ಆರ್ಥಿಕ ವೃದ್ಧಿ ಫಲ ಎಲ್ಲರಿಗೂ ದಕ್ಕಲಿ ಆರ್ಥಿಕ ಸುಧಾರಣೆಯ ಪಥದಲ್ಲಿ ರಾಷ್ಟ್ರ ಹೆಜ್ಜೆ ಇರಿಸಿ ಎರಡು ದಶಕಗಳೇ ಕಳೆದುಹೋಗಿವೆ. ಈ ಎರಡು ದಶಕಗಳಿಂದಲೂ ಆರ್ಥಿಕ ವೃದ್ಧಿದರದ ಬೆಳವಣಿಗೆಯ ಮಾತುಗಳನ್ನಾಡುತ್ತಲೇ ಬಂದಿದ್ದೇವೆ. ಮುಕ್ತ ಆರ್ಥಿಕತೆಯ ವಿಲಾಸ, ನಗರಗಳಲ್ಲಿನ ಕಣ್ಣುಕುಕ್ಕುವ ಐಷಾರಾಮಿ ಬದುಕುಗಳಲ್ಲಿ ಕಾಣಸಿಗುತ್ತಿದೆ. ಈ `ಹೊಳೆಯುತ್ತಿರುವ ಇಂಡಿಯಾ~ದ ಮಧ್ಯೆಯೇ `ಬಡವರ ಭಾರತ~ದ ಕಟು ವಾಸ್ತವಗಳೂ ನಮ್ಮನ್ನು ಬಾಧಿಸುತ್ತಿವೆ ಎಂಬ ಎಚ್ಚರ ನಮಗಿರಬೇಕಾದುದು ಅಗತ್ಯ. ರಾಷ್ಟ್ರೀಯ ಮಾದರಿ ಸಮೀಕ್ಷಾ ಸಂಸ್ಥೆ (ಎನ್‌ಎಸ್‌ಎಸ್‌ಓ)ಯ ಇತ್ತೀಚಿನ ವರದಿ ಈ ಕಟುವಾಸ್ತವಗಳತ್ತ ಮತ್ತೆ ನಮ್ಮ ಕಣ್ಣು ತೆರೆಸಿದೆ. ಗ್ರಾಮೀಣ ಭಾರತದ ಶೇಕಡ 10ರಷ್ಟು ಜನರು ಈಗಲೂ ದಿನಕ್ಕೆ ಕೇವಲ ರೂ 17ರೂಪಾಯಿಗಳಿಗೂ ಕಡಿಮೆ ದುಡ್ಡಿನಲ್ಲಿ ಬದುಕು ಕಳೆಯಬೇಕಿದೆ ಎಂಬಂಥ ಮಾಹಿತಿ ಕಂಗೆಡಿಸುವಂಥದ್ದು. ಎಲ್ಲರನ್ನೂ ಒಳಗೊಳ್ಳುವಂಥ ಆರ್ಥಿಕ ಬೆಳವಣಿಗೆ ಸಾಧಿಸುವಲ್ಲಿನ ವೈಫಲ್ಯಕ್ಕೆ ಇದು ಕನ್ನಡಿ ಹಿಡಿದಿದೆ. ಶ್ರೀಮಂತರು ಮತ್ತು ಬಡವರ ಮಧ್ಯದ ಅಂತರದ ಅಸಮಾನತೆಯ ಹೆಚ್ಚಳಕ್ಕೆ ಮತ್ತೊಂದು ಸಾಕ್ಷ್ಯ ಇದು. ಕುಂಠಿತವಾಗುತ್ತಿರುವ ಆರ್ಥಿಕ ವೃದ್ಧಿದರ ಹಾಗೂ ಮುಂಗಾರು ವೈಫಲ್ಯಗಳ ನಡುವೆ ಹೊರಬಿದ್ದಿರುವ ಈ ಮಾಹಿತಿ ಭಾರತೀಯ ಆರ್ಥಿಕ ವ್ಯವಸ್ಥೆಯ ಮೇಲೆ ಮತ್ತಷ್ಟು ಒತ್ತಡ ಹಾಕಿದಂತಾಗಿದೆ. ರಾಷ್ಟ್ರೀಯ ಆದಾಯವನ್ನು ಅಳೆಯಲು ನಮ್ಮಲ್ಲಿ ಯಾವುದೇ ನಿಖರ ಸೂಚ್ಯಂಕ ಇಲ್ಲ. ಹೀಗಾಗಿ ಜನರ ಖರ್ಚಿನ ವಿವರಗಳೇ, ಜನರ ಆದಾಯ ಹಾಗೂ ಖರೀದಿಶಕ್ತಿಯ ಕುರಿತಂತೆ ಪರೋಕ್ಷ ಮಾಹಿತಿಯನ್ನು ನೀಡುತ್ತವೆ. ಭಾರತದ ಹಳ್ಳಿಗಳ ಶೇ 10ರಷ್ಟು ಕಡುಬಡವರ ಮಾಸಿಕ ತಲಾ ಖರ್ಚು ಸರಾಸರಿ ರೂ 503.49 ಎಂಬುದನ್ನೂ 2011-12ರ ಸಾಲಿಗೆ ಬಿಡುಗಡೆ ಮಾಡಲಾದ ಎನ್‌ಎಸ್‌ಎಸ್‌ಓ ನ ಈ ಸಮೀಕ್ಷೆ ಬಯಲುಮಾಡಿದೆ. ನಗರಗಳ ಶೇ 10ರಷ್ಟು ಕಡು ಬಡವರ ಮಾಸಿಕ ತಲಾ ಖರ್ಚು ಇನ್ನೊಂದು ಸ್ವಲ್ಪ ಹೆಚ್ಚಿದೆ ಅಷ್ಟೆ. ಅದು ಸರಾಸರಿ ರೂ 702.26. ಹಾಗೆಯೇ ನಗರಗಳಲ್ಲಿನ ಶೇ 10ರಷ್ಟು ಕಡುಬಡವರ ದೈನಂದಿನ ಖರ್ಚು ರೂ 23.40. ಶೇ 10ರಷ್ಟು ಕಡುಬಡವರ ಕುರಿತಂತೆ ಹೊರಬಿದ್ದಿರುವ ಮಂಕು ಕವಿಸುವ ಈ ಅಂಕಿಅಂಶಗಳ ನಡುವೆಯೂ ಗ್ರಾಮೀಣ ಹಾಗೂ ನಗರಗಳಲ್ಲಿನ ಜೀವನಮಟ್ಟಗಳಲ್ಲಿ ಸುಧಾರಣೆ ಕಂಡುಬಂದಿದೆ ಎಂಬುದನ್ನೂ ಈ ಸಮೀಕ್ಷೆ ಸೂಚಿಸುವಂತಿದೆ. ಮೊಬೈಲ್ ಫೋನ್, ಮನೆ, ಟಿವಿ ಹೊಂದಿರುವಂತಹವರು, ಬ್ಯಾಂಕ್ ಸೇವೆ ಹಾಗೂ ವಿದ್ಯುತ್ ಸೌಲಭ್ಯ ಪಡೆಯುತ್ತಿರುವ ಬಡವರ ಪ್ರಮಾಣದಲ್ಲಿ ಹೆಚ್ಚಳವಾಗಿರುವುದನ್ನು ಈ ಸಮೀಕ್ಷೆ ಎತ್ತಿ ತೋರಿದೆ. ಒಟ್ಟಾರೆ, ಹಳ್ಳಿಗಳು ಹಾಗೂ ನಗರಗಳ ಬಡವರಲ್ಲಿ ತಲಾ ಖರ್ಚು ಸಾಮರ್ಥ್ಯ ಇನ್ನೂ ತ್ವರಿತಗತಿಯಲ್ಲಿ ಹೆಚ್ಚಾಗಬೇಕೆಂಬ ಆಶಯ ಎಲ್ಲರದ್ದು. ಇದಕ್ಕಾಗಿ ಗ್ರಾಮೀಣ ಕೃಷಿಯೇತರ ಉದ್ಯೋಗಗಳ ಸೃಷ್ಟಿಗೆ ಹೆಚ್ಚಿನ ಕಾಳಜಿ ಅಗತ್ಯ. ಗ್ರಾಮೀಣ ಉದ್ಯೋಗ ಗ್ಯಾರಂಟಿ ಯೋಜನೆಗಳು ಶಾಶ್ವತ ಪರಿಹಾರಗಳಾಗುವುದು ಸಾಧ್ಯವಿಲ್ಲ. ಉತ್ತಮ ವೇತನಗಳ ಉದ್ಯೋಗಗಳಿಗಾಗಿ ಗ್ರಾಮೀಣ ಯುವಜನರಿಗೆ ಹೆಚ್ಚು ಕೌಶಲಗಳ ತರಬೇತಿ ಕಾರ್ಯಕ್ರಮಗಳು ಅಗತ್ಯ. ಸಾಮಾಜಿಕ ಚಲನಶೀಲತೆ ಹಾಗೂ ಎಲ್ಲರನ್ನೂ ಒಳಗೊಳ್ಳುವಂತಹ ಆರ್ಥಿಕ ಬೆಳವಣಿಗೆ ಮುಖ್ಯವಾದುದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.