ಕ್ಷಮಾದಾನ ತಂದ ಪ್ರಶ್ನೆ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರ ಅಧಿಕಾರಾವಧಿ ಜುಲೈ 24ಕ್ಕೆ ಕೊನೆಗೊಳ್ಳಲಿದೆ. ರಾಷ್ಟ್ರಪತಿ ಹುದ್ದೆಗೇರಿದ ದಿನದಿಂದಲೂ ಒಂದಲ್ಲ ಒಂದು ವಿವಾದ ಪ್ರತಿಭಾ ಪಾಟೀಲ್ ಅವರನ್ನು ಹಿಂಬಾಲಿಸುತ್ತಲೇ ಇದೆ. ಗಲ್ಲು ಶಿಕ್ಷೆಗೆ ಗುರಿಯಾಗಿದ್ದ 35ಅಪರಾಧಿಗಳಿಗೆ ಈಗ ಅವರು ಕ್ಷಮಾದಾನ ನೀಡಿರುವ ವೈಖರಿ, ಭಾರಿ ಚರ್ಚೆಗೆ ಗ್ರಾಸವಾಗಿದೆ. ರಾಷ್ಟ್ರಪತಿ ಹುದ್ದೆಯ ವರ್ಚಸ್ಸಿಗೇ ಕುಂದುಂಟುಮಾಡುವಂತಹದ್ದು ಇದು. ಅದರಲ್ಲೂ ಬಾಲಕಿಯ ಅತ್ಯಾಚಾರ, ಕೊಲೆಗಾಗಿ ಗಲ್ಲುಶಿಕ್ಷೆಗೆ ಗುರಿಯಾಗಿ ಐದು ವರ್ಷಗಳ ಹಿಂದೆಯೇ ಜೈಲಿನಲ್ಲೇ ಮೃತಪಟ್ಟಿದ್ದ ಬಾಗಲಕೋಟೆಯ ಕೈದಿ ಬಂಡು ಬಾಬುರಾವ್ ತಿಡ್ಕೆಗೆ ಜೀವದಾನ ಸಿಕ್ಕಿರುವುದಂತೂ ಗಂಭೀರ ಲೋಪ. ನಮ್ಮ ಅಧಿಕಾರಶಾಹಿ, ಆಡಳಿತವ್ಯವಸ್ಥೆಯ ವೈಫಲ್ಯಗಳಿಗೆ ಇದು ಕನ್ನಡಿ ಹಿಡಿಯುತ್ತದೆ. ಈಗಾಗಲೇ ಅತಿ ಹೆಚ್ಚಿನ ವಿದೇಶ ಪ್ರವಾಸಗಳಿಂದ ವಿವಾದಕ್ಕೆ ಒಳಗಾಗಿರುವ ಪ್ರತಿಭಾ ಪಾಟೀಲ್, ಈಗ ಅತಿ ಹೆಚ್ಚಿನ ಅಪರಾಧಿಗಳಿಗೆ ಕ್ಷಮಾದಾನ ನೀಡಿದ ರಾಷ್ಟ್ರಪತಿ ಎಂಬಂತಹ ಬಿರುದನ್ನು ಸಂಪಾದಿಸಿದ್ದಾರೆ. ಕ್ಷಮಾದಾನ ಪಡೆದವರೆಲ್ಲಾ ಸಾಮೂಹಿಕಕೊಲೆ, ಅಪಹರಣ, ಅತ್ಯಾಚಾರ, ಮಕ್ಕಳ ಹತ್ಯೆಗಳಂತಹ ಹೀನ ಅಪರಾಧಗಳಿಗಾಗಿ ಗಲ್ಲುಶಿಕ್ಷೆಗೊಳಗಾಗಿದ್ದವರು. ಹೀಗಾಗಿ ಈ ಸಾರಾಸಗಟು ಕ್ಷಮಾದಾನ ಎಲ್ಲರಲ್ಲಿ ಅಚ್ಚರಿ ಮೂಡಿಸಿದೆ. ಹಿಂದಿನ ಯಾವ ರಾಷ್ಟ್ರಪತಿಗಳೂ ಇಷ್ಟೊಂದು ಮಂದಿ ಗಲ್ಲುಶಿಕ್ಷೆಗೊಳಗಾದವರಿಗೆ ಕ್ಷಮಾದಾನ ನೀಡಲು ತಮ್ಮ ಅಧಿಕಾರ ಬಳಸಿದ ಉದಾಹರಣೆಯೇ ಇಲ್ಲ. ಕ್ಷಮಾದಾನ ಅರ್ಜಿಗಳನ್ನು ಹೀಗೆ ತರಾತುರಿಯಲ್ಲಿ ಇತ್ಯರ್ಥ ಮಾಡಿರುವುದರಿಂದ ರಾಷ್ಟ್ರಪತಿ ಭವನದಲ್ಲಿ ಈಗ ಬಾಕಿ ಉಳಿದಿರುವ ಕ್ಷಮಾದಾನ ಅರ್ಜಿಗಳು ಕೇವಲ 14. ರಾಷ್ಟ್ರಪತಿ ಹುದ್ದೆ ಅಧಿಕಾರಾವಧಿಯ ದ್ವಿತೀಯಾರ್ಧದಲ್ಲಿ ತರಾತುರಿಯಲ್ಲಿ ಹೀಗೆ ಕ್ಷಮಾದಾನಗಳನ್ನು ನೀಡಲು ಕಾರಣವೇನು ಎಂಬ ಪ್ರಶ್ನೆಗೆ ಸಾರ್ವಜನಿಕರಿಗಂತೂ ಉತ್ತರ ಸಿಗಬೇಕಿದೆ. ಮಾಜಿ ಪ್ರಧಾನಿ ರಾಜೀವ್‌ಗಾಂಧಿಯ ಹಂತಕರು ಸೇರಿದಂತೆ ರಾಜಕೀಯ ಸೆರೆಯಾಳುಗಳ ಬಗ್ಗೆ ಪ್ರತಿಭಾ ಪಾಟೀಲ್ ಯಾವ ನಿರ್ಧಾರಗಳನ್ನೂ ಕೈಗೊಂಡಿಲ್ಲ ಎಂಬುದನ್ನು ಗಮನಿಸಬೇಕು. ಪಂಜಾಬ್‌ನ ಮಾಜಿಮುಖ್ಯಮಂತ್ರಿ ಬಿಯಾಂತ್ ಸಿಂಗ್‌ನ ಹಂತಕ ಬಲವಂತ್ ಸಿಂಗ್ ರಾಜೊನ್ನಾ ಮತ್ತು ಸಂಸತ್ ದಾಳಿಗಾಗಿ ಮರಣದಂಡನೆ ಶಿಕ್ಷೆ ಎದುರಿಸುತ್ತಿರುವ ಅಫ್ಜಲ್ ಗುರು ಅವರ ಬಗ್ಗೆ ಯಾವ ತೀರ್ಮಾನಗಳನ್ನೂ ರಾಷ್ಟ್ರಪತಿ ಭವನ ಪ್ರಕಟಿಸಿಲ್ಲ. ಭಾರತ ಇನ್ನೂ ಗಲ್ಲು ಶಿಕ್ಷೆ ರದ್ದುಪಡಿಸಿಲ್ಲ. ಆದರೆ ಗಲ್ಲುಶಿಕ್ಷೆಗೊಳಗಾದವರಿಗೆ ಹೀಗೆ ಕ್ಷಮಾದಾನಗಳನ್ನು ನೀಡುವುದು ಆ ಕುರಿತ ಕಾನೂನು ಅವಕಾಶವನ್ನು ದುರ್ಬಲಗೊಳಿಸುವ ಹುನ್ನಾರವೇ ಎಂಬ ಪ್ರಶ್ನೆ ಈಗ ಮೂಡಿದೆ. ಗಲ್ಲು ಶಿಕ್ಷೆಗೆ ಗುರಿಯಾಗಿರುವ ತಂತಮ್ಮ ರಾಜ್ಯಗಳ ಅಪರಾಧಿಗಳ ಕ್ಷಮಾದಾನಕ್ಕಾಗಿ ಕಳೆದ ವರ್ಷ ಆಗ್ರಹ ಪಡಿಸಿದ್ದ ತಮಿಳುನಾಡು, ಪಂಜಾಬ್ ಹಾಗೂ ಜಮ್ಮು-ಕಾಶ್ಮೀರದ ರಾಜಕಾರಣಿಗಳು ಈ ವಿಷಯವನ್ನೇ ರಾಜಕೀಯಕರಣಗೊಳಿಸಿದ್ದರು. ಗಲ್ಲುಶಿಕ್ಷೆ ಜಾರಿಯಾಗಿ 12 ವರ್ಷಗಳಾದರೂ ಅದನ್ನು ಕಾರ್ಯಗತಗೊಳಿಸದ ವಿಳಂಬಕ್ಕಾಗಿ ಮದ್ರಾಸ್ ಹೈಕೋರ್ಟ್ ಕೂಡ ಕಳೆದ ವರ್ಷ ರಾಜೀವ್ ಹಂತಕರಿಗೆ ಗಲ್ಲು ಶಿಕ್ಷೆ ತಡೆಹಿಡಿದಿತ್ತು. ಒಟ್ಟಾರೆ ರಾಜಕೀಯವಾಗಿ ಸೂಕ್ಷ್ಮವಾದ ಯಾವುದೇ ಗಲ್ಲು ಶಿಕ್ಷೆ ಜಾರಿಗೊಳಿಸುವ ಮನಸ್ಸು ಯುಪಿಎ ಸರ್ಕಾರಕ್ಕಿಲ್ಲ ಎಂಬುದಂತೂ ವೇದ್ಯ. ಆದರೆ, ಗಲ್ಲುಶಿಕ್ಷೆಯನ್ನು ರದ್ದು ಪಡಿಸುವತ್ತ ಹಿಂಬಾಗಿಲಿನಿಂದ ಇಟ್ಟ ಹೆಜ್ಜೆ ಇದು ಎನ್ನಬಹುದೆ? ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.