ಸರ್ಕಾರ ತನ್ನ ಕರ್ತವ್ಯ ನಿರ್ವಹಿಸಲಿ ಉತ್ತರ ಕರ್ನಾಟಕದ ಹದಿನಾಲ್ಕು ಜಿಲ್ಲೆಗಳ ಲಕ್ಷಾಂತರ ಕುಟುಂಬಗಳನ್ನು ಬೀದಿಪಾಲು ಮಾಡಿದ್ದ ನೆರೆ ಬಂದು ಹೋಗಿ ಮುಂದಿನ ಮೂರು ತಿಂಗಳಿಗೆ ಮೂರು ವರ್ಷಗಳಾಗುತ್ತದೆ. ಆ ದಿನಗಳಲ್ಲಿ ನೆರೆಪೀಡಿತ ಜನರ ಕಷ್ಟಕಂಡು ಮರುಗಿದ ರಾಜ್ಯದ ಜನತೆಯಿಂದ ಸಂತ್ರಸ್ತರ ಪುನರ್ವಸತಿಗಾಗಿ ಉದಾರವಾಗಿ ದೇಣಿಗೆ ಹರಿದುಬಂದಿತ್ತು. ಹಲವಾರು ಉದ್ಯಮಿಗಳು ಮತ್ತು ಖಾಸಗಿ ವ್ಯಕ್ತಿಗಳು ನೆರೆಹಾವಳಿಗೀಡಾಗಿದ್ದ ಗ್ರಾಮಗಳ ದತ್ತು ಪಡೆದು ಪರಿಹಾರ ಕಾರ್ಯದಲ್ಲಿ ರಾಜ್ಯ ಸರ್ಕಾರದ ಜತೆ ಕೈಜೋಡಿಸಿದ್ದರು. ಆದರೆ ಇಷ್ಟಾದರೂ ಅಲ್ಲಿನ ಎಲ್ಲ ಸಂತ್ರಸ್ತ ಕುಟುಂಬಗಳಿಗೆ ಕನಿಷ್ಠ ಮೂರು ಚದರ ಅಡಿಯ ಮನೆಗಳನ್ನು ಕಟ್ಟಿಕೊಡಲು ಸರ್ಕಾರಕ್ಕೆ ಇನ್ನೂ ಸಾಧ್ಯವಾಗಿಲ್ಲ ಎಂದರೆ ಇದಕ್ಕಿಂತ ನಾಚಿಕೆಗೇಡಿನ ಸಂಗತಿ ಬೇರೊಂದಿರಲಾರದು. ಭಿನ್ನಮತೀಯ ಚಟುವಟಿಕೆಯಿಂದ ಬಿಡುವು ಮಾಡಿಕೊಂಡು ಮಾಧ್ಯಮದವರ ಜತೆ ಗುರುವಾರ ಮಾತನಾಡಿದ ವಸತಿ ಸಚಿವ ವಿ.ಸೋಮಣ್ಣ ಅವರು `ಮನೆ ನಿರ್ಮಿಸಿಕೊಡಲು ಒಪ್ಪಿಕೊಂಡಿದ್ದ ಖಾಸಗಿ ಸಂಸ್ಥೆ ಮತ್ತು ವ್ಯಕ್ತಿಗಳು ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಿದ್ದಾರೆ. ಈ ಬಗ್ಗೆ ಪರಿಶೀಲನೆ ನಡೆಸಲಾಗುವುದು~ ಎಂದು ಹೇಳಿದ್ದಾರೆ. ಎಷ್ಟು ಮನೆಗಳನ್ನು ಪೂರ್ಣಗೊಳಿಸಲಾಗಿದೆ, ಎಷ್ಟು ಬಾಕಿ ಇವೆ? ಎಂಬ ಮಾಹಿತಿ ಅವರ ಬಳಿಯಲ್ಲಿ ಇಲ್ಲದಿರುವುದು ಸರ್ಕಾರದ ನಿರ್ಲಕ್ಷ್ಯದ ಧೋರಣೆಗೆ ಸಾಕ್ಷಿ. ಎರಡು ಲಕ್ಷ ಮನೆಗಳನ್ನು ನಿರ್ಮಿಸುವುದಾಗಿ ಮೊದಲು ಘೋಷಿಸಿದ್ದ ರಾಜ್ಯ ಸರ್ಕಾರ ನಂತರ ಅದನ್ನು 60,000ಕ್ಕೆ ಇಳಿಸಿತ್ತು. ಇಷ್ಟು ಮನೆಗಳನ್ನು ಕೂಡಾ ನಿರ್ಮಾಣ ಮಾಡಲು ಸಾಧ್ಯವಾಗದೆ ಇರುವುದಕ್ಕೆ ರಾಜ್ಯಸರ್ಕಾರದ ನಿಷ್ಕ್ರಿಯತೆ ಕಾರಣ. ಸರ್ಕಾರದ ವೈಫಲ್ಯವನ್ನು ಖಾಸಗಿಯವರ ಹೆಗಲಿಗೆ ಜಾರಿಸುವ ಪ್ರಯತ್ನವನ್ನು ವಸತಿ ಸಚಿವರು ಮಾಡಿದ್ದಾರೆ. ಸಂಕಷ್ಟಕ್ಕೆ ಸಿಲುಕಿದ ಜನರ ರಕ್ಷಣೆ ಮತ್ತು ಪುನರ್ವಸತಿ ಸರ್ಕಾರದ ಕರ್ತವ್ಯ. ಈ ಕೆಲಸ ನಡೆಸಲಿಕ್ಕಾಗಿಯೇ ಜನ ತೆರಿಗೆ ನೀಡುತ್ತಿರುವುದು. ವಿಶೇಷ ಸಂದರ್ಭಗಳಲ್ಲಿ ಸರ್ಕಾರದ ನೆರವಿಗೆ ಜನ ಬಂದರೆ ಅದು ಅವರ ಔದಾರ್ಯವೇ ಹೊರತು ಕರ್ತವ್ಯ ಅಲ್ಲ. ಉದಾರಿ ಮನಸ್ಸುಗಳಿಗೆ ರಾಜ್ಯದಲ್ಲಿ ಕೊರತೆ ಇಲ್ಲ. ಅವರ ವಿಶ್ವಾಸವನ್ನು ಉಳಿಸಿಕೊಳ್ಳುವ ಯೋಗ್ಯತೆ ಸರ್ಕಾರ ಇದೆಯೇ ಎನ್ನುವುದು ಪ್ರಶ್ನೆ. `ಆಸರೆ~ ಮನೆಗಳನ್ನು ನಿರ್ಮಿಸುವ ಜವಾಬ್ದಾರಿಯನ್ನು ಖಾಸಗಿಯವರು ವಹಿಸಿಕೊಂಡಿದ್ದರೂ ಅದರ ಅನುಷ್ಠಾನದ ಹೊಣೆ ಸರ್ಕಾರದ್ದಾಗಿತ್ತು ಎನ್ನುವುದನ್ನು ಮರೆಯಬಾರದು. ಇದಕ್ಕಾಗಿಯೇ ಕಾಮಗಾರಿಯ ಉಸ್ತುವಾರಿಗಾಗಿ ಸರ್ಕಾರ ತನ್ನ ಅಧಿಕಾರಿಗಳನ್ನು ನೇಮಿಸಿತ್ತು. ಆದರೆ ಬಹಳಷ್ಟು ಕಡೆಗಳಲ್ಲಿ ಈ ಅಧಿಕಾರಿಗಳೇ ಗುತ್ತಿಗೆದಾರರ ಜತೆ ಶಾಮೀಲಾಗಿರುವ ಆರೋಪಗಳಿವೆ. ಇದರಿಂದ ಮನೆ ನಿರ್ಮಾಣ ಕಾರ್ಯ ವಿಳಂಬವಾಗಿರುವುದು ಮಾತ್ರವಲ್ಲ ಕಾಮಗಾರಿಯೂ ಕಳಪೆಯಾಗಿದೆ. ಇದಕ್ಕೆ ಮುಖ್ಯ ಕಾರಣ ಆಡಳಿತದ ಮೇಲೆ ನಿಯಂತ್ರಣ ಕಳೆದುಕೊಂಡಿರುವ ಸರ್ಕಾರ. ಭ್ರಷ್ಟಾಚಾರ ಮತ್ತು ಭಿನ್ನಮತದಲ್ಲಿ ಮುಳುಗಿರುವ ಸರ್ಕಾರಕ್ಕೆ ಆಡಳಿತ ನಡೆಸಲು ಸಮಯವಾದರೂ ಎಲ್ಲಿದೆ? ಸರ್ಕಾರದ ಈ ನಿಷ್ಕ್ರಿಯತೆಯಿಂದ ಬೇಸತ್ತು ಖಾಸಗಿಯವರು ಹಿಂದೆ ಸರಿದಿರಬಹುದು. ಸರ್ಕಾರ ತನ್ನ ವೈಫಲ್ಯಕ್ಕೆ ಈ ಸಬೂಬನ್ನು ನೀಡಬಾರದು. ಮೊದಲು ತನ್ನ ಕರ್ತವ್ಯ ನಿರ್ವಹಿಸಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.