ವಿಳಂಬ ನೀತಿ ಸಲ್ಲದು ಮಹದಾಯಿ ನದಿನೀರು ಹಂಚಿಕೆ ವಿವಾದ ಇತ್ಯರ್ಥಕ್ಕಾಗಿ ನ್ಯಾಯಮಂಡಳಿ ರಚಿಸುವುದನ್ನು ಪ್ರಾರಂಭದಿಂದಲೂ ವಿರೋಧಿಸುತ್ತಾ ಬಂದ ರಾಜ್ಯ ಕರ್ನಾಟಕ. ಕಾವೇರಿ ಮತ್ತು ಕೃಷ್ಣಾ ನ್ಯಾಯಮಂಡಳಿಗಳ ವಿಳಂಬ ನೀತಿಗೆ ಬಲಿಯಾದ ಅನುಭವ ಇದಕ್ಕೆ ಕಾರಣ ಇರಬಹುದು. ನ್ಯಾಯಮಂಡಳಿಗಳು ವಿವಾದದ ಇತ್ಯರ್ಥಕ್ಕೆ ದೀರ್ಘ ಅವಧಿ ತೆಗೆದುಕೊಳ್ಳುವ ಕಾರಣ ನದಿನೀರು ಹಂಚಿಕೆಯಂತಹ ಸೂಕ್ಷ್ಮ ವಿವಾದವನ್ನು ಮಾತುಕತೆಯ ಮೂಲಕವೇ ಬಗೆಹರಿಸಿಕೊಳ್ಳುವುದು ಲೇಸು ಎಂದು ಕರ್ನಾಟಕ ಅಭಿಪ್ರಾಯ ಪಟ್ಟಿತ್ತು. ನ್ಯಾಯಮಂಡಳಿ ರಚನೆಗೆ ಕೇಂದ್ರ ಸರ್ಕಾರ ನಿರ್ದೇಶನ ನೀಡಬೇಕೆಂದು ಕೋರಿ ಗೋವಾ ಸರ್ಕಾರ ಸುಪ್ರೀಂಕೋರ್ಟಿಗೆ ಮೊರೆ ಇಟ್ಟಾಗಲೂ ಕರ್ನಾಟಕ ಇದೇ ಅಭಿಪ್ರಾಯವನ್ನು ನ್ಯಾಯಾಲಯದ ಮುಂದಿಟ್ಟಿತ್ತು. ಕರ್ನಾಟಕದ ವ್ಯಕ್ತಪಡಿಸಿದ್ದ ಆತಂಕ ಈಗ ನಿಜವಾಗಿದೆ. ಕೇಂದ್ರ ಸರ್ಕಾರ ಮಹದಾಯಿ ನದಿನೀರು ಹಂಚಿಕೆಯ ನ್ಯಾಯಮಂಡಳಿಯನ್ನು ರಚಿಸಿ ಒಂದು ವರ್ಷ ಎಂಟು ತಿಂಗಳಾಗಿವೆ. ಆದರೆ ಈಗಲೂ ನ್ಯಾಯಮಂಡಳಿಗೆ ಕಚೇರಿ ಮತ್ತು ಅಧ್ಯಕ್ಷರು ಹಾಗೂ ಸದಸ್ಯರಿಗೆ ವಸತಿ ಒದಗಿಸಲು ಕೇಂದ್ರಸರ್ಕಾರಕ್ಕೆ ಸಾಧ್ಯವಾಗಿಲ್ಲ. ಅಂತರರಾಜ್ಯ ನದಿನೀರು ಕಾಯಿದೆಗೆ ಮಾಡಲಾಗಿರುವ ತಿದ್ದುಪಡಿ ಪ್ರಕಾರ ನ್ಯಾಯಮಂಡಳಿ ಮೂರು ವರ್ಷಗಳ ಅವಧಿಯೊಳಗೆ ಅಂತಿಮ ಐತೀರ್ಪು ನೀಡಬೇಕು, ಅಗತ್ಯವೆನಿಸಿದರೆ ಒಂದು ವರ್ಷ ಮಾತ್ರ ಅವಧಿ ವಿಸ್ತರಿಸಬಹುದು. ತಯಾರಿಯಲ್ಲಿಯೇ ಇಷ್ಟೊಂದು ಕಾಲವ್ಯಯವಾದರೆ ತನಗೆ ಒಪ್ಪಿಸಿರುವ ಕೆಲಸವನ್ನು ಮುಗಿಸಲು ನ್ಯಾಯಮಂಡಳಿಗೆ ಇನ್ನೆಷ್ಟು ಕಾಲ ಬೇಕಾದೀತು ಎಂಬ ಪ್ರಶ್ನೆ ಸಹಜವಾಗಿಯೇ ಉದ್ಭವಿಸುತ್ತದೆ. ನ್ಯಾಯಮಂಡಳಿ ರಚಿಸಿದ್ದೇ ಒಂದು ಅನಗತ್ಯ ಕ್ರಮ. ಕರ್ನಾಟಕ ರಾಜ್ಯ ಮಹದಾಯಿ ನದಿಯ ಏಳೂವರೆ ಟಿಎಂಸಿ ನೀರನ್ನು ಬಳಸಿಕೊಂಡು ಹುಬ್ಬಳ್ಳಿ-ಧಾರವಾಡ ಅವಳಿನಗರಗಳಿಗೆ ಕುಡಿಯುವ ನೀರು ಪೂರೈಸುವ ಯೋಜನೆಯನ್ನು ಪ್ರಾರಂಭಮಾಡಲು ಹೊರಟಿದ್ದೇ ಗೋವಾ ರಾಜ್ಯದ ಹೊಟ್ಟೆನೋವಿಗೆ ಕಾರಣವಾಯಿತು. ಆ ನದಿಯಲ್ಲಿರುವ 180ರಿಂದ 220 ಟಿಎಂಸಿ ನೀರಿನಲ್ಲಿ ನ್ಯಾಯಬದ್ಧವಾಗಿ ಕರ್ನಾಟಕಕ್ಕೆ ಸಿಗಬೇಕಾದ ಪಾಲು 45 ಟಿಎಂಸಿ. ಇದರ ಹೊರತಾಗಿಯೂ ಕೇವಲ ಏಳೂವರೆ ಟಿಎಂಸಿ ನೀರನ್ನು ಕುಡಿಯಲಿಕ್ಕಾಗಿ ಬಳಸಲು ಹೊರಟಾಗ ವಿರೋಧಿಸಲು ಗೋವಾಕ್ಕೆ ಕಾರಣಗಳೇ ಇರಲಿಲ್ಲ. ಸರಿಯಾಗಿ ಹತ್ತುವರ್ಷಗಳ ಹಿಂದೆ ಈ ಯೋಜನೆಗೆ ಅನುಮತಿ ನೀಡಿದ್ದ ಎನ್‌ಡಿಎ ಸರ್ಕಾರ ನಂತರ ಗೋವಾದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರದ ಒತ್ತಡಕ್ಕೆ ಮಣಿದು ಅದನ್ನು ಹಿಂದೆಗೆದುಕೊಂಡಿತ್ತು. ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಯಾವ ಪಕ್ಷವೂ ಈ ವಿವಾದವನ್ನು ನಿಷ್ಪಕ್ಷಪಾತವಾಗಿ ನಿರ್ವಹಣೆ ಮಾಡಲೇ ಇಲ್ಲ. ರಚನೆಯಾಗಿರುವ ನ್ಯಾಯಮಂಡಳಿಯನ್ನು ರದ್ದುಪಡಿಸಲು ಈಗ ಸಾಧ್ಯ ಇಲ್ಲ. ನಿಗದಿತ ಅವಧಿಯೊಳಗೆ ತನ್ನ ಕಾರ್ಯವನ್ನು ಮುಗಿಸಿ ವಿವಾದಕ್ಕೆ ಸರ್ವಸಮ್ಮತ ಪರಿಹಾರವನ್ನು ಕಂಡುಕೊಳ್ಳಲು ನೆರವಾಗುವುದಷ್ಟೇ ಉಳಿದಿರುವ ದಾರಿ. ಇದು ಸಾಧ್ಯವಾಗಬೇಕಾದರೆ ನ್ಯಾಯಮಂಡಳಿ ಕಾರ್ಯನಿರ್ವಹಣೆಗೆ ಅಗತ್ಯವಾದ ಮೂಲಸೌಕರ್ಯಗಳನ್ನು ಕೇಂದ್ರ ಸರ್ಕಾರ ತಕ್ಷಣ ಕಲ್ಪಿಸಿಕೊಡಬೇಕು. ಇದಕ್ಕೆ ಮೂಲ ಆದೇಶದಲ್ಲಿರುವ ದೋಷಗಳು ಕಾರಣವಾಗಿದ್ದರೆ ಅದನ್ನು ತಕ್ಷಣ ಸರಿಪಡಿಸಬೇಕು. ನ್ಯಾಯಮಂಡಳಿ ರಚನೆಗೆ ಆತುರ ತೋರಿದ ಕೇಂದ್ರ ಸರ್ಕಾರ ಅದರ ಅಗತ್ಯಗಳನ್ನು ಪೂರೈಸಲು ಮೀನಮೇಷ ಎಣಿಸುತ್ತಿರುವುದು ಖಂಡನೀಯ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.