ಹೊಣೆಯರಿತು ಮಾತನಾಡಿ ಯುನೆಸ್ಕೊ ಪಶ್ಚಿಮ ಘಟ್ಟವನ್ನು ವಿಶ್ವಪರಂಪರೆಯ ಪಟ್ಟಿಗೆ ಸೇರಿಸಿರುವುದನ್ನು ವಿರೋಧಿಸುತ್ತಿರುವವರ ವಕ್ತಾರರಂತೆ ಮಾತನಾಡಿರುವ ವಿಧಾನಸಭಾ ಅಧ್ಯಕ್ಷ ಕೆ.ಜಿ.ಬೋಪಯ್ಯ `ಕೊಡಗು ಜಿಲ್ಲೆಯನ್ನು ಪ್ರತ್ಯೇಕ ರಾಜ್ಯ ಮಾಡಿ~ ಎಂದು ಹೇಳಿರುವುದು ಶುದ್ಧ ಬೇಜವಾಬ್ದಾರಿ ನಡವಳಿಕೆ. ಇಂತಹ ಮಾತುಗಳನ್ನಾಡುವಾಗ ಅವರು ತಾವು ಹೊಂದಿರುವ ಸಾಂವಿಧಾನಿಕ ಸ್ಥಾನಮಾನದ ಬಗ್ಗೆಯಾದರೂ ಯೋಚಿಸಬೇಕಿತ್ತು. ಪ್ರಾಂತೀಯ ಭಾವನೆಯನ್ನು ಹರಡುವಂತಹ ಇಂತಹ ಉದ್ರೇಕಕಾರಿ ಹೇಳಿಕೆ ವಿಧಾನಸಭಾ ಅಧ್ಯಕ್ಷರ ಸ್ಥಾನದಲ್ಲಿ ಕೂತವರಿಗೆ ಶೋಭೆ ತರುವಂತಹದ್ದಲ್ಲ. ಕೆಲವು ಚಾರಿತ್ರಿಕ ಕಾರಣಗಳಿಗಾಗಿ ರಾಜ್ಯದ ಕೆಲವು ಭಾಗಗಳು ಅವಕಾಶಗಳಿಂದ ವಂಚಿತಗೊಂಡು ಹಿಂದುಳಿದಿರುವುದನ್ನು ನಿರಾಕರಿಸಲಾಗುವುದಿಲ್ಲ. ಆದರೆ ಇದಕ್ಕೆ ಪ್ರತ್ಯೇಕ ರಾಜ್ಯ ರಚನೆಯೇ ಪರಿಹಾರ ಅಲ್ಲ. ಬಹಳಷ್ಟು ಸಲ ಕೆಲವು ನಿರುದ್ಯೋಗಿ ರಾಜಕಾರಣಿಗಳು ಅಲ್ಲಲ್ಲಿ ಪ್ರತ್ಯೇಕ ರಾಜ್ಯದ ಕೂಗು ಹಾಕಿ ಸುದ್ದಿಯ ಬೆಳಕಲ್ಲಿ ಮಿಂಚುವ ಹತಾಶ ಪ್ರಯತ್ನ ಮಾಡುವುದುಂಟು. ಇನ್ನು ಕೆಲವರು ತಮ್ಮ ಸ್ವಾರ್ಥ ಸಾಧನೆಗಾಗಿ ಇಂತಹ ಭಾವನಾತ್ಮಕ ವಿಷಯಗಳನ್ನು ಬಡಿದೆಬ್ಬಿಸುವುದೂ ಉಂಟು. ಬೋಪಯ್ಯನವರ ಹೇಳಿಕೆ ಇದೇ ಸಾಲಿಗೆ ಸೇರಿದ್ದಾಗಿದೆ. ಬೋಪಯ್ಯ ಅವರು ತಮ್ಮ ಸ್ಥಾನದ ಗೌರವಕ್ಕೆ ಚ್ಯುತಿ ಉಂಟಾಗುವಂತೆ ನಡೆದುಕೊಳ್ಳುತ್ತಿರುವುದು ಇದು ಮೊದಲ ಸಲವಲ್ಲ. ಸದನದಲ್ಲಿ ವಿಶ್ವಾಸಮತ ಯಾಚನೆ ಸಂದರ್ಭದಲ್ಲಿ ಐವರು ಪಕ್ಷೇತರರನ್ನು ಅನರ್ಹಗೊಳಿಸಿದ್ದ ಅವರ ತೀರ್ಮಾನಕ್ಕಾಗಿ ಸುಪ್ರೀಂಕೋರ್ಟ್ ಕೂಡಾ ಛೀಮಾರಿ ಹಾಕಿತ್ತು. ವಿಧಾನಸಭಾ ಅಧ್ಯಕ್ಷರಾಗಿ ಸಂವಿಧಾನಕ್ಕೆ ನಿಷ್ಠೆಯಿಂದ ಕಾರ್ಯನಿರ್ವಹಿಸಬೇಕಾಗಿರುವ ಬೋಪಯ್ಯನವರಿಗೆ ಪಕ್ಷ ರಾಜಕೀಯವನ್ನು ಮೀರಲು ಆಗಲೇ ಇಲ್ಲ ಎನ್ನುವುದು ಕಳೆದ ಎರಡೂವರೆ ವರ್ಷಗಳ ಅವರ ನಡವಳಿಕೆಯೇ ಸಾಕ್ಷಿ. `ಯುನೆಸ್ಕೊ ಘೋಷಣೆ ಬಗ್ಗೆ ರಾಜ್ಯಸರ್ಕಾರಕ್ಕೆ ಅಧಿಕೃತವಾದ ಪತ್ರ ಬಂದಿಲ್ಲ~ ಎಂದು ಹೇಳಿರುವುದು ಅವರ ತಿಳುವಳಿಕೆಯ ಕೊರತೆಯನ್ನು ಹೇಳುತ್ತದೆ. ಕೇಂದ್ರದಲ್ಲಿ ಎನ್‌ಡಿಎ ಅಧಿಕಾರದಲ್ಲಿದ್ದಾಗ ಅವರದ್ದೇ ಪಕ್ಷದ ಪ್ರಧಾನಿಗಳು ಈ ಪ್ರಸ್ತಾವವನ್ನು ಯುನೆಸ್ಕೊಗೆ ಕಳುಹಿಸಿಕೊಟ್ಟಿದ್ದರು ಎನ್ನುವುದನ್ನು ಪಕ್ಷದ ಹಿರಿಯರು ಬೋಪಯ್ಯನವರಿಗೆ ತಿಳಿಸಿಹೇಳುವುದು ಒಳಿತು. ಯುನೆಸ್ಕೊ ಘೋಷಣೆಗೆ ಪಶ್ಚಿಮ ಘಟ್ಟ ಹಾದುಹೋಗುವ ಬೇರೆ ರಾಜ್ಯಗಳಾದ ಮಹಾರಾಷ್ಟ್ರ, ಗೋವಾ,ಕೇರಳ ಮತ್ತು ಗುಜರಾತ್‌ಗಳಲ್ಲಿ ವ್ಯಕ್ತವಾಗದ ವಿರೋಧ ಕರ್ನಾಟಕದಲ್ಲಿ ಅದರಲ್ಲೂ ಕೊಡಗು ಜಿಲ್ಲೆಯಲ್ಲಿಯೇ ಯಾಕೆ ಜೋರಾಗಿ ಕೇಳಿಬರುತ್ತಿದೆ ಎನ್ನುವುದನ್ನು ಅರ್ಥಮಾಡಿಕೊಳ್ಳದಷ್ಟು ರಾಜ್ಯದ ಜನ ಮೂರ್ಖರಲ್ಲ. ಅರಣ್ಯ ಸಂಪತ್ತಿನಿಂದ ಶ್ರಿಮಂತವಾಗಿರುವ ಕೊಡಗು ಜಿಲ್ಲೆಯಲ್ಲಿ ಅರಣ್ಯ ಒತ್ತುವರಿ ಮಾಡಿಕೊಂಡಿರುವ ನೆಲಗಳ್ಳರು ಮತ್ತು ಮರಗಳ್ಳರ ಹಾವಳಿ ಮೊದಲಿನಿಂದಲೂ ಇದೆ. ಇಂತಹವರು ತಪ್ಪುಮಾಹಿತಿಗಳ ಮೂಲಕ ಅಮಾಯಕ ಜನರನ್ನು ಯುನೆಸ್ಕೊ ಘೋಷಣೆಯ ವಿರುದ್ಧ ಎತ್ತಿಕಟ್ಟುವ ಪ್ರಯತ್ನ ಮಾಡುತ್ತಿದ್ದಾರೆ.ಇಂತಹದ್ದೊಂದು ಸಂಚಿಗೆ ಗೌರವಾನ್ವಿತ ವಿಧಾನಸಭಾ ಅಧ್ಯಕ್ಷರು ಕೂಡಾ ಬೆಂಬಲ ನೀಡುತ್ತಿರುವುದು ಖಂಡನೀಯ. ಸಾರ್ವಜನಿಕ ವಿಷಯಗಳ ಬಗ್ಗೆ ಪ್ರತಿಕ್ರಿಯೆ ನೀಡುವ ಅಧಿಕಾರ ಬೋಪಯ್ಯನವರಿಗೆ ಖಂಡಿತ ಇದೆ. ಇದರ ಜತೆಯಲ್ಲಿ ತಾನು ಹೊಂದಿರುವ ಸ್ಥಾನದ ಘನತೆ-ಗೌರವವನ್ನು ಕಾಪಾಡಿಕೊಂಡುಹೋಗುವ ಜವಾಬ್ದಾರಿ ಕೂಡಾ ಇದೆ ಎನ್ನುವುದನ್ನು ಅವರು ಮರೆಯಬಾರದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.