ರಾಜ್ಯ ಸರ್ಕಾರಕ್ಕೆ ಹಿನ್ನಡೆ ಬೆಳಗಾವಿ ಮಹಾನಗರ ಪಾಲಿಕೆಯನ್ನು `ಸೂಪರ್‌ಸೀಡ್~ ಮಾಡಿದ ರಾಜ್ಯ ಸರ್ಕಾರದ ಆದೇಶವನ್ನು ಹೈಕೋರ್ಟ್ ಧಾರವಾಡ ಸಂಚಾರಿ ಪೀಠ ರದ್ದುಗೊಳಿಸುವ ಮೂಲಕ ಭಾವನಾತ್ಮಕ ನೆಲೆಯಲ್ಲಿ ಕೈಗೊಳ್ಳುವ ನಿರ್ಧಾರಗಳು ನ್ಯಾಯಾಲಯದಲ್ಲಿ ಊರ್ಜಿತಗೊಳ್ಳುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ರವಾನಿಸಿದೆ. ಗಡಿ ಜಿಲ್ಲೆ ಬೆಳಗಾವಿ ಹೇಳಿಕೇಳಿ ಸೂಕ್ಷ್ಮ ಪ್ರದೇಶ. ರಾಜ್ಯದ ಹಿತಾಸಕ್ತಿಗೆ ಮಗ್ಗುಲು ಮುಳ್ಳಾಗಿರುವ ಮಹಾರಾಷ್ಟ್ರ ಏಕೀಕರಣ ಸಮಿತಿ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಪ್ರತಿ ಸಣ್ಣ ವಿಷಯವನ್ನೂ ಬಳಸಿಕೊಳ್ಳುತ್ತದೆ ಎಂಬುದು ಎಂಇಎಸ್ ರಾಜಕೀಯ ವರಸೆಗಳನ್ನು ಬಲ್ಲ ಎಲ್ಲರಿಗೂ ತಿಳಿದಿರುವ ವಿಷಯ. ಇದು ಗೊತ್ತಿದ್ದೂ ಪಾಲಿಕೆಯ ಆಡಳಿತ ಮಂಡಳಿಯನ್ನು ರದ್ದುಗೊಳಿಸಲು ಅವಸರದಲ್ಲಿ ತೀರ್ಮಾನ ಕೈಗೊಂಡಿದ್ದು ಜವಾಬ್ದಾರಿಯ ನಡೆ ಎನಿಸಿಕೊಳ್ಳುವುದಿಲ್ಲ. ಕಾರ್ಯವಿಧಾನದ ಲೋಪಗಳು ಕಣ್ಣಿಗೆ ರಾಚಿದ ಕಾರಣಕ್ಕೇ ಸರ್ಕಾರದ ಆದೇಶವನ್ನು ಕೋರ್ಟ್ ಅನೂರ್ಜಿತಗೊಳಿಸಿದೆ. ಸದಸ್ಯರ ವೈಯಕ್ತಿಕ ವಿವರಣೆ ಕೇಳದೆ ಆದೇಶ ಹೊರಡಿಸಿದ್ದು ಸರಿಯಲ್ಲ ಎಂದು ತೀರ್ಪಿನಲ್ಲಿ ಉಲ್ಲೇಖಿಸಿರುವ ಕೋರ್ಟ್, ಎಲ್ಲ ಸದಸ್ಯರ ಅಹವಾಲು ಆಲಿಸುವಂತೆ ಸೂಚಿಸಿರುವುದು ಇದೇ ಹಿನ್ನೆಲೆಯಲ್ಲಿ. ಇಂತಹ ವಿಷಯಗಳಲ್ಲಿ ಸರ್ಕಾರಕ್ಕೆ ಸಲಹೆ ನೀಡಲು ಕಾನೂನು ಇಲಾಖೆ ಇದೆ. ಅಡ್ವೊಕೇಟ್ ಜನರಲ್ ಇದ್ದಾರೆ. ಅವರ ಸಲಹೆ-ಸೂಚನೆ ಪಡೆದು ಸರಿಯಾದ ತೀರ್ಮಾನ ಕೈಗೊಂಡಿದ್ದರೆ ಹೀಗೆ ಮುಜುಗರಕ್ಕೆ ಒಳಗಾಗುವುದನ್ನು ತಪ್ಪಿಸಿಕೊಳ್ಳಬಹುದಿತ್ತು. ನವೆಂಬರ್ ಒಂದು ರಾಜ್ಯೋದಯದ ದಿನ. ರಾಜ್ಯೋತ್ಸವದ ಅಂಗವಾಗಿ ಅಂದು ಇಡೀ ರಾಜ್ಯ ಸಂಭ್ರಮಿಸುತ್ತದೆ. ಆದರೆ ತಂಟೆಕೋರ ಎಂಇಎಸ್‌ಗೆ ಆ ಸಡಗರ ಸಹಿಸಲಾಗದು. ರಾಜ್ಯೋತ್ಸವವನ್ನು ಅದು ಕರಾಳ ದಿನವನ್ನಾಗಿ ಆಚರಿಸುತ್ತದೆ. ಕಳೆದ ಸಲ ಎಂಇಎಸ್ ಸಂಘಟಿಸಿದ್ದ ಕರಾಳ ದಿನಾಚರಣೆಯಲ್ಲಿ ಪಾಲಿಕೆಯ ಮೇಯರ್ ಪಾಲ್ಗೊಂಡು ರಾಜ್ಯದ ಜನರ ಭಾವನೆಗಳಿಗೆ ನೋವು ಉಂಟುಮಾಡಿದ್ದರು. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಚಂದ್ರಶೇಖರ ಕಂಬಾರ ಅವರಿಗೆ ಅಭಿನಂದನೆ ಸಲ್ಲಿಸುವ ಪ್ರಸ್ತಾವಕ್ಕೂ ವಿರೋಧ ವ್ಯಕ್ತಪಡಿಸಿ ಸುದ್ದಿಯಾಗಿದ್ದರು. ಇದರಿಂದ ಸಿಟ್ಟಿಗೆದ್ದ ಕನ್ನಡಪರ ಸಂಘಟನೆಗಳು ಮೇಯರ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದವು. ಒತ್ತಡಕ್ಕೆ ಒಳಗಾದ ಸರ್ಕಾರ ತರಾತುರಿಯಲ್ಲಿ ನಿರ್ಧಾರ ಕೈಗೊಂಡ ಕಾರಣ ಈಗ ಪೇಚಿಗೆ ಸಿಲುಕಿದೆ. ಪಾಲಿಕೆಯ ಸಭೆಗಳನ್ನು ನಿಯಮಿತವಾಗಿ ನಡೆಸುವುದಿಲ್ಲ. ಸರ್ಕಾರದ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡಿಲ್ಲ ಎಂಬಿತ್ಯಾದಿ ಲೋಪಗಳನ್ನು ಗುರುತಿಸಿ ಸರ್ಕಾರ ಸೂಪರ್‌ಸೀಡ್‌ಗೆ ಆದೇಶಿಸಿದೆ. ಲೋಪದೋಷಗಳನ್ನು ಗುರುತಿಸಿರುವುದರಲ್ಲಿ ತಪ್ಪಾಗಿರಲಿಕ್ಕೆ ಸಾಧ್ಯ ಇಲ್ಲ. ಏಕೆಂದರೆ, ಎಂಇಎಸ್‌ಗೆ ಅಭಿವೃದ್ಧಿ ಆದ್ಯತೆಯ ವಿಷಯವೇ ಅಲ್ಲ. ಭಾಷೆಯನ್ನು ಮುಂದಿಟ್ಟುಕೊಂಡು ಭಾವನೆಗಳನ್ನು ಕೆರಳಿಸುವುದೇ ಅದರ ಕಾರ್ಯಸೂಚಿ. ಆದರೆ, ಸೂಪರ್‌ಸೀಡ್ ಮಾಡುವ ಮೊದಲು ನಿಯಮಗಳನ್ನು ಸರಿಯಾಗಿ ಪಾಲಿಸಬೇಕಾಗಿತ್ತು. ಕ್ರಿಯಾಲೋಪದಿಂದ ಸರ್ಕಾರಕ್ಕೆ ಹಿನ್ನಡೆ ಆಗಿದೆ. ಮುಂದಿನ ದಿನಗಳಲ್ಲಾದರೂ ಈ ರೀತಿ ಆಗದಂತೆ ಎಚ್ಚರಿಕೆ ವಹಿಸಬೇಕಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.