ಹೆಣ್ಣುಶಿಶುಗಳನ್ನು ಉಳಿಸಿ ಗುಲ್ಬರ್ಗ ಜಿಲ್ಲೆ ಚಿಂಚೋಳಿ ತಾಲ್ಲೂಕಿನ ಕೊಂಚಾವರಂ ಲಂಬಾಣಿ ತಾಂಡಾಗಳಲ್ಲಿ ಕಳೆದ ಐದು ವರ್ಷಗಳಲ್ಲಿ 97 ಮಕ್ಕಳು ಸತ್ತಿರುವುದು ಆಘಾತಕಾರಿ. ಈ ಮಕ್ಕಳು ಜನಿಸಿದಾಗ ಆರೋಗ್ಯವಾಗಿಯೇ ಇದ್ದರೂ ಒಂದು ವರ್ಷದ ಹುಟ್ಟುಹಬ್ಬವನ್ನೇ ಕಾಣದಿರುವುದು ದುರದೃಷ್ಟಕರ. ಹೈಪೊಥರ್ಮಿಯಾ (ಚಳಿಯಿಂದ ದೇಹದ ಉಷ್ಣತೆ ಕುಸಿಯುವುದು), ಉಸಿರುಗಟ್ಟುವಿಕೆ ಹಾಗೂ ಅವಧಿ ಪೂರ್ವ ಜನನ- ಸಾವಿಗೆ ಕಾರಣಗಳು ಎಂಬುದು ಕೊಂಚಾವರಂ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳ ವಿವರಣೆ. ಸತ್ತ ಈ ಶಿಶುಗಳು ಬಹುಪಾಲು ಹೆಣ್ಣುಶಿಶುಗಳೇ ಆಗಿರುವುದು ಮತ್ತೂ ಆಘಾತಕಾರಿ. ಮೊಲೆ ಹಾಲು ನೀಡದಿರುವುದು, ಕಾಯಿಲೆ ಬಿದ್ದಾಗ ಉಪಚರಿಸದೆ ಸುಮ್ಮನೆ ಇದ್ದು ಬಿಡುವುದು - ಹೀಗೆ ಹೆಣ್ಣುಶಿಶುಗಳ ಅವಗಣನೆ ಹುಟ್ಟಿದಾಕ್ಷಣವೇ ಆರಂಭವಾಗುತ್ತದೆ. ಕಡೆಗೆ ಇದು ಹೆಣ್ಣುಶಿಶುಗಳ ಸಾವುಗಳಲ್ಲಿ ಅಂತ್ಯವಾಗುತ್ತಿದೆ. ಹೆಣ್ಣು ಹುಟ್ಟಿತೆಂದರೇ ಹೆದರಿಕೊಳ್ಳುವ ಪರಿಸ್ಥಿತಿ ಆಂಧ್ರಪ್ರದೇಶದ ಗಡಿಯಲ್ಲಿರುವ ಕೊಂಚಾವರಂ, ಒಂಟಿಗುಡಿ ಮತ್ತಿತರ ತಾಂಡಾಗಳ ಲಂಬಾಣಿ ಮಹಿಳೆಯರಿಗೆ ಇದೆ. ಏಕೆಂದರೆ ಈಗಾಗಲೇ ಎರಡು ಮೂರು ಹೆಣ್ಣು ಹೆತ್ತ ಮಹಿಳೆ ಮತ್ತೊಂದು ಹೆಣ್ಣು ಹಡೆದಳೆಂದರೆ ಆಕೆಯ ವೈವಾಹಿಕ ಬದುಕೇ ಮುರಿದುಬಿದ್ದಂತೆ ಎಂಬ ಸನ್ನಿವೇಶ ಈ ತಾಂಡಾಗಳಲ್ಲಿದೆ. ಗಂಡುಮಗು ಜನಿಸುವ ತನಕವೂ ಈ ಮಹಿಳೆಯರು ಕುಟುಂಬಯೋಜನೆಗೆ ಒಳಪಡುವುದಿಲ್ಲ. ಸಾಲಾಗಿ ಹೆಣ್ಣುಗಳೇ ಜನಿಸಿದಲ್ಲಿ ಅವನ್ನು ನಿಧಾನಕ್ಕೆ ಸಾಯಿಸುವುದು ಅಥವಾ ಅಂತಹ ಶಿಶುಗಳನ್ನು ಮಾರಾಟಮಾಡುವ ಪ್ರವೃತ್ತಿ ಆತಂಕಕಾರಿ. ಕೇವಲ ರೂ 3000 ಅಥವಾ ಅದಕ್ಕೂ ಕಡಿಮೆ ಹಣಕ್ಕೆ ಸೂಲಗಿತ್ತಿಯರ ಮುಖಾಂತರ ರಂಗಾರೆಡ್ಡಿ ಜಿಲ್ಲೆಯಲ್ಲಿನ ತಂಡೂರು ಹಾಗೂ ಹೈದರಾಬಾದ್‌ನ ಅನಾಥಾಲಯಗಳಿಗೆ ತಮ್ಮ ಹೆಣ್ಣುಶಿಶುಗಳನ್ನು ಲಂಬಾಣಿ ಮಹಿಳೆಯರು ಮಾರಾಟಮಾಡುತ್ತಿದ್ದ ಸಂಗತಿ ಹತ್ತು ವರ್ಷಗಳ ಹಿಂದೆ ದೊಡ್ಡ ಕೋಲಾಹಲವನ್ನೇ ಸೃಷ್ಟಿಸಿತ್ತು. ಆಗ ಈ ತಾಂಡಾಗಳಿಗೆ ಸರ್ಕಾರ ರೂ 10 ಕೋಟಿಗಳ ವಿಶೇಷ ಪ್ಯಾಕೇಜ್ ಪ್ರಕಟಿಸಿತ್ತು. ವಸತಿ ಶಾಲೆಗಳ ಸ್ಥಾಪನೆ, ಲಂಬಾಣಿ ಸಮುದಾಯದ ಕುಟುಂಬಗಳಿಗೆ ಕೆಲಸ, ಗಂಗಾ ಕಲ್ಯಾಣ ಯೋಜನೆ ಅಡಿ ಕೊಳವೆ ಬಾವಿ ಇತ್ಯಾದಿ ಸೌಲಭ್ಯಗಳನ್ನು ಆಗ ಈ ಲಂಬಾಣಿ ತಾಂಡಾಗಳಿಗೆ ಒದಗಿಸಲಾಗಿತ್ತು. ಹೀಗಿದ್ದೂ ಹೆಣ್ಣುಮಕ್ಕಳ ಕುರಿತಾದ ಮೌಢ್ಯವನ್ನು ಬದಲಿಸಲಾಗದಿರುವುದು ದುರಂತ. ಈ ತಾಂಡಾಗಳಲ್ಲಿ ಈಗಲೂ ತೀವ್ರ ಬಡತನ, ಅಜ್ಞಾನಗಳು ತಾಂಡವವಾಡುತ್ತಿವೆ. ಹೆಣ್ಣುಮಗು ಕುರಿತಾದ ಭಾವನೆಗಳನ್ನು ಬದಲಿಸುವುದಕ್ಕೆಂದೇ ರಾಜ್ಯದಲ್ಲಿ `ಭಾಗ್ಯಲಕ್ಷ್ಮಿ~ ಯೋಜನೆಯೇನೋ ಇದೆ. ಆದರೂ ಹೆಣ್ಣುಭ್ರೂಣ ಹತ್ಯೆ ಹಾಗೂ ಹೆಣ್ಣುಶಿಶು ಹತ್ಯೆಗಳು ಅವ್ಯಾಹತವಾಗಿ ನಡೆದುಕೊಂಡೇ ಬರುತ್ತಿವೆ. ಏಕೆ ಹೀಗೆ? ಹೆಣ್ಣುಮಗು ಕುರಿತಾದ ಸರ್ಕಾರದ ಯೋಜನೆಗಳು ಸಮಾಜದ ಮೇಲೆ ಎಷ್ಟರ ಮಟ್ಟಿಗೆ ಪರಿಣಾಮ ಬೀರುತ್ತಿವೆ? ಈ ಯೋಜನೆಗಳನ್ನು ಇನ್ನೂ ಸಶಕ್ತವಾಗಿ ಬಳಸುವುದು ಹೇಗೆ ಎಂಬ ಬಗೆಗೆ ಚಿಂತನೆ ನಡೆಯಬೇಕಿದೆ. ಹತ್ತು ವರ್ಷಗಳ ಹಿಂದೆ ಸುದ್ದಿ ಮಾಡಿದ ಕೊಂಚಾವರಂ ಮತ್ತೆ ಅಂತಹದೇ ಒಂದು ಸಾಮಾಜಿಕ ಸಮಸ್ಯೆಯ ಕಾರಣವಾಗಿ ಈಗ ಸುದ್ದಿಯಲ್ಲಿರುವುದು ನಮ್ಮ ಯೋಜನೆಗಳ ವೈಫಲ್ಯಗಳಿಗೆ ಸಾಕ್ಷಿ ಎನ್ನದೇ ವಿಧಿ ಇಲ್ಲ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.