ಗಲಭೆ ನಿಯಂತ್ರಿಸಿ ಕೋಮುಗಲಭೆಯ ಬೆಂಕಿಯಿಂದ ಅಸ್ಸಾಂ ರಾಜ್ಯ ದಹಿಸುತ್ತಿದೆ. ಇತ್ತೀಚಿನ ವರದಿ ಪ್ರಕಾರ ಹಿಂಸಾಚಾರದಲ್ಲಿ 40 ಮಂದಿ ಮೃತಪಟ್ಟಿದ್ದು 50,000ಕ್ಕೂ ಹೆಚ್ಚು ಮಂದಿ ಪ್ರಾಣರಕ್ಷಣೆಗಾಗಿ ಮನೆಬಿಟ್ಟು ಹೋಗಿದ್ದಾರೆ. ಈ ಹಿಂಸಾಚಾರ ಅನಿರೀಕ್ಷಿತವಾದುದಲ್ಲ. ವಿಭಿನ್ನ ಬುಡುಕಟ್ಟುಗಳು, ಸಂಸ್ಕೃತಿ ಮತ್ತು ಭಾಷೆಗಳನ್ನು ಹೊಂದಿರುವ ಅಸ್ಸಾಂನ ವಿವಿಧತೆಯಲ್ಲಿಯೇ ಅದು ಎದುರಿಸುತ್ತಾ ಬಂದ ಬಿಕ್ಕಟ್ಟಿನ ಬೀಜ ಇದೆ. ಕಳೆದ 50 ವರ್ಷಗಳಲ್ಲಿ ಅಸ್ಸಾಮಿನ ನಕ್ಷೆ ಗುರುತಿಸಲಾಗದಷ್ಟು ಬದಲಾಗಿದೆ. ದೇಶ ವಿಭಜನೆಯಾದಾಗ ಈ ರಾಜ್ಯದ ಮುಸ್ಲಿಂ ಪ್ರದೇಶವನ್ನು ಈಗಿನ ಬಾಂಗ್ಲಾದೇಶಕ್ಕೆ ಒಪ್ಪಿಸಲಾಗಿತ್ತು. ಅದರ ನಂತರ ಒಂದೊಂದೇ ಭಾಗ ಪ್ರತ್ಯೇಕಗೊಂಡು ಅರುಣಾಚಲ,ನಾಗಲ್ಯಾಂಡ್, ಮೇಘಾಲಯ, ಮಿಜೋರಾಂ ಎಂಬ ಸ್ವತಂತ್ರ ರಾಜ್ಯಗಳು ಅಸ್ತಿತ್ವಕ್ಕೆ ಬಂದಿವೆ. ಈ ದಾರಿಯನ್ನೇ ಹಿಡಿದಿರುವ ಹಲವಾರು ಸಂಘಟನೆಗಳು ಪ್ರತ್ಯೇಕತಾ ಹೋರಾಟ ನಡೆಸುತ್ತಿವೆ. ಬ್ರಹ್ಮಪುತ್ರ ನದಿಯ ಉತ್ತರ ದಂಡೆಯ ಉದ್ದಕ್ಕೂ ಇರುವ ಬೋಡೋಗಳು ತಾವೇ ಪ್ರತ್ಯೇಕ ಎನ್ನುತ್ತಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಅವರು ಸ್ವತಂತ್ರ ಬೋಡೋಲ್ಯಾಂಡ್‌ಗಾಗಿ ಹೋರಾಟ ನಡೆಸುತ್ತಿದ್ದಾರೆ. ಇದರ ಜತೆಯಲ್ಲಿ ಅಸ್ಸಾಂ ಸಂಯುಕ್ತ ವಿಮೋಚನಾ ರಂಗ (ಉಲ್ಪಾ) `ಸ್ವತಂತ್ರ ಅಸ್ಸಾಂ~ಗಾಗಿ ಹಿಂಸೆಯ ದಾರಿಯನ್ನು ತುಳಿದಿದೆ. ಈಗ ಹಿಂಸಾಚಾರ ಭುಗಿಲೆದ್ದಿರುವ ಮೂರು ಜಿಲ್ಲೆಗಳಾದ ಕೊಕ್ರಜಾರ್, ಚಿರಾಂಗ್ ಮತ್ತು ಬಾಂಗ್ಲಾಗಡಿಗೆ ಹೊಂದಿಕೊಂಡಿರುವ ಧುಬ್ರಿ ಜಿಲ್ಲೆಗಳು ಬೋಡೋಲ್ಯಾಂಡ್ ಚಳುವಳಿ ಪ್ರಭಾವ ಹೊಂದಿರುವ ಪ್ರದೇಶ. ಅಲ್ಲಿ ಚುನಾಯಿತ ಸರ್ಕಾರವೇ ಇಲ್ಲದಿರುವಂತಹ ಪರಿಸ್ಥಿತಿಯೇ ಈಗಿನ ಅನಿಯಂತ್ರಿತ ಹಿಂಸಾಚಾರಕ್ಕೆ ಮುಖ್ಯ ಕಾರಣ. ಬಾಂಗ್ಲಾವಿಮೋಚನೆಗಾಗಿ ನಡೆದ ಯುದ್ಧದ ಮೊದಲು ಮತ್ತು ನಂತರದ ದಿನಗಳಲ್ಲಿ ಆ ದೇಶದಿಂದ ಲಕ್ಷಾಂತರ ಮಂದಿ ಬಂದು ಅಸ್ಸಾಂನಲ್ಲಿ ಸೇರಿಕೊಂಡಿದ್ದರು. ಇವರಲ್ಲಿ ಬಹಳಷ್ಟು ಮಂದಿ ಅಕ್ರಮವಾಗಿ ಸ್ವದೇಶಕ್ಕೆ ಹಿಂದಿರುಗದೆ ಇಲ್ಲಿಯೇ ನೆಲೆಊರಿದ್ದಾರೆ. ಅವರ ಜತೆಯಲ್ಲಿ ಬಿಹಾರ ಮತ್ತು ಉತ್ತರಪ್ರದೇಶಗಳಿಂದ ಕೂಲಿಗಾಗಿ ವಲಸೆ ಬಂದವರೂ ಸೇರಿಕೊಂಡಿದ್ದಾರೆ. ಈ ವಲಸೆಕೋರರು ರಾಜ್ಯದ ಆರ್ಥಿಕ ಚಟುವಟಿಕೆ ಮತ್ತು ರಾಜಕೀಯದ ಮೇಲೆ ಹಿಡಿತ ಸಾಧಿಸುತ್ತಿದ್ದಾರೆ ಎಂಬ ಆತಂಕ ಸ್ಥಳೀಯರಲ್ಲಿದೆ. ಈ ಅಸಮಾಧಾನವನ್ನೇ ಬಂಡವಾಳಮಾಡಿಕೊಂಡು ಉಲ್ಫಾದಂತಹ ಸಂಘಟನೆ ವಲಸೆಬಂದವರನ್ನು ಗುರಿಯಾಗಿಟ್ಟುಕೊಂಡು ಹಿಂಸಾಚಾರ ನಡೆಸುತ್ತಿದೆ. ರಾಜೀವ್‌ಗಾಂಧಿ ಪ್ರಧಾನಿಯಾಗಿದ್ದ ಕಾಲದಲ್ಲಿ ಅಸ್ಸಾಂ ಗಣಸಂಗ್ರಾಮ ಪರಿಷತ್ ಜತೆ ಮಾಡಿಕೊಂಡ ಒಪ್ಪಂದದಿಂದ ಈ ಸಮಸ್ಯೆ ಬಗೆಹರಿಯಬಹುದೆಂಬ ನಿರೀಕ್ಷೆ ಬಹುಬೇಗ ಹುಸಿಯಾಯಿತು. 1966ರಿಂದ 1971ರ ವರೆಗೆ ಹೊರಗಿನಿಂದ ಬಂದವರಿಗೆ ಹತ್ತುವರ್ಷ ಮತಾಧಿಕಾರ ನೀಡದಿರಲು ಮತ್ತು ಅಲ್ಲಿಂದೀಚೆಗೆ ಬಂದವರನ್ನು ಹೊರಗೆ ಕಳಿಸಲು ಸರ್ಕಾರ ಒಪ್ಪಿತ್ತು. ಒಪ್ಪಂದ ಮಾಡಿಕೊಂಡ ಸಂಘಟನೆಯೇ ಅಧಿಕಾರ ಬಂದರೂ ಒಪ್ಪಂದವನ್ನು ಜಾರಿ ಮಾಡಲು ಸಾಧ್ಯವಾಗಲಿಲ್ಲ. ಮತಬ್ಯಾಂಕ್ ರಾಜಕೀಯದಲ್ಲಿ ತೊಡಗಿರುವ ಆಡಳಿತಾರೂಢ ಕಾಂಗ್ರೆಸ್ ಪಕ್ಷ ಕೂಡಾ ಈ ಸಮಸ್ಯೆಯ ಪರಿಹಾರಕ್ಕೆ ಆಸಕ್ತಿತೋರಿಲ್ಲ. ರಾಜ್ಯಸರ್ಕಾರ ಮೊದಲು ಈಗಿನ ಹಿಂಸಾಚಾರವನ್ನು ಕಟ್ಟುನಿಟ್ಟಿನ ಕ್ರಮದ ಮೂಲಕ ನಿಯಂತ್ರಿಸಬೇಕು, ಜತೆಯಲ್ಲಿ ಹಿಂಸೆಗೆ ಕಾರಣವಾಗಿರುವ ವಲಸೆಕೋರರ ಸಮಸ್ಯೆ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.