ನರೇಗಾ ತನಿಖೆ ಅಗತ್ಯ ಗ್ರಾಮೀಣ ಪ್ರದೇಶಗಳಲ್ಲಿ ಬಡವರಿಗೆ ಉದ್ಯೋಗ ಕೊಟ್ಟು `ಗುಳೆ~ ತಡೆಯುವುದೂ ಸೇರಿದಂತೆ, ಸ್ಥಳೀಯವಾಗಿ ಪ್ರಗತಿ ಸಾಧಿಸುವ ಮತ್ತು ಆರ್ಥಿಕ ಚೇತರಿಕೆಯ ದೃಷ್ಟಿಯಿಂದ ಜಾರಿಯಾದ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ (ನರೇಗಾ) ಅನುಷ್ಠಾನದಲ್ಲಿ ಸೋತಿದೆ. ದೇಶದ ಎಲ್ಲ ರಾಜ್ಯಗಳಲ್ಲೂ ಈ ಯೋಜನೆ ದುರುಪಯೋಗವಾಗಿರುವುದು ಜನಜನಿತವಾಗಿದ್ದು, ಮಹಾಲೇಖಪಾಲರಿಂದ ಪರಿಶೋಧನೆ ನಡೆಸಿ, ಸಂಸತ್ತಿನಲ್ಲಿ ವರದಿ ಮಂಡಿಸುವುದಾಗಿ ಕೇಂದ್ರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಜೈರಾಮ್ ರಮೇಶ್ ಹೇಳಿರುವುದು ಪರಿಸ್ಥಿತಿ ಎಷ್ಟು ಶೋಚನೀಯವಾಗಿದೆ ಎಂಬುದರ ದ್ಯೋತಕ. ಬರಕ್ಕೆ ತುತ್ತಾದ ಕರ್ನಾಟಕಕ್ಕೆ ನರೇಗಾ ಅಡಿಯಲ್ಲಿ ಶೇ 25ರಿಂದ 30ರಷ್ಟು ಹೆಚ್ಚುವರಿ ಹಣ ಕೊಡಲು ಕೇಂದ್ರ ಸಿದ್ಧವಿದೆ. ಆದರೆ, ರಾಜ್ಯದಲ್ಲಿ ಅವ್ಯವಹಾರ ನಡೆದಿರುವುದಕ್ಕೆ ಹಾಗೂ ಹಣ ಬಳಸದೇ ಇರುವುದಕ್ಕೆ ರಾಜ್ಯ ಸರ್ಕಾರವೇ ಹೊಣೆ. ಅನುದಾನ ನೀಡುವುದಷ್ಟೇ ನಮ್ಮ ಜವಾಬ್ದಾರಿ. 2009ರಿಂದ 2011ರ ನಡುವಿನ ಅವಧಿಯಲ್ಲಿ ನರೇಗಾದಡಿ ಆಗಿರುವ ಅವ್ಯವಹಾರ ಕುರಿತು ಇನ್ನೂ ತನಿಖೆ ನಡೆಸಿಲ್ಲ. ರಾಜ್ಯ ಬಯಸಿದರೆ ಸಿಬಿಐ ತನಿಖೆ ನಡೆಸಲೂ ಸಿದ್ಧ ಎಂಬ ಕೇಂದ್ರ ಸಚಿವರ ಮಾತು ಸ್ವಾಗತಾರ್ಹ. ನರೇಗಾ ಕಾಮಗಾರಿಗಳಲ್ಲಿ ಸುಮಾರು 10 ಸಾವಿರ ಕೋಟಿ ರೂಪಾಯಿ ಅವ್ಯವಹಾರ ನಡೆದಿರುವುದು ಈಗಾಗಲೇ ವರದಿಯಾಗಿದೆ. ಕೇಂದ್ರದ ಯುಪಿಎ ಸರ್ಕಾರಕ್ಕೆ ಮಾರ್ಗದರ್ಶನ ಮಾಡುತ್ತಿರುವ ಸೋನಿಯಾ ಗಾಂಧಿ, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿ ಅವರ ಕ್ಷೇತ್ರಗಳನ್ನೂ ನರೇಗಾ ಅವ್ಯವಹಾರ ಬಿಟ್ಟಿಲ್ಲ ಎಂಬ ಮಾಹಿತಿ, ಭ್ರಷ್ಟಾಚಾರ ಎಷ್ಟು ಪ್ರಬಲ ಎಂಬುದಕ್ಕೆ ಸಾಕ್ಷಿಯಂತಿದೆ. ಅವ್ಯವಹಾರ ದೊಡ್ಡ ಮೊತ್ತದ್ದಾದುದರಿಂದ ಸಿಬಿಐ ತನಿಖೆ, ವರದಿಗಷ್ಟೇ ಕೇಂದ್ರ ಸರ್ಕಾರ ಸುಮ್ಮನಾಗಬಾರದು. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡುವುದು ಅನಿವಾರ್ಯವೇ ಸರಿ. ಜನಸಾಮಾನ್ಯರಿಗೆ ಉದ್ಯೋಗ ಕೊಡಬೇಕಾದ `ಖಾತರಿ~ಯಡಿ ಯಂತ್ರಗಳ ಕಾರುಬಾರು ನಡೆಯುತ್ತಿದೆ. ವಿದೇಶಕ್ಕೆ ಉದ್ಯೋಗಕ್ಕೆಂದು ಹೋದವರೂ ಇಲ್ಲಿ ಉದ್ಯೋಗ ಮಾಡುವವರ ಪಟ್ಟಿಯಲ್ಲಿರುತ್ತಾರೆ. ಕೆಲಸ ಅರಸಿ ಪಟ್ಟಣಗಳಿಗೆ ಗುಳೆ ಹೋದವರು, ಉನ್ನತ ಮಟ್ಟದ ಉದ್ಯೋಗದಲ್ಲಿ ಇರುವವರ ಹೆಸರನ್ನು ಸೇರಿಸಲಾಗುತ್ತಿದೆ. ಜೊತೆಗೆ ಖಾತರಿ ಎಂದೊಡನೆ ಭ್ರಷ್ಟಾಚಾರವೂ ಖಚಿತ ಎಂಬ ಸ್ಥಿತಿ ಗ್ರಾಮೀಣ ಪ್ರದೇಶದಲ್ಲಿದೆ. ಮಾಡಿದ ಕೆಲಸಕ್ಕೆ ಇನ್ನೂ ಹಣ ಪಾವತಿ ಆಗದೆ ಇರುವುದಕ್ಕೆ ಇದು ಪ್ರಮುಖ ಕಾರಣ. ಒಂಬುಡ್ಸ್‌ಮನ್‌ಗಳ ನೇಮಕಾತಿ ನಡೆದ ಬಳಿಕವೂ ನರೇಗಾ ಭ್ರಷ್ಟಾಚಾರದಿಂದ ಮುಕ್ತವಾಗಿಲ್ಲ. ಕಾಮಗಾರಿ ಪರಿಶೀಲನೆಗಾಗಿ ಸ್ವತಂತ್ರ ತಂಡ ನೇಮಕಗೊಂಡರೂ ಪರಿಸ್ಥಿತಿ ಬದಲಾಗಿಲ್ಲ. ಇಲ್ಲದ ಕೆರೆಗಳ ಹೂಳೆತ್ತುವುದು, ಒಂದು ಕಡೆ ನಡೆಯಬೇಕಾದ ಕಾಮಗಾರಿಯನ್ನು ಇನ್ನೊಂದೆಡೆ ಮಾಡಿ ಅವ್ಯವಹಾರ ನಡೆಯುತ್ತಿದೆ. ಗ್ರಾಮ ಪಂಚಾಯಿತಿಗಳಿಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ನೇಮಕಾತಿ ನಡೆದ ಆರಂಭದ ದಿನಗಳಲ್ಲಿ ಅವ್ಯವಹಾರ ಸ್ವಲ್ಪ ಪ್ರಮಾಣದಲ್ಲಿ ಕಡಿಮೆ ಆಗಿತ್ತು. ಪಿಡಿಒ ರಜೆಯಲ್ಲಿ ಹೋದಾಗ ಬಿಲ್ ಸಿದ್ಧಪಡಿಸಿ ವ್ಯವಹಾರ ಕುದುರಿಸುವುದು, ಚುನಾಯಿತ ಪತ್ನಿಯ ಬದಲಾಗಿ ಪತಿಯಿಂದಲೇ ಆಡಳಿತ ನಡೆಸಲಾಗುತ್ತಿದೆ. ಇವು ಅವ್ಯವಹಾರವನ್ನು ಖಾತರಿ ಪಡಿಸಿವೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.