ಬ್ಯಾಂಕ್ ನೌಕರರ ಮುಷ್ಕರ ಏಕೆ? ರಾಷ್ಟ್ರೀಕೃತ ಬ್ಯಾಂಕ್‌ಗಳ ಅಂದಾಜು 10 ಲಕ್ಷ ನೌಕರರು, ಎರಡು ದಿನಗಳ ಕಾಲ (ಬುಧವಾರ ಮತ್ತು ಗುರುವಾರ) ದೇಶವ್ಯಾಪಿ ಮುಷ್ಕರ ನಡೆಸುತ್ತಿರುವುದರಿಂದ ಒಟ್ಟಾರೆ ಬ್ಯಾಂಕಿಂಗ್ ಚಟುವಟಿಕೆಗಳೆಲ್ಲ ಸ್ಥಗಿತಗೊಂಡಿವೆ. ಬ್ಯಾಂಕ್ ಕಾರ್ಮಿಕ ಸಂಘಟನೆಗಳ ಸಂಯುಕ್ತ ಒಕ್ಕೂಟದ (ಯುಎಫ್‌ಬಿಯು) ಆಶ್ರಯದಲ್ಲಿ ನಡೆಯುತ್ತಿರುವ ಈ ಮುಷ್ಕರ ಯಾವುದೇ ಕಾರಣಕ್ಕೂ ಸಮರ್ಥನೀಯವಲ್ಲ. ದೇಶಿ ಬ್ಯಾಂಕಿಂಗ್ ವಹಿವಾಟಿನಲ್ಲಿ ಶೇ 75ರಷ್ಟು ಪಾಲು ಹೊಂದಿರುವ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ನೌಕರರ ಈ ನಿರ್ಧಾರವು ಆರ್ಥಿಕ ಚಟುವಟಿಕೆಗಳ ಮೇಲೂ ಸಾಕಷ್ಟು ಪ್ರತಿಕೂಲ ಪರಿಣಾಮ ಬೀರಲಿದೆ. ಬ್ಯಾಂಕ್ ಉದ್ಯೋಗಿಗಳು ಮತ್ತು ಅಧಿಕಾರಿಗಳ ಸಂಘದ 9 ಸಂಘಟನೆಗಳ ಒಕ್ಕೂಟದ ಸದಸ್ಯರೆಲ್ಲ ಭಾಗಿಯಾಗಿರುವುದರಿಂದ ದೇಶದಾದ್ಯಂತ ಬಹುತೇಕ ಬ್ಯಾಂಕ್ ಚಟುವಟಿಕೆಗಳೆಲ್ಲ ಸ್ಥಗಿತಗೊಂಡಿವೆ. ಭಾನುವಾರ ಮತ್ತು ಸೋಮವಾರದ ಎರಡು ದಿನಗಳ ರಜೆ ಬೆನ್ನಲ್ಲೇ, ಮತ್ತೆ ಎರಡು ದಿನಗಳ ಮುಷ್ಕರಕ್ಕೆ ಕರೆ ಕೊಟ್ಟಿರುವುದು ಜನಸಾಮಾನ್ಯರು ಮತ್ತು ಉದ್ಯಮಿಗಳಿಗೆ ಅನನುಕೂಲವಾಗಿದೆ. ಒಂದು ದಿನದ ಬದಲಿಗೆ ಈಗ ಎರಡು ದಿನಗಳ ಮುಷ್ಕರಕ್ಕೆ ಕರೆ ಕೊಡುತ್ತಿರುವುದು ಬೇಡಿಕೆ ಈಡೇರಿಕೆಯ ತೀವ್ರತೆಯ ಪ್ರತೀಕವಾಗಿದ್ದರೂ, ಬ್ಯಾಂಕಿಂಗ್ ವಹಿವಾಟಿನ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆಯಲ್ಲ. ಖಾಸಗಿ ವಲಯದ ಬ್ಯಾಂಕ್‌ಗಳು ಹೊರತುಪಡಿಸಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಅಂದಾಜು 75 ಸಾವಿರದಷ್ಟು ಶಾಖೆಗಳ ವಹಿವಾಟು ಸ್ಥಗಿತಗೊಂಡಿದೆ. 90 ಸಾವಿರದಷ್ಟು `ಎಟಿಎಂ~ಗಳಿದ್ದರೂ ಮುಷ್ಕರದ ಕಾರಣಕ್ಕೆ ಕೆಲವೇ ಗಂಟೆಗಳಲ್ಲಿ ಹಣ ಬರಿದಾಗುತ್ತದೆ. ಬ್ಯಾಂಕ್‌ಗಳ ಖಾಸಗೀಕರಣ, ಜಾಗತೀಕರಣವನ್ನು ನೌಕರರು ವಿರೋಧಿಸುತ್ತಿದ್ದಾರೆ. ಷೇರುದಾರರ ಮತದಾನ ಹಕ್ಕನ್ನು ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಲ್ಲಿ ಸದ್ಯದ ಶೇ1ರಿಂದ ಶೇ 10ಕ್ಕೆ ಮತ್ತು ಖಾಸಗಿ ಬ್ಯಾಂಕ್‌ಗಳಲ್ಲಿ ಶೇ 10ರಿಂದ ಶೇ 26ಕ್ಕೆ ಹೆಚ್ಚಿಸುವುದನ್ನು ಕಾರ್ಮಿಕ ಸಂಘಟನೆಗಳು ಬಲವಾಗಿ ವಿರೋಧಿಸುತ್ತಿವೆ. ಬ್ಯಾಂಕ್‌ಗಳ ರಾಷ್ಟ್ರೀಕರಣ ಮೂಲ ಉದ್ದೇಶವನ್ನೇ ಸರ್ಕಾರ ಬುಡಮೇಲು ಮಾಡಲು ಹೊರಟಿದೆ ಎನ್ನುವುದು ಕಾರ್ಮಿಕರ ಪ್ರಮುಖ ಆರೋಪವಾಗಿದೆ. ತೀವ್ರ ವಿರೋಧದ ಮಧ್ಯೆಯೂ ಬ್ಯಾಂಕಿಂಗ್ (ಕಾಯ್ದೆ) ತಿದ್ದುಪಡಿ ಮಸೂದೆ ಜಾರಿಗೆ ಕೇಂದ್ರ ಸರ್ಕಾರ ಮುಂದಾಗಿರುವುದೂ ಮುಷ್ಕರಕ್ಕೆ ಪ್ರಮುಖ ಪ್ರಚೋದನೆ ಆಗಿದೆ. ಅನುಕಂಪ ನೇಮಕಾತಿ, ಪಿಂಚಣಿ ಪರಾಮರ್ಶೆ ಮತ್ತು ನಿಯಂತ್ರಿತ ಕೆಲಸದ ಅವಧಿ ಮತ್ತಿತರ ಮಾನವ ಸಂಪನ್ಮೂಲ ನಿರ್ವಹಣೆಗೆ ಸಂಬಂಧಿಸಿದ ಇತ್ಯರ್ಥವಾಗದ ಬೇಡಿಕೆಗಳೂ ಇಲ್ಲಿ ತಳಕು ಹಾಕಿಕೊಂಡಿವೆ. ಬ್ಯಾಂಕಿಂಗ್ ಸುಧಾರಣಾ ಕ್ರಮಗಳನ್ನೆಲ್ಲ ಕಸದ ಬುಟ್ಟಿಗೆ ಬಿಸಾಕಿ ಎನ್ನುವ ಹಕ್ಕೊತ್ತಾಯ ಬಲವಾಗಿ ಕೇಳಿ ಬರುತ್ತಿರುವುದೂ ಸರಿ ಎನಿಸದು. ಪದೇಪದೇ ಮುಷ್ಕರದಿಂದ ರಾಷ್ಟ್ರೀಕೃತ ಬ್ಯಾಂಕುಗಳಿಂದ ಗ್ರಾಹಕರು ವಿಮುಖರಾಗುವ ಪರಿಸ್ಥಿತಿ ತಲೆದೋರುವ ಸಂಭವವೂ ಇದೆ. ಸರ್ಕಾರವು, ಕಾರ್ಮಿಕ ಮುಖಂಡರನ್ನು ಸಂಧಾನಕ್ಕೆ ಕರೆಯದಿರುವುದು ಅದರ ವೈಫಲ್ಯಕ್ಕೆ ಸಾಕ್ಷಿಯಾಗಿದೆ. ಚೆಕ್ ಕ್ಲಿಯರೆನ್ಸ್, ಬಿಲ್ ಪಾವತಿ ಸೇರಿದಂತೆ ಸರ್ಕಾರದ ಪರವಾಗಿ ನಿರ್ವಹಿಸುವ ಆರ್ಥಿಕ ಚಟುವಟಿಕೆಗಳು (ಟ್ರೆಜರಿ ಕಾರ್ಯಾಚರಣೆ) ನಡೆಯದಿರುವುದರಿಂದ ಆರ್ಥಿಕ ನಷ್ಟದ ಸ್ಪಷ್ಟ ಚಿತ್ರಣವೂ ದೊರೆಯದು. ಈಗಾಗಲೇ ಬೇಡಿಕೆ ಕುಸಿದು ಅರ್ಥ ವ್ಯವಸ್ಥೆ ಮಂದಗತಿಯಲ್ಲಿ ತೆವಳುತ್ತಿದೆ. ಕೈಗಾರಿಕಾ ವಲಯ ಸಂಕಷ್ಟದಲ್ಲಿದೆ. ಸರ್ಕಾರ ಮುಂದಾಲೋಚನೆ ಮಾಡಿದ್ದರೆ ಈ ಮುಷ್ಕರ ತಪ್ಪಿಸಬಹುದಾಗಿತ್ತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.