ಪಶ್ಚಿಮಘಟ್ಟಗಳಿಗೆ ಪ್ರತಿಷ್ಠಿತ ಪಟ್ಟ ಯುನೆಸ್ಕೊದ ವಿಶ್ವ ಪರಂಪರೆ ತಾಣಗಳ ಪಟ್ಟಿಗೆ ಭಾರತದ ಪಶ್ಚಿಮ ಘಟ್ಟಗಳು ಸೇರ್ಪಡೆಯಾಗಿರುವುದು ಮಹತ್ವದ ಸಂಗತಿ. ಇದಕ್ಕಾಗಿ ರಾಷ್ಟ್ರದಲ್ಲಿ ಕಳೆದ ಆರು ವರ್ಷಗಳಿಂದ ನಿರಂತರವಾಗಿ ನಡೆದ ಪ್ರಚಾರಾಂದೋಲನ ಯಶಸ್ವಿಯಾದಂತಾಗಿದೆ. ಪಶ್ಚಿಮ ಘಟ್ಟಗಳ ಪರ್ವತ ಶ್ರೇಣಿ, ಭಾರತದ ದಕ್ಷಿಣದ ತುತ್ತತುದಿಯಿಂದ ಗುಜರಾತ್‌ವರೆಗೆ 1600 ಕಿಮೀ ಉದ್ದಕ್ಕೆ ವ್ಯಾಪಿಸಿದೆ. ಗುಜರಾತ್, ಮಹಾರಾಷ್ಟ್ರ, ಗೋವಾ, ಕರ್ನಾಟಕ, ತಮಿಳುನಾಡು ಹಾಗೂ ಕೇರಳ ರಾಜ್ಯಗಳಲ್ಲಿ ಪಶ್ಚಿಮಘಟ್ಟಗಳ ಪರ್ವತಶ್ರೇಣಿ ಹಬ್ಬಿಕೊಂಡಿದೆ. ಜಾಗತಿಕವಾಗಿ ಅಳಿವಿನ ಅಂಚಿನಲ್ಲಿರುವ ಕನಿಷ್ಠ 325 ಸಸ್ಯ, ಪ್ರಾಣಿ, ಪಕ್ಷಿ ಪ್ರಭೇದಗಳಿಗೆ ಪಶ್ಚಿಮ ಘಟ್ಟಗಳು ಆವಾಸ ಸ್ಥಾನವಾಗಿವೆ. ಜೊತೆಗೆ, ಜೈವಿಕ ವೈವಿಧ್ಯದ ವಿಶ್ವದ ಎಂಟು ಮುಖ್ಯ ತಾಣಗಳಲ್ಲಿ ಪಶ್ಚಿಮ ಘಟ್ಟಗಳೂ ಸೇರಿವೆ ಎಂದರೆ, ಇದರ ಪ್ರಾಮುಖ್ಯತೆ ಎಷ್ಟೆಂಬುದು ಸ್ಪಷ್ಟ. ಅತ್ಯಂತ ಸೂಕ್ಷ್ಮ ಪ್ರದೇಶಗಳಲ್ಲಿ ಒಂದೆಂದು ಹೆಸರಾಗಿದೆ ಇದು. ಹಿಮಾಲಯದ ಪರ್ವತಗಳಿಗಿಂತ ಪುರಾತನ ಕಾಡುಗಳನ್ನು ಪಶ್ಚಿಮ ಘಟ್ಟಗಳು ಹೊಂದಿವೆ ಎಂಬುದು ಮತ್ತೊಂದು ಹೆಗ್ಗಳಿಕೆ. ಇದರ ಅರಣ್ಯಗಳು ಮುಂಗಾರಿನ ಹವಾಮಾನದ ವೈಖರಿ ಮೇಲೆ ಭಾರಿ ಪ್ರಭಾವ ಬೀರುವಂತಹವು. ಹೀಗಾಗಿಯೇ ಪಶ್ಚಿಮ ಘಟ್ಟಗಳ ಕಾಡುಗಳನ್ನು ಮಳೆಯ ಕಾಡುಗಳೆಂದೇ ಕರೆಯಲಾಗುತ್ತದೆ. ಇದು ಹಲವು ನದಿಗಳ ಉಗಮ ಸ್ಥಾನವೂ ಹೌದು. ಈಗ ಇಂತಹ ನಿಸರ್ಗ ಸಿರಿಗೆ ವಿಶ್ವ ಭೂಪಟದಲ್ಲಿ ಮಾನ್ಯತೆ ದಕ್ಕಿರುವುದು ಸಂತಸ ಪಡುವಂತಹ ಸಂದರ್ಭವಾಗಿದೆ. ನಂದಾದೇವಿ ಪರ್ವತಶ್ರೇಣಿ, ಅಸ್ಸಾಂನ ರಾಷ್ಟ್ರೀಯ ಉದ್ಯಾನ, ಪಶ್ಚಿಮ ಬಂಗಾಳದ ಸುಂದರ ಬನ ಸೇರಿದಂತೆ ರಾಷ್ಟ್ರದ ಐದು ನೈಸರ್ಗಿಕ ಪ್ರದೇಶಗಳಿಗೆ ಈವರೆಗೆ ಯುನೆಸ್ಕೊ ಮಾನ್ಯತೆ ಸಿಕ್ಕಿದೆ. ವಿಶ್ವ ಪರಂಪರೆ ಪಟ್ಟಿಯ ಸ್ಥಾನಮಾನದಿಂದಾಗಿ ಪಶ್ಚಿಮಘಟ್ಟಗಳ ಸಂರಕ್ಷಣೆಯ ಕಾರ್ಯಕ್ಕೆ ಹೆಚ್ಚಿನ ಚಾಲನೆ ಸಿಕ್ಕುತ್ತದೆ ಎಂಬುದು ಸಾರ್ವಜನಿಕರ ಆಶಯ. ಜೀವ ವೈವಿಧ್ಯದ ಸ್ಥಳಗಳನ್ನು ಸಂರಕ್ಷಿಸಲು ಈ ಹಣೆಪಟ್ಟಿಯಿಂದ ನೆರವಾಗುತ್ತದೆ ಎಂಬುದರಲ್ಲಿ ಸಂಶಯವಿಲ್ಲ. ಸೂಕ್ಷ್ಮ ಸ್ಥಳಗಳಲ್ಲಿ ಯಾವುದೇ ಯೋಜನೆಗಳನ್ನು ಕೈಗೊಳ್ಳಲು ಸರ್ಕಾರಗಳಿಗೆ ಸಾಧ್ಯವಾಗುವುದಿಲ್ಲ. ಇದರಿಂದಾಗಿಯೇ ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿಯಾಗುತ್ತದೆ ಎಂಬ ನೆಪ ಒಡ್ಡಿ ಯುನೆಸ್ಕೊ ಮಾನ್ಯತೆ ಬೇಡ ಎಂದು ರಾಜ್ಯದ ಬಿಜೆಪಿ ಸರ್ಕಾರ ಅಪಸ್ವರ ಎತ್ತಿ ಅನಗತ್ಯ ವಿವಾದ ಸೃಷ್ಟಿಸ್ದ್ದಿದುದನ್ನು ಇಲ್ಲಿ ಸ್ಮರಿಸಬಹುದು. ಆದರೆ ಅಭಿವೃದ್ಧಿ ಕಾರ್ಯಗಳ ನೆಪದಲ್ಲಿ ಗಣಿ, ಟಿಂಬರ್, ಎಸ್ಟೇಟ್ ಲಾಬಿಗಳು ಅರಣ್ಯ ಸಂಪತ್ತನ್ನು ಲೂಟಿ ಹೊಡೆಯಲು ಅವಕಾಶ ಸಿಗದೆ ಅರಣ್ಯ ಸಂಪತ್ತಿನ ರಕ್ಷಣೆಯಾಗುತ್ತದೆ ಎಂಬಂತಹ ವಾದಗಳನ್ನು ಆಗ ಜನಸಾಮಾನ್ಯರು, ಪರಿಸರವಾದಿಗಳು ಮಂಡಿಸಿದ್ದರು. ಅಂತೂ ಈಗ ವಿಶ್ವ ಪರಂಪರೆಯ ಪಟ್ಟಿಯಲ್ಲಿ ವಿಜೃಂಭಿಸಲಿರುವ ಪಶ್ಚಿಮಘಟ್ಟಗಳು, ಜಗತ್ತಿನ ವಿವಿಧೆಡೆಗಳ ಪ್ರವಾಸಿಗರಿಗೆ ಆಕರ್ಷಣೆಯ ಕೇಂದ್ರವಾಗುವುದು ಸಹಜ ಬೆಳವಣಿಗೆ. ಇದರಿಂದ ಪರಿಸರ ಪ್ರವಾಸೋದ್ಯಮಕ್ಕೆ ಉತ್ತೇಜನ ಸಿಕ್ಕಂತಾಗುತ್ತದೆ. `ಅರಣ್ಯ ಲೂಟಿ ಮಾಡಿಲ್ಲ. ಮುಂದಿನ ಪೀಳಿಗೆಗೆ ಸಂರಕ್ಷಿಸಿ ಇಟ್ಟಿದ್ದೇವೆ~ ಎನ್ನುವುದನ್ನು ಜಗತ್ತಿಗೆ ತೋರಿಸಲು ನಮಗೆ ಸಿಕ್ಕಿರುವ ದೊಡ್ಡ ಅವಕಾಶ ಇದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.