ಸಾರ್ವಜನಿಕ ಸ್ಥಳಗಳಲ್ಲಿ ಸುರಕ್ಷತೆ ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯ ಅಸುರಕ್ಷತೆಯ ವಿಚಾರ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಚಲಿಸುತ್ತಿದ್ದ ರೈಲಿನಿಂದ ಮದ್ದೂರು ಬಳಿ 19 ವರ್ಷದ ಯುವತಿಯೊಬ್ಬಳನ್ನು ಕೆಳಗೆ ತಳ್ಳಿದ ಪ್ರಕರಣ ಆಘಾತಕಾರಿಯಾದದ್ದು. ಬೆಂಗಳೂರಿನಿಂದ ಮೈಸೂರಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಈ ಯುವತಿಗೆ ರೈಲೊಳಗೆ ಯುವಕರ ಗುಂಪೊಂದು ನೀಡಿದ ಲೈಂಗಿಕ ಕಿರುಕುಳ, ಹಲ್ಲೆ ಯತ್ನಗಳು ಖಂಡನೀಯ. ಆಧುನಿಕ ಬದುಕಿನ ಒತ್ತಡಗಳಿಂದಾಗಿ ಸಮಾಜದಲ್ಲಿನ ಮಹಿಳೆಯ ಪಾತ್ರ ಸಂಕೀರ್ಣವಾಗುತ್ತಿದೆ. ಮನೆಯೊಳಗೇ ಬಂಧಿಯಾಗಿದ್ದ ಮಹಿಳೆ ಹೊರ ಬರುವ ಸ್ವಾತಂತ್ರ್ಯಕ್ಕಾಗಿ ಹೋರಾಟಗಳನ್ನೇ ನಡೆಸಬೇಕಾಯಿತು. ನಂತರ, ಹೊರಗೆ ದುಡಿಯುವ ಅವಕಾಶಗಳು ಲಭ್ಯವಾದವು. ಅನೇಕ ಸಂದರ್ಭಗಳಲ್ಲಿ ಮಹಿಳೆ ಹೊರಗೆ ದುಡಿಯುವುದು ಅನಿವಾರ್ಯ ಎಂಬಂತಹ ಸ್ಥಿತಿಗಳೂ ಈಗ ಸೃಷ್ಟಿಯಾಗುತ್ತಿವೆ. ಆದರೆ ಅದಕ್ಕೆ ಅನುಗುಣವಾಗಿ ಮಹಿಳೆ ಕುರಿತಂತಹ ಪರಿಕಲ್ಪನೆ, ಧೋರಣೆಗಳು ಮಾತ್ರ ಸಮಾಜದಲ್ಲಿ ಬದಲಾಗಲಿಲ್ಲ. ಸಮಾನ ನೆಲೆಗಳಲ್ಲಿ ವ್ಯಕ್ತಿಯಾಗಿ ಆಕೆಯನ್ನು ಪರಿಭಾವಿಸುವ ಮನಸ್ಥಿತಿ ಸಮಾಜದಲ್ಲಿ ಮೂಡಿಲ್ಲ. ಹೀಗೆಂದೇ ಸಾರ್ವಜನಿಕ ಸಾರಿಗೆ ಬಸ್ಸುಗಳಲ್ಲಿ, ರೈಲುಗಳಲ್ಲಿ ಅಥವಾ ಸಾರ್ವಜನಿಕ ರಸ್ತೆಗಳಲ್ಲಿ ಚುಡಾಯಿಸುವಿಕೆ, ಲೈಂಗಿಕ ಕಿರುಕುಳ ಅಥವಾ ಕೆಲವೊಮ್ಮೆ ಲೈಂಗಿಕ ದುರ್ವರ್ತನೆಗಳನ್ನು ಮಹಿಳೆ ನಿರಂತರವಾಗಿ ಅನುಭವಿಸುವುದು ಮುಂದುವರೆದಿದೆ. ಇದರ ತೀವ್ರ ಹಿಂಸಾತ್ಮಕ ಪ್ರತಿರೂಪವೇ ರೈಲಿನಿಂದ ಯುವತಿಯನ್ನು ಕೆಳಗೆ ತಳ್ಳಿದ ಘಟನೆ. ಕುಸಿಯುತ್ತಿರುವ ಸಾಮಾಜಿಕ ಮೌಲ್ಯಗಳಿಗೂ ಇದು ದ್ಯೋತಕ. ರಾಜ್ಯದ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಈ ಮಟ್ಟದ ಕ್ರೌರ್ಯದ ಘಟನೆ ಹಿಂದೆಂದೂ ವರದಿಯಾದಂತಿಲ್ಲ. ಬಹುಶಃ ದಕ್ಷಿಣ ಭಾರತದಲ್ಲೇ ರೈಲಿನಲ್ಲಿ ಇಂತಹ ಘಟನೆ ನಡೆದಿರುವುದು ಇದೇ ಮೊದಲು ಎಂಬುದೂ ರಾಜ್ಯಕ್ಕೆ ನಾಚಿಕೆಗೇಡಿನ ವಿಚಾರ. ಕಳೆದ ಐದು ವರ್ಷಗಳಲ್ಲಿ ರಾಜ್ಯದಲ್ಲಿ ಮಹಿಳೆಯರ ವಿರುದ್ಧದ ಅಪರಾಧ ಪ್ರಕರಣಗಳು ಏರಿಕೆಯಾಗಿರುವುದನ್ನು ಮೊನ್ನೆ ವಿಧಾನಪರಿಷತ್ತಿನಲ್ಲಿ ಪ್ರಸ್ತಾಪಿಸಲಾಗಿದೆ. ಈ ಪ್ರವೃತ್ತಿ ಸೃಷ್ಟಿಸಬಹುದಾದ ಸಮಾಜವಾದರೂ ಎಂತಹದ್ದು? ಇದರಿಂದ ಹದಗೆಡಬಹುದಾದ ಸಾಮಾಜಿಕ ಸ್ವಾಸ್ಥ್ಯದ ಕಲ್ಪನೆ ಬಹುಶಃ ಸ್ವಾರ್ಥ ರಾಜಕಾರಣದಲ್ಲೇ ಮುಳುಗಿರುವ ನಮ್ಮನ್ನಾಳುವ ನಾಯಕರಿಗೆ ಅರ್ಥವಾಗುವಂತಹದ್ದಲ್ಲ. ಬೆಂಗಳೂರಿನ ಸಿದ್ಧ ಉಡುಪು ಕಾರ್ಖಾನೆಗಳು ಸೇರಿದಂತೆ ಹಲವು ಘಟಕಗಳಲ್ಲಿ ದುಡಿಮೆಗಾಗಿ ಬೇರೆ ಬೇರೆ ಊರುಗಳಿಂದ ಬೆಂಗಳೂರು -ಮೈಸೂರು ರೈಲುಗಳಲ್ಲಿ ಸಂಚರಿಸುವ ಮಹಿಳೆಯರ ಸಂಖ್ಯೆ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿದೆ. ದುಡಿಯುವ ಮಹಿಳೆಯ ಆರ್ಥಿಕ ಬಲ ಆಕೆಯ ಸಾಮಾಜಿಕ ಸ್ಥಾನಮಾನವನ್ನೇನೂ ಬದಲಿಸಿಲ್ಲ. ಮನೆಯೊಳಗೆ ಹಾಗೂ ಹೊರಗೆ ಇನ್ನೂ ಹೆಚ್ಚಿನ ರೀತಿಯ ವಿವಿಧ ರೀತಿಗಳ ಹಿಂಸೆಗಳಿಗೆ ಗುರಿಯಾಗುವುದು ಈಚಿನ ದಿನಗಳಲ್ಲಿ ಹೆಚ್ಚಾಗಿದೆ. ಸಾಮಾಜಿಕ ಸ್ಥಿತ್ಯಂತರಗಳ ಈ ಕಾಲದಲ್ಲಿ ಮಹಿಳೆಯನ್ನು ಕಾಣುವ ದೃಷ್ಟಿ ಬದಲಾಗಬೇಕಿರುವುದು ಮುಖ್ಯ. ಇದಕ್ಕಾಗಿ ಸರ್ಕಾರ ನಿರಂತರ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಬೇಕಿದೆ. ಸಾರ್ವಜನಿಕ ಸಾರಿಗೆಗಳಲ್ಲಿ ಮಹಿಳಾ ಪ್ರಯಾಣಿಕರ ಸುರಕ್ಷತೆಗಾಗಿ ಕಟ್ಟುನಿಟ್ಟಿನ ಭದ್ರತಾಕ್ರಮಗಳು ಒಂದೆಡೆ ಜಾರಿಯಾಗಬೇಕು. ಮತ್ತೊಂದೆಡೆ ಇಂತಹ ಹಿಂಸಾಚಾರಗಳನ್ನು ನಡೆಸುವವರಿಗೆ ತೀವ್ರತರದ ಶಿಕ್ಷೆ ತ್ವರಿತವಾಗಿ ಆಗುವುದೂ ಮುಖ್ಯ. ಹೆಣ್ಣುಮಕ್ಕಳ ಕುರಿತ ದೃಷ್ಟಿ ಬದಲಾವಣೆಗೆ ಶಾಲಾಮಟ್ಟಗಳಲ್ಲೇ ಪಠ್ಯಗಳು ಪೂರಕವಾಗಿರಬೇಕು. ಜೊತೆಗೆ ಹೆಣ್ಣುಮಕ್ಕಳಿಗೆ ಸ್ವರಕ್ಷಣೆಯ ತರಬೇತಿಯನ್ನು ಶಿಕ್ಷಣ ವ್ಯವಸ್ಥೆಯಲ್ಲೇ ಅಳವಡಿಸುವ ಕ್ರಮವೂ ಜಾರಿಯಾಗಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.