ಮರಳು ದಂಧೆಗೆ ಕಡಿವಾಣ ಹಾಕಿ ಸಕಲೇಶಪುರ ತಾಲೂಕಿನ ಆಲೇಬೇಲೂರು ಹಾಗೂ ವಡೂರು ಗ್ರಾಮದ ಬಳಿ ಹೇಮಾವತಿ ನದಿಯಲ್ಲಿ ರಾಜಾರೋಷವಾಗಿ ಮರಳು ತೆಗೆದು, ಅಕ್ರಮವಾಗಿ ಸಾಗಣೆ ಮಾಡುತ್ತಿರುವುದು ನಿರ್ಲಜ್ಜ ಸಂಗತಿ. ನದಿಯ ಅಕ್ಕಪಕ್ಕದಲ್ಲಿ ಇರುವ ಮರಳು ತೆಗೆಯುವುದಕ್ಕೆ ಮಾತ್ರ ಸರ್ಕಾರ ಅನುಮತಿ ನೀಡುತ್ತದೆ. ಮರಳು ತೆಗೆದು ಲಾರಿಗಳಿಗೆ ತುಂಬಿಸುವ ಗುತ್ತಿಗೆ ಪಡೆಯುವ ಗುತ್ತಿಗೆದಾರರು ನಂತರ ಎಲ್ಲ ಷರತ್ತುಗಳನ್ನೂ ಗಾಳಿಗೆ ತೂರಿ ಅಕ್ರಮಗಳಲ್ಲಿ ನಿರತರಾಗುತ್ತಾರೆ. ಗುತ್ತಿಗೆ ಪಡೆಯವುದನ್ನು ಲೂಟಿ ಮಾಡುವುದಕ್ಕೆ ಪರವಾನಗಿ ಎಂದೇ ಗುತ್ತಿಗೆದಾರರು ಭಾವಿಸಿದಂತಿದೆ. ಸರ್ಕಾರ ಬೆರಳು ತೋರಿದರೆ ಹಸ್ತವನ್ನೇ ನುಂಗುವ ಇಂತಹ ಮರಳು ಮಾಫಿಯಾ, ರಾಜ್ಯದ ಎಲ್ಲ ಕಡೆ ಕಾನೂನಿನ ಭಯವೇ ಇಲ್ಲದೆ ನೈಸರ್ಗಿಕ ಸಂಪತ್ತನ್ನು ಅವ್ಯಾಹತವಾಗಿ ಲೂಟಿ ಮಾಡುತ್ತಿದೆ. ಸಕಲೇಶಪುರದ ಆಲೇಬೇಲೂರಿನಿಂದ ವಡೂರಿನವರೆಗೂ ಎರಡು ಕಿ.ಮೀ ವ್ಯಾಪ್ತಿಯಲ್ಲಿ ಹೇಮಾವತಿನದಿಯ ಮೂಲ ಸ್ವರೂಪವನ್ನೇ ಬದಲಿಸುವಷ್ಟರಮಟ್ಟಿಗೆ ಮರಳು ಮಾಫಿಯಾ ಲೂಟಿಯಲ್ಲಿ ನಿರತವಾಗಿರುವುದು ಕಳವಳಕಾರಿ ಸಂಗತಿ. ಇಡೀ ದಿನ ನದಿ ಒಡಲನ್ನು ಬಗೆದು ಮರಳು ತೆಗೆದು, ಇನ್ನೂರು ಲಾರಿಗಳಲ್ಲಿ ಅದನ್ನು ತುಂಬಿ ಸಾಗಿಸಲಾಗುತ್ತಿದೆ. ಪ್ರಭಾವಿ ರಾಜಕಾರಣಿಗಳು ಹಾಗೂ ಭ್ರಷ್ಟ ಅಧಿಕಾರಿಗಳ ಅಭಯ ಹಸ್ತವಿಲ್ಲದೆ ಇಂತಹ ಹಗಲು ದರೋಡೆ ರಾಜಾರೋಷವಾಗಿ ನಡೆಯಲು ಸಾಧ್ಯವಿಲ್ಲ. ಅಕ್ರಮ ಮರಳುಗಾರಿಕೆಯಿಂದ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ನಷ್ಟವಾಗುತ್ತಿದೆ. ಮಳೆಯ ಕೊರತೆಯಿಂದಾಗಿ ಈಗಾಗಲೇ ಕುಸಿದು ಹೋಗಿರುವ ಅಂತರ್ಜಲ ಮಟ್ಟ ಪಾತಾಳ ತಲುಪುತ್ತಿದೆ. ರಾಜ್ಯದ ಹಲವಾರು ಕಡೆಗಳಲ್ಲಿ ಈ ರೀತಿ ನಡೆಯುತ್ತಿರುವ ಅಕ್ರಮಗಳ ದೂರಿನ ಹಿನ್ನೆಲೆಯಲ್ಲಿಯೇ ರಾಜ್ಯ ಸರ್ಕಾರ ಮರಳು ನೀತಿಯನ್ನು ಜಾರಿಗೆ ತಂದಿದೆ. ಈ ನೀತಿಯಿಂದಾಗಿ ಮರಳು ಗಣಿಗಾರಿಕೆಯ ಆದಾಯ ಹತ್ತಾರುಪಟ್ಟು ಹೆಚ್ಚಾಗಬಹುದೆಂದು ಸರ್ಕಾರ ನಿರೀಕ್ಷಿಸಿತ್ತು. ಆದರೆ ಇದು ಮರಳು ದಂಧೆಯ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ. ಹೊಸ ನೀತಿಯ ಪ್ರಕಾರ ಜಿಲ್ಲಾಡಳಿತ ಸ್ಥಳ ಪರಿಶೀಲನೆ ನಡೆಸಿ ಮರಳು ತೆಗೆಯಬಹುದಾದ ಪ್ರದೇಶವನ್ನು ಗುರುತಿಸಬೇಕು. ಪರವಾನಗಿ ಪಡೆದವರು ಮಂಜೂರು ಮಾಡಿದ ಪ್ರದೇಶದಲ್ಲಿ ಮಾತ್ರ ಮರಳು ಗಣಿಗಾರಿಕೆ ನಡೆಸಬೇಕಾಗುತ್ತದೆ. ಇದರಿಂದ ಬರುವ ಆದಾಯದಲ್ಲಿ ಅರ್ಧದಷ್ಟು ಹಣವನ್ನು ಸ್ಥಳೀಯ ಗ್ರಾಮಪಂಚಾಯಿತಿಗಳ ಅಭಿವೃದ್ಧಿ ಕಾಮಗಾರಿಗಳಿಗೆ ಮತ್ತು ರಸ್ತೆ ನಿರ್ಮಾಣಕ್ಕೆ ಬಳಸಬೇಕು. ಆದರೆ, ಹೇಮಾವತಿಯಲ್ಲಿ ಮರಳು ದಂಧೆ ನಡೆಸುತ್ತಿರುವವರಿಗೆ ಯಾವ ನಿಯಮಾವಳಿಗಳೂ ತಿಳಿದಂತಿಲ್ಲ. ಗ್ರಾಮಸ್ಥರು ದೂರು ನೀಡಿದ ನಂತರ ಎಚ್ಚೆತ್ತು ಕೊಂಡ ಜಿಲ್ಲಾಡಳಿತ, ಸ್ಥಳ ಪರಿಶೀಲನೆ ನಡೆಸಿ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿರುವುದು ತೀರಾ ಯಾಂತ್ರಿಕ ಕ್ರಮ. ಅಂಗೈ ಹುಣ್ಣಿಗೆ ಕನ್ನಡಿ ಬೇಕೇ? ಕಾಲಹರಣ ಬೇಡ. ರಾಜ್ಯ ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಳ್ಳದೆ, ಇಂತಹ ಮರಳು ಮಾಫಿಯಾವನ್ನು ಬಗ್ಗುಬಡಿಯಲು ಸಾಧ್ಯವಿಲ್ಲ. ನೈಸರ್ಗಿಕ ಸಂಪತ್ತನ್ನು ಸಂಪೂರ್ಣವಾಗಿ ಲೂಟಿಯಾಗಲು ಬಿಡದೆ ಅದನ್ನು ಮುಂದಿನ ಪೀಳಿಗೆಗೆ ಉಳಿಸುವ ಜಾಗೃತಿ ಜನರಲ್ಲೂ ಮೂಡಬೇಕು. ಸರ್ಕಾರವೂ ಅಕ್ರಮ ಚಟುವಟಿಕೆಗಳಿಗೆ ತೆರೆ ಎಳೆಯುವ ದೃಢನಿರ್ಧಾರ ತಳೆಯಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.