ಬಾಂಧವ್ಯಗಳ ಹೊಸ ಶಕೆ ಸಚಿವರು ಹಾಗೂ ವಾಣಿಜ್ಯ ಪ್ರತಿನಿಧಿಗಳ ಅತಿ ದೊಡ್ಡ ನಿಯೋಗದೊಂದಿಗೆ ಬ್ರಿಟನ್ ಪ್ರಧಾನಿ ಡೇವಿಡ್ ಕ್ಯಾಮೆರಾನ್, ಭಾರತಲ್ಲಿ ಪ್ರವಾಸ ಕೈಗೊಂಡಿದ್ದಾರೆ. ರಕ್ಷಣೆ, ಶಿಕ್ಷಣ, ಮೂಲಸೌಕರ್ಯ ಸೇರಿದಂತೆ ಹಲವಾರು ಕ್ಷೇತ್ರಗಳಿಗೆ ಸಂಬಂಧಿಸಿದ ಯೋಜನೆಗಳ ಸಮಾಲೋಚನೆಗಳನ್ನು ಉಭಯ ದೇಶಗಳು ನಡೆಸುತ್ತಿವೆ. ಫ್ರಾನ್ಸ್ ಅಧ್ಯಕ್ಷ ಫ್ರಾಂಕೊಯಿಸ್ ಹಾಲನ್ ಅವರ ಎರಡು ದಿನಗಳ ಭಾರತ ಪ್ರವಾಸ ಮುಕ್ತಾಯವಾಗುತ್ತಿದ್ದಂತೆಯೇ ಬ್ರಿಟಿಷ್ ನಿಯೋಗ ಭಾರತದ ನೆಲದಲ್ಲಿ ಕಾಲಿರಿಸಿರುವುದು ವಿಶೇಷ. ಕಳೆದ ವರ್ಷ ಮೇ ತಿಂಗಳಲ್ಲಿ ಫ್ರಾನ್ಸ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದ ಹಾಲನ್ ಅವರು, ಏಷ್ಯಾದಲ್ಲಿ ಮೊದಲು ಭೇಟಿ ನೀಡಲು ಆಯ್ಕೆ ಮಾಡಿಕೊಂಡ ದೇಶ ಭಾರತ. ಬೆಳೆಯುತ್ತಿರುವ ಭಾರತದ ರಾಜಕೀಯ ಹಾಗೂ ಆರ್ಥಿಕ ಪ್ರಾಶಸ್ತ್ಯಕ್ಕೆ ಸಿಕ್ಕಿದಂತಹ ಮನ್ನಣೆ ಇದು. ದ್ವಿಪಕ್ಷೀಯ ಬಾಂಧವ್ಯಗಳನ್ನು ಹೊಸ ಎತ್ತರಗಳಿಗೆ ಒಯ್ಯುವ ಆಶಯ ಈ ಭೇಟಿಯಲ್ಲಿತ್ತು. ಅಗಸ್ಟಾವೆಸ್ಟ್‌ಲ್ಯಾಂಡ್ ಹೆಲಿಕಾಪ್ಟರ್ ಖರೀದಿಯ ಹಗರಣ ರಾಷ್ಟ್ರವನ್ನು ಆವರಿಸಿರುವ ಸಂದರ್ಭ ಇದು. ಹೀಗಾಗಿಯೇ, ಫ್ರಾನ್ಸ್‌ನ 126 ರಾಫೆಲ್ ಯುದ್ಧ ವಿಮಾನಗಳ ಖರೀದಿ ಒಪ್ಪಂದಕ್ಕಾಗಿ ನಡೆಯುತ್ತಿರುವ ಸಮಾಲೋಚನೆಗಳಲ್ಲಿ, ಭ್ರಷ್ಟಾಚಾರದ ಸೋಂಕು ತಗುಲದಂತೆ ಎಚ್ಚರಿಕೆ ವಹಿಸುವ ಬಗೆಗೆ ಉಭಯ ದೇಶಗಳೂ ಬದ್ಧವಾಗಿವೆ ಎಂಬುದನ್ನು ಘೋಷಿಸಲು ಹಾಲನ್ ಹಿಂಜರಿಯಲಿಲ್ಲ. 12 ಶತಕೋಟಿ ಡಾಲರ್‌ಗಳಷ್ಟು ಮೊತ್ತದ ಈ ವಹಿವಾಟಿಗೆ ಸಹಿ ಬಿದ್ದಲ್ಲಿ ಇದು ವಿಶ್ವದಲ್ಲೇ ಅತಿ ದೊಡ್ಡ ರಕ್ಷಣಾ ಖರೀದಿ ಒಪ್ಪಂದವಾಗಲಿದೆ. ಮಹಾರಾಷ್ಟ್ರದ ಜೈತಾಪುರದಲ್ಲಿ ಆರು ಅಣು ರಿಯಾಕ್ಟರ್‌ಗಳ ನಿರ್ಮಾಣಕ್ಕೂ ಫ್ರಾನ್ಸ್ ಮುಂದೆ ಬಂದಿದೆ. ಭಾರತದ ಅಣು ಬಾಧ್ಯಸ್ತ ಕಾನೂನಿಗೆ ಸಂಬಂಧಿಸಿದಂತೆ ಪ್ಯಾರಿಸ್ ಎತ್ತಿದ್ದ ಕೆಲವು ಕಾಳಜಿಗಳಿಂದಾಗಿ ಈ ಯೋಜನೆ ವಿಳಂಬವಾಗಿದೆ. ಜೊತೆಗೆ ಇಂತಹದ್ದೇ ಅಣು ವಿದ್ಯುತ್ ಘಟಕಗಳು ಫ್ರಾನ್ಸ್‌ನಲ್ಲೂ ಸ್ಥಾಪನೆಯಾಗಲಿವೆ ಎನ್ನುವ ಮೂಲಕ ಸುರಕ್ಷತೆ ಕುರಿತ ಆತಂಕಗಳನ್ನು ನಿವಾರಿಸಲು ಹಾಲನ್ ಯತ್ನಿಸಿದ್ದಾರೆ. ಆರ್ಥಿಕವಾಗಿ ಪ್ರವರ್ಧಮಾನಕ್ಕೆ ಬರುತ್ತಿರುವ ರಾಷ್ಟ್ರವಾಗಿರುವ ಭಾರತ 2050ರೊಳಗೆ ವಿಶ್ವದಲ್ಲಿ ಮೂರನೇ ಅತಿ ದೊಡ್ಡ ಆರ್ಥಿಕತೆಯಾಗಿರುತ್ತದೆ ಎಂಬುದು ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ದೊಡ್ಡ ಆಕರ್ಷಣೆಯಾಗಿದೆ. ಹೀಗಾಗಿಯೇ ಮುಂಬೈ - ಬೆಂಗಳೂರು ಕಾರಿಡಾರ್‌ಗಳಂತಹ ಯೋಜನೆಗೆ ಬ್ರಿಟನ್ ಆಸಕ್ತಿ ತೋರಿದೆ. ಈ ಯೋಜನೆಯಡಿ ಒಂಬತ್ತು ಜಿಲ್ಲೆಗಳ ಅಭಿವೃದ್ಧಿಗೆ ಬ್ರಿಟನ್ ಸಂಸ್ಥೆಗಳು ಕೈಜೋಡಿಸಲಿವೆ. ಭಾರತ ಹಾಗೂ ಬ್ರಿಟನ್ ಮಧ್ಯದ ಬಾಂಧವ್ಯ `21ನೇ ಶತಮಾನದ ಬಹುದೊಡ್ಡ ಸಹಭಾಗಿತ್ವ' ಎಂದು ಕ್ಯಾಮೆರಾನ್, ಭಾರತದ ನೆಲದಲ್ಲಿ ಕಾಲಿರಿಸುವ ಮುಂಚೆಯೇ ಬಣ್ಣಿಸಿದ್ದರು. 2010ರಲ್ಲಿ ಭಾರತದ ಜೊತೆ ಬ್ರಿಟನ್‌ನ ವ್ಯಾಪಾರ 11.5 ಶತಕೋಟಿ ಪೌಂಡ್‌ಗಳಷ್ಟಿತ್ತು. ಅದನ್ನು 2015ರೊಳಗೆ 23 ಶತಕೋಟಿಗೆ ದ್ವಿಗುಣಗೊಳಿಸುವ ವಿಶ್ವಾಸ ಹೊಂದಲಾಗಿದೆ. ಆದರೆ ಭಾರತ - ಬ್ರಿಟನ್ ಬಾಂಧವ್ಯ ವೃದ್ಧಿಗೆ ಅಡೆತಡೆಗಳ ನಿವಾರಣೆ ಅಗತ್ಯವಾದದ್ದು. ಇದರಲ್ಲಿ ಮುಖ್ಯವಾದದ್ದು ವೀಸಾ ನಿರ್ಬಂಧಗಳು. ಇದರಿಂದಾಗಿಯೇ ಬ್ರಿಟನ್‌ಗೆ ಹೋಗುವ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆಯಲ್ಲೂ ಇಳಿಮುಖವಾಗಿದೆ. ಸಮಾನ ನೆಲೆಗಳಲ್ಲಿ ಸೂಕ್ತ ನೀತಿಗಳ ಅಳವಡಿಕೆ, ಪರಸ್ಪರ ಅವಕಾಶಗಳ ಹೆಬ್ಬಾಗಿಲುಗಳನ್ನು ತೆರೆಯುವುದಕ್ಕೆ ಸಹಕಾರಿ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.