕ್ ಮಾದರಿಯ ಹೋರಾಟ ಮಾಡುವುದಾಗಿ ಎಚ್ಚರಿಸಲಾಗಿದೆ. ಸಾಹಿತಿಗಳು ಹೋರಾಟದ ಅಖಾಡಕ್ಕೆ ಇಳಿದು, ಸರ್ಕಾರಕ್ಕೆ 15 ದಿನಗಳ ಗಡುವು ನೀಡಿದ್ದಾರೆ. ಖಾಸಗಿ ಶಾಲೆಗಳ ಬಗ್ಗೆ ಪೋಷಕರಲ್ಲಿರುವ ವ್ಯಾಮೋಹವನ್ನು ಹೋಗಲಾಡಿಸಬೇಕು. ವಂತಿಗೆ ಹಾವಳಿಗೆ ಕಡಿವಾಣ ಹಾಕಬೇಕು. ಸರ್ಕಾರಿ ಶಾಲೆಗಳಿಗೆ ಬರುವ ಮಕ್ಕಳಿಗೆ ಆಂಗ್ಲ ಮಾಧ್ಯಮ ಶಿಕ್ಷಣ ದೊರೆಯಬೇಕು ಎಂಬ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಾಥಮಿಕ ಶಿಕ್ಷಣ ಇಲಾಖೆ ನಿರ್ದೇಶಕರು ಸರ್ಕಾರದ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ. ಇದಕ್ಕೆ ಕಾಯ್ದೆಯ ಬೆಂಬಲವೂ ಇದೆ ಎಂದಿದ್ದಾರೆ. ಆದರೆ ನಮ್ಮ ಗ್ರಾಮೀಣ ಪ್ರದೇಶದಲ್ಲಿ ಇಂಗ್ಲಿಷ್ ಕಲಿಸುವ ಪೂರಕ ವಾತಾವರಣ ಇದೆಯೇ ಎನ್ನುವ ಪ್ರಶ್ನೆ ಇಲ್ಲಿ ಉದ್ಭವಿಸುತ್ತದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಯುವುದರಿಂದ ವಂಚಿತರಾಗುತ್ತಿದ್ದಾರೆ ಎಂಬ ಆರೋಪವನ್ನು ನಿವಾರಿಸಿಕೊಳ್ಳುವ ವಾದ ಈ ಚಿಂತನೆಗೆ ಕಾರಣ. ಇಂಗ್ಲಿಷ್ ಕಲಿಯದಿದ್ದರೆ ಭವಿಷ್ಯವೇ ಇಲ್ಲ ಎಂಬ ನಂಬಿಕೆ ಜನಸಾಮಾನ್ಯರಲ್ಲಿ ಬೇರು ಬಿಡುತ್ತಿರುವುದರ ಪರಿಣಾಮ ಗ್ರಾಮೀಣ ಪ್ರದೇಶಗಳಲ್ಲಿ ಗೋಚರಿಸುತ್ತಿರುವುದರ ಹಿನ್ನೆಲೆಯಲ್ಲಿ ಈ ನಿಲುವು. ಖಾಸಗಿ ಶಾಲೆಗಳ ಸವಾಲುಗಳನ್ನು ಎದುರಿಸಲು ಖಾಸಗಿ ಶಾಲೆಗಳಂತೆಯೇ ಮಕ್ಕಳನ್ನು ಆಕರ್ಷಿಸಲು ಮೊದಲನೆಯ ತರಗತಿಯಿಂದಲೇ ಇಂಗ್ಲಿಷ್ ಎಂಬ ಆಕರ್ಷಣೆಯನ್ನು ಒಡ್ಡುವ ಮಟ್ಟಕ್ಕೆ ಇಲಾಖೆ ಬಂದು ನಿಂತಿದೆ. ಒಂದುಕಡೆ ವಿದ್ಯಾರ್ಥಿಗಳೇ ಇಲ್ಲದೆ ಸರ್ಕಾರಿ ಶಾಲೆಗಳನ್ನು ಮುಚ್ಚಬೇಕಾದ ಪರಿಸ್ಥಿತಿ ಇದೆ. ವಿದ್ಯಾರ್ಥಿಗಳ ಕೊರತೆ ಇರುವ 3600 ಶಾಲೆಗಳು ವಿಲೀನ ಪ್ರಕ್ರಿಯೆಗೆ ಬಂದು ನಿಂತಿವೆ. ಮತ್ತೊಂದು ಕಡೆ ಇಂಗ್ಲಿಷ್ ಶಾಲೆಗಳನ್ನು ಪೈಪೋಟಿಯಿಂದ ಆರಂಭಿಸುವ ಭರಾಟೆ ಕಂಡುಬರುತ್ತಿದೆ. ಇಂಗ್ಲಿಷನ್ನು ಭಾಷೆಯಾಗಿ ಕಲಿಸುವುದಕ್ಕೂ , ಇಂಗ್ಲಿಷನ್ನು ಶಿಕ್ಷಣ ಮಾಧ್ಯಮವಾಗಿ ಬಳಸುವುದಕ್ಕೂ ಇರುವ ವ್ಯತ್ಯಾಸದ ಅರಿವು ಇಲ್ಲದ ಗೊಂದಲ ಪ್ರಾಥಮಿಕ ಶಿಕ್ಷಣದಲ್ಲಿ ಕಂಡುಬಂದಿದೆ. ರಾಜ್ಯ ಸರ್ಕಾರದ 1994ರ ಭಾಷಾ ನೀತಿ ಪ್ರಕಾರ ಒಂದರಿಂದ ಐದನೇ ತರಗತಿಯವರೆಗೆ ಮಾತೃಭಾಷೆಯಲ್ಲೇ ಶಿಕ್ಷಣ ನೀಡಲಾಗುತ್ತಿದೆ. ಶಿಕ್ಷಣತಜ್ಞರೂ ಪ್ರಾರಂಭದ ಕೆಲವು ವರ್ಷ ಮಾತೃಭಾಷೆಯಲ್ಲೇ ಶಿಕ್ಷಣ ನೀಡುವುದನ್ನು ಪ್ರತಿಪಾದಿಸಿದ್ದಾರೆ. ಆದರೆ ಭಾಷಾ ನೀತಿಯನ್ನೇ ಪ್ರಶ್ನಿಸಿ ಇಂಗ್ಲಿಷ್ ಶಾಲೆ ಪ್ರತಿಪಾದಕರು ಹುಯಿಲೆಬ್ಬಿಸಿದ್ದಾರೆ. ಇಂತಹ ವಿವಾದಗಳನ್ನು ಇತ್ಯರ್ಥ ಪಡಿಸುವ ಬದ್ಧತೆಯನ್ನೂ ಸರ್ಕಾರ ಇದುವರೆಗೆ ಪ್ರದರ್ಶಿಸಿಲ್ಲ. ಕನ್ನಡ ಶಾಲೆಗಳನ್ನು ಉಳಿಸಿಕೊಳ್ಳುವುದು ಹೇಗೆ ಎಂಬ ಚಿಂತನೆಯನ್ನೂ ಮಾಡಿಲ್ಲ. ಇಂಗ್ಲಿಷನ್ನು ಒಂದು ಭಾಷೆಯಾಗಿ ಯಾವ ಹಂತದಿಂದ ಕಲಿಸಬೇಕು ಎಂಬುದರ ಬಗ್ಗೆಯೂ ವಿವಾದ ಎದ್ದಿರುವುದು ಮಾತೃಭಾಷಾ ನೀತಿಯ ಅನುಷ್ಠಾನದಲ್ಲಿ ಪ್ರಮುಖ ತೊಡಕಾಗಿ ಉಳಿದಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.