ಗ್ರಹಿಕೆಗೆ ಇಂಗ್ಲಿಷ್; ವಿಷಯ ಜ್ಞಾನಕ್ಕೆ ಕನ್ನಡ ಶಿಕ್ಷಣ ಮಾಧ್ಯಮದ ಕುರಿತ ಚರ್ಚೆಯು ಕನ್ನಡದ ವಿರುದ್ಧ ಇಂಗ್ಲಿಷ್ ಅಥವಾ ಇಂಗ್ಲಿಷ್ ವಿರುದ್ಧ ಕನ್ನಡ ಎಂಬ ತಿರುವು ಪಡೆದುಕೊಳ್ಳುತ್ತಿದೆ. ಈ ಬಗೆಯ ಚರ್ಚೆ ಶೈಕ್ಷಣಿಕವಾಗಿ ಮಕ್ಕಳಿಗೆ ಯಾವುದು ಉತ್ತಮ ಎಂಬುದನ್ನು ಹೇಳುವುದಕ್ಕಿಂತ ಹೆಚ್ಚಾಗಿ ಭಾಷೆಯನ್ನು ಕೇಂದ್ರವಾಗಿಟ್ಟುಕೊಂಡು ನಡೆಯುವ ರಾಜಕಾರಣವನ್ನು ಉದ್ದೀಪಿಸುತ್ತದೆ. ಗೆಳೆಯ ನಟರಾಜ್ ಹುಳಿಯಾರ್ ಅವರು `ಅಂತರಾಳ~ದಲ್ಲಿ (16 ಜೂನ್, 2012) ಬರೆದಿರುವ ಲೇಖನವೂ ಈ ಬಗೆಯ ಸರಳೀಕೃತ ವಾದವೊಂದನ್ನೇ ಮಂಡಿಸುತ್ತಿದೆ. ಒಬ್ಬ ಬೋಧಕನಾಗಿ. ಶಿಕ್ಷಣ ನೀತಿಗಳನ್ನು ರೂಪಿಸುವ ಕ್ರಿಯೆಯಲ್ಲಿ ಸಕ್ರಿಯ ಪಾತ್ರವಹಿಸಿದ ಅನುಭವಗಳ ಹಿನ್ನೆಲೆಯಲ್ಲಿ ಶೈಕ್ಷಣಿಕವಾಗಿ ಯಾವುದು ಅಗತ್ಯ ಎಂಬುದನ್ನು ಇಲ್ಲಿ ವಿವರಿಸಲು ಪ್ರಯತ್ನಿಸಿದ್ದೇನೆ. ಕೇರಳದಲ್ಲಿ ಸರ್ಕಾರಿ ಶಾಲೆಗಳಿಗೆ ಪ್ರವೇಶ ಪಡೆಯುವ ಮಕ್ಕಳ ಸಂಖ್ಯೆ ಗಮನಾರ್ಹ ಪ್ರಮಾಣದಲ್ಲಿ ಕುಸಿಯಿತು. ಆಗ ಮುಖ್ಯಮಂತ್ರಿಯಾಗಿದ್ದ ಎ.ಕೆ. ಆಂಟನಿ ಈ ಕುಸಿತಕ್ಕೆ ಕಾರಣವೇನು ಎಂದು ಅರ್ಥ ಮಾಡಿಕೊಂಡು ಪರಿಹಾರ ಕಂಡುಕೊಳ್ಳಲು ಬಯಸಿದರು. ಸರ್ಕಾರಿ ಶಾಲೆಗಳಿಗೆ ಸೇರುವ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿರುವುದರಿಂದ ಸರ್ಕಾರ ನೇಮಿಸಿರುವ ಶಿಕ್ಷಕರಿಗೆ ಕೆಲಸವಿಲ್ಲದಂತಾಗಿ ಹಲವು ಶಿಕ್ಷಕರಿಗೆ ಕೆಲಸ ಮಾಡಿಸಿಕೊಳ್ಳದೆಯೇ ಸಂಬಳ ಕೊಡಬೇಕಾಗಿ ಬಂದಿತ್ತು. ಈ ಸಮಸ್ಯೆಯ ಸ್ವರೂಪ ಅರಿತು, ಪರಿಹಾರವನ್ನು ಶಿಫಾರಸು ಮಾಡಬೇಕೆಂದು ನನ್ನ ನೇತೃತ್ವದಲ್ಲಿ ಒಂದು ಸಮಿತಿಯನ್ನು ರಚಿಸಿದರು. ನಾವು ಕೇರಳದಾದ್ಯಂತ ಸಂಚರಿಸಿ ಸರ್ಕಾರಿ ಹಾಗೂ ಖಾಸಗಿ ಶಾಲೆಗಳು, ಅವುಗಳ ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಪಾಲಕರ ಅಭಿಪ್ರಾಯವನ್ನು ತಿಳಿದೆವು. ಈ ಸಂದರ್ಭದಲ್ಲಿ ನಮಗೆ ಕಂಡುಬಂದ ವಿಚಾರಗಳನ್ನು ಈ ಕೆಳಗಿನಂತೆ ಸಂಕ್ಷಿಪ್ತಗೊಳಿಸಬಹುದು. ಸರ್ಕಾರಿ ಶಾಲೆಗಳಲ್ಲಿ ಬೋಧನೆಯ ತರಬೇತಿ ಪಡೆದ ಒಳ್ಳೆಯ ಶಿಕ್ಷಕರಿದ್ದಾರೆ. ಖಾಸಗಿ ಶಾಲೆಗಳಲ್ಲಿದ್ದ ಬಹುತೇಕ ಶಿಕ್ಷಕರು ಬೋಧನೆಗೆ ಸಂಬಂಧಿಸಿದ ಮೂಲಭೂತ ತರಬೇತಿಯನ್ನೂ ಪಡೆದಿಲ್ಲ. ಇದು ಗೊತ್ತಿದ್ದರೂ ಪಾಲಕರು ಮಕ್ಕಳನ್ನು ಇಂಗ್ಲಿಷ್ ಹೇಳಿಕೊಡುತ್ತಾರೆ ಎಂಬ ಏಕೈಕ ಕಾರಣಕ್ಕಾಗಿ ಖಾಸಗಿ ಶಾಲೆಗಳಿಗೆ ಕಳುಹಿಸುತ್ತಾರೆ. ಖಾಸಗಿ ಶಾಲೆಗಳ ಮಟ್ಟಿಗೆ ಇಂಗ್ಲಿಷ್ ಎಂಬುದು ಸೀಟು ಮಾರಾಟದ ತಂತ್ರ. ಸರ್ಕಾರಿ ಶಾಲೆಗಳಿಗೆ ಮಲಯಾಳಂನಲ್ಲಿ ಕಲಿಸುವುದೇ ಒಂದು ಮಿತಿ. ಕೇರಳದಲ್ಲಿ ಈ ಸ್ಥಿತಿ ಉದ್ಭವಿಸಿದ್ದರ ಹಿಂದೆ ಅನೇಕ ಸಾಮಾಜಿಕ ಕಾರಣಗಳಿದ್ದವು. ಸಾಮಾನ್ಯವಾಗಿ ಮಲಯಾಳಿ ಯುವಕರಿಗೆ ತಮ್ಮದೇ ರಾಜ್ಯದಲ್ಲಿ ಕೆಲಸ ಸಿಗುವುದಿಲ್ಲ. ಕೆಲಸ ಹುಡುಕಿ ಹೊರಡುವ ಇವರಿಗೆ ಜಗತ್ತಿನ ಯಾವುದೇ ಭಾಗದಲ್ಲಿ ದುಡಿಯಲು ಅನುಕೂಲಕರ ಭಾಷೆಯೆಂದರೆ ಇಂಗ್ಲಿಷ್ ಎಂಬುದರಲ್ಲಿ ಸಂಶಯವಿಲ್ಲ. ಪಾಲಕರು ಸಹಜವಾಗಿಯೇ ಇಂಗ್ಲಿಷ್ ಕಲಿಸುವ ಶಾಲೆಗಳಿಗೆ ಮಕ್ಕಳನ್ನು ಕಳುಹಿಸುತ್ತಿದ್ದರು. ಎಲ್ಲಾ ಪಾಲಕರಿಗೂ ಇರುವ ತಮ್ಮ ಮಕ್ಕಳು ಐಐಟಿ, ಐಐಎಂನಂಥ ಶಿಕ್ಷಣ ಸಂಸ್ಥೆಗಳಲ್ಲಿ ಕಲಿಯಬೇಕು ಎಂಬ ಆಸೆ ಮತ್ತು ಅದಕ್ಕೆ ಇಂಗ್ಲಿಷ್ ಅಗತ್ಯ ಮನೋಭಾವವಿರುತ್ತದೆ. ಇದನ್ನು ಸರಿ ಅಥವಾ ತಪ್ಪು ಎಂದು ಹೇಳುವುದಕ್ಕಿಂತ ಇದೊಂದು ಯುಗಧರ್ಮ ಎಂದು ಭಾವಿಸುವುದೇ ಹೆಚ್ಚು ಸೂಕ್ತ. ಇಂಥದ್ದೊಂದು ಸ್ಥಿತಿಯಲ್ಲಿ ಮಕ್ಕಳು ತಮ್ಮ ಸಂಸ್ಕೃತಿಯ ಜೊತೆಗಿನ ಸಂಬಂಧ ಕಳೆದುಕೊಳ್ಳದಂತೆ ಒಂದನೇ ತರಗತಿಯಿಂದಲೇ ಮಲಯಾಳಂ ಹಾಗೂ ಇಂಗ್ಲಿಷ್ ಎರಡರನ್ನೂ ಕಲಿಸುವ ದ್ವಿಭಾಷಾ ಮಾಧ್ಯಮವನ್ನು ಕಾರ್ಯರೂಪಕ್ಕೆ ತರುವ ಸಲಹೆಯನ್ನು ಸಮಿತಿ ನೀಡಿತು. ಇಂಗ್ಲಿಷ್ ಬೋಧನೆ ಹೇಗೆ? ಒಂದನೇ ತರಗತಿಯಿಂದ ಇಂಗ್ಲಿಷ್ ಕಲಿಸುವುದು ಎಂದರೆ `ಅ, ಆ, ಇ, ಈ~ ಕಲಿಸುವ ಬದಲಿಗೆ ` ,ಕಲಿಸುವುದಲ್ಲ. ಕನ್ನಡ ಅಕ್ಷರಗಳನ್ನು ಕನ್ನಡ ಬಾರದವರಿಗೆ ಕಲಿಸಿದರೂ ಅವರು ಕನ್ನಡವನ್ನು ಓದಬಹುದು. ಆದರೆ ಇಂಗ್ಲಿಷ್ ಗೊತ್ತಿಲ್ಲದವರು ರೋಮನ್ ಅಕ್ಷರಗಳನ್ನು ಕಲಿತ ಮಾತ್ರಕ್ಕೆ ಇಂಗ್ಲಿಷ್ ಓದಲು ಸಾಧ್ಯವಿಲ್ಲ. ಎಂಬುದನ್ನು `ಕಟ್~ ಎಂದು, ಎಂದು ಬರೆದಾಗ `ಬಟ್~ ಎಂದೂ ಓದಲು ಸಾಧ್ಯವಾಗಬೇಕಾದರೆ ಇಂಗ್ಲಿಷ್ ಭಾಷೆ ಗೊತ್ತಿರಬೇಕಾಗುತ್ತದೆ. ಇದನ್ನು ಸಾಧಿಸುವುದಕ್ಕಾಗಿ ತರಗತಿಗಳಲ್ಲಿ ಇಂಗ್ಲಿಷ್‌ನಲ್ಲಿ ಸುಲಭವಾಗಿ ಅಭಿವ್ಯಕ್ತಿಸಲು ಸಾಧ್ಯವಿರುವ ವಿಷಯಗಳನ್ನು ಮಾತನಾಡಬೇಕು. ಮಕ್ಕಳು ಅದಕ್ಕೆ ಇಂಗ್ಲಿಷ್‌ನಲ್ಲೇ ಪ್ರತಿಕ್ರಿಯಿಸಬೇಕು ಎಂಬ ಸಲಹೆ ನಮ್ಮದಾಗಿತ್ತು. ಈ ಪ್ರಕ್ರಿಯೆಯಲ್ಲಿ ಕಲಿಯುವುದನ್ನು ನಾನು `ಅಬ್ಯೂಸಿಂಗ್ ಇಂಗ್ಲಿಷ್~ ಎಂದು ಕರೆಯುತ್ತೇನೆ. ಇಂಗ್ಲಿಷನ್ನು `ಯೂಸ್~ ಮಾಡುವುದಕ್ಕೆ ಮೊದಲು ಅದನ್ನು `ಅಬ್ಯೂಸ್~ ಮಾಡುವ ಅಗತ್ಯವಿದೆ. ಇಂಗ್ಲಿಷ್ ಮಾತನಾಡುವಾಗ ತಪ್ಪಾಗುವುದು ಸಹಜ ಎಂದು ಎಲ್ಲರಿಗೂ ಅನ್ನಿಸುವಂತೆ ಇಂಗ್ಲಿಷನ್ನು ಹಗುರಗೊಳಿಸಬೇಕು. ಬೆಂಗಳೂರಿನ ಮಕ್ಕಳು ಪಕ್ಕದ ಮನೆಯಲ್ಲಿ ತಮಿಳು ಮಾತನಾಡುವ ಮಕ್ಕಳಿದ್ದರೆ ಅವರೊಂದಿಗೆ ತಪ್ಪು ತಪ್ಪಾಗಿ ಮಾತನಾಡುತ್ತಾ ತಮಿಳು ಕಲಿತಂತೆ, ಮಂಗಳೂರಿನ ಮಕ್ಕಳು ಕನ್ನಡ, ಕೊಂಕಣಿ, ತುಳುಗಳನ್ನು ಒಟ್ಟೊಟ್ಟಿಗೇ ಕಲಿತಂತೆ ಇಂಗ್ಲಿಷನ್ನೂ ಕಲಿಯುತ್ತಾರೆ. ಇದಕ್ಕಾಗಿ ಮಾತನಾಡುವುದು, ಸಿನಿಮಾಗಳನ್ನು ನೋಡುವುದು, ಹಾಡುಗಳನ್ನು ಕೇಳುವುದು, ಕ್ರಿಕೆಟ್ ಕಮೆಂಟರಿ ಕೇಳುವುದು ಇಂಥ ಅನೇಕ ಚಟುವಟಿಕೆಗಳನ್ನು ಬಳಸಿಕೊಳ್ಳಬಹುದು. ಒಮ್ಮೆ ಮಕ್ಕಳಿಗೆ ಇಂಗ್ಲಿಷ್‌ನಲ್ಲಿ ಸಂವಹನ ಸಾಧ್ಯವಾದ ಮೇಲೆ ಅದನ್ನು ಓದಲು ಮತ್ತು ಬರೆಯಲು ಸುಲಭವಾಗಿ ಕಲಿಸಬಹುದು. ಈ ವಿಧಾನ ಕೇವಲ ಸರ್ಕಾರಿ ಶಾಲೆಗಳಿಗೆ ಮಾತ್ರ ಸೀಮಿತವಾಗಬಾರದು ಇದು ಪ್ರಾಥಮಿಕ ಶಿಕ್ಷಣದ ಸಾರ್ವತ್ರಿಕ ನೀತಿಯಾಗಬೇಕು. ಭಾರತದ ಸಂದರ್ಭದಲ್ಲಿ ಮಾತೃಭಾಷೆ ಎಂಬ ಪರಿಕಲ್ಪನೆಯನ್ನು ಬಳಸುವುದು ಕಷ್ಟ. ನಮ್ಮಲ್ಲಿರುವುದು ಮನೆ ಮಾತು, ಬೀದಿ ಮಾತು ಮತ್ತು ಅಟ್ಟದ ಮಾತುಗಳು ಮಾತ್ರ ಎಂದು ಈ ಹಿಂದೆಯೂ ಅನೇಕ ಬಾರಿ ನಾನು ಹೇಳಿದ್ದೇನೆ. ಮಕ್ಕಳು ಹೆಚ್ಚು ಕಲಿಯುವುದು ಮನೆಯ ಹೊರಗೆ. ಈ ಕಲಿಕೆಯ ಭಾಷೆ ಕರ್ನಾಟಕದ ಮಟ್ಟಿಗೆ ಕನ್ನಡ. ವಾಸ್ತವದಲ್ಲಿ ಪ್ರಾಥಮಿಕ ಶಿಕ್ಷಣದ ಹಂತದಲ್ಲಿ ಮುಖ್ಯವಾಗುವ ಬಹುತೇಕ ವಿಷಯಗಳನ್ನು ಬೀದಿಯ ಭಾಷೆಯಲ್ಲಿ ಕಲಿಸುವುದು ಅಗತ್ಯ. ಸಮಾಜ ವಿಜ್ಞಾನಗಳೆಂದು ವಿಭಾಗೀಕರಿಸಿರುವ ಎಂದು ನಾವು ಕರೆಯುವ ಇತಿಹಾಸ, ಪೌರನೀತಿಯಂಥ ವಿಷಯಗಳನ್ನು ಬೀದಿಯ ಭಾಷೆ ಅಥವಾ ಪರಿಸರದ ಭಾಷೆಯಲ್ಲಿ ಕಲಿಸುವುದೇ ಸೂಕ್ತ. ಕರ್ನಾಟಕದಲ್ಲೇನು ಮಾಡಬಹುದು? ಮೇಲೆ ವಿವರಿಸಿದ ಅಂಶಗಳ ಆಧಾರದಲ್ಲಿ ಕರ್ನಾಟಕದಲ್ಲಿ ಏನು ಮಾಡಬಹುದು ಎಂಬುದನ್ನು ಯೋಚಿಸಬಹುದು. ನಾವು ಕನ್ನಡ ಮಾಧ್ಯಮ ಶಾಲೆಗಳು ಮತ್ತು ಇಂಗ್ಲಿಷ್ ಮಾಧ್ಯಮ ಶಾಲೆಗಳು ವಿಭಾಗೀಕರಿಸಿ ಯೋಚಿಸುವುದರ ಬದಲಿಗೆ ಎಲ್ಲಾ ಶಾಲೆಗಳಲ್ಲೂ ಎರಡೂ ಮಾಧ್ಯಮಗಳಲ್ಲಿ ಶಿಕ್ಷಣ ನೀಡುವ ವ್ಯವಸ್ಥೆಯೊಂದನ್ನು ರೂಪಿಸಬೇಕು. ಇದೇ ಸಲಹೆಯನ್ನು ನನ್ನ ನೇತೃತ್ವದ ಸಮಿತಿ ಕೇರಳ ಸರ್ಕಾರಕ್ಕೂ ನೀಡಿತ್ತು. ಆದರೆ ಖಾಸಗಿ ಇಂಗ್ಲಿಷ್ ಶಾಲೆಗಳ ಲಾಬಿ ಇದಕ್ಕೆ ತಡೆಯೊಡ್ಡಿತು. ಎಲ್ಲಾ ಶಾಲೆಗಳಲ್ಲಿ ದ್ವಿ ಮಾಧ್ಯಮ ಎಂಬುದು ಸಾಧಿಸಲಾಗದ ಗುರಿಯೇನೂ ಅಲ್ಲ. ಇದು ಸಾಮಾನ್ಯ ಶಾಲೆಗಳನ್ನು ಸ್ಥಾಪಿಸುವ ಹಾದಿಯಲ್ಲಿ ಒಂದು ಮುಖ್ಯ ಹೆಜ್ಜೆಯಾಗುತ್ತದೆ. ಒಂದು ವೇಳೆ ಸಾಮಾನ್ಯ ಶಾಲೆ ಎಂಬ ಪರಿಕಲ್ಪನೆ ತಕ್ಷಣಕ್ಕೆ ಕಾರ್ಯರೂಪಕ್ಕೆ ಬಾರದೇ ಇದ್ದರೂ ಶ್ರೀಮಂತ ಕುಟುಂಬದ ವಿದ್ಯಾರ್ಥಿಗಳಿಗೆ ಒಂದು ಬಗೆಯ ಶಿಕ್ಷಣ, ಬಡ ಕುಟುಂಬದ ಮಕ್ಕಳಿಗೆ ಮತ್ತೊಂದು ಬಗೆಯ ಶಿಕ್ಷಣ ಎಂಬ ಸ್ಥಿತಿಯನ್ನಾದರೂ ದ್ವಿಮಾಧ್ಯಮವನ್ನು ಸಾರ್ವತ್ರಿಕ ಶಿಕ್ಷಣ ನೀತಿಯನ್ನಾಗಿಸುವ ಮೂಲಕ ತಪ್ಪಿಸಬಹುದು. ಇಂಗ್ಲಿಷ್ ಮಾಧ್ಯಮ ಶಾಲೆಗಳಲ್ಲಿ ಕನ್ನಡವನ್ನು ಕೇವಲ ಒಂದು ಭಾಷೆಯಾಗಿ ಕಲಿಸುವುದರಿಂದ ಹೆಚ್ಚು ಉಪಯೋಗವಿಲ್ಲ. ಕೆಲವು ವಿಷಯಗಳನ್ನೇ ಕನ್ನಡದಲ್ಲಿ ಕಲಿಸಬೇಕು. ಮಾನವಿಕ ವಿಷಯಗಳು ಇದಕ್ಕೆ ಹೆಚ್ಚು ಸೂಕ್ತ. ಹಾಗೆಯೇ ವಿಜ್ಞಾನ ವಿಷಯಗಳನ್ನು ಇಂಗ್ಲಿಷ್‌ನಲ್ಲಿ ಹೇಳಿಕೊಡಬೇಕು. ಇದರ ಅರ್ಥ ವಿಜ್ಞಾನ ಇಂಗ್ಲಿಷ್‌ನಲ್ಲಿದೆ ಎಂದಲ್ಲ. ಭೌತಶಾಸ್ತ್ರ, ಗಣಿತ, ರಸಾಯನಶಾಸ್ತ್ರಗಳಂಥವಕ್ಕೆ ಅವುಗಳದ್ದೇ ಒಂದು ಭಾಷೆ ಇದೆ. ಆ ಭಾಷೆ ಇಂಗ್ಲಿಷ್‌ನ ಒಳಗಿದೆ ಅಷ್ಟೇ. ಇಂಗ್ಲಿಷ್ ಗೊತ್ತಾದ ಮಾತ್ರಕ್ಕೆ ಈ ವಿಷಯಗಳೇನೂ ಅರ್ಥವಾಗುವುದಿಲ್ಲ. ಇಂಗ್ಲಿಷ್‌ನ ಒಳಗಿರುವ ಈ ವಿಷಯಗಳ ಭಾಷೆಯನ್ನು ವಿದ್ಯಾರ್ಥಿ ಅರಿತುಕೊಂಡಾಗ ಮಾತ್ರ ಅವನು ಕಲಿಯುತ್ತಾನೆ. ಹಾಗೆಯೇ ನಿರ್ದಿಷ್ಟ ವಿಷಯವನ್ನು ಅದರ ಮೂಲ ಭಾಷೆಯಲ್ಲೇ ಕಲಿಯುವ ಅನುಕೂಲವೂ ಇದರಲ್ಲಿದೆ. ಮಾನವಿಕಗಳನ್ನು ಕನ್ನಡದಲ್ಲಿ ಬೋಧಿಸುವುದರಿಂದ ಆಗುವ ಅನುಕೂಲವೂ ಇದುವೇ. ಕರ್ನಾಟಕದ ಇತಿಹಾಸದ ಬಗ್ಗೆ, ಕರ್ನಾಟಕದ ಭೌಗೋಳಿಕ ಸ್ಥಿತಿಯ ಬಗ್ಗೆ ಇಂಗ್ಲಿಷ್‌ನಲ್ಲಿ ಏನನ್ನು ಹೇಳಿದರೂ ಅದನ್ನು ಕನ್ನಡಕ್ಕೆ ಅನುವಾದಿಸಿಕೊಂಡೇ ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಇದಕ್ಕೆ ಸಂಬಂಧಿಸಿದ ಆಕರಗಳೆಲ್ಲವೂ ಕನ್ನಡದಲ್ಲಿಯೇ ಇರುತ್ತವೆಯಾದ್ದರಿಂದ ಕನ್ನಡದಲ್ಲಿ ಇವುಗಳನ್ನು ಕಲಿಯುವುದು ವಿದ್ಯಾರ್ಥಿಗೆ ಹೆಚ್ಚು ಅನುಕೂಲ. ಉನ್ನತ ಶಿಕ್ಷಣಕ್ಕೆ ಹೋಗುವ ಹೊತ್ತಿಗೆ ಇಂಗ್ಲಿಷ್‌ನಲ್ಲಿ ಅಭಿವ್ಯಕ್ತಿಯ ಸಾಮರ್ಥ್ಯವನ್ನು ಗಳಿಸಿಕೊಂಡಿರುವ ವಿದ್ಯಾರ್ಥಿಗಳು ಬಹಳ ಸುಲಭವಾಗಿ ಮೂಲ ಆಕರಗಳಿಂದಲೇ ವಿಷಯ ಸಂಗ್ರಹಿಸಿ ಇಂಗ್ಲಿಷ್‌ನಲ್ಲಿ ಮಂಡಿಸುತ್ತಾರೆ. ಈ ಪ್ರಕ್ರಿಯೆಯಲ್ಲಿ ಕನ್ನಡವಷ್ಟೇ ಇರುವ ಒಂದು ಜಗತ್ತಿನಿಂದ ನಮ್ಮ ಮಕ್ಕಳು ದೂರವಾಗುವುದಿಲ್ಲ. ತಂತ್ರಜ್ಞಾನವೆಂದರೆ ಇಂಗ್ಲಿಷ್ ಎಂಬ ಭ್ರಮೆಯೊಂದಿದೆ. ವಾಸ್ತವ ಹಾಗಿಲ್ಲ. ಕಂಪ್ಯೂಟರ್ ಸಾಫ್ಟ್‌ವೇರ್ ರೂಪಿಸುವವರಿಗೆ ಮಾತ್ರ ಇಂಗ್ಲಿಷ್ ಒಂದು ಕೌಶಲವಾಗಿ ಅಗತ್ಯ ಎನ್ನುವುದು ಬಿಟ್ಟರೆ ಉಳಿದ ತಂತ್ರಜ್ಞಾನಕ್ಕೆ ಭಾಷೆಗಿಂತ ಕೌಶಲ ಮುಖ್ಯ. ಆರ್ಕಿಟೆಕ್ಚರ್‌ನಲ್ಲಿ ಪದವಿ ಪಡೆದವನು ತನ್ನ ಅರಿವಿನಿಂದ ಕಟ್ಟಡವನ್ನು ಕಾಗದದ ಮೇಲೆ ವಿನ್ಯಾಸಗೊಳಿಸಬಹುದು. ಆದರೆ ಅದನ್ನು ಕಟ್ಟಿಸುವ ಕ್ರಿಯೆಯಲ್ಲಿ ಅವನು ಮೇಸ್ತ್ರಿಯ ಜೊತೆಗೆ ಮಾತನಾಡಬೇಕಾಗಿರುವುದು ಯಾವ ಭಾಷೆಯಲ್ಲಿ? ಸಹಜವಾಗಿಯೇ ಅದು ಕನ್ನಡ, ತೆಲುಗು, ತಮಿಳಿನಂಥ ಒಂದು ಭಾಷೆಯಾಗಿರುತ್ತದೆ. ಆಗ ಆರ್ಕಿಟೆಕ್ಟ್ ತನ್ನ `ವೈಜ್ಞಾನಿಕ ಪಾರಿಭಾಷಿಕ~ಗಳನ್ನು ಮೇಸ್ತ್ರಿಯ ಭಾಷೆಗೆ ಅನುವಾದಿಸಿಕೊಂಡು ವಿವರಿಸಬೇಕು. ಹಾಗೆ ನೋಡಿದರೆ ಆರ್ಕಿಟೆಕ್ಚರ್ ಕಲಿಯುವ ಪ್ರಕ್ರಿಯೆಯಲ್ಲಿ ಆತ ಮೇಸ್ತ್ರಿಯ ಭಾಷೆಯನ್ನು ತನ್ನ ಪಾರಿಭಾಷಿಕ ಭಾಷೆಗೆ ಅನುವಾದಿಸಿಕೊಂಡಿರುತ್ತಾನೆ ಎಂಬುದೇ ನಿಜ. ನಮ್ಮ ಶಿಕ್ಷಣ ಪದ್ಧತಿಯನ್ನು ವಿನ್ಯಾಸಗೊಳಿಸುವಾಗ ದೈಹಿಕ ಕೌಶಲದ ಮೂಲಕ ಕನ್ನಡದಂಥ ಭಾಷೆಗಳಲ್ಲೇ ಬದುಕು ಕಂಡುಕೊಂಡಿರುವವರಲ್ಲಿ ಇರುವದೂ ಜ್ಞಾನ ಎಂದು ನಾವು ಭಾವಿಸದೇ ಇದ್ದುದರಿಂದ ಈ ಕಂದಕವಿದೆ. ದ್ವಿಭಾಷಾ ಮಾಧ್ಯಮವನ್ನು ಬಳಸುವುದರಿಂದ ಈ ಕಂದಕವನ್ನು ಸ್ವಲ್ಪ ಮಟ್ಟಿಗಾದರೂ ಕಡಿಮೆ ಮಾಡಬಹುದು. ಕನ್ನಡವಷ್ಟೇ ಬಲ್ಲ ಮೇಸ್ತ್ರಿಯ ಜ್ಞಾನಕ್ಕೂ ಆರ್ಕಿಟೆಕ್ಚರ್ ಪದವೀಧರನ ಆಧುನಿಕ ಅರಿವಿಗೂ ಸಂಬಂಧ ಕಲ್ಪಿಸುವ ಒಂದು ಸಾಧ್ಯತೆಯನ್ನಾದರೂ ತೆರೆಯಬಹುದು. ಇಂಗ್ಲಿಷ್‌ನ ಸಮಸ್ಯೆ: ಒಂದೊಂದು ಕಾಲದಲ್ಲಿ ಕೆಲವು ಭಾಷೆಗಳು ಜ್ಞಾನದ ಭಾಷೆಗಳಾಗಿಬಿಡುತ್ತವೆ. ನಾನು ಮೈಸೂರು ವಿಶ್ವವಿದ್ಯಾಲಯದಲ್ಲಿ ಕಲಿಯುತ್ತಿದ್ದಾಗ ಭೌತಶಾಸ್ತ್ರವನ್ನು ಅಧ್ಯಯನ ಮಾಡುವ ವಿದ್ಯಾರ್ಥಿಗಳು ಜರ್ಮನ್ ಭಾಷೆಯನ್ನು ಕಲಿಯುವುದು ಕಡ್ಡಾಯವಾಗಿತ್ತು. ಸಿ.ವಿ. ರಾಮನ್‌ರಂಥ ವಿಜ್ಞಾನಿಗಳು ಜರ್ಮನ್ ಕಲಿಯದಿದ್ದರೆ ಭೌತಶಾಸ್ತ್ರ ಅರ್ಥವೇ ಆಗುವುದಿಲ್ಲ ಎಂದು ಭಾವಿಸಿದ್ದರು. ಒಂದು ಕಾಲದಲ್ಲಿ ಭಾರತದ ವೈದ್ಯರು ಉನ್ನತ ಶಿಕ್ಷಣಕ್ಕಾಗಿ ರಷ್ಯಾಕ್ಕೆ ಹೋಗಿ ರಷ್ಯನ್ ಭಾಷೆ ಕಲಿತು ಉನ್ನತ ಶಿಕ್ಷಣವನ್ನು ಮುಗಿಸಿಕೊಂಡು ಬರುತ್ತಿದ್ದರು. ಈಗ ಅಂಥದ್ದೊಂದು ಸ್ಥಾನ ಇಂಗ್ಲಿಷ್‌ಗೆ ಬಂದುಬಿಟ್ಟಿದೆ. ಯೂರೋಪಿನ ವಿಜ್ಞಾನಿಗಳು ಮತ್ತು ಸಂಶೋಧಕರು ಇಂಗ್ಲಿಷ್‌ನಲ್ಲಿ ಬರೆದರಷ್ಟೇ ಜಗತ್ತಿನ ಜೊತೆಗೆ ಸಂವಹನ ಸಾಧ್ಯ ಎಂಬ ಸ್ಥಿತಿ ತಲುಪಿದ್ದಾರೆ (ಜಗತ್ತಿನ ಬೇರೆ ಭಾಗಗಳಲ್ಲೂ ಇದೇ ಸ್ಥಿತಿ ಇದೆ). ಆ ಕಾರಣದಿಂದಾಗಿಯೇ ಅವರು ತಮ್ಮ ಭಾಷೆಯಲ್ಲಿರುವುದನ್ನು ಅಷ್ಟೇ ಸುಲಭವಾಗಿ ಇಂಗ್ಲಿಷ್‌ನಲ್ಲಿ ಹೇಳುವ ಕೌಶಲವನ್ನು ಕಲಿತುಕೊಂಡಿದ್ದಾರೆ. ಯಾವುದಾದರೊಂದು ಭಾಷೆ ಸದಾ ಕಾಲ ತನ್ನ ಈ ಪ್ರಾಬಲ್ಯವನ್ನು ಉಳಿಸಿಕೊಳ್ಳಲು ಸಾಧ್ಯ ಎನ್ನುವಂತಿಲ್ಲ. ಭಾರತದಲ್ಲಿ ಸಂಸ್ಕೃತಕ್ಕಿದ್ದ ಪ್ರಾಬಲ್ಯ ಈಗ ಇಲ್ಲ. ಯೂರೋಪಿನಲ್ಲಿ ಲ್ಯಾಟಿನ್‌ಗೆ ಇಂಥದ್ದೇ ಸ್ಥಾನವಿತ್ತು. ಈಗ ಅದನ್ನು ಇಂಗ್ಲಿಷ್ ಆಕ್ರಮಿಸಿಕೊಂಡಿದೆ. ಇಂಗ್ಲಿಷ್‌ನ ಇಂಟರ್ ನ್ಯಾಷನಲ್ ಲಾಂಗ್ವೇಜ್ ಸ್ಥಾನ ಶಾಶ್ವತ ಎಂದುಕೊಳ್ಳಲು ಯಾವ ಆಧಾರವಿದೆ? ಮುಂದೊಂದು ದಿನ ಈ ಸ್ಥಾನ ಚೀನೀ ಭಾಷೆಗೆ ದೊರೆಯಲೂಬಹುದು ಎಂಬುದನ್ನು ನಾವು ಮರೆಯುವಂತಿಲ್ಲ. ಆದ್ದರಿಂದ ನಮಗೆ ಈಗ ಗ್ರಹಿಕೆಗೆ ಇಂಗ್ಲಿಷ್‌ಮುಖ್ಯ. ವಿಷಯ ಜ್ಞಾನ ಪಡೆಯಲು ನಮ್ಮ ಭಾಷೆ ಅಷ್ಟೇ ಮುಖ್ಯ. (ನಿಮ್ಮ ಅನಿಸಿಕೆ ತಿಳಸಿ: @..) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.