ಹಿರಿಯರು ದಾರಿ ತಪ್ಪಬಾರದು ಸಂಸತ್‌ನ ಮುಂಗಾರು ಅಧಿವೇಶನದ ಮೊದಲ ದಿನವೇ ದೇಶದ ಎರಡು ಪ್ರಮುಖ ರಾಷ್ಟ್ರೀಯ ಪಕ್ಷಗಳ ನಾಯಕರ ನಡುವೆ ನಡೆದ ಮಾತಿನ ಸಂಘರ್ಷ ಒಳ್ಳೆಯ ಶಕುನ ಅಲ್ಲ. ಬಿಜೆಪಿ ನಾಯಕ ಲಾಲ್‌ಕೃಷ್ಣ ಅಡ್ವಾಣಿಯವರು ತಮ್ಮ ಸಂಯಮದ ನಡವಳಿಕೆಗೆ ಹೆಸರಾದವರು. ಸಂಸತ್‌ನ ಘನತೆ-ಗೌರವಗಳಿಗೆ ಕುಂದಾಗುವಂತೆ ಅವರು ನಡೆದುಕೊಂಡಿದ್ದು ಕಡಿಮೆ. ಆದರೆ ಇತ್ತೀಚೆಗೆ ಸಾರ್ವಜನಿಕವಾಗಿ ಕೂಡಾ ವಿವಾದಾತ್ಮಕ ಅಭಿಪ್ರಾಯಗಳನ್ನು ವ್ಯಕ್ತಪಡಿಸಿ ಸುದ್ದಿಯಲ್ಲಿರುವ ಅಡ್ವಾಣಿ ಲೋಕಸಭೆಯಲ್ಲಿಯೂ ಎಚ್ಚರತಪ್ಪಿ ಮಾತನಾಡಿದ್ದಾರೆ. ಸಾಮಾನ್ಯವಾಗಿ ಲೋಕಸಭೆಯ ಚರ್ಚೆಯಲ್ಲಿ ಮಧ್ಯೆಪ್ರವೇಶಿಸದೆ ಮೌನವಾಗಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಅವರು ಅಡ್ವಾಣಿಯವರು ಬಳಸಿದ ಶಬ್ದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ತಪ್ಪಿನ ಅರಿವಾದ ನಂತರ ಅಡ್ವಾಣಿಯವರು ಆಕ್ಷೇಪಾರ್ಹ ಶಬ್ದವನ್ನು ಹಿಂದಕ್ಕೆ ಪಡೆದ ಕಾರಣ ಪ್ರಕರಣ ತಿಳಿಯಾದರೂ ಈ ಘಟನೆ ಮುಂಗಾರು ಅಧಿವೇಶನದ ಮುಂದಿನ ದಿನಗಳ ಕಲಾಪದ ಬಗ್ಗೆ ಪ್ರಶ್ನಾರ್ಥಕ ಚಿಹ್ನೆ ಮೂಡಿಸಿದೆ. ಇತ್ತೀಚೆಗಷ್ಟೇ ಅರವತ್ತು ವರ್ಷಗಳನ್ನು ಪೂರ್ಣಗೊಳಿಸಿದ ಸಂಸತ್ ತಾನು ಗಳಿಸಿದ ಅನುಭವದ ಬಲದಿಂದ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಲು ನೆರವಾಗಬೇಕಿತ್ತು. ಆದರೆ ನಡೆಯುತ್ತಿರುವುದು ತದ್ವಿರುದ್ಧವಾದ ಬೆಳವಣಿಗೆಗಳು. ಸಂಸತ್ ಅಧಿವೇಶನ ಎಂದರೆ ಮಾತಿನ ಸಮರ, ಗದ್ದಲ,ಸಭಾತ್ಯಾಗವಷ್ಟೇ ಎಂದು ಆಗಿಬಿಟ್ಟಿದೆ. ವಿಷಯಜ್ಞಾನದ ಸಿದ್ದತೆಯೊಂದಿಗೆ ಬಂದು ಕಲಾಪದಲ್ಲಿ ನಡೆಯುವ ಚರ್ಚೆಯಲ್ಲಿ ಭಾಗವಹಿಸಿ ಗಮನಸೆಳೆಯಬೇಕಾದ ಸಂಸದರು ಸದನದಲ್ಲಿ ಕೋಲಾಹಲ ನಡೆಸಿ ಸುದ್ದಿಯಲ್ಲಿ ಮಿಂಚುವ ಪ್ರಯತ್ನ ನಡೆಸುತ್ತಿದ್ದಾರೆ. ಇಂತಹವರನ್ನು ಎಚ್ಚರಿಸಿ ಮಾರ್ಗದರ್ಶನ ನೀಡಬೇಕಾಗಿರುವ ಅಡ್ವಾಣಿಯವರಂತಹ ಹಿರಿಯರು ಕೂಡಾ ಅದೇ ದಾರಿಯಲ್ಲಿ ಸಾಗುತ್ತಿರುವುದು ವಿಷಾದಕರ ಬೆಳವಣಿಗೆ. ತಪ್ಪು ಎರಡು ಕಡೆಗಳಿಂದಲೂ ಆಗುತ್ತಿದೆ. ಕಲಾಪ ಸುಗಮವಾಗಿ ನಡೆಯುವಂತೆ ನೋಡಿಕೊಳ್ಳಬೇಕಾಗಿರುವುದು ಆಡಳಿತ ಪಕ್ಷದ ಮೊದಲ ಕೆಲಸ. ವಿರೋಧಪಕ್ಷಗಳೆಂದರೆ ವಿರೋಧಿಸುವುದಷ್ಟೇ ಕೆಲಸ ಅಲ್ಲ, ಅವುಗಳ ಕಾರ್ಯನಿರ್ವಹಣೆ ಕೂಡಾ ರಚನಾತ್ಮಕವಾಗಿರಬೇಕು. ಸಂಸತ್ ನಡವಳಿಕೆಯ ಈ ಮೂಲಪಾಠವನ್ನು ಎಲ್ಲ ಪಕ್ಷಗಳೂ ಮರೆತುಬಿಟ್ಟಿರುವ ಕಾರಣ ಸಂಸತ್ ಎನ್ನುವುದು ರಾಜಕೀಯ ಸಂಘರ್ಷದ ಅಖಾಡವಾಗಿ ಪರಿಣಮಿಸಿದೆ. ಆಳುವ ಮತ್ತು ವಿರೋಧಪಕ್ಷಗಳ ಸದಸ್ಯರು ಪರಸ್ಪರ ಶತ್ರುಗಳಂತೆ ಕಾದಾಡತೊಡಗಿದ್ದಾರೆ. ಈ ಗದ್ದಲದಲ್ಲಿ ಶಾಸನ ರಚನೆಯ ಮೂಲ ಉದ್ದೇಶವನ್ನು ಸಂಸದರು ಮರೆತಿದ್ದಾರೆ. ಅಧಿವೇಶನದ ಕೊನೆಯ ದಿನಗಳಲ್ಲಿ ಅವಸರದಲ್ಲಿ ಚರ್ಚೆಯನ್ನೇ ನಡೆಸದೆ ಮಸೂದೆಗಳನ್ನು ಅಂಗೀಕರಿಸಿ ಕೈತೊಳೆದುಕೊಳ್ಳುವುದು ಸಾಮಾನ್ಯವಾಗಿಬಿಟ್ಟಿದೆ. ಕಲಾಪ ಸುಗಮವಾಗಿ ನಡೆಯಲು ಅಗತ್ಯವಾದ ನಿಯಮಾವಳಿಗಳಿಗೇನು ಕೊರತೆ ಇಲ್ಲ, ಆದರೆ ಶಾಸನ ರಚನೆಯ ಜವಾಬ್ದಾರಿ ಹೊಂದಿರುವವರೇ ಅವುಗಳನ್ನು ಉಲ್ಲಂಘಿಸಿದರೆ ಅವುಗಳಿದ್ದೇನು ಫಲ? ಸಂಸತ್‌ಗೆ ಆರಿಸಿಹೋಗುವ ಸದಸ್ಯರ ಚಾರಿತ್ರ್ಯದ ಮಟ್ಟವೇ ಕುಸಿಯುತ್ತಿರುವುದು ಕೂಡಾ ಕಲಾಪದ ಗುಣಮಟ್ಟ ಕುಸಿಯಲು ಕಾರಣ. ಇದರಿಂದಾಗಿ ಸಂಸತ್‌ಸದಸ್ಯರು ಮತ್ತು ಸಂಸತ್ ಮೇಲಿನ ವಿಶ್ವಾಸವನ್ನೇ ಜನ ಕಳೆದುಕೊಳ್ಳತೊಡಗಿದ್ದಾರೆ. ಇದು ಕಳವಳಕಾರಿ ಬೆಳವಣಿಗೆ. ಇಂತಹ ಸಂದರ್ಭದಲ್ಲಿ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆ ಬಗ್ಗೆ ಪ್ರಜೆಗಳಲ್ಲಿ ವಿಶ್ವಾಸ ಹುಟ್ಟುವಂತೆ ಮಾಡುವ ಜವಾಬ್ದಾರಿ ಅಡ್ವಾಣಿಯವರಂತಹ ಹಿರಿಯ ಸಂಸದೀಯ ಪಟುಗಳದ್ದು. ಅವರು ದಾರಿ ತಪ್ಪಬಾರದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.