ಕಾರ್ಟೂನ್ ವಿವಾದ ಎನ್‌ಸಿಇಆರ್‌ಟಿ ಪಠ್ಯ ಪುಸ್ತಕಗಳಲ್ಲಿನ ಕಾರ್ಟೂನ್‌ಗಳ ಪರಿಶೀಲನೆಗೆ ರಚಿತವಾಗಿದ್ದ ಸಮಿತಿ, ಅನೇಕ `ಆಕ್ಷೇಪಾರ್ಹ~ ಕಾರ್ಟೂನುಗಳನ್ನು ಕಿತ್ತುಹಾಕಲು ಶಿಫಾರಸು ಮಾಡಿರುವಂತಹದ್ದು ನಿರಾಶದಾಯಕ ಬೆಳವಣಿಗೆ. 11 ಹಾಗೂ 12ನೇ ತರಗತಿಗಳ ಸಮಾಜ ವಿಜ್ಞಾನ ಹಾಗೂ ರಾಜಕೀಯ ವಿಜ್ಞಾನ ಪಠ್ಯಪುಸ್ತಕಗಳಲ್ಲಿ 21ಕಾರ್ಟೂನುಗಳು ಹಾಗೂ ಕೆಲವು ಆಕ್ಷೇಪಾರ್ಹ ಪದಗಳನ್ನು ತೆಗೆಯಬೇಕೆಂದು ಈ ಸಮಿತಿ ಸಲಹೆ ನೀಡಿದೆ. ಭಾರತ ಸಮಾಜ ವಿಜ್ಞಾನ ಸಂಶೋಧನಾ ಮಂಡಳಿಯ ಅಧ್ಯಕ್ಷರಾಗಿರುವ ಸುಖದೇವ್ ಥೋರಟ್ ನೇತೃತ್ವದ ಈ ಸಮಿತಿಯಲ್ಲಿ ಆರು ಸದಸ್ಯರ್ದ್ದಿದರು. ಆದರೆ ಈ ಶಿಫಾರಸುಗಳಿಗೆ ಸಮಿತಿಯ ಸದಸ್ಯರಲ್ಲಿ ಒಮ್ಮತ ವ್ಯಕ್ತವಾಗಿಲ್ಲ. ಈ ಶಿಫಾರಸುಗಳ ಕುರಿತಾಗಿ ಸಮಿತಿಯ ಸದಸ್ಯರಲ್ಲೊಬ್ಬರಾದ ಎಂ ಎಸ್ ಎಸ್ ಪಾಂಡಿಯನ್ ವಿರೋಧದ ಮಾತುಗಳನ್ನು ದಾಖಲಿಸಿದ್ದಾರೆ. `ರಾಜಕೀಯವಾಗಿ ತಪ್ಪು~ ಎಂಬಂತಹದ್ದು `ಶೈಕ್ಷಣಿಕವಾಗಿ ಸರಿಯಲ್ಲ~ ಎಂದೇನೂ ಆಗಬೇಕಿಲ್ಲ ಎಂದು ಪಾಂಡಿಯನ್ ಹೇಳಿದ್ದಾರೆ. 2005ರ ರಾಷ್ಟ್ರೀಯ ಪಠ್ಯ ಚೌಕಟ್ಟು ನೀತಿಯಡಿ ಈ ಪಠ್ಯಪುಸ್ತಕಗಳನ್ನು ರೂಪಿಸಲಾಗಿದೆ ಎಂಬುದನ್ನು ಅವರು ನೆನಪಿಸಿರುವುದು ಸರಿಯಾಗಿಯೇ ಇದೆ. ಕಲಿಕೆಯ ವೇಳೆ, ಎಳೆಯರು ಪ್ರಶ್ನೆಗಳನ್ನು ಕೇಳಬೇಕೆಂಬುದೇ ಈ ಪಠ್ಯಗಳ ಉದ್ದೇಶ. ಈ ಪ್ರಶ್ನೆಗಳಿಗೆ ಏಕಪ್ರಕಾರದ ಉತ್ತರವೂ ಇರಬೇಕೆಂದೇನೂ ಇಲ್ಲ. ವಿವಾದಗಳಿರುವೆಡೆ ವಿವೇಚನಾಯುಕ್ತ ವಿಮರ್ಶೆ ಸಾಧ್ಯವಿರಬೇಕು. ಆದರೆ `ರಾಜಕೀಯವಾಗಿ ಸೂಕ್ಷ್ಮವಾದವು~ , `ನಕಾರಾತ್ಮಕ ಸಂದೇಶ~ ನೀಡುತ್ತವೆ ಎಂಬಂತಹ ನೆಪ ಒಡ್ಡಿ ಕಾರ್ಟೂನುಗಳ ನಿಷೇಧಕ್ಕೆ ಶಿಫಾರಸು ಮಾಡುವುದು ಪ್ರಜಾತಂತ್ರ ಮೌಲ್ಯಗಳಿಗೇ ಎಸಗುವ ಅಪಚಾರ ಎಂಬುದನ್ನು ನಾವು ಅರಿಯಬೇಕಿದೆ. ಕೆಲವು ಕಾರ್ಟೂನುಗಳು ತೀರಾ ಅಸ್ಪಷ್ಟ ಅಥವಾ ಅಮೂರ್ತವಾಗಿವೆ ಎಂಬ ನೆಪವನ್ನೂ ನೀಡಲಾಗಿದೆ. ಹನ್ನೊಂದು ಹಾಗೂ ಹನ್ನೆರಡನೆ ತರಗತಿ ವಿದ್ಯಾರ್ಥಿಗಳಲ್ಲಿ ವಿಮರ್ಶಾತ್ಮಕ ಚಿಂತನೆ ರೂಢಿಸುವ ಶೈಕ್ಷಣಿಕ ಸಾಧನಗಳನ್ನು ಅಭಿವೃದ್ಧಿ ಪಡಿಸುವ ಸಂದರ್ಭದಲ್ಲಿ ಈ ಬಗೆಯ ವ್ಯಾಖ್ಯಾನಗಳೇ ಹಾಸ್ಯಾಸ್ಪದ. `ಕಾರ್ಟೂನುಗಳು ಉತ್ತಮ ಕಲಿಕಾ ಸಾಧನ ಆಗಬಹುದು. ಹೀಗಾಗಿ ಅವನ್ನು ಪೂರ್ಣವಾಗಿ ಕೈಬಿಡಬಾರದು. ಆದರೆ ಸರಿಯಾದ ಕಾರ್ಟೂನುಗಳ ಆಯ್ಕೆಗೆ ಕೆಲವೊಂದು ಮಾರ್ಗದರ್ಶಿಸೂತ್ರಗಳನ್ನು ಹೊಂದಿರಬೇಕು~ ಎಂದೂ ಈ ಸಮಿತಿ ಸಲಹೆ ನೀಡಿದೆ. ಆದರೆ ಈಗ ಕಾರ್ಟೂನುಗಳನ್ನು ಕಿತ್ತು ಹಾಕಿರುವ ರೀತಿಯನ್ನು ನೋಡಿದರೆ ಈ ಇಡೀ ಕಸರತ್ತು ರಾಜಕೀಯ ಬಣ್ಣ ಪಡೆದುಕೊಂಡಿದೆ. ರಾಜಕೀಯ ಹಾಗೂ ಅಧಿಕಾರಶಾಹಿ ಪರಿಗಣನೆಗಳೇ ಇಲ್ಲಿ ಮುಖ್ಯವಾದಂತಿವೆ. ದಿನನಿತ್ಯದ ಘಟನಾವಳಿಗಳನ್ನು ವಿಡಂಬಿಸುವುದು ಕಾರ್ಟೂನುಗಳ ಮುಖ್ಯ ಉದ್ದೇಶ. ಹಾಸ್ಯದೊಂದಿಗೆ ಟೀಕೆ, ಲೇವಡಿ, ಚುಚ್ಚುವಂತಹದ್ದು ಎಲ್ಲವೂ ಇರುತ್ತವೆ. ಉತ್ಪ್ರೇಕ್ಷೆಯೂ ಸಹಜ. ಸಮಕಾಲೀನ ಬೆಳವಣಿಗೆಗಳನ್ನು ವಿಡಂಬಿಸುವ ಪರಿಕರವೇ ಕಾರ್ಟೂನ್. ಈ ನಿಟ್ಟಿನಲ್ಲಿ ಕಲಿಕಾ ಸಾಧನವಾಗಿ ಕಾರ್ಟೂನುಗಳ ಬಳಕೆಯ ಮಹತ್ವವನ್ನು ವಿಶದ ಪಡಿಸುವುದು ಅಗತ್ಯ. ರಾಜಕೀಯ ನಾಯಕರ ಕುರಿತ ಕಟಕಿಗಳು ಪ್ರಜಾಸತ್ತಾತ್ಮಕ ರಾಜಕಾರಣವನ್ನು ಬೆಳೆಸುತ್ತಾ ಬಂದಂತಹ ಅಭಿವ್ಯಕ್ತಿ ಸ್ವಾತಂತ್ರ್ಯದ ಚೈತನ್ಯವನ್ನು ಮೆರೆಯಿಸುವಂತಹದ್ದು. ಭಾರತದ ಪ್ರಜಾಸತ್ತೆಯ ದೊಡ್ಡ ಬಲವೇ ಅದು ಎಂಬುದನ್ನು ಮರೆಯಲಾಗದು. ಹೀಗಾಗಿ, ಶೈಕ್ಷಣಿಕ ವಿಚಾರಗಳನ್ನು ನಿರ್ಧರಿಸುವಲ್ಲಿ ಶಿಕ್ಷಣ ತಜ್ಞರಿಗೇ ಸ್ವಾಯತ್ತತೆ ಇರುವುದು ಅಗತ್ಯ ಎಂಬುದನ್ನು ಎನ್‌ಸಿಇಆರ್‌ಟಿ ಮನಗಾಣಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.