ಹುಲಿಗಳನ್ನು ಸಂರಕ್ಷಿಸಿ ರಾಷ್ಟ್ರದ ಹುಲಿ ಅಭಯಾರಣ್ಯಗಳ ಹೃದಯ ಭಾಗಗಳಲ್ಲಿ (ಕೋರ್ ಏರಿಯಾ) ಪ್ರವಾಸೋದ್ಯಮ ಚಟುವಟಿಕೆಗಳಿಗೆ ತತ್‌ಕ್ಷಣದಿಂದಲೇ ಜಾರಿಗೆ ಬರುವಂತೆ ಸುಪ್ರೀಂಕೋರ್ಟ್ ನಿಷೇಧ ಹೇರಿದೆ. ಹುಲಿ ಸಂರಕ್ಷಣೆಯ ಹಾದಿಯಲ್ಲಿ ಇದು ಮಹತ್ವದ ತೀರ್ಪು. ವಿಶ್ವದಲ್ಲಿರುವ ಹುಲಿಗಳ ಪೈಕಿ ಅರ್ಧದಷ್ಟು ಹುಲಿಗಳು ಈಗ ಭಾರತದಲ್ಲೇ ಇವೆ ಎಂದರೆ ಇದರ ಮಹತ್ವ ಅರಿವಾದೀತು. ಒಂದು ದಶಕದ ಹಿಂದೆ ವಿಶ್ವದಲ್ಲಿ 7000 ಹುಲಿಗಳಿದ್ದವು. ಈಗ ವಿಶ್ವದಲ್ಲಿ ಉಳಿದಿರುವುದು ಬರೀ 3000 ಹುಲಿಗಳು ಎಂಬುದು ವನ್ಯಜೀವಿ ಸಂಘಟನೆಗಳ ಅಂದಾಜು. ಈ ಪೈಕಿ ಭಾರತದಲ್ಲಿ ಈಗ ಉಳಿದುಕೊಂಡಿರುವ ಹುಲಿಗಳ ಸಂಖ್ಯೆ ಕೇವಲ 1700. ಇವುಗಳಲ್ಲಿ ನಮ್ಮ ರಾಜ್ಯದಲ್ಲೇ ಇರುವ ಹುಲಿಗಳ ಸಂಖ್ಯೆ 300. ಬೇರೆ ರಾಜ್ಯಗಳಿಗೆ ಹೋಲಿಸಿದರೆ ಈ ಸಂಖ್ಯೆ ಕರ್ನಾಟಕದಲ್ಲೇ ಹೆಚ್ಚು ಎಂಬುದು ನಾವು ಹೆಮ್ಮೆ ಪಡುವಂತಹದ್ದು. ಒಂದು ಶತಮಾನದ ಹಿಂದೆ ದೇಶದಲ್ಲಿ 40,000 ಹುಲಿಗಳಿದ್ದವು ಎಂದರೆ ಹುಲಿಗಳ ವಿನಾಶ ಯಾವ ಪ್ರಮಾಣದಲ್ಲಿ ಆಗಿದೆ ಎಂಬುದನ್ನು ಊಹಿಸಬಹುದು. ಹುಲಿಗಳ ಚರ್ಮ, ಪಂಜ, ಮೂಳೆಗಳೆಲ್ಲವೂ ಅಮೂಲ್ಯ. ಚೀನಿ ವೈದ್ಯಕೀಯ ಪದ್ಧತಿಯ್ಲ್ಲಲಂತೂ ಇವುಗಳಿಗೆ ಅಪಾರ ಬೇಡಿಕೆ. ಹೀಗಾಗಿ ಹುಲಿಗಳನ್ನು ನಿರಂತರವಾಗಿ ಬೇಟೆಯಾಡಲಾಗುತ್ತಿದೆ. ಹುಲಿಗಳ ಸಂರಕ್ಷಣೆಗೆಂದು 40 ವರ್ಷಗಳ ಹಿಂದೆ 1972ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ `ಹುಲಿ ಯೋಜನೆ~ ಕಾರ್ಯಕ್ರಮ ಆರಂಭಿಸಿದಾಗ ಭಾರತದಲ್ಲಿ ಸುಮಾರು 3000 ಹುಲಿಗಳಿದ್ದವು. ಆಗಿನಿಂದಲೂ ಹುಲಿಗಳ ಸಂರಕ್ಷಣೆಗೆ ಸಾವಿರಾರು ಕೋಟಿ ರೂಪಾಯಿ ಹಣ ಖರ್ಚಾಗಿದೆ. ಇದರ ಫಲವಾಗಿ ಅಂತೂ 1700 ಹುಲಿಗಳನ್ನಾದರೂ ರಾಷ್ಟ್ರದಲ್ಲಿ ಉಳಿಸಿಕೊಳ್ಳುವಲ್ಲಿ ಸಫಲರಾಗಿದ್ದೇವೆ. ಈಗ ಸುಪ್ರೀಂಕೋರ್ಟ್‌ನ ಹೊಸ ಆದೇಶ, ಮುಂದಿನ ಕೋರ್ಟ್ ನಿರ್ದೇಶನ ನೀಡುವವರೆಗೂ ಚಾಲ್ತಿಯಲ್ಲಿರುತ್ತದೆ. ಅಭಯಾರಣ್ಯಗಳ ಹೃದಯ ಭಾಗಗಳಲ್ಲಿ ಪ್ರವಾಸೋದ್ಯಮಕ್ಕೆ ಅವಕಾಶ ಕುರಿತಂತೆ ತಮ್ಮ ನಿಲುವುಗಳನ್ನು ವಿವರಿಸುವ ಪ್ರಮಾಣಪತ್ರಗಳನ್ನು ಸಲ್ಲಿಸಲು 13 ರಾಜ್ಯಗಳ ಸರ್ಕಾರಗಳಿಗೆ ಕೋರ್ಟ್ ಈ ಹಿಂದೆ ನಿರ್ದೇಶನ ನೀಡಿತ್ತು. ಆದರೆ ಅನೇಕ ರಾಜ್ಯ ಸರ್ಕಾರಗಳು ಈ ನಿರ್ದೇಶನ ಪಾಲಿಸದೆ ಇರುವುದು ಹುಲಿ ಸಂರಕ್ಷಣೆಯ ವಿಚಾರವನ್ನು ಸರ್ಕಾರಗಳು ಎಷ್ಟು ಗಂಭೀರವಾಗಿ ಪರಿಗಣಿಸುತ್ತಿವೆ ಎಂಬುದಕ್ಕೆ ನಿದರ್ಶನ. ದೇಶದಲ್ಲಿ ಒಟ್ಟು 40 ಹುಲಿ ಅಭಯಾರಣ್ಯಗಳಿವೆ. ದೇಶಿ ಪ್ರವಾಸೋದ್ಯಮ ಹೆಚ್ಚಾದಂತೆ ಈ ಪ್ರದೇಶಗಳಿಗೆ ಪ್ರವಾಸಿಗರ ಸಂಖ್ಯೆಯೂ ಹೆಚ್ಚಿದೆ. ಈ ಪ್ರದೇಶಗಳ ಸುತ್ತಮುತ್ತ ಐಷಾರಾಮಿ ಹೋಟೆಲುಗಳು, ಜೀಪ್ ಸಫಾರಿಗಳು ಹಾಗೂ ಹೊಸ ವರ್ಷಗಳ ಪಾರ್ಟಿಗಳು ಹೆಚ್ಚಾಗಿವೆ ಎಂಬಂತಹ ದೂರುಗಳಿರುವುದು ನಿಜ. ಸುಪ್ರೀಂಕೋರ್ಟ್‌ನ ಈ ಹೊಸ ಆದೇಶದಿಂದ ಭಾರತದ ಪ್ರವಾಸೋದ್ಯಮಕ್ಕೆ ಕೋಟ್ಯಂತರ ರೂಪಾಯಿಗಳ ನಷ್ಟವಾಗುತ್ತದೆ ಎಂಬ ಭೀತಿ ವ್ಯಕ್ತವಾಗಿದೆ. ಜೊತೆಗೆ ವನ್ಯಜೀವಿ ಪ್ರವಾಸೋದ್ಯಮ ನಿಷೇಧಿಸುವುದರಿಂದ ಕಳ್ಳಬೇಟೆಗಾರರಿಗೆ ಅನುಕೂಲವೇ ಆಗುತ್ತದೆ ಎಂಬಂತಹ ವಾದಗಳೂ ಇವೆ. ಆದರೆ ಈ ನಿಟ್ಟಿನಲ್ಲಿ ಇರುವ ಕಾನೂನುಗಳ ನಿರ್ವಹಣೆ ಸರಿಯಾಗಿ ಆಗದಿರುವಂತಹ ಸಂದರ್ಭಗಳಲ್ಲಿ ಕೋರ್ಟ್ ಕೈಗೊಂಡಿರುವ ಈ ಎಚ್ಚರಿಕೆಯ ಕ್ರಮ ಮುಖ್ಯವಾಗುತ್ತದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.