ಕ್ರೀಡೆಗೆ ಅಪಚಾರ `ಒಲಿಂಪಿಕ್ ಕ್ರೀಡೆಗಳಲ್ಲಿ ಭಾಗವಹಿಸುವುದು ಮುಖ್ಯವೇ ಹೊರತು ಪದಕ ಗೆಲ್ಲುವುದಲ್ಲ~ ಎಂಬ ಮಾತು ಅರ್ಥ ಕಳೆದುಕೊಂಡು ದಶಕಗಳೇ ಕಳೆದಿವೆ. ಒಲಿಂಪಿಕ್ ಚಿನ್ನದ ಪದಕ ಅದೃಷ್ಟದ ಬಾಗಿಲು ತೆರೆಸುತ್ತದೆ, ಹಣದ ಹೊಳೆ ಹರಿಸುತ್ತದೆ ಎಂಬುದು ಸುಳ್ಳಲ್ಲ. ಆ ಒಂದು ಚಿನ್ನದ ಪದಕಕ್ಕಾಗಿ ಕ್ರೀಡಾಪಟುಗಳು ಅಡ್ಡದಾರಿ ಹಿಡಿದದ್ದೂ ಹೊಸ ವಿಷಯವೇನಲ್ಲ. ದೈಹಿಕ ಶಕ್ತಿ ಹೆಚ್ಚಿಸಲು ಉದ್ದೀಪನ ಮದ್ದು ಸೇವಿಸುವ ಪಿಡುಗು ಇನ್ನೂ ಕೊನೆಗೊಂಡಿಲ್ಲ. ಬೇರೆ ಬೇರೆ ಕ್ರೀಡೆಗಳಲ್ಲಿ ಹಣಕ್ಕಾಗಿ ಮೋಸದಾಟ ನಡೆಯುವುದು ಸಾಮಾನ್ಯವಾಗಿಬಿಟ್ಟಿದೆ. ಹಣಕ್ಕಾಗಿ ಪಂದ್ಯ ಸೋತ ಉದಾಹರಣೆಗಳಿವೆ. ಆದರೆ ಪದಕ ಗೆಲ್ಲುವ ಹಾದಿಯಲ್ಲಿ ಕಠಿಣ ಸವಾಲು ಎದುರಾಗದಂತೆ ಆರಂಭದ ಹಂತದ ಪಂದ್ಯವನ್ನು ಸೋಲುವ ತಂತ್ರವನ್ನು ಅನುಸರಿಸಿದ ಉದಾಹರಣೆಗಳು ಇರಲಿಲ್ಲ. ಈಗ ಲಂಡನ್ ಒಲಿಂಪಿಕ್ಸ್‌ನಲ್ಲಿ, ಎಂಟು ಮಂದಿ ಅಗ್ರಮಾನ್ಯ ಬ್ಯಾಡ್ಮಿಂಟನ್ ಆಟಗಾರ್ತಿಯರು, ತಮ್ಮ ನೈಜ ಸಾಮರ್ಥ್ಯ ತೋರದೆ, ಲೀಗ್ ಹಂತದಲ್ಲಿ ಪಂದ್ಯ ಸೋತಿದ್ದು, ನೇರವಾಗಿ ಮೋಸದಾಟವಲ್ಲವಾದರೂ ಅದು ಒಲಿಂಪಿಕ್ ಧ್ಯೇಯಕ್ಕೆ ಬಗೆದ ಅಪಚಾರ. ಚೀನಾ, ಇಂಡೋನೇಷ್ಯಾ ಮತ್ತು ದಕ್ಷಿಣ ಕೊರಿಯದ ಆಟಗಾರ್ತಿಯರು, ಲೀಗ್ ನಂತರದ ಮಹತ್ವದ ಹಂತದಲ್ಲಿ ಪ್ರಬಲ ಎದುರಾಳಿಗಳನ್ನು ತಪ್ಪಿಸಿಕೊಳ್ಳಲು, ಲೀಗ್‌ನ ಕೊನೆಯ ಪಂದ್ಯವನ್ನು ಉದ್ದೇಶಪೂರ್ವಕವಾಗಿ ಸೋತದ್ದನ್ನು ಮುಚ್ಚಿಡಲಾಗಲಿಲ್ಲ. ಪ್ರೇಕ್ಷಕರು ಆ ಆಟಗಾರ್ತಿಯರ ಹೊಂದಾಣಿಕೆಯನ್ನು ಕೂಡಲೇ ಗುರುತಿಸಿ ಗೇಲಿ ಮಾಡಿದರು. ವಿಶ್ವ ಬ್ಯಾಡ್ಮಿಂಟನ್ ಫೆಡರೇಷನ್ ಕೂಡಲೇ ಆ ಆಟಗಾರ್ತಿಯರನ್ನು ಅನರ್ಹಗೊಳಿಸಿ, ಮುಂದಿನ ಪಂದ್ಯಗಳನ್ನಾಡದಂತೆ ಪ್ರತಿಬಂಧಿಸಿದ್ದು ನಿಜಕ್ಕೂ ದಿಟ್ಟ ಕ್ರಮ. ಕ್ರೀಡೆಗೆ ಯಾವುದೇ ರೀತಿಯ ಅಪಚಾರವೂ ಸಲ್ಲ. ಕ್ರೀಡಾಪಟುಗಳಿಗಿಂತ ಕ್ರೀಡೆಯೇ ದೊಡ್ಡದು. ಕ್ರೀಡೆಗಳ ಮೊದಲ ವಾರದ ಕೊನೆಗೆ ಭಾರತದ ಕ್ರೀಡಾಪಟುಗಳು ಮೂರು ಪದಕಗಳನ್ನು ಗೆದ್ದಿದ್ದಾರೆ. ಅವುಗಳಲ್ಲಿ ಎರಡು ಎದುರಾಳಿಗಳನ್ನು ಹಿಮ್ಮೆಟ್ಟಿಸಿ ಗೆದ್ದ ಪದಕಗಳಾದರೆ ಇನ್ನೊಂದು ಅದೃಷ್ಟದ ಬಲದಿಂದ ಬಂದದ್ದು. ಷೂಟಿಂಗ್‌ನಲ್ಲಿ ಕಳೆದ ಬಾರಿ ಚಿನ್ನ ಗೆದ್ದಿದ್ದ ಅಭಿನವ್ ಬಿಂದ್ರ ವಿಫಲವಾದಾಗ ಮೂಡಿದ್ದ ನಿರಾಶೆಯನ್ನು ಗಗನ್ ನಾರಂಗ್ ಕಂಚಿನ ಪದಕ ಗೆಲ್ಲುವ ಮೂಲಕ ಕಡಿಮೆ ಮಾಡಿದರು. ಆದರೆ ಹೆಚ್ಚು ಪ್ರಚಾರ ದೊರೆಯದ, ಯಾರೂ ನಿರೀಕ್ಷೆ ಇಟ್ಟುಕೊಳ್ಳದ, ಸೇನೆಯಲ್ಲಿ ಸುಬೇದಾರನಾಗಿರುವ ಷೂಟರ್ ವಿಜಯಕುಮಾರ್ ರಜತ ಪದಕ ಗೆದ್ದದ್ದು ಬಹು ದೊಡ್ಡ ಸಾಧನೆ. ಕ್ರೀಡೆಯ ಸೊಗಸು ಇರುವುದೇ ಇಂಥವರ ಗೆಲುವಿನಲ್ಲಿ. ಅನಿರೀಕ್ಷಿತ ಫಲಿತಾಂಶಗಳಲ್ಲೇ ಹೆಚ್ಚಿನ ಕುತೂಹಲ ಇರುತ್ತದೆ. ಬ್ಯಾಡ್ಮಿಂಟನ್‌ನಲ್ಲಿ ಸೈನಾ ನೆಹ್ವಾಲ್ ಬಹಳ ಆಸೆ ಮೂಡಿಸಿದ್ದರು. ಆದರೆ ಅವರಿಗೆ ಕಂಚಿನ ಪದಕ ಆಟದ ಸಾಮರ್ಥ್ಯದ ಮೂಲಕ ಬರದೇ ಉಡುಗೊರೆಯಾಗಿ ಬಂತು. ಅವರ ಎದುರಾಳಿ ಚೀನದ ಕ್ಸಿನ್ ವಾಂಗ್ ಗೆಲುವಿನ ಹಾದಿಯಲ್ಲಿದ್ದಾಗಲೇ ಮಂಡಿನೋವಿನಿಂದ ಆಟ ಬಿಟ್ಟುಕೊಟ್ಟರು. ಸೈನಾಗೆ ಈ ರೀತಿಯ `ಉಡುಗೊರೆ~ ಬೇಕಾಗಿರಲಿಲ್ಲ. ಸೈನಾ ಬೆಂಬಲಿಗರಿಗೂ ಬೇಕಾಗಿರಲಿಲ್ಲ. ಆದರೆ ನಿಯಮದ ಪ್ರಕಾರವೇ ಬಂದ ಪದಕವನ್ನು ನಿರಾಕರಿಸಲು ಆಗುವುದಿಲ್ಲ. ಪದಕ ಗೆದ್ದ ಮೂವರಿಗೂ ಅಭಿನಂದನೆಗಳು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.