ದುರದೃಷ್ಟಕರ ವಾದ ರಾಜ್ಯದ ಪಶ್ಚಿಮಘಟ್ಟ ವ್ಯಾಪ್ತಿಯ ಹತ್ತು ಪ್ರದೇಶಗಳನ್ನು ವಿಶ್ವ ಪರಂಪರೆ ಪಟ್ಟಿಗೆ ಸೇರಿಸಿರುವ ಯುನೆಸ್ಕೋ ನಿರ್ಧಾರದ ವಿರುದ್ಧ ರಾಜ್ಯ ವಿಧಾನಸಭೆಯಲ್ಲಿ ಸರ್ವಾನುಮತದ ನಿರ್ಣಯ ಅಂಗೀಕರಿಸಿರುವುದು ದುರದೃಷ್ಟಕರ ಬೆಳವಣಿಗೆ. ಹೆಮ್ಮೆ ಪಡಬೇಕಾದ ವಿಷಯದ ಬಗ್ಗೆ ಆತಂಕ ವ್ಯಕ್ತಪಡಿಸುವಂತಹ ಅಜ್ಞಾನ ವ್ಯಕ್ತವಾಗಿರುವುದು ಬಾಲಿಶವಾಗಿದೆ. 2003 ರಿಂದಲೇ ರಾಜ್ಯ ಸರ್ಕಾರ ಈ ಪ್ರಯತ್ನವನ್ನು ವಿರೋಧಿಸುತ್ತಿದೆ. ಈ ಬಗ್ಗೆ ಕೇಂದ್ರ ಪರಿಸರ ಸಚಿವಾಲಯಕ್ಕೂ ಎರಡು ಬಾರಿ ಪತ್ರ ಬರೆದಿದೆ. ನಮ್ಮ ಪರಿಸರವನ್ನು ಉಳಿಸಿಕೊಳ್ಳಲು ನಮ್ಮ ಜನರೇ ಸಾಕು, ಯುನೆಸ್ಕೋ ನೆರವು ಬೇಡ ಎಂದು ಎಲ್ಲ ಶಾಸಕರು ಅಸಂಗತವಾಗಿ ವಾದಿಸಿದ್ದಾರೆ. `ಯುನೆಸ್ಕೊ ಘೋಷಣೆ ಬಗ್ಗೆ ರಾಜ್ಯಸರ್ಕಾರಕ್ಕೆ ಅಧಿಕೃತವಾದ ಪತ್ರ ಬಂದಿಲ್ಲ~ ಎಂದು ಅರಣ್ಯ ಸಚಿವರು ಹೇಳಿರುವುದು ಅವರ ತಿಳಿವಳಿಕೆಯ ಕೊರತೆಯನ್ನು ಹೇಳುತ್ತದೆ. ಕೇಂದ್ರದಲ್ಲಿ ಎನ್‌ಡಿಎ ಅಧಿಕಾರದಲ್ಲಿದ್ದಾಗ ಈ ಪ್ರಸ್ತಾವವನ್ನು ಯುನೆಸ್ಕೊಗೆ ಕಳುಹಿಸಿಕೊಡಲಾಗಿತ್ತು. ಯುನೆಸ್ಕೊ ಘೋಷಣೆಗೆ ಪಶ್ಚಿಮ ಘಟ್ಟ ಹಾದುಹೋಗುವ ಬೇರೆ ರಾಜ್ಯಗಳಾದ ಮಹಾರಾಷ್ಟ್ರ, ಗೋವಾ,ಕೇರಳ ಮತ್ತು ಗುಜರಾತ್‌ಗಳಲ್ಲಿ ವ್ಯಕ್ತವಾಗದ ವಿರೋಧ ಕರ್ನಾಟಕದಲ್ಲಿ ಏಕೆ ವ್ಯಕ್ತವಾಗುತ್ತಿದೆ? ಅದರಲ್ಲೂ ಕೊಡಗು ಜಿಲ್ಲೆಯಲ್ಲಿಯೇ ಯಾಕೆ ಜೋರಾಗಿ ಕೇಳಿಬರುತ್ತಿದೆ ಎನ್ನುವುದನ್ನು ಅರ್ಥಮಾಡಿಕೊಳ್ಳದಷ್ಟು ರಾಜ್ಯದ ಜನ ಮೂರ್ಖರಲ್ಲ. ಅರಣ್ಯ ಸಂಪತ್ತಿನಿಂದ ಶ್ರಿಮಂತವಾಗಿರುವ ಕೊಡಗು ಜಿಲ್ಲೆಯಲ್ಲಿ ಅರಣ್ಯ ಒತ್ತುವರಿ ಮಾಡಿಕೊಂಡಿರುವ ನೆಲಗಳ್ಳರು ಮತ್ತು ಮರಗಳ್ಳರ ಹಾವಳಿ ಮೊದಲಿನಿಂದಲೂ ಇದೆ. ಇಂತಹವರು ತಪ್ಪುಮಾಹಿತಿಗಳ ಮೂಲಕ ಅಮಾಯಕ ಜನರನ್ನು ಯುನೆಸ್ಕೊ ಘೋಷಣೆಯ ವಿರುದ್ಧ ಎತ್ತಿಕಟ್ಟುವ ಪ್ರಯತ್ನ ಮಾಡುತ್ತಿದ್ದಾರೆ. ಇಂತಹದ್ದೊಂದು ಸಂಚಿಗೆ ಗೌರವಾನ್ವಿತ ವಿಧಾನಸಭಾ ಅಧ್ಯಕ್ಷರು ಕೂಡಾ ಬೆಂಬಲ ನೀಡುತ್ತಿರುವುದು ಖಂಡನೀಯ.ನನಗೆ ಜಿಲ್ಲೆಯ ಜನರ ಹಿತ ಮುಖ್ಯ. ಜಿಲ್ಲೆಯ ಅಸ್ತಿತ್ವವನ್ನೇ ಯುನೆಸ್ಕೋ ಕಳೆಯುತ್ತದೆ ಎಂದಾದರೆ ನನಗೆ ಈ ಪೀಠವೇ ಬೇಡ, ಸ್ಪೀಕರ್ ಸ್ಥಾನವನ್ನು ಈಗಲೇ ಬಿಟ್ಟುಕೊಡಲು ಸಿದ್ಧ ಎಂದು ವಿಧಾನಸಭಾಧ್ಯಕ್ಷರು ಹೇಳಿರುವುದು ಪ್ರಚೋದನಕಾರಿ ಹೇಳಿಕೆಯಾಗಿಯೇ ಕಾಣುತ್ತದೆ. ಪಕ್ಷಭೇದ ಮರೆತು ಎಲ್ಲ ಶಾಸಕರೂ ಇದನ್ನು ವಿರೋಧಿಸುತ್ತಿರುವುದು ಕೂಡ ಮೂರ್ಖತನದ ಪರಮಾವಧಿ. ಕೇಂದ್ರ ಸರ್ಕಾರಕ್ಕೆ ನಿಯೋಗದಲ್ಲಿ ತೆರಳಿ ವಿಶ್ವಪರಂಪರೆ ಪಟ್ಟಿಗೆ ಸೇರ್ಪಡೆ ಬೇಡ ಎಂದು ವಾದಿಸಲೂ ನಿರ್ಣಯ ಕೈಗೊಂಡಿದ್ದಾರೆ. ಆತಂಕದಿಂದ ವಾದಿಸುತ್ತಿರುವವರೆಲ್ಲಾ, ಯುನೆಸ್ಕೋ ಹಣೆಪಟ್ಟಿಯಿಂದ ಎತ್ತಿನಹೊಳೆ, ಭದ್ರಾ ಮೇಲ್ದಂಡೆಯಂತಹ ನೀರಾವರಿ ಯೋಜನೆಗಳಿಗೆ ಅಡ್ಡಿಯಾಗಲಿದೆ, ಆನೆಗೊಂದಿ ಸೇತುವೆ ನಿರ್ಮಾಣಕ್ಕೆ ಅಡ್ಡಿಯಾಗಿದೆ ಎನ್ನುವ ಎರಡು ಸವಕಲು ಉದಾಹರಣೆಗಳನ್ನು ಕೊಡುತ್ತಾರೆಯೇ ಹೊರತು, ಸಮರ್ಥನೀಯ ವಾದ ಮಂಡಿಸಲು ತೊದಲುತ್ತಿದ್ದಾರೆ. ಈ ವಾದ ನಮ್ಮ ಹಸಿರು ಪರಿಸರವನ್ನು ರಾಜಾರೋಷವಾಗಿ ಲೂಟಿ ಹೊಡೆಯುತ್ತಿರುವವರನ್ನು ಸಮರ್ಥಿಸಿಕೊಳ್ಳುವಂತಿದೆ. ಪರಿಸರವಾದಿಗಳು ಮತ್ತು ಸರ್ಕಾರೇತರ ಸಂಸ್ಥೆಗಳ ಬಗ್ಗೆಯೂ ಆಕ್ರೋಶ ವ್ಯಕ್ತವಾಗಿರುವುದು ಕೂಡ ಅವರ ಮಟ್ಟವನ್ನು ಹೇಳುತ್ತದೆ. ನಮ್ಮ ಪರಿಸರವನ್ನು ಕಾಪಾಡುವ, ಪಶ್ಚಿಮಘಟ್ಟಗಳಲ್ಲಿ ಅಳಿವಿನಂಚಿನಲ್ಲಿರುವ ಅಪರೂಪದ ಜೀವಿಗಳನ್ನು, ತಳಿಗಳನ್ನು ಸಂರಕ್ಷಿಸುವ ಮಾತುಗಳನ್ನಾಡುವುದೇ ಸಂಸ್ಕೃತಿ. ಲೂಟಿಗೆ ಆಸ್ಪದವಾಗುವಂತೆ ಮಾತನಾಡುವುದು ವಿಕೃತಿ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.