ರಾಜಕೀಯ ಸಬಲೀಕರಣ ಎಂದು? ರಾಜಕೀಯ ಕ್ಷೇತ್ರದಲ್ಲಿ ಮಹಿಳಾ ಸಬಲೀಕರಣಕ್ಕೆ ಸಂಬಂಧಿಸಿದಂತೆ ಭಾರತದ ಸಾಧನೆ ನಗಣ್ಯ ಎಂಬುದು ಮತ್ತೊಮ್ಮೆ ಜಾಗತಿಕ ಮಟ್ಟದಲ್ಲಿ ಸಾಬೀತಾಗಿದೆ. ಈ ಅಂಶವನ್ನು ಎತ್ತಿ ಹೇಳುತ್ತಿರುವುದು ವಿಶ್ವಸಂಸ್ಥೆ ಇತ್ತೀಚೆಗೆ ಬಿಡುಗಡೆ ಮಾಡಿರುವ `2012ರ ಸಹಸ್ರಮಾನದ ಅಭಿವೃದ್ಧಿ ಗುರಿಗಳು~ (ಎಂಡಿಜಿ) ವರದಿ. ಈ ಪ್ರಕಾರ, 1995ರಿಂದ 2012ರವರೆಗೆ ಜಾಗತಿಕವಾಗಿ ಮಹಿಳಾ ಸಂಸದೆಯರ ಪ್ರಮಾಣ ಶೇ 75ರಷ್ಟು ಏರಿಕೆಯನ್ನು ಕಂಡಿದೆ. ಎಂದರೆ, 1995ರಲ್ಲಿ ವಿಶ್ವದಾದ್ಯಂತ ಶೇ 11.3ರಷ್ಟು ಸ್ಥಾನಗಳನ್ನು ಸಂಸತ್ತುಗಳಲ್ಲಿ ಮಹಿಳೆಯರು ಹೊಂದಿದ್ದರು. 2012ರಲ್ಲಿ ಈ ಪ್ರಮಾಣ ಶೇ 19.7ಕ್ಕೆ ಏರಿಕೆಯಾಗಿದೆ. ಹಾಗೆಂದಾಕ್ಷಣ ಮಹಿಳೆಯರ ಪ್ರಾತಿನಿಧ್ಯ ರಾಜಕೀಯದಲ್ಲಿ ತೃಪ್ತಿಕರವಾಗಿದೆ ಎಂದು ಖಂಡಿತಾ ಅಲ್ಲ. ಆದರೆ ಏರಿಕೆಯ ಪ್ರವೃತ್ತಿ ಉತ್ತೇಜನಕಾರಿಯಾಗಿದೆ ಎಂದಷ್ಟೇ ಹೇಳಬಹುದು. ಆದರೆ ಭಾರತದ್ಲ್ಲಲಿ ಮಹಿಳಾ ಸಂಸದೆಯರ ಪ್ರಮಾಣದಲ್ಲಿ ಹೆಚ್ಚಿನ ಏರಿಕೆಯ ಪ್ರವೃತ್ತಿಯೂ ಕಂಡು ಬರದೇ ಇರುವುದು ನಿರಾಶಾದಾಯಕ. ಭಾರತದಲ್ಲಿ ಸಂಸದೆಯರ ಪ್ರಮಾಣದಲ್ಲಿ ಕಂಡಿರುವ ಏರಿಕೆ ಶೇ 9.7ರಿಂದ ಶೇ 10.96 ಮಾತ್ರ. ಸ್ವತಂತ್ರ ಭಾರತ 15 ಮಹಾಚುನಾವಣೆಗಳನ್ನು ಕಂಡಿದೆ. ಆದರೆ ಮಹಿಳೆಯರ ಪ್ರಾತಿನಿಧ್ಯಗಳಲ್ಲಿ ಹೆಚ್ಚಿನ ಏರಿಕೆಗಳಿಲ್ಲದೆ ಇರುವುದು ಜನಸಂಖ್ಯೆಯಲ್ಲಿ ಅರ್ಧದಷ್ಟಿರುವ ಮಹಿಳೆಯರಿಗಾಗಿರುವ ಅನ್ಯಾಯ ಎಂದು ಹೇಳದೇ ವಿಧಿ ಇಲ್ಲ. ಇಂಟರ್ ಪಾರ್ಲಿಮೆಂಟರಿ ಯೂನಿಯನ್ (ಐಪಿಯು) ಬಿಡುಗಡೆ ಮಾಡಿರುವ ಅಂಕಿಅಂಶಗಳ ಪ್ರಕಾರ, ಮಹಿಳೆ ಹೊಂದಿರುವ ಸಂಸದೀಯ ಸ್ಥಾನಗಳ ಪ್ರಮಾಣದಲ್ಲಿ ಭಾರತಕ್ಕೆ ಲಭಿಸಿರುವ ಸ್ಥಾನ 98ನೆಯದು ಎಂಬ ಅಂಶವನ್ನೂ ಭಾರತ ಗಂಭೀರವಾಗಿ ಪರಿಗಣಿಸಬೇಕಿದೆ. ವಿಶ್ವದಲ್ಲಿ ಮಹಿಳಾ ನಾಯಕರನ್ನು ಹೊಂದಿರುವ ರಾಷ್ಟ್ರಗಳ ಪ್ರಮಾಣ ದುಪ್ಪಟ್ಟು ಹೆಚ್ಚಾಗಿದೆ. ಆದರೂ ಇಂತಹ ರಾಷ್ಟ್ರಗಳ ಒಟ್ಟು ಸಂಖ್ಯೆ 17 ಎಂಬುದು ಹೆಚ್ಚೇನೂ ದೊಡ್ಡದಲ್ಲ ಎಂಬುದನ್ನೂ ವಿಶ್ವಸಂಸ್ಥೆಯ ಎಂಡಿಜಿ ವರದಿ ಒತ್ತಿ ಹೇಳಿದೆ. ಮಹಿಳಾ ಸಚಿವರ ಪ್ರಮಾಣ ವಿಶ್ವದಾದ್ಯಂತ 2005ರಲ್ಲಿ ಶೇ 14.2 ಇದ್ದದ್ದು 2012ರಲ್ಲಿ ಶೇ 16.7 ಆಗಿದೆ ಅಷ್ಟೆ. ವಿಶ್ವದಾದ್ಯಂತ ಹೆಚ್ಚಿನ ಮಹಿಳಾ ಸಚಿವರು ಹೊಂದಿದ್ದ ಖಾತೆಗಳು ಸಮಾಜ ಕಲ್ಯಾಣ. ಮಹಿಳೆ, ಯುವಜನ ಅಥವಾ ಶಿಕ್ಷಣದಂತಹ ಹಗುರ ಖಾತೆಗಳು. ಹೀಗಾಗಿಯೇ ಪುರುಷ ರಾಜಕಾರಣವೇ ಮೇಲುಗೈ ಪಡೆದುಕೊಂಡಿರುವ ಸಂಸತ್ ಅಥವಾ ಶಾಸನಸಭೆಗಳಿಗೆ ಪ್ರವೇಶ ಪಡೆದುಕೊಳ್ಳಲು ಮಹಿಳೆಗೆ ಮೀಸಲಿನಂತಹ ವಿಶೇಷ ಕ್ರಮಗಳ ಅಗತ್ಯವನ್ನು ಈ ಅಂಕಿಅಂಶಗಳು ಬಲವಾಗಿ ಪ್ರತಿಪಾದಿಸುತ್ತವೆ. ಭಾರತದ ರಾಜಕಾರಣವನ್ನು ತೀವ್ರವಾಗಿ ಬದಲಿಸುವ ಶಕ್ತಿ ಮಹಿಳಾ ಮೀಸಲಿನಂತಹ ಕ್ರಮಗಳಿಂದ ಮಾತ್ರ ಸಾಧ್ಯ. ರಾಜಕೀಯ ಸಬಲೀಕರಣ ಎಂಬುದು ಪುರುಷ - ಮಹಿಳೆ ಇಬ್ಬರನ್ನೂ ಒಳಗೊಳ್ಳಬೇಕಿರುವ ಪ್ರಕ್ರಿಯೆ. ಬರೀ ಮತದಾನ ಮಾಡುವುದಷ್ಟೇ ಮಹಿಳೆಗೆ ರಾಜಕೀಯ ಸಬಲೀಕರಣ ಆಗುವುದು ಸಾಧ್ಯವಿಲ್ಲ. ಆಕೆಗೆ ಶಾಸನಸಭೆ, ಸಂಸತ್‌ಗಳಲ್ಲಿ ರಾಜಕೀಯ ಪ್ರಾತಿನಿಧ್ಯ ಬೇಕು. ರಾಜಕೀಯ ನೀತಿ, ನಿರೂಪಣೆಗಳಲ್ಲಿ ಅವಳ ದನಿ ಸಮಾನ ನೆಲೆಗಳಲ್ಲಿ ಕೇಳುವಂತಾಗಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.