ಹೂಡಿಕೆದಾರರ ಸಮಾವೇಶ ರಾಜ್ಯದಲ್ಲಿ ಕೈಗಾರೀಕರಣಕ್ಕೆ ಇನ್ನಷ್ಟು ವೇಗ ನೀಡುವ ಮಹತ್ವಾಕಾಂಕ್ಷೆ ಉದ್ದೇಶದ, `ಜಾಗತಿಕ ಬಂಡವಾಳ ಹೂಡಿಕೆದಾರರ~ ಎರಡನೆ ಸಮಾವೇಶವು ರಾಜಧಾನಿ ಬೆಂಗಳೂರಿನಲ್ಲಿ ನಡೆಯುತ್ತಿರುವುದು ಸ್ವಾಗತಾರ್ಹ. ಆಡಳಿತಾರೂಢ ಬಿಜೆಪಿಯ ವಿವಿಧ ಬಣಗಳ ಒಳ ಜಗಳದ ಕಾರಣಕ್ಕೆ ಸಮಾವೇಶ ನಡೆಯುವ ಬಗ್ಗೆಯೇ ಅನುಮಾನಗಳು ಮೂಡಿದ್ದವು. ರಾಜ್ಯದಲ್ಲಿ ಬರಗಾಲ ಪರಿಸ್ಥಿತಿ ಇರುವ ಮತ್ತು ಜಾಗತಿಕ ಆರ್ಥಿಕ ವಿದ್ಯಮಾನಗಳಿಂದ ದೇಶಿ ಅರ್ಥ ವ್ಯವಸ್ಥೆಯಲ್ಲಿಯೂ ತಳಮಳ ಉಂಟಾಗಿರುವ ದಿನಗಳಲ್ಲಿಯೇ ಈ ಸಮಾವೇಶ ನಡೆಯುತ್ತಿರುವುದು ಜನರಲ್ಲಿ ಸಹಜವಾಗಿಯೇ ಹಲವಾರು ನಿರೀಕ್ಷೆಗಳನ್ನು ಮೂಡಿಸಿದೆ. ರಾಜ್ಯದಲ್ಲಿ ವಿವಿಧ ಬಗೆಯ ಬೃಹತ್ ಉದ್ದಿಮೆ ಸ್ಥಾಪನೆ, 10 ಲಕ್ಷ ಉದ್ಯೋಗ ಅವಕಾಶ ಸೇರಿದಂತೆ ಒಟ್ಟಾರೆ ಕೈಗಾರೀಕರಣದ ಕನಸು ನನಸು ಮಾಡುವ ನಿಟ್ಟಿನಲ್ಲಿ ಇದೊಂದು ದೊಡ್ಡ ಹೆಜ್ಜೆ. ಕೈಗಾರಿಕೋದ್ಯಮಿಗಳು ಮತ್ತು ಬಂಡವಾಳ ಹೂಡಿಕೆದಾರರಿಗೆ ರಾಜ್ಯದಲ್ಲಿ ಬಂಡವಾಳ ಹೂಡಿಕೆಯ ಪ್ರಯೋಜನಗಳ ಬಗ್ಗೆ ಮನವರಿಕೆ ಮಾಡಿಕೊಟ್ಟು, ಸೂಕ್ತ ಸೌಲಭ್ಯ ಕಲ್ಪಿಸುವ ವಾಗ್ದಾನ ಈಡೇರಿಸುವ ಉದ್ದೇಶದಿಂದಲೇ ಇಂತಹ ಸಮಾವೇಶ (ಜಿಎಮ್) ಆಯೋಜಿಸುತ್ತಿದ್ದರೂ, ಮೊದಲ ಸಮಾವೇಶ ನಡೆದ ನಂತರದ ಎರಡು ವರ್ಷಗಳಲ್ಲಿ ಆಗಿರುವ ಸಾಧನೆ ಮಾತ್ರ ನಿರಾಶೆ ಮೂಡಿಸುತ್ತದೆ. ದೇಶ - ವಿದೇಶಗಳ ಪ್ರಮುಖ ಕೈಗಾರಿಕೋದ್ಯಮಿಗಳನ್ನು ರಾಜ್ಯಕ್ಕೆ ಕರೆತರುವಲ್ಲಿ ರಾಜ್ಯ ಸರ್ಕಾರ ಯಶಸ್ವಿಯಾಗಿದ್ದರೂ, ಕಾರ್ಯರೂಪದಲ್ಲಿ ಬಂದಿರುವ ಯೋಜನೆಗಳ ಸಂಖ್ಯೆ ಅಷ್ಟೇನೂ ತೃಪ್ತಿದಾಯಕವಾಗಿಲ್ಲ. ವಿವಿಧ ಜಿಲ್ಲೆಗಳ ಕೈಗಾರಿಕಾ ಚಿತ್ರಣದಲ್ಲಿಯೂ ಗಮನಾರ್ಹ ಬದಲಾವಣೆ ಕಂಡು ಬಂದಿಲ್ಲ. ಮೊದಲ ಸಮಾವೇಶ ನಂತರದ 2 ವರ್ಷಗಳಲ್ಲಿಯೂ ಇಂತಹ ನಿರಾಶಾದಾಯಕ ಪರಿಸ್ಥಿತಿ ಇರುವುದಕ್ಕೆ ರಾಜ್ಯ ಸರ್ಕಾರದ ವೈಫಲ್ಯವೂ ಕಾರಣ ಎನ್ನುವುದೂ ಸುಳ್ಳಲ್ಲ. ಸ್ಥಾಪನೆಗೆ ಅಗತ್ಯವಾದ ಮೂಲಸೌಲಭ್ಯಗಳನ್ನು ಕಲ್ಪಿಸಲು, ಭೂ ಸ್ವಾಧೀನದಂತಹ ಅಡಚಣೆ ನಿವಾರಿಸಲೂ ಸಾಧ್ಯವಾಗಿಲ್ಲ. ಎರಡನೇ ಬಾರಿಗೆ ನಡೆಯುತ್ತಿರುವ ಸಮಾವೇಶದ ಯಶಸ್ಸಿನ ಬಗ್ಗೆ ಈಗ ಎಲ್ಲರಲ್ಲಿ ನಿರೀಕ್ಷೆಗಳೂ ಹೆಚ್ಚಿವೆ. ಭೂಮಿ ಸುಲಭವಾಗಿ ದೊರೆಯುವಂತೆ ಮಾಡುವ ನಿಟ್ಟಿನಲ್ಲಿ ಸರ್ಕಾರ ಸಕ್ರಿಯವಾಗಿ ಕಾರ್ಯಪ್ರವೃತ್ತವಾಗಬೇಕಾಗಿದೆ. ಕೈಗಾರಿಕೆ ಸ್ಥಾಪನೆ ಉದ್ದೇಶದ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಸಾಕಷ್ಟು ತೊಡಕುಗಳಿವೆ. ಉದ್ದಿಮೆ ಸಂಸ್ಥೆಗಳು ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಭೂಮಿ ಖರೀದಿಸಲು ಮುಂದಾಗುವುದರಲ್ಲಿಯೇ ಸಮಸ್ಯೆಯ ಬೇರುಗಳಿವೆ. ಕೃಷಿ ಯೋಗ್ಯ ಭೂಮಿ ಹೊರತುಪಡಿಸಿ, ಭೂಮಾಲೀಕನಿಗೆ ನ್ಯಾಯಯುತ ಪರಿಹಾರ, ಪುನರ್ವಸತಿ ಮತ್ತಿತರ ಸಂಗತಿಗಳ ಬಗ್ಗೆ ಗಮನ ಹರಿಸಿದರೆ ಈ ಅಡಚಣೆ ನಿವಾರಿಸಿಕೊಳ್ಳಬಹುದು. ರಾಜ್ಯ ಸರ್ಕಾರ ಕೈಗಾರೀಕರಣ ಉದ್ದೇಶಕ್ಕೆ ಬಾಹ್ಯ ಹೂಡಿಕೆದಾರರನ್ನಷ್ಟೇ ನೆಚ್ಚಿಕೊಳ್ಳದೇ ಸ್ಥಳೀಯ ಉದ್ಯಮಿಗಳಿಗೂ ಸೂಕ್ತ ಉತ್ತೇಜನ ನೀಡಲು, ಅಗತ್ಯ ಮೂಲ ಸೌಕರ್ಯ ಒದಗಿಸಲು, ಯೋಜನೆಗಳ ಜಾರಿ ಬಗ್ಗೆ ಪ್ರತ್ಯೇಕ ನಿಗಾ ವ್ಯವಸ್ಥೆ ರೂಪಿಸಿ, ಅಧಿಕಾರಶಾಹಿಯು ಶ್ರದ್ಧೆಯಿಂದ ಕಾರ್ಯನಿರ್ವಹಿಸುವಂತೆ ಮಾಡುವ ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸಿದರೆ ಮಾತ್ರ ಯೋಜನೆಗಳು ಸಕಾಲದಲ್ಲಿ ಜಾರಿಗೆ ಬಂದಾವು. ಆಯ್ದ ಜ್ಲ್ಲಿಲಾ ಕೇಂದ್ರಿತ ಹೂಡಿಕೆ ಪ್ರಸ್ತಾವಗಳ ಬದಲಿಗೆ ಪ್ರಾದೇಶಿಕ ಸಮತೋಲನದ ದೃಷ್ಟಿಯಿಂದ ರಾಜ್ಯದ ಎಲ್ಲ ಭಾಗಗಳಿಗೆ ಉದ್ದಿಮೆಗಳು ಸಮಾನವಾಗಿ ಹಂಚಿಕೆಯಾಗುವ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.