ಅನುಕೂಲಗಳನ್ನು ಬಳಸಿಕೊಳ್ಳಿ ಕಾವೇರಿ ನ್ಯಾಯಮಂಡಳಿಯ ಅಂತಿಮ ಐತೀರ್ಪಿನಿಂದ ಕರ್ನಾಟಕಕ್ಕೆ ಸಿಕ್ಕಿರುವ ನ್ಯಾಯಕ್ಕಿಂತ ಆಗಿರುವ ಅನ್ಯಾಯವೇ ಹೆಚ್ಚು ಎನ್ನುವುದರಲ್ಲಿ ಅನುಮಾನ ಇಲ್ಲ. 1924ರ ಒಪ್ಪಂದ ರದ್ದಾದರೂ ಅದರ ಬಲದಿಂದ ತಮಿಳುನಾಡು ಅಭಿವೃದ್ಧಿಪಡಿಸಿರುವ 24.71 ಲಕ್ಷ ಅಚ್ಚುಕಟ್ಟು ಪ್ರದೇಶಕ್ಕೆ ಮಾನ್ಯತೆ ನೀಡಿ ಅದಕ್ಕಾಗಿ 419 ಟಿಎಂಸಿ ನೀರನ್ನು ಐತೀರ್ಪಿನಲ್ಲಿ ನಿಗದಿಪಡಿಸಿರುವುದು ಕರ್ನಾಟಕಕ್ಕೆ ಆಗಿರುವ ದೊಡ್ಡ ಅನ್ಯಾಯ. ತಮಿಳುನಾಡಿನ ಬಗ್ಗೆ ತೋರಿಸಿರುವ ಔದಾರ್ಯವನ್ನು ನ್ಯಾಯಮಂಡಳಿ ಕರ್ನಾಟಕಕ್ಕೆ ತೋರಿಸಿಲ್ಲ. 24 ಲಕ್ಷ ಎಕರೆ ಅಚ್ಚುಕಟ್ಟು ಅಭಿವೃದ್ಧಿಗೆ ಯೋಜನೆ ಸಿದ್ದ ಇದೆ ಎಂದು ಹೇಳಿದರೂ ಅವಕಾಶ ನೀಡಿರುವುದು 18.85 ಲಕ್ಷ ಎಕರೆಗೆ ಮಾತ್ರ. ಇದರ ಜತೆಗೆ ಬೆಂಗಳೂರು ಮಹಾನಗರವೂ ಸೇರಿದಂತೆ ಕಾವೇರಿ ನದಿ ಕಣಿವೆಯ ಕುಡಿಯುವ ನೀರಿನ ಪಾಲಿಗೆ ಸಂಬಂಧಿಸಿದಂತೆ ನ್ಯಾಯಮಂಡಳಿ ಮಾಡಿರುವ ಅನ್ಯಾಯ ಅಕ್ಷಮ್ಯ. ತಮಿಳುನಾಡಿನ ಅಂತರ್ಜಲದ ಲೆಕ್ಕವನ್ನೇ ಪರಿಗಣಿಸದೆ ಇರುವುದು ಮತ್ತು ಪರಿಸರ ರಕ್ಷಣೆ ಮತ್ತು ಸಮುದ್ರಕ್ಕೆ ಹರಿದು ಹೋಗುವ ನೀರಿನ ಲೆಕ್ಕ ಹಿಡಿದು ಒಟ್ಟು 14 ಟಿಎಂಸಿಯನ್ನು ನಿಗದಿಪಡಿಸಿರುವುದು ಕೂಡಾ ತಮಿಳುನಾಡಿಗೆ ಮಾಡಿಕೊಟ್ಟಿರುವ ಅನುಕೂಲ. ಇದರ ಜತೆಗೆ ಒಂದಷ್ಟು ನ್ಯಾಯವೂ ಕರ್ನಾಟಕಕ್ಕೆ ಸಿಕ್ಕಿದೆ. ಕಳೆದ ಇಪ್ಪತ್ತೆರಡು ವರ್ಷಗಳಿಂದ ಜೀವಹಿಂಡುತ್ತಿದ್ದ ಮಧ್ಯಂತರ ಐತೀರ್ಪಿನಿಂದ ರಾಜ್ಯಕ್ಕೆ ಮುಕ್ತಿ ಸಿಕ್ಕಿರುವುದು ದೊಡ್ಡ ಸಮಾಧಾನ. ನಮಗೆ ಮರಣಶಾಸನದಂತಿದ್ದ 1924ರ ಒಪ್ಪಂದ ಕೂಡಾ ರದ್ದಾಗಿದೆ. ಕೇವಲ 11.24 ಲಕ್ಷ ಎಕರೆಗೆ ಸೀಮಿತವಾಗಿದ್ದ ನಮ್ಮ ಅಚ್ಚುಕಟ್ಟು ಪ್ರದೇಶವನ್ನು 18.85 ಲಕ್ಷ ಎಕರೆ ವರೆಗಾದರೂ ವಿಸ್ತರಿಸಲು ಅನುಮತಿ ಸಿಕ್ಕಿದೆ. ತಮಿಳುನಾಡಿಗೆ ನಿಗದಿತ ನೀರು ಹರಿಸಿದ ಮೇಲೆ ಲಭ್ಯ ಇರುವ ಹೆಚ್ಚುವರಿ ನೀರನ್ನು ಬಳಸುವ ಅವಕಾಶವನ್ನು ಪಡೆದಿದ್ದೇವೆ. ಅಂತಿಮ ಐತೀರ್ಪಿನ ಅಧಿಸೂಚನೆ ಅನ್ಯಾಯದ ವಿರುದ್ಧ ರಾಜ್ಯ ನಡೆ ಸುತ್ತಾ ಬಂದ ಹೋರಾಟದ ಅಂತ್ಯ ಎಂದು ತಿಳಿದುಕೊಳ್ಳಬೇಕಾಗಿಲ್ಲ. `ಐತೀರ್ಪನ್ನು ಪ್ರಶ್ನಿಸುವ ರಾಜ್ಯಗಳ ಹಕ್ಕು ಮತ್ತು ಈಗ ವಿಚಾರಣೆಗೆ ಇರುವ ತಕರಾರು ಅರ್ಜಿಗಳ ಇತ್ಯರ್ಥಕ್ಕೆ ಅಧಿಸೂಚನೆ ಅಡ್ಡಿಯಾಗುವುದಿಲ್ಲ' ಎಂದು ಸುಪ್ರೀಂಕೋರ್ಟ್ ಹೇಳಿರುವುದರಿಂದ ಕಾನೂನಿನ ಹೋರಾಟಕ್ಕೆ ಅಡೆತಡೆಗಳಿಲ್ಲ. ರಾಜ್ಯ ಸರ್ಕಾರ ಇನ್ನಷ್ಟು ಬದ್ಧತೆ ಮತ್ತು ಕಾಳಜಿಯಿಂದ ಇದನ್ನು ಮುಂದುವರಿಸಿಕೊಂಡು ಹೋಗಬೇಕು. ಇದರ ಜತೆಯಲ್ಲಿ ಅಂತಿಮ ಐತೀರ್ಪಿನಿಂದಾಗಿ ಹೆಚ್ಚುವರಿ ಅಚ್ಚುಕಟ್ಟು ಅಭಿವೃದ್ದಿಗೆ ಅವಕಾಶ, ಬೇರೆ ರಾಜ್ಯಗಳ ಪಾಲು ನೀಡಿದ ನಂತರ ಉಳಿಯುವ ನೀರು ಬಳಸುವ ಸ್ವಾತಂತ್ರ್ಯ ಮೊದಲಾದ ಅನುಕೂಲಗಳನ್ನು ಬಳಸಿಕೊಂಡು ರೈತರಿಗೆ ನೆರವಾಗಲು ರಾಜ್ಯ ಸರ್ಕಾರ ಮುಂದಾಗಬೇಕು. ಐತೀರ್ಪಿನಲ್ಲಿರುವ ಅತ್ಯಂತ ವಿವಾದಾತ್ಮಕ ಅಂಶವಾದ `ಕಾವೇರಿ ಜಲ ನಿರ್ವಹಣಾ ಮಂಡಳಿ' ರಚನೆ ಬಗ್ಗೆ ರಾಜ್ಯ ಸರ್ಕಾರದಲ್ಲಿ ಮಾತ್ರವಲ್ಲ ವಿರೋಧಪಕ್ಷಗಳಲ್ಲಿಯೂ ಗೊಂದಲ ಇದೆ. ಮಂಡಳಿ ಕೇಂದ್ರ ಸರ್ಕಾರದ ನೇರ ನಿಯಂತ್ರಣಕ್ಕೊಳಪಡದ ಸ್ವಾಯತ್ತ ಸಂಸ್ಥೆಯಾಗಿರುವ ಕಾರಣ ಅದರಿಂದ ರಾಜ್ಯಕ್ಕೆ ಅನ್ಯಾಯವಾಗಲಿದೆ ಎಂಬ ಆತಂಕಕ್ಕೆ ಕಾರಣ ಇಲ್ಲ. ಆದರೆ ಮಿತ್ರ ಪಕ್ಷಗಳ ಋಣಕ್ಕೆ ಬಿದ್ದು ಮಂಡಳಿ ರಚನೆಯಲ್ಲಿ ಕೇಂದ್ರ ಸರ್ಕಾರ ಪೂರ್ವಗ್ರಹಕ್ಕೊಳಗಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ರಾಜ್ಯದ ಎಲ್ಲ ರಾಜಕೀಯ ಪಕ್ಷಗಳ ಮೇಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.