ಸ್ವಾಗತಾರ್ಹ ನಿರ್ಧಾರ ಹೈದರಾಬಾದ್ ಕರ್ನಾಟಕ ಪ್ರದೇಶದ ಆರು ಜಿಲ್ಲೆಗಳ ಅಭಿವೃದ್ಧಿಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಕೇಂದ್ರ ಸರ್ಕಾರವು ಸಂವಿಧಾನಕ್ಕೆ ತಿದ್ದುಪಡಿ ತರಲು ಮುಂದಾಗಿರುವುದು ನಿಜಕ್ಕೂ ಸ್ವಾಗತಾರ್ಹ. ಇದರೊಂದಿಗೆ ಈ ಭಾಗದ ಬಹುದಿನಗಳ ಕನಸು ನನಸಾಗಲಿದೆ. ಮರಾಠವಾಡ, ವಿದರ್ಭ ಹಾಗೂ ತೆಲಂಗಾಣ ಸಂಬಂಧಿಸಿದಂತೆ ತಿದ್ದುಪಡಿ ಮಾದರಿಯ ಅಂಶಗಳನ್ನು ಒಳಗೊಂಡು ಸಂವಿಧಾನಕ್ಕೆ 371 (ಜೆ) ತಿದ್ದುಪಡಿಯ ನಿರ್ಧಾರ ಮಾಡಿರುವುದರಿಂದ ಹೈದರಾಬಾದ್ ಕರ್ನಾಟಕ ಭಾಗದ ಶಿಕ್ಷಣ, ಉದ್ಯೋಗ ಮತ್ತು ಅಭಿವೃದ್ಧಿ ರಂಗದಲ್ಲಿ ಗಮನಾರ್ಹ ರೀತಿಯಲ್ಲಿ ಅವಕಾಶಗಳು ತೆರೆದುಕೊಳ್ಳಲಿವೆ. ಆರೋಗ್ಯ, ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಹಿಂದುಳಿದ ಪ್ರದೇಶವಾಗಿ ಗುರುತಿಸಿಕೊಂಡಿದ್ದ ಬೀದರ್, ಗುಲ್ಬರ್ಗ, ಯಾದಗಿರಿ, ರಾಯಚೂರು, ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳ ಅಭಿವೃದ್ಧಿಗಾಗಿ ಪ್ರತ್ಯೇಕ ಅಭಿವೃದ್ಧಿ ಮಂಡಳಿ ಸ್ಥಾಪನೆಯಾಗುವ ನಿರೀಕ್ಷೆ ಇದೆ. ಈ ಮಂಡಳಿಯು ತನ್ನದೇ ಚುನಾಯಿತ ಪ್ರತಿನಿಧಿಗಳು ಮತ್ತು ಬಜೆಟ್ ಒಳಗೊಳ್ಳಲಿದ್ದು, ಈ ಪ್ರದೇಶದಲ್ಲಿ ಮೂಲಸೌಕರ್ಯ ಹೆಚ್ಚಿಸಲು ಕೇಂದ್ರ- ರಾಜ್ಯ ಸರ್ಕಾರಗಳ ಅನುದಾನವನ್ನೂ ನಿರೀಕ್ಷಿಸಬಹುದಾಗಿದೆ. ಹಿಂದಿನಿಂದ ನಿರಂತರವಾಗಿ ಈ ಪ್ರದೇಶವನ್ನು ಕಾಂಗ್ರೆಸ್ ಪಕ್ಷದವರೇ ಗಣನೀಯ ಸಂಖ್ಯೆಯಲ್ಲಿ ಪ್ರತಿನಿಧಿಸುತ್ತಾ ಬಂದಿದ್ದರು. ಅಲ್ಲದೆ, ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದಲ್ಲಿ ಈ ಭಾಗದ ಪ್ರಭಾವೀ ನಾಯಕರ ಸಂಖ್ಯೆಗೆ ಕೊರತೆ ಇರಲಿಲ್ಲ. ಆದರೆ ಹೈದರಾಬಾದ್ ಕರ್ನಾಟಕ ಭಾಗದವರ ಕೂಗು ಈ ಹಿಂದೆ ಸಮರ್ಥನೀಯ ಎಂದು ಕಾಂಗ್ರೆಸ್‌ಗೆ ಅನಿಸಿರಲಿಲ್ಲ ಎಂಬುದೂ ಗಮನಾರ್ಹ. ಕೇಂದ್ರದ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ನಿರ್ಧಾರದ ಹಿಂದೆ ಮುಂದಿನ ಚುನಾವಣೆಯ ಮೇಲೆ ದೃಷ್ಟಿ ಇದ್ದಂತೆ ಭಾಸವಾಗುತ್ತಿದೆ. ವಿಶೇಷ ಸ್ಥಾನಮಾನಕ್ಕಾಗಿ ನಡೆದ ಹೋರಾಟವೂ ಪ್ರಚಾರದ ದೃಷ್ಟಿಯಿಂದಿತ್ತೇ ಹೊರತು ಎಲ್ಲ ಸಂಘಟನೆಗಳ ಒಗ್ಗಟ್ಟಿನ ಪ್ರಯತ್ನ ಅಲ್ಲಿ ಇರಲಿಲ್ಲ. ಇದೇ ಕಾರಣದಿಂದ ಹೋರಾಟ ಒಂದೂವರೆ ದಶಕದಷ್ಟು ವಿಳಂಬವಾಗಿದೆ. ಹೈದರಾಬಾದ್ ಕರ್ನಾಟಕದ ಜನತೆ ಕೇಂದ್ರದ ನಿರ್ಣಯದ ಫಲಕ್ಕಾಗಿ ದೀರ್ಘ ಕಾಲ ಕಾಯುವುದೂ ಅನಿವಾರ್ಯವಾಗಿದೆ. ಶುದ್ಧ ಕುಡಿಯುವ ನೀರಿನ ಕೊರತೆ, ಅಪೌಷ್ಟಿಕತೆ ಸಮಸ್ಯೆ ಇಲ್ಲಿ ತೀವ್ರವಾಗಿದೆ. ಮೂಲಸೌಕರ್ಯ ಸಮರ್ಪಕವಾಗಿಲ್ಲ. ರಾಜ್ಯದ ದಕ್ಷಿಣದ ಜಿಲ್ಲೆಗಳಿಗೆ ಹೋಲಿಸಿದರೆ ಹೈದರಾಬಾದ್ ಕರ್ನಾಟಕದ ಜಿಲ್ಲೆಗಳು ತೀರಾ ಹಿಂದುಳಿದಿವೆ. ಸಾಕ್ಷರತಾ ಪ್ರಮಾಣವೂ ಕಡಿಮೆ. ಇದನ್ನು ನಿವಾರಿಸುವ ನಿಟ್ಟಿನಲ್ಲಿ ಗಂಭೀರ ಪ್ರಯತ್ನ ಅನಿವಾರ್ಯ. ಮಾನಸಿಕವಾಗಿ ಹಿಂದುಳಿದ ಮನೋಭಾವ ಇಲ್ಲಿನ ಜನರದು. ಸಂವಿಧಾನಕ್ಕೆ ತಿದ್ದುಪಡಿ ತಂದು ರಾಜ್ಯದ ಇತರ ಮುಂದುವರಿದ ಜಿಲ್ಲೆಗಳ ಜನರೊಡನೆ ಸ್ಪರ್ಧೆ ಮಾಡಲಾಗದ ಪರಿಸ್ಥಿತಿ ನಿವಾರಿಸಲು ಪ್ರಯತ್ನವೇನೋ ನಡೆದಿದೆ. ಇದೆಲ್ಲದರ ಜೊತೆಗೆ ಹಿಂದೊಮ್ಮೆ ಹೈದರಾಬಾದ್ ಕರ್ನಾಟಕದ ಭಾಗವನ್ನು ಪ್ರತ್ಯೇಕ ರಾಜ್ಯ ಮಾಡಬೇಕೆಂಬ ಬೇಡಿಕೆಯೂ ಕೇಳಿಸಿತ್ತು ಎಂಬುದನ್ನು ರಾಜ್ಯದಲ್ಲಿ ಆಡಳಿತ ಮಾಡುತ್ತಿರುವವರು ಗಮನಿಸಬೇಕಿದೆ. ಈ ಭಾಗದ ಜನತೆ ರಾಜ್ಯದ ಮುಖ್ಯವಾಹಿನಿಯಲ್ಲೇ ಉಳಿದು ಪ್ರಗತಿ ಸಾಧಿಸುವಂತೆ ಮಾಡಬೇಕಾದ ಅನಿವಾರ್ಯತೆಯೂ ಇದೆ. `371~ ಸ್ಥಾನಮಾನ ಪಡೆದಿದ್ದ ತೆಲಂಗಾಣದಲ್ಲಿ ಪ್ರತ್ಯೇಕತೆಯ ಕೂಗು ಏಕೆ ಕೇಳಿಸಿತು ಎಂದೂ ಈ ಸಂದರ್ಭದಲ್ಲಿ ಆಲೋಚಿಸಬೇಕಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.