ಸ್ವಾಗತಾರ್ಹ ಕ್ರಮ ಗಣಿಗಾರಿಕೆಯಿಂದ ಬರಡಾಗಿರುವ ಬಳ್ಳಾರಿ, ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆಗಳಲ್ಲಿ ಅರಣ್ಯ ಪುನರುಜ್ಜೀವನ ಹಾಗೂ ಪುನರ್ವಸತಿ ಯೋಜನೆ ಸಿದ್ಧತೆ ಮತ್ತು ಅನುಷ್ಠಾನದ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿರುವ ಯಾವುದೇ ದಕ್ಷ ಅಧಿಕಾರಿಗಳನ್ನು ವರ್ಗಾವಣೆ ಮಾಡಕೂಡದು ಎಂದು ಸುಪ್ರೀಂಕೋರ್ಟ್ ನೇತೃತ್ವದ ಕೇಂದ್ರ ಉನ್ನತಾಧಿಕಾರ ಸಮಿತಿ (ಸಿಇಸಿ) ರಾಜ್ಯ ಸರ್ಕಾರಕ್ಕೆ ತಾಕೀತು ಮಾಡಿರುವುದು ಸ್ವಾಗತಾರ್ಹ ಕ್ರಮ. ಈ ಕೆಲಸ ನೂರಕ್ಕೆ ನೂರರಷ್ಟು ಅನುಷ್ಠಾನವಾಗದ ಹೊರತು ರಾಜ್ಯದಲ್ಲಿ ಗಣಿಗಾರಿಕೆ ಪುನರಾರಂಭಕ್ಕೆ ಅವಕಾಶ ಕೊಡುವ ಪ್ರಶ್ನೆಯೇ ಇಲ್ಲ ಎಂದು ಸುಪ್ರಿಂಕೋರ್ಟ್ ಖಡಾಖಂಡಿತವಾಗಿ ಹೇಳಿತ್ತು. ಗಣಿ ಕಂಪೆನಿಗಳ ಬಗ್ಗೆ ಕಠೋರ ತೀರ್ಪು ತೀರಾ ಅಗತ್ಯವೇ ಆಗಿತ್ತು. ಪರಿಸರ ಮರುಸೃಷ್ಟಿ ಪ್ರಕ್ರಿಯೆಯಲ್ಲಿ ತೊಡಗಿರುವ ಅಧಿಕಾರಿಗಳನ್ನು ವರ್ಗಾವಣೆ ಮಾಡಿರುವ ಬಗ್ಗೆ ಸಿಇಸಿ ವರದಿಯಲ್ಲಿ ಅಸಮಾಧಾನ ವ್ಯಕ್ತವಾಗಿದೆ. ಅಕ್ರಮಗಳಿಗೆ ಕುಮ್ಮಕ್ಕು ನೀಡಿರುವ ಸರ್ಕಾರಿ ಅಧಿಕಾರಿಗಳೂ ತಪ್ಪಿತಸ್ಥರೇ. ಊರು ಬರಡಾದ ಮೇಲೆ ಅವರುಗಳನ್ನು ಸುರಕ್ಷಿತ ತಾಣಗಳಿಗೆ ವರ್ಗಮಾಡುವುದೂ ಕೂಡ ರಾಜಕಾರಣದ ಮತ್ತೊಂದು ಮುಖ. ಅದಕ್ಕೆ ಕಡಿವಾಣ ಹಾಕಲು ಮುಂದಾಗಿರುವುದು ಸ್ತುತ್ಯಾರ್ಹ ಕೆಲಸ. ಪರಿಸರ ನಾಶ ಕೆಲಸವನ್ನು ನೋಡುತ್ತಾ, ಅದರಲ್ಲಿ ಶಾಮೀಲಾಗಿರುವ ಸರ್ಕಾರಿ ಸಿಬ್ಬಂದಿಯೂ ಪಾಠ ಕಲಿಯುವಂತಾಗಬೇಕು. ಬಳ್ಳಾರಿ ಜಿಲ್ಲಾಧಿಕಾರಿ ಸೇರಿದಂತೆ ಯಾವ ಅಧಿಕಾರಿಯನ್ನೂ ವರ್ಗ ಮಾಡುವುದಿಲ್ಲ ಎಂದು ರಾಜ್ಯದ ಮುಖ್ಯ ಕಾರ್ಯದರ್ಶಿ ಸ್ಪಷ್ಟಪಡಿಸಿದ್ದೂ ಹುಸಿ ಎಂದು ಬೊಟ್ಟು ಮಾಡಿರುವ ಸಿಇಸಿ, ವರ್ಗಾವಣೆ ಮಾಡಲಾಗಿರುವ ಅಧಿಕಾರಿಗಳನ್ನು ಪಟ್ಟಿ ಮಾಡಿ, ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದೆ. ಮೂರೂ ಜಿಲ್ಲೆಗಳಲ್ಲಿ ಪರಿಸರವನ್ನು ಲೂಟಿ ಮಾಡಿದವರ ವಿರುದ್ಧ ಇನ್ನೂ ಹೆಚ್ಚಿನ ತನಿಖೆ ನಡೆಸಿ, ತಪ್ಪಿತಸ್ಥರನ್ನು ಸೆರೆಮನೆಗೆ ಅಟ್ಟಬೇಕು. ಜಿಲ್ಲೆಯ ಪರಿಸರವನ್ನು ಪುನರ್‌ರೂಪಿಸಲು ತಗಲುವ ವೆಚ್ಚವನ್ನು 49 ಗಣಿ ಕಂಪೆನಿಗಳಿಂದಲೇ ವಸೂಲು ಮಾಡಬೇಕು, ಸರ್ಕಾರ ವಶಪಡಿಸಿಕೊಂಡಿರುವ ಅದಿರನ್ನು ಹರಾಜು ಹಾಕಿ ಬರುವ ಹಣದಿಂದ ಹಾಳಾಗಿರುವ ಅರಣ್ಯ ಪರಿಸರವನ್ನು ಪುನರ್‌ರೂಪಿಸಬೇಕು ಎಂದು ಈ ಹಿಂದೆಯೂ ಸಿಇಸಿ ಮಹತ್ವದ ಆದೇಶ ನೀಡಿತ್ತು. ಆದರೆ ಈ ವಿಷಯದಲ್ಲಿ ಸರ್ಕಾರ ಅದೇ ರಾಗ ಹಾಡುತ್ತಿದೆ. ಅಕ್ರಮ ಗಣಿಗಾರಿಕೆ ನಡೆದೇ ಇಲ್ಲ ಎಂದು ವಾದಿಸುತ್ತಿ ಸಂಪುಟದಲ್ಲಿದ್ದುಕೊಂಡು ಲೂಟಿ ಕಾರ್ಯವನ್ನು ಅವ್ಯಾಹತವಾಗಿ ನಡೆಸುತ್ತಿದ್ದ ಸಹಚರರನ್ನು ಮುಖ್ಯಮಂತ್ರಿಗಳೇ ಸಮರ್ಥಿಸಿಕೊಳ್ಳುತ್ತಿದ್ದರು. ಇದರಿಂದಾಗಿ ಬೊಕ್ಕಸಕ್ಕೆ ನಷ್ಟ ಸಂಭವಿಸಿದೆ ಎನ್ನುವುದೂ ಅವರ ಅರಿವಿಗೆ ಬರದಷ್ಟು ದಟ್ಟವಾಗಿ ಲೂಟಿಕಾರ್ಯ ನಡೆಯಿತು. ಗಣಿ ಕಂಪೆನಿಗಳು ಅರಣ್ಯ ಮತ್ತು ಪರಿಸರ ಕಾನೂನುಗಳನ್ನು ಉಲ್ಲಂಘಿಸಲು ರಾಜ್ಯಸರ್ಕಾರವೇ ಅವಕಾಶ ಮಾಡಿಕೊಟ್ಟಿತ್ತು. ಈಗ ಅಂತಹ ಕೆಲಸದಲ್ಲಿ ಭಾಗಿಯಾದವರಿಗೆ, ಬಡ್ತಿ ನೀಡುವುದು, ಬೇರೆಡೆಗೆ ವರ್ಗಾವಣೆ ಮಾಡುವುದು ಅಂತಹ ಅಕ್ರಮಗಳನ್ನು ಮುಚ್ಚಿಟ್ಟುಕೊಳ್ಳುವ ಯತ್ನವಾಗಿ ಕಾಣುತ್ತದೆ. ಈ ಕಾರಣದಿಂದಲೇ ಪರಿಸರ ಪುನರ್‌ರೂಪಿಸುವ ಕೆಲಸ ವಿಳಂಬವಾಗುತ್ತಿದೆ. ಇಂತಹ ಅಪರಾಧದಲ್ಲಿ ಭಾಗಿಯಾದವರು ಜವಾಬ್ದಾರಿಯಿಂದ ನುಣುಚಿಕೊಳ್ಳುವಂತಿಲ್ಲ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.