ಆರ್ಥಿಕ ಸ್ಥಿತಿಗೆ ಪುನಶ್ಚೇತನ ದೇಶದಲ್ಲಿನ ಸದ್ಯದ ಆರ್ಥಿಕ ಸ್ಥಿತಿಗೆ ಪುನಶ್ಚೇತನ ನೀಡಲು ಕೇಂದ್ರ ಹಣಕಾಸು ಸಚಿವ ಪಿ ಚಿದಂಬರಂ ಪ್ರಕಟಿಸಿರುವ ಕಾರ್ಯಯೋಜನೆ ಹೊಸ ನಿರೀಕ್ಷೆಗಳನ್ನು ಮೂಡಿಸಿದೆ. ಮಂದಗತಿಯಲ್ಲಿ ಬೆಳೆಯುತ್ತಿರುವ ಆರ್ಥಿಕತೆ, ಹೂಡಿಕೆದಾರರಲ್ಲಿ ವಿಶ್ವಾಸವನ್ನು ಕುಂದಿಸಿರುವ ಸಮಯ ಇದು. ಈ ಸಂದರ್ಭದಲ್ಲಿ ತೆರಿಗೆ ನೀತಿಗಳ ಪರಿಷ್ಕರಣೆ ಹಾಗೂ ಬಡ್ಡಿ ಹೊರೆಗಳನ್ನು ತಗ್ಗಿಸುವ ಕುರಿತಂತೆ ಅವರಾಡಿರುವ ಮಾತುಗಳು ಭರವಸೆ ಮೂಡಿಸಿವೆ. ಹೂಡಿಕೆದಾರರ ವಿಶ್ವಾಸ ಮರಳಿ ಗಳಿಸುವುದು ಮುಖ್ಯ ಎಂಬುದಕ್ಕೆ ಚಿದಂಬರಂ ಅವರು ವಿಶೇಷ ಒತ್ತು ನೀಡಿದ್ದಾರೆ. ಚಿದಂಬರಂ ಅವರು ಹಣಕಾಸು ಸಚಿವರಾಗುತ್ತಿರುವುದು ಇದು ಮೂರನೆಯ ಬಾರಿ. 2008ರಲ್ಲಿ ಜಾಗತಿಕ ಹಣಕಾಸು ಬಿಕ್ಕಟ್ಟಿನ ಸಂದರ್ಭದಲ್ಲಿ, ರಾಷ್ಟ್ರದ ಆರ್ಥಿಕತೆಯನ್ನು ಚತುರ ರೀತಿಯಲ್ಲಿ ನಿರ್ವಹಿಸಿದ ಹೆಗ್ಗಳಿಕೆ ಅವರದು. 2004ರಿಂದ ನಾಲ್ಕು ವರ್ಷ ಕಾಲ ಅವರು ಹಣಕಾಸು ಸಚಿವರಾಗಿದ್ದ ವೇಳೆ ಭಾರತದ ಆರ್ಥಿಕ ವೃದ್ಧಿ ದರ ಸರಾಸರಿ ಶೇ 9ರಷ್ಟಿತ್ತು. 1997ರಲ್ಲಿ ಚಿದಂಬರಂ ಅವರು ಮಂಡಿಸಿದ್ದ `ಕನಸಿನ ಬಜೆಟ್~ ಅಚ್ಚರಿಗಳನ್ನು ಸೃಷ್ಟಿಸಿತ್ತು. ಈ ಅನುಭವಿ ಹಣಕಾಸು ಸಚಿವರು ಕಳೆದವಾರ ಮತ್ತೆ ಅಧಿಕಾರ ವಹಿಸಿಕೊಂಡಾಗ ಹಣಕಾಸು ಪೇಟೆಗಳಲ್ಲಿ ಸಹಜವಾಗಿಯೇ ಸಂತಸ ಉಕ್ಕಿತ್ತು. ತ್ವರಿತ ಗತಿಯ ಸುಧಾರಣಾ ಕ್ರಮಗಳಿಗೆ ಚಾಲನೆ ಅಗತ್ಯವಿದೆ ಎಂಬಂತಹ ಬಿಕ್ಕಟ್ಟಿನ ಸನ್ನಿವೇಶ ಇಂದಿನದು. ಆದರೆ ಸಮ್ಮಿಶ್ರ ಸರ್ಕಾರದ ರಾಜಕೀಯ ಸೂಕ್ಷ್ಮಗಳ ಜೊತೆಗೇ ರಾಷ್ಟ್ರದ ಹಣಕಾಸು ವ್ಯವಸ್ಥೆಯನ್ನು ನಿರ್ವಹಿಸುವ ಕ್ಲಿಷ್ಟಕರ ಪ್ರಕ್ರಿಯೆಯನ್ನು ಚಿದಂಬರಂ ಮುನ್ನಡೆಸಬೇಕಿದೆ. ಮ್ಯುಚುಯಲ್ ಫಂಡ್‌ಗಳು ಹಾಗೂ ವಿಮಾ ವಲಯ ಪುನರುಜ್ಜೀವನ ಕುರಿತಂತೆ ನೀಡಲಾಗಿರುವ ಭರವಸೆಗಳಿಂದ ಬಂಡವಾಳ ಮಾರುಕಟ್ಟೆಗಳಲ್ಲಿ ಮತ್ತೆ ಚೈತನ್ಯ ಹರಿಯಬಹುದು. ಆ ಮೂಲಕ, ಪ್ರಧಾನಿಯವರು ಹೇಳಿದ ` ಸಹಜ ಹುಮ್ಮಸ್ಸು~ (ಅನಿಮಲ್ ಸ್ಪಿರಿಟ್) ಸೃಷ್ಟಿಗೆ ಮಹತ್ವದ ಹೆಜ್ಜೆಯಾಗಬಹುದು. ಇದು ಷೇರು ವಿಕ್ರಯ ಪ್ರಕ್ರಿಯೆಯನ್ನು ಪುನರುಜ್ಜೀವಗೊಳಿಸಿ ಉಳಿತಾಯ ಹಾಗೂ ಹಣಹೂಡಿಕೆಯನ್ನು ಮತ್ತೆ ಹಳಿಗೆ ತರಬಹುದು ಎಂದು ಭಾವಿಸಲಾಗಿದೆ. ರಫ್ತು ಹಾಗೂ ತಯಾರಿಕಾ ವಲಯಕ್ಕೆ ಚೈತನ್ಯ ನೀಡಲು ಸೂಕ್ತ ನೀತಿ ರೂಪಿಸಲಾಗುವುದೆಂಬ ಪ್ರಕಟಣೆಯೂ ವಿಶೇಷವಾದುದೆ. ಆದರೆ ನಿರೀಕ್ಷೆಗಳನ್ನು ಹುಸಿಯಾಗಿಸದಿರುವುದೇ ದೊಡ್ಡ ಸವಾಲು. ದೈನಂದಿನ ಜೀವನವನ್ನು ಭಾರವಾಗಿಸುತ್ತಿರುವ ಬೆಲೆ ಏರಿಕೆ ನಿಯಂತ್ರಣಕ್ಕೆ ಸಕಾರಾತ್ಮಕ ಕ್ರಮಗಳ ಭರವಸೆಯೂ ಆಶಾದಾಯಕ. ಸುಧಾರಣೆ ಕ್ರಮಗಳು ತೀವ್ರವಾಗಿಲ್ಲದ ಈ ದಿನಗಳಲ್ಲಿ ಭಾರತದ ಆರ್ಥಿಕ ವೃದ್ಧಿದರದ ಅಂದಾಜು ಕಡಿಮೆಯಾಗುತ್ತಲೇ ಬರುತ್ತಿರುವುದನ್ನು ನಾವು ಗಮನಿಸಬೇಕು. ಬಜೆಟ್‌ನಲ್ಲಿ ಪ್ರಸಕ್ತ ಸಾಲಿನ ವೃದ್ಧಿದರವನ್ನು ಅತಿ ಹೆಚ್ಚು ಎನಿಸುವಂತಹ ಶೇ 7.6ಎಂದು ಅಂದಾಜು ಮಾಡಲಾಗಿತ್ತು. ಆರ್‌ಬಿಐ ಪ್ರಕಾರ ಇದು ಶೇ 6.5ರಷ್ಟಿರುತ್ತದೆ. ಆದರೆ ಅನೇಕ ಅಂತರರಾಷ್ಟ್ರೀಯ ಸಂಸ್ಥೆಗಳು ಭಾರತದ ಆರ್ಥಿಕ ವೃದ್ಧಿದರವನ್ನು ಪ್ರಸಕ್ತಸಾಲಿಗೆ ಇನ್ನೂ ಕೆಳಮಟ್ಟದಲ್ಲಿ ಅಂದಾಜು ಮಾಡಿವೆ. ಆರ್ಥಿಕ ವೃದ್ಧಿದರದ ಬಗೆಗಿನ ಈ ಅವಾಸ್ತವ ಪರಿಕಲ್ಪನೆಗಳಿಗಿಂತ ವಾಸ್ತವ ದೃಷ್ಟಿಯ ಮೌಲ್ಯಮಾಪನದ ಜೊತೆಗೆ ಆರ್ಥಿಕತೆಯ ಚೇತರಿಕೆಗೆ ಕಟ್ಟುನಿಟ್ಟಿನ ಕ್ರಮಗಳನ್ನು ಅಳವಡಿಸುವುದು ಇಂದಿನ ಅಗತ್ಯ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.