ನೈತಿಕ ಪೊಲೀಸರನ್ನು ಹತ್ತಿಕ್ಕಿ ಮಂಗಳೂರಿನ ಹೊರವಲಯದಲ್ಲಿರುವ ಖಾಸಗಿ `ಹೋಂ ಸ್ಟೇ~ನಲ್ಲಿ `ಬರ್ತ್‌ಡೆ ಪಾರ್ಟಿ~ ಆಚರಿಸುತ್ತಿದ್ದ ಕಾಲೇಜು ವಿದ್ಯಾರ್ಥಿಗಳ ಮೇಲೆ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ನಡೆಸಿರುವ ದೈಹಿಕ ಹಲ್ಲೆ ಅತ್ಯಂತ ಹೇಯವಾದುದು. ಅನೈತಿಕ ಚಟುವಟಿಕೆಗಳನ್ನು ನಡೆಸುತ್ತಾ ರೇವ್ ಪಾರ್ಟಿ ನಡೆಸಲಾಗುತ್ತಿತ್ತು ಎಂದು ಆರೋಪಿಸಿ ಈ ಕಾರ್ಯಕರ್ತರು ಮೆರೆದಿರುವ ಅಟ್ಟಹಾಸ ಜನತಂತ್ರವನ್ನೇ ಅಣಕಿಸುವಂತಿದೆ. ಹೆಣ್ಣುಮಗಳೊಬ್ಬಳ ಕಪಾಳಕ್ಕೆ ಹೊಡೆಯುವುದು, ಮತ್ತೊಬ್ಬಳು ಹೆಣ್ಣುಮಗಳನ್ನು ಹಿಂದಿನಿಂದ ಬಲಾತ್ಕಾರದಿಂದ ಬಿಗಿದಪ್ಪಿರುವುದು, ಮತ್ತೊಬ್ಬಳ ಮುಖವನ್ನು ಬಲಾತ್ಕಾರವಾಗಿ ಎತ್ತಿತೋರಿಸಲು ಯತ್ನಿಸುತ್ತಿರುವಂತಹ ಆಘಾತಕಾರಿ ದೃಶ್ಯಗಳು ಟಿವಿ ವಾಹಿನಿಗಳಲ್ಲಿ ಬಿತ್ತರಗೊಂಡಿವೆ. ವಿದ್ಯಾರ್ಥಿಗಳನ್ನು ಅಟ್ಟಾಡಿಸಿಕೊಂಡು ಹಿಗ್ಗಾಮುಗ್ಗಾ ಎಳೆದಾಡಿ ದೈಹಿಕ ಹಲ್ಲೆಗಳನ್ನು ನಡೆಸಿರುವುದು ಗೂಂಡಾಗಿರಿಯಲ್ಲದೆ ಮತ್ತೇನಲ್ಲ. ಹೆಣ್ಣುಮಕ್ಕಳ ಮೇಲೆ ನಡೆಸಿರುವ ಲೈಂಗಿಕ ದುರ್ವರ್ತನೆಗಳು ಹಿಂದೂ ಸಂಸ್ಕೃತಿಯ ಪ್ರತೀಕವೇ ಎಂಬಂತಹ ಪ್ರಶ್ನೆಗಳನ್ನು ಈ ಹಿಂದೂ ವ್ಯಸನದ ಸಂಘಟನೆಗಳಿಗೆ ಎಷ್ಟು ಬಾರಿ ಕೇಳುವುದು? ಹಿಂದೂ ಜಾಗರಣ ವೇದಿಕೆ, ಶ್ರೀರಾಮಸೇನೆ, ಭಜರಂಗದಳ, ಶಿವಸೇನೆಯಂತಹ ಸಂಘಟನೆಗಳು ಭಾರತೀಯ ಸಂಸ್ಕೃತಿಯನ್ನು ಗುತ್ತಿಗೆ ಪಡೆದವರಂತೆ ತಮ್ಮ ಮೂಗಿನ ನೇರಕ್ಕೆ ವ್ಯಾಖ್ಯಾನ ಮಾಡುತ್ತಲೇ ಹೆಣ್ಣುಮಕ್ಕಳ ಮೇಲೆ ನಿಯಂತ್ರಣಗಳನ್ನು ಹೇರಲು ಅನುಸರಿಸುತ್ತಿರುವ ಕ್ರಮಗಳು ನಾಗರಿಕ ಸಮಾಜಕ್ಕೆ ತಕ್ಕದ್ದಲ್ಲ. ಹೆಣ್ಣುಮಕ್ಕಳ ವೇಷಭೂಷಣಗಳಿಂದ ಹಿಡಿದು ಅವರ ವೈಯಕ್ತಿಕ ಹಕ್ಕುಗಳ ಪರಿಧಿಯವರೆಗೆ ಈ ನಿಯಂತ್ರಣಗಳ ವ್ಯಾಪ್ತಿ ವಿಸ್ತರಿಸುತ್ತಿರುವುದು ಆತಂಕಕಾರಿ. ಹೆಣ್ಣುಮಕ್ಕಳ ಸುರಕ್ಷತೆ ವಿಚಾರದಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಕಳಂಕ ಅಂಟುತ್ತಿರುವುದು ದುರದೃಷ್ಟಕರ. ಅದೂ ಸುಶಿಕ್ಷಿತರ ಜಿಲ್ಲೆ ಎಂಬ ಖ್ಯಾತಿ ಪಡೆದ ಈ ಜಿಲ್ಲೆ ಈ ಕುಖ್ಯಾತಿಗೆ ಒಳಗಾಗುತ್ತಿರುವುದು ವಿಪರ್ಯಾಸ. 2009ರಲ್ಲಿ `ಪಬ್ ಸಂಸ್ಕೃತಿ~ ವಿರೋಧಿಸಲು ಮಂಗಳೂರಿನ ಪಬ್ ಒಂದರ ಮೇಲೆ ದಾಳಿ ನಡೆಸಿ ಹೆಣ್ಣುಮಕ್ಕಳ ಮೇಲೆ ಶ್ರೀರಾಮಸೇನೆ `ಗೂಂಡಾ~ಗಳು ನಡೆಸಿದ್ದ ದೈಹಿಕ ಹಲ್ಲೆ ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು. ಈಗ ನಡೆದಿರುವ ಈ ಕೃತ್ಯವೂ ಸ್ವಯಂಘೋಷಿತ ನೈತಿಕ ಪೊಲೀಸರು ಇದ್ದಕ್ಕಿದ್ದಂತೆ ನಡೆಸಿದ ಒಂದು ಪ್ರತ್ಯೇಕ ಘಟನೆಯಾಗಿರುವುದು ಸಾಧ್ಯವಿಲ್ಲ. `ಭಾರತೀಯ ಸಂಸ್ಕೃತಿ~ ಎಂದರೆ ಏನು ಎಂಬ ವಿಚಾರವಾಗಿ ನಡೆಸಲಾಗುತ್ತಿರುವ ರಾಜಕೀಯ ಹೋರಾಟದ ರೂಪುರೇಷೆಯ ಭಾಗವಾಗಿಯೇ ಇದು ಇದೆ. ಆದರೆ ಮಾರುಕಟ್ಟೆ ಆರ್ಥಿಕತೆಗೆ ಮುಕ್ತವಾಗಿ ತೆರೆದುಕೊಂಡಿರುವ ಜಾಗತೀಕರಣದ ಈ ಯುಗದಲ್ಲಿ ಸಂಸ್ಕೃತಿ ಎನ್ನುವುದೇ ಸಾಪೇಕ್ಷವಾದದ್ದು ಎಂಬುದನ್ನು ಈ ಢೋಂಗಿ `ನೈತಿಕ ಪೊಲೀಸರು~ ಅರಿತುಕೊಳ್ಳಬೇಕಿದೆ. ಅಷ್ಟೊಂದು ಸಂಸ್ಕೃತಿಯ ಕಾಳಜಿ ಇದ್ದರೆ ಭಾರತೀಯ ಸಂಸ್ಕೃತಿಗೇ ಕಪ್ಪುಚುಕ್ಕೆಯಾಗಿರುವ ಹೆಣ್ಣು ಭ್ರೂಣಹತ್ಯೆ, ವರದಕ್ಷಿಣೆ ವಿರುದ್ಧ ಹೋರಾಡಲಿ. ದೇವರ ಹೆಸರಲ್ಲಿ ಹೆಣ್ಣನ್ನು ಲೈಂಗಿಕವಾಗಿ ಶೋಷಿಸುವ ದೇವದಾಸಿ ಪದ್ಧತಿ ವಿರುದ್ಧ ದನಿ ಎತ್ತಲಿ. ಪುರುಷ ಯಜಮಾನಿಕೆಯ ಠೇಂಕಾರದಲ್ಲಿ ಮಹಿಳೆಯನ್ನು ಹದ್ದುಬಸ್ತಿನಲ್ಲಿಡಲು ಯತ್ನಿಸುವ ಈ `ತಾಲಿಬಾನ್~ ಸಂಸ್ಕೃತಿಯನ್ನು ನಿಯಂತ್ರಿಸುವಲ್ಲಿ ಸರ್ಕಾರ ವಿಫಲವಾಗಿರುವುದು ಖಂಡನೀಯ. ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಮೂಲಕ ಈ ಕೃತ್ಯಗಳಿಗೆ ತನ್ನ ಬೆಂಬಲ ಇಲ್ಲ ಎಂಬ ಗಟ್ಟಿ ಸಂದೇಶವನ್ನು ಜನತೆಗೆ ಸರ್ಕಾರ ರವಾನಿಸಬೇಕಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.