ಜೆನೆರಿಕ್ ಸಂಜೀವಿನಿ ರಾಜ್ಯದ ಮೊದಲ `ಜನತಾ ಬಜಾರ್ ಜೆನರಿಕ್ ಔಷಧಿ ಮಳಿಗೆ~ ಗುರುವಾರ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿ ಉದ್ಘಾಟನೆ ಆಗಿದೆ. ಗರಿಷ್ಠ ಚಿಲ್ಲರೆ ದರ(ಎಂಆರ್‌ಪಿ)ದ ಶೇಕಡ 50ಕ್ಕಿಂತ ಹೆಚ್ಚಿನ ರಿಯಾಯಿತಿ ದರಗಳಲ್ಲಿ ಔಷಧಗಳು ಇಲ್ಲಿ ಲಭ್ಯ. ಭಾರತದಲ್ಲಿ ಹಲವು ದೊಡ್ಡ ಔಷಧ ತಯಾರಿಕಾ ಕಂಪೆನಿಗಳಿವೆ. ಹೀಗಿದ್ದೂ ದುಬಾರಿ ಬೆಲೆಗಳ ಔಷಧಗಳು ಎಲ್ಲರ ಕೈಗೆಟುಕದು. ಕಾಯಿಲೆಕಸಾಲೆ, ಔಷಧಿಗಳ ಖರ್ಚು ಹಳ್ಳಿಗಳಲ್ಲಿ ಅನೇಕ ಕುಟುಂಬಗಳನ್ನೇ ಸಾಲಗಳ ಸುಳಿಗೆ ಸಿಲುಕಿಸುತ್ತವೆ. ಇಂತಹ ಸನ್ನಿವೇಶದಲ್ಲಿ, ರಿಯಾಯಿತಿ ದರಗಳಲ್ಲಿ ಔಷಧಿಗಳನ್ನು ಪೂರೈಸುವ ಜೆನರಿಕ್ ಔಷಧಿ ಮಳಿಗೆಗಳ ಸ್ಥಾಪನೆ ಸ್ವಾಗತಾರ್ಹ. ಸದ್ಯಕ್ಕೆ ಸರ್ಕಾರಿ ವೈದ್ಯಕೀಯ ಕಾಲೇಜುಗಳಿಗೆ ಹೊಂದಿಕೊಂಡಂತಹ ಆಸ್ಪತ್ರೆಗಳಲ್ಲಿ ಈ ಮಳಿಗೆಗಳು ಆರಂಭವಾಗಲಿವೆ. ಇನ್ನೊಂದು ತಿಂಗಳೊಳಗೆ ವೈದ್ಯಕೀಯ ಶಿಕ್ಷಣ ಇಲಾಖೆ ವ್ಯಾಪ್ತಿಗೆ ಬರುವ ಎಲ್ಲಾ ಆಸ್ಪತ್ರೆಗಳು, ನಂತರ ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಜೆನೆರಿಕ್ ಔಷಧಗಳು ಲಭ್ಯವಾಗುವಂತೆ ಕ್ರಮಕೈಗೊಳ್ಳಲಾಗುವುದು ಎಂದು ರಾಜ್ಯ ವೈದ್ಯಕೀಯ ಶಿಕ್ಷಣ ಸಚಿವರು ಹೇಳಿರುವ ಮಾತುಗಳು ಗಮನಾರ್ಹ. ಹೆಚ್ಚು ಬೆಲೆಗಳ ಬ್ರಾಂಡೆಡ್ ಔಷಧಿಗಳೇ ಉತ್ತಮ ಎಂಬಂತಹ ತಪ್ಪು ಕಲ್ಪನೆ ನಮ್ಮಲ್ಲಿ ಚಾಲ್ತಿಯಲ್ಲಿದೆ. ವಾಸ್ತವವಾಗಿ ಬ್ರಾಂಡೆಡ್ ಔಷಧಗಳ ಪೇಟೆಂಟ್ ಅವಧಿ ಮುಕ್ತಾಯವಾದಾಗ ಜೆನೆರಿಕ್ ಔಷಧಗಳ ತಯಾರಿಕೆ ಆರಂಭವಾಗುತ್ತದೆ. ಆಗ ಸ್ಪರ್ಧೆ ಹುಟ್ಟುವುದರಿಂದ ಬೆಲೆಗಳು ಸಹಜವಾಗಿ ಇಳಿಮುಖವಾಗುತ್ತವೆ ಅಷ್ಟೆ. ಅನೇಕ ಔಷಧಗಳ ಪೇಟೆಂಟ್ ಅವಧಿ ಮುಕ್ತಾಯವಾದ ನಂತರ ಅದೇ ಔಷಧಿಗಳಿಗೆ `ಜೆನೆರಿಕ್~ಹಣೆಪಟ್ಟಿಯಲ್ಲಿ ವಿದೇಶಗಳಲ್ಲಿ ಮಾರುಕಟ್ಟೆ ಹುಡುಕಲು ಆರಂಭಿಸಿದ ಅನೇಕ ಭಾರತೀಯ ಕಂಪೆನಿಗಳು ಬಹುರಾಷ್ಟ್ರೀಯ ಕಂಪೆನಿಗಳಾಗಿ ಪರಿವರ್ತಿತವಾದ ವಿದ್ಯಮಾನಗಳು ಈ ಹಿಂದೆ ಘಟಿಸಿವೆ. ಇಂತಹ ಪ್ರಯತ್ನದಲ್ಲಿ ಭಾರತದ ರ‌್ಯಾನ್‌ಬಾಕ್ಸಿ ಮುಂಚೂಣಿಯಲ್ಲಿತ್ತು ಎಂಬುದನ್ನು ಸ್ಮರಿಸಬಹುದು. ಅನೇಕ ಬ್ರಾಂಡ್‌ಗಳಿಗೆ ಸಂವಾದಿಯಾಗಿ ಜೆನೆರಿಕ್ ಔಷಧಗಳು ಅಮೆರಿಕದ ಗ್ರಾಹಕರಿಗೆ ಲಭ್ಯವಿವೆ. ಕಂಪೆನಿಗಳಿಂದ ಕಡಿಮೆ ದರಗಳಲ್ಲಿ ಜೆನೆರಿಕ್ ಔಷಧಗಳನ್ನು ಖರೀದಿಸಿ ಬಡ ರೋಗಿಗಳಿಗೆ ಉಚಿತವಾಗಿ ಹಂಚುತ್ತಿರುವ ರಾಜಸ್ತಾನ ಹಾಗೂ ತಮಿಳುನಾಡು ಮಾದರಿಗಳೂ ನಮ್ಮ ನಡುವೆ ಇವೆ. ಈಗ ರಾಜ್ಯದಲ್ಲೂ ಜೆನೆರಿಕ್ ಔಷಧಗಳು ಜನರಿಗೆ ಲಭ್ಯವಾಗುವ ಅವಕಾಶ ತೆರೆದುಕೊಳ್ಳುತ್ತಿರುವುದು ಸಂತಸದ ಸಂಗತಿ. ಆದರೆ ಈ ಲಭ್ಯತೆ ಸರ್ಕಾರಿ ಆಸ್ಪತ್ರೆಗಳಿಗಷ್ಟೇ ಏಕೆ ಸೀಮಿತವಾಗಬೇಕು? ಗ್ರಾಹಕರಿಗೆ ಎಲ್ಲೆಡೆ ಈ ಆಯ್ಕೆಗಳಿರಬೇಕಾದುದು ಅವಶ್ಯ. ಜೆನೆರಿಕ್ ಔಷಧಗಳ ಮಾರಾಟಕ್ಕೆ ದೊಡ್ಡ ದೊಡ್ಡ ಔಷಧ ಕಂಪೆನಿಗಳಿಂದ ವಿರೋಧ ಬರಬಹುದು ಎಂಬುದೂ ಸಹಜ. ಆದರೆ ಇಂತಹ ವಿರೋಧಗಳಿಗೆ ಸರ್ಕಾರ ಮಣಿಯಬಾರದು. ಅಗ್ಗದ ಬೆಲೆಗಳಿಗೆ ಲಭ್ಯವಾಗುವ ಔಷಧಗಳು ಜನಸಾಮಾನ್ಯರ ಆರೋಗ್ಯ ಸಮಸ್ಯೆಗಳಿಗೆ ಸಂಜೀವಿನಿಯಾಗಬೇಕು ಎಂಬ ಬದ್ಧತೆ ಸರ್ಕಾರದ್ದಾಗಬೇಕು. ಗ್ರಾಮೀಣ ಭಾರತದ ಶೇಕಡ 60ರಷ್ಟು ಮಂದಿ ದಿನಕ್ಕೆ ರೂ.35ರಲ್ಲಿ ಜೀವನ ಮಾಡಬೇಕಾದ ಸ್ಥಿತಿ ಇರುವಾಗ, ಒಂದು ರೂಪಾಯಿಯ ಔಷಧ 20 ರೂಪಾಯಿಗೆ ಮಾರಾಟವಾಗುವಂತಹ ವ್ಯವಸ್ಥೆ ಖಂಡಿತ ಬದಲಾಗಬೇಕಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.