ಬಾಲಮಂದಿರ-ದೌರ್ಜನ್ಯಗಳ ಬೀಡು! ಬೇಲಿಯೇ ಎದ್ದು ಹೊಲ ಮೇಯ್ದಂತಹ ವಿಪರ್ಯಾಸ ಇದು. ಮಕ್ಕಳ ಹಕ್ಕುಗಳ ರಕ್ಷಕರೇ ಮಕ್ಕಳ ಮೇಲೆ ದೌರ್ಜನ್ಯ ನಡೆಸುವಂತಹ ವೈಪರೀತ್ಯ. ಈ ವೈಪರೀತ್ಯದ ಫಲವಾಗಿ ರಾಜ್ಯದ 34 ಬಾಲಮಂದಿರಗಳಿಂದ ಕಳೆದ ಆರು ವರ್ಷಗಳ್ಲ್ಲಲಿ 1089 ಮಕ್ಕಳು ಪರಾರಿಯಾಗಿದ್ದಾರೆ ಎಂಬುದು ಆಘಾತಕಾರಿ ಸಂಗತಿ. ಬಾಲ ಮಂದಿರಗಳಲ್ಲಿ ಮಕ್ಕಳು ಅನುಭವಿಸುತ್ತಿರುವ ವಿವಿಧ ಬಗೆಯ ಕಿರುಕುಳಗಳೇ ಇದಕ್ಕೆ ಮುಖ್ಯ ಕಾರಣ ಎಂಬ ಅಂಶವಂತೂ ಬಾಲಮಂದಿರಗಳ ಸ್ಥಾಪನೆಯ ಉದ್ದೇಶಗಳಿಗೇ ಮಸಿ ಬಳಿಯುವಂತಹದ್ದು. ಈ ಸಂಬಂಧದಲ್ಲಿ ರಾಜ್ಯ ಹೈಕೋರ್ಟ್‌ಗೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣೆಯ ಆಯೋಗ ಸಲ್ಲಿಸಿರುವ ವರದಿ, ಈ ನತದೃಷ್ಟ ಮಕ್ಕಳ ಪಡಿಪಾಟಲನ್ನು ಚಿತ್ರಿಸಿದೆ. ಮನೆಗೆಲಸ ಮಾಡಿಸುವುದು, ಕಾನೂನು ನೆರವು ಸರಿಯಾಗಿ ಒದಗಿಸದಿರುವುದು, ರಾತ್ರಿ ಹೊತ್ತು ಶೌಚಾಲಯಕ್ಕೆ ಹೋಗುವುದಕ್ಕೂ ಅನುಮತಿ ನೀಡದಿರುವುದು - ಹೀಗೆ ವಿವಿಧ ರೀತಿಗಳಲ್ಲಿ ಈ ಮಕ್ಕಳು ಅನುಭವಿಸುತ್ತಿರುವ ಮಾನಸಿಕ - ದೈಹಿಕ ಹಿಂಸೆಗಳ ಸ್ವರೂಪಗಳನ್ನು ಈ ವರದಿಯಲ್ಲಿ ಪಟ್ಟಿಮಾಡಲಾಗಿದೆ. ಬಾಲಮಂದಿರಗಳಲ್ಲಿರುವ ಕೆಲವು ಮಕ್ಕಳು ಆತ್ಮಹತ್ಯೆ ಪ್ರಯತ್ನಗಳನ್ನು ನಡೆಸಿದ್ದೂ ಈ ವರ್ಷದ ಆರಂಭದಲ್ಲಿ ವರದಿಯಾಗಿತ್ತು. ಇಷ್ಟೊಂದು ಹದಗೆಟ್ಟಿರುವ ಬಾಲಮಂದಿರಗಳಲ್ಲಿನ ಸ್ಥಿತಿಗತಿಗಳನ್ನು ಗಂಭೀರ ಪರಾಮರ್ಶೆಗೊಳಪಡಿಸಬೇಕಾದದ್ದು ತುರ್ತಿನ ಸಂಗತಿ. ಕಾನೂನಿನ ಎದುರು ಸಂಘರ್ಷಕ್ಕೊಳಗಾದ ಮಕ್ಕಳ ಪುನರ್ವಸತಿಯ ಉದಾತ್ತ ಉದ್ದೇಶ ಈ ಬಾಲಮಂದಿರಗಳ್ದ್ದದಾಗಿದೆ. ಆದರೆ ಬಾಲಮಂದಿರಗಳಲ್ಲಿ ಸಿಬ್ಬಂದಿ ಕೊರತೆ ಇದೆ ಎಂದೂ ಕೋರ್ಟ್‌ಗೆ ಸಲ್ಲಿಸಲಾದ ವರದಿಯಲ್ಲಿ ಹೇಳಲಾಗಿದೆ. ಆದರೆ ಈ ಕೊರತೆ, ಮಕ್ಕಳ ಮೇಲಿನ ದೌರ್ಜನ್ಯಗಳಿಗೆ ನೆಪವಾಗಬಾರದು. ಇರುವ ಸಿಬ್ಬಂದಿಗೂ, ಈ ಮಕ್ಕಳನ್ನು ನಿರ್ವಹಿಸುವಂತಹ ಯಾವುದೇ ತರಬೇತಿ ಇಲ್ಲ ಎಂಬುದು ಈ ಸಮಸ್ಯೆಯನ್ನು ಮತ್ತಷ್ಟು ತೀವ್ರವಾಗಿಸಿದೆ. ಮಕ್ಕಳು ಹಾಗೂ ಸಿಬ್ಬಂದಿ ಅನುಪಾತ ಯಾವ ಪ್ರಮಾಣದಲ್ಲಿ ಇರಬೇಕು ಎಂಬುದನ್ನು ನಿರ್ದಿಷ್ಟವಾಗಿ ಬಾಲ ನ್ಯಾಯ ಕಾಯಿದೆ ಹೇಳುವುದಿಲ್ಲ. ಆದರೆ ಕಾನೂನಿನ ಎದುರು ಸಂಘರ್ಷಕ್ಕೆ ಸಿಲುಕಿದ ಮಕ್ಕಳನ್ನು ಮತ್ತೆ ಸಮಾಜದ ಮುಖ್ಯವಾಹಿನಿಗೆ ತರಲು ಈ ಬಾಲಮಂದಿರಗಳಲ್ಲಿನ ಹೊಣೆಗಾರಿಕೆ ಹೆಚ್ಚಿನದು ಎಂಬುದನ್ನು ಮರೆಯುವಂತಿಲ್ಲ. ಮೊದಲೇ ಸಂಕಷ್ಟ, ಗೊಂದಲಗಳಲ್ಲಿ ಸಿಲುಕಿರುವ ಮಕ್ಕಳಿಗೆ ಈ ಬಾಲಮಂದಿರಗಳು ಮತ್ತೊಂದು ಬಂದೀಖಾನೆಗಳಾಗಬಾರದು ಎಂಬ ಕಾಳಜಿ ಇಲ್ಲಿ ಮುಖ್ಯವಾಗುತ್ತದೆ. ಜೈಲಿನಂತಹ ವಾತಾವರಣ ಮಕ್ಕಳ ಮನಸ್ಸುಗಳನ್ನು ಮುದುಡಿಸಬಲ್ಲುದು; ಜೊತೆಗೆ ಅಪರಾಧ ಪ್ರವೃತ್ತಿಗಳ ಚಿಗುರುವಿಕೆಗೂ ಪ್ರೇರಕವಾಗಬಹುದು ಎಂಬುದನ್ನು ನೆನಪಿಡಬೇಕು. ಮಕ್ಕಳಿಗೆ ನಿಜಕ್ಕೂ ಬೇಕಿರುವುದು ಅವರನ್ನು ಪ್ರೀತಿ, ಗೌರವ ಹಾಗೂ ಘನತೆಯಿಂದ ಕಾಣುವಂತಹ ವಾತಾವರಣ. ಈ ನಿಟ್ಟಿನಲ್ಲಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕಿದೆ. ಮಕ್ಕಳ ಹಿತ ಕಾಪಾಡುವ ಉದ್ದೇಶದಿಂದ ಸಮಿತಿಯೊಂದನ್ನು ಈಗಾಗಲೇ ರಚಿಸಿರುವುದಾಗಿ ಸರ್ಕಾರವೇನೊ ಹೇಳಿಕೊಂಡಿದೆ. ಆದರೆ ಎಷ್ಟರ ಮಟ್ಟಿಗೆ ಈ ಸಮಿತಿ ಕಾರ್ಯ ನಿರ್ವಹಿಸುತ್ತಿದೆ ಎಂಬುದರ ಮೌಲ್ಯಮಾಪನವಾಗಬೇಕು. ಸಮಾಜದ ಮುಖ್ಯವಾಹಿನಿಗೆ ಇಂತಹ ಮಕ್ಕಳನ್ನು ಮತ್ತೆ ತರಲು ಆ ಮಕ್ಕಳಿಗೆ ಸೂಕ್ತ ಕಾನೂನಿನ ನೆರವು ಸಿಗುವಂತಹ ವ್ಯವಸ್ಥೆಯನ್ನು ರೂಪಿಸಬೇಕಾದುದೂ ಅಗತ್ಯ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.